ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನ ರಸಪಾಕ

Last Updated 11 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಅವಿಯಲ್

ಅವಿಯಲ್ ಅನ್ನು ತಮಿಳುನಾಡಿನಲ್ಲಿ ಶುಭ ಸಂದರ್ಭಗಳಲ್ಲಿ ತಯಾರಿಸುತ್ತಾರೆ. ಈ ರೆಸಿಪಿಗೆ ಸಂಬಂಧಿಸಿ ಹಲವು ಕಥೆಗಳಿವೆ. ಮಹಾಭಾರತದಲ್ಲಿ ಪಾಂಡವರು ವನವಾಸ ಕ್ಕೆ ಹೋದ ಸಂದರ್ಭದಲ್ಲಿ ಭೀಮಸೇನ, ವಿರಾಟ ರಾಜನಿಗೆ ಸೇವೆ ಸಲ್ಲಿಸುವಾಗ, ತನ್ನ ಸಹೋದರರೊಂದಿಗೆ ಸೇರಿ ಈ ‘ಅವಿಯಲ್‌‘ ಎಂಬ ಖಾದ್ಯವನ್ನು ತಯಾರಿಸಿದ್ದ. ರಾಜನಿಗೆ ಸೇವೆ ಸಲ್ಲಿಸುವ ವೇಳೆ, ಮೇಲೊಗರಕ್ಕೆ ಸಾಕಷ್ಟು ತರಕಾರಿಗಳು ಇರಲಿಲ್ಲ ಎಂಬ ಕಾರಣಕ್ಕೆ, ಲಭ್ಯವಿದ್ದ ತರಕಾರಿ ಗಳನ್ನೇ ಬೆರೆಸಿ ತೆಂಗಿನಕಾಯಿ ತುರಿ ಸೇರಿಸಿ, ಈ ರುಚಿಕರವಾದ ಅವಿಯಲ್ ಎಂಬ ಮೇಲೊಗರವನ್ನು ಭೀಮ ತಯಾರಿಸಿದ್ದ ಎಂಬ ಕಥೆ ಇದೆ.

ಬೇಕಾಗುವ ಸಾಮಗ್ರಿಗಳು:

ತೆಂಗಿನಕಾಯಿ ಮಸಾಲ ಪೇಸ್ಟ್‌ಗೆ: ತಾಜಾ ತೆಂಗಿನಕಾಯಿ ತುರಿ – 1 ಕಪ್, ಕರಿಬೇವಿನ ಸೊಪ್ಪು – 6 ರಿಂದ 8 ಎಸಳು, ಹಸಿಮೆಣಸಿನಕಾಯಿ – 4, ನೀರು,ಉಪ್ಪು ರುಚಿಗೆ ತಕ್ಕಷ್ಟು.

ಅಗತ್ಯ ತರಕಾರಿಗಳು: ಆಲೂಗಡ್ಡೆ – ಅರ್ಧ, ಸುವರ್ಣಗಡ್ಡೆ – 1 ಕಪ್‌ (ಉದ್ದಕ್ಕೆ ಹೆಚ್ಚಿದ್ದು), ಬೂದುಗುಂಬಳಕಾಯಿ – 1 ಕಪ್‌, ನುಗ್ಗೆಕಾಯಿ – 2, ಬೀನ್ಸ್‌ – 1 ಕಪ್‌, ಕ್ಯಾರೆಟ್‌ – ಅರ್ಧ ಕಪ್‌ (ಉದ್ದಕ್ಕೆ ಹೆಚ್ಚಿದ್ದು) (ಈ ಎಲ್ಲವನ್ನೂ ಚೆನ್ನಾಗಿ ತೊಳೆದು ಕುಕರ್‌ನಲ್ಲಿ 2 ವಿಷಲ್‌ ಬರುವ ಹಾಗೆ ಬೇಯಿಸಿಕೊಳ್ಳಬೇಕು.)

ತಯಾರಿಸುವ ವಿಧಾನ: ಮಿಕ್ಸಿಯ ಸಣ್ಣ ಜಾರ್‌ನಲ್ಲಿ 1 ಕಪ್ ತೆಂಗಿನಕಾಯಿ ತುರಿ, ಕರಿಬೇವು, ಹಸಿಮೆಣಸಿನಕಾಯಿ ಹಾಗೂ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡಿರುವುದನ್ನು ಬೇಯಿಸಿದ ತರಕಾರಿಗೆ ಹಾಕಿ ಒಂದು ಕುದಿ ಬರುವವರೆಗೂ ಮಂದು ಉರಿಯಲ್ಲಿ ಇಡಿ. ಕೊನೆಯಲ್ಲಿ ಕಡೆದ ಮೊಸರು ಸೇರಿಸಿ, ಈಗ ಅವಿಯಲ್ ಬಡಿಸಲು ತಯಾರು.

ಮೆಂತೆ ಕೊಳುಂಬ

ಬೇಕಾಗುವ ಸಾಮಗ್ರಿಗಳು: ನುಗ್ಗೆಕಾಯಿ – 2, ಬದನೆಕಾಯಿ– 1, ಸಾಂಬಾರ್ ಪುಡಿ – 2 ಚಮಚ, ಅಕ್ಕಿಹಿಟ್ಟು – ಅರ್ಧ ಕಪ್‌, ಕರಿಬೇವು – 1 ಎಸಳು, ಎಣ್ಣೆ – 2 ಚಮಚ, ಸಾಸಿವೆ, ಜೀರಿಗೆ– ಒಗ್ಗರಣೆಗೆ, ಅರಿಸಿನ ಪುಡಿ – ಚಿಟಿಕೆ, ಈರುಳ್ಳಿ – 1, ಮೆಂತ್ಯೆಕಾಳು– 2 ಚಮಚ, ಒಣಮೆಣಸಿನಕಾಯಿ – 2

ತಯಾರಿಸುವ ವಿಧಾನ: ಪ್ಯಾನ್‌ವೊಂದಕ್ಕೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ ಅರಿಸಿನ, ಮೆಂತ್ಯೆಕಾಳು ಹಾಗೂ ಒಣಮೆಣಸು ಹಾಕಿ. ಸಾಸಿವೆ ಚಿಟುಗುಟ್ಟಿದ ಮೇಲೆ ಈರುಳ್ಳಿ ಹಾಗೂ ನುಗ್ಗೆಕಾಯಿ ಅಥವಾ ಬದನೆಕಾಯಿ ಹಾಕಿ. ಅದಕ್ಕೆ ಮೂರು ಕಪ್‌ ನೀರು ಹಾಕಿ. ನಂತರ ಸಂಬಾರ್ ಪುಡಿ ಸೇರಿಸಿ ಕುದಿಸಿ. ಪುನಃ ಎರಡು ಕಪ್‌ ನೀರು ಸೇರಿಸಿ. ಅದಕ್ಕೆ ಅಕ್ಕಿಹಿಟ್ಟು ಸೇರಿಸಿ ಕುದಿಯುತ್ತಿರುವ ಕೊಳಂಬಿಗೆ ಸೇರಿಸಿ. ಅದು ಮಂದ ಹದಕ್ಕೆ ಬರಬೇಕು. ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಹಾಕಿ. ಒಂದು ಕುದಿಯ ನಂತರ ಸ್ಟೌ ಬಂದ್‌ ಮಾಡಿ. ಈಗ ಮೆಂತೆ ಕೊಳುಂಬ ಸಿದ್ಧ. ಈ ಖಾದ್ಯವನ್ನುಜ್ವರ ಬಂದಾಗ ಅಥವಾ ಅಜೀರ್ಣವಾದಾಗ ಬಿಸಿ ಅನ್ನಕ್ಕೆ ಬೆರೆಸಿಕೊಂಡು ಸೇವಿಸಬಹದು.

ಮೋರ್ ಕೊಳುಂಬ

ಬೇಕಾಗುವ ಸಾಮಗ್ರಿಗಳು: ತೆಂಗಿನತುರಿ – 1 ಕಪ್‌, ಹಸಿಮೆಣಸಿನಕಾಯಿ – 4, ಕರಿಬೇವು – 1 ಎಸಳು, ಅಕ್ಕಿ – 1 ಚಮಚ, ಬೆಂಡೆಕಾಯಿ, ನುಗ್ಗೆಕಾಯಿ ಹಾಗೂ ಬೂದುಕುಂಬಳಕಾಯಿ, ಮೋರ್ – 1 ಕಪ್‌ (ಮೋರ್ ಅಂದರೆ ಮೊಸರು).

ತಯಾರಿಸುವ ವಿಧಾನ: ತೆಂಗಿನತುರಿ, ಹಸಿಮೆಣಸಿನಕಾಯಿ, ಕರಿಬೇವು, ಅಕ್ಕಿ ಹಾಗೂ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಗ್ಗರಣೆಗೆ ಬೆಂಡೆಕಾಯಿ, ನುಗ್ಗೆಕಾಯಿ ಹಾಗೂ ಕುಂಬಳಕಾಯಿಯನ್ನು ಹೆಚ್ಚಿ ಹಾಕಬೇಕು. ತರಕಾರಿ ಬೆಂದ ಮೇಲೆ ರುಬ್ಬಿದ ಕೊಬ್ಬರಿ, ಉಪ್ಪು ಮತ್ತು ಇಂಗು ಹಾಕಿ ಮಂದ ಹದಕ್ಕೆ ಬರುವವರೆಗೂ ಕುದಿಸಿ. ಸ್ವಲ್ಪ ಹೊತ್ತು ನಂತರ ಒಂದು ಕಪ್ ಮಜ್ಜಿಗೆ ಹಾಕಿ ಒಂದು ಕುದಿ ಬರೋವರೆಗೆ ಕುದಿಸಿಕೊಳ್ಳಿ. ಇದು ಅನ್ನಕೆ ತುಂಬಾ ರುಚಿ ಕೊಡುತ್ತದೆ.

ತಕ್ಕಾಳಿ (ಟೊಮೆಟೊ) ಚಟ್ನಿ

ಬೇಕಾಗುವ ಸಾಮಗ್ರಿಗಳು: ಟೊಮೆಟೊ – 5, ಮೆಂತ್ಯೆಕಾಳು – 1 ಚಮಚ, ಇಂಗು – ಚಿಟಿಕೆ, ಒಣಮೆಣಸು – 8, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಹೆಚ್ಚಿದಟೊಮೆಟೊ, ಒಂದು ಚಮಚ ಮಂತ್ಯೆ, ಉಪ್ಪು, ಇಂಗು, ಒಣಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ನೀರು ಸೇರಿಸದೆ ರುಬ್ಬಿಕೊಳ್ಳಿ. ಬಾಣಲೆಗೆ ಮೂರು ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಅರಿಸಿನ ಪುಡಿ ಹಾಗೂ ಇಂಗು ಸೇರಿಸಿ. ಸಾಸಿವೆ ಸಿಡಿದ ಮೇಲೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನೀರು ಇಂಗುವವರೆಗೂ ಚೆನ್ನಾಗಿ ಕುದಿಸಿ ಸ್ಟೌ ಆರಿಸಿ. ಈ ಚಟ್ನಿಯನ್ನು ಬಿಸಿ ಅನ್ನ, ದೋಸೆ ಮತ್ತು ಇಡ್ಲಿಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.

(ಚಿತ್ರಗಳು: ಕೃಷ್ಣಿ ಶಿರೂರ/ಮೇಘನಾ ಆರ್‌.ಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT