ಶುಕ್ರವಾರ, ಡಿಸೆಂಬರ್ 3, 2021
24 °C

ಕೊತ್ತಂಬರಿ ಸೊಪ್ಪಿನ ಬಾತ್‌, ಹೇರಳೆಕಾಯಿ ಚಿತ್ರಾನ್ನ

ಹೇಮಲತಾ ಆರ್‌.ಕೆ. Updated:

ಅಕ್ಷರ ಗಾತ್ರ : | |

ಕೊತ್ತಂಬರಿ ಸೊಪ್ಪಿನ ಬಾತ್‌

ಬೇಕಾಗುವ ಸಾಮಗ್ರಿಗಳು: ಕೊತ್ತಂಬರಿ ಸೊಪ್ಪು– ಒಂದು ಕಟ್ಟು, ಹಸಿಮೆಣಸಿನಕಾಯಿ– 6, ಶುಂಠಿ–ಬೆಳ್ಳುಳ್ಳಿ ಸ್ವಲ್ಪ, ಈರುಳ್ಳಿ– 1, ಟೊಮೆಟೊ– 1, ಗರಂಮಸಾಲೆ 1 ಚಮಚ, ಅರಿಶಿನ ಸ್ವಲ್ಪ, ಗೋಡಂಬಿ– 10, ಚಕ್ಕೆ 1 ಇಂಚು, ಲವಂಗ– 3, ಏಲಕ್ಕಿ 1, ಪಲಾವ್ ಎಲೆ 2.

ತಯಾರಿಸುವ ವಿಧಾನ: ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಕುಕರ್‌ ಬಿಸಿಗಿಟ್ಟು, ಅದಕ್ಕೆ 2 ಚಮಚ ಎಣ್ಣೆ, 1 ಚಮಚ ತುಪ್ಪ ಹಾಕಿ ಲವಂಗ, ಚಕ್ಕೆ, ಏಲಕ್ಕಿ, ಪಲಾವ್ ಎಲೆ ಹಾಕಿ ಹುರಿಯಿರಿ. ನಂತರ ಗೋಡಂಬಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು, ಈರುಳ್ಳಿ, ಟೊಮೆಟೊ ಹಾಗೂ ರುಬ್ಬಿದ ಮಿಶ್ರಣ ಸೇರಿಸಿ ಎಣ್ಣೆ ಬಿಡುವವರೆಗೂ ಬಾಡಿಸಿ. ನಂತರ ಕಾಲು ಚಮಚ ಅರಿಶಿನ, ಗರಂಮಸಾಲೆ 1 ಚಮಚ ಸೇರಿಸಿ. ನೀರು ಕುದಿ ಬಂದ ನಂತರ ತೊಳೆದುಕೊಂಡ ಅಕ್ಕಿಯನ್ನು ಸೇರಿಸಿ ಕುಕರ್‌ ಮುಚ್ಚಿ ಎರಡು ಕೂಗು ಕೂಗಿಸಿದರೆ ರುಚಿಯಾದ ಕೊತ್ತಂಬರಿ ಸೊಪ್ಪಿನ ಬಾತ್‌ ಅಥವಾ ಕೋರಿಯಾಂಡರ್ ರೈಸ್ ಸಿದ್ಧ.

ಹಳ್ಳಿ ಶೈಲಿಯ ಹೇರಳೆಕಾಯಿ ಚಿತ್ರಾನ್ನ
ಬೇಕಾಗುವ ಸಾಮಗ್ರಿಗಳು:
ಹೇರಳೆಕಾಯಿ 1, ಹಸಿಮೆಣಸಿನಕಾಯಿ– 10, ಒಣಮೆಣಸಿನಕಾಯಿ– 2, ಕರಿಬೇವು ಸ್ವಲ್ಪ, ಈರುಳ್ಳಿ 1, ಕಡಲೇಕಾಯಿಬೀಜ– 1 ಚಮಚ, ಕಡಲೆ ಬೇಳೆ– 1 ಚಮಚ, ಎಣ್ಣೆ 4 ಚಮಚ, ಸಾಸಿವೆ– 1 ಚಮಚ, ಅರಿಶಿನ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ತೆಂಗಿನ ತುರಿ ಸ್ವಲ್ಪ, ಮೆಂತ್ಯ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಜೀರಿಗೆ 1 ಚಮಚ, ಸಾಸಿವೆ ಕಾಲು ಚಮಚ, ಮೆಂತ್ಯ ಕಾಲು ಚಮಚ ಹಾಕಿ ಎಲ್ಲವನ್ನೂ ಹುರಿದು ಪುಡಿ ಮಾಡಿಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಕಡಲೇಕಾಯಿ ಬೀಜ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ, ಕಡಲೇಬೇಳೆ, ಹಸಿಮೆಣಸಿನಕಾಯಿ, ಒಣಮೆಣಸಿನಕಾಯಿ, ಕರಿಬೇವು ಸೇರಿಸಿ ಹುರಿದು ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಸೇರಿಸಿ ಬಾಡಿಸಿ. ಇದಕ್ಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಹುರಿದು ಪುಡಿಮಾಡಿದ ಜೀರಿಗೆ ಪುಡಿ ಸೇರಿಸಿ ಮತ್ತೆ 2 ನಿಮಿಷ ಹುರಿದುಕೊಳ್ಳಿ. ಕೊನೆಯದಾಗಿ ತೆಂಗಿನ ಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಇದಕ್ಕೆ ಹೇರಳೆಕಾಯಿ ರಸ ಸೇರಿಸಿದರೆ ಗೊಜ್ಜು ಸಿದ್ಧವಾಗುತ್ತದೆ. ಮೊದಲೇ ಸಿದ್ಧಪಡಿಸಿದ ಅನ್ನಕ್ಕೆ ಬೇಕಾದಷ್ಟು ಗೊಜ್ಜನ್ನು ಸೇರಿಸಿ ಕಲೆಸಿದರೆ ಹಳ್ಳಿ ಶೈಲಿಯ ರುಚಿಕರ ಹೇರಳೆಕಾಯಿ ಚಿತ್ರಾನ್ನ ರೆಡಿ.

ಬ್ಯಾಚುಲರ್ ಸ್ಟೈಲ್ ಪೀನಟ್ ರೈಸ್
ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು:
3 ಟೇಬಲ್ ಚಮಚ ಕಡಲೇಕಾಯಿ ಬೀಜ, ಕಡಲೇಬೇಳೆ– 1 ಚಮಚ, ಮೆಣಸು– 1 ಚಮಚ, ಜೀರಿಗೆ– 1 ಚಮಚ, ಕರಿಬೇವು ಸ್ವಲ್ಪ, ಒಣಮೆಣಸಿನಕಾಯಿ ಮೂರು. ಇವೆಲ್ಲವನ್ನು ಹುರಿದು ಪುಡಿ ಮಾಡಿ.

ತಯಾರಿಸುವ ವಿಧಾನ: ಒಂದು ಬಾಣಲೆಯನ್ನು ಬಿಸಿಗಿಟ್ಟು ಅದಕ್ಕೆ ಮೂರರಿಂದ ನಾಲ್ಕು ಚಮಚ ಎಣ್ಣೆ ಸೇರಿಸಿ ಸಾಸಿವೆ, ಕಡಲೇಬೇಳೆ, ಕಡಲೇಕಾಯಿಬೀಜ, ಕರಿಬೇವು, ಒಣಮೆಣಸಿನಕಾಯಿ, ಅರ್ಧ ಚಮಚ ಇಂಗು ಸೇರಿಸಿ ಒಗ್ಗರಣೆ ತಯಾರಿಸಿ. ಇದಕ್ಕೆ ಮೊದಲೇ ತಯಾರಿಸಿದ ಅನ್ನವನ್ನು ಸೇರಿಸಿ ಕಾಲು ಚಮಚ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಹುರಿದು ಪುಡಿ ಮಾಡಿದ್ದನ್ನು ಸೇರಿಸಿ ಚೆನ್ನಾಗಿ ಕಲೆಸಿ. ಇದಕ್ಕೆ ಬೇಕಿದ್ದಲ್ಲಿ ಅರ್ಧ ಹೋಳು ನಿಂಬೆ ರಸ ಸೇರಿಸಿಕೊಳ್ಳಬಹುದು. ಚೆನ್ನಾಗಿ ಕಲೆಸಿದ ನಂತರ ಅನ್ನವನ್ನು 2 ನಿಮಿಷ ಬಿಸಿ ಮಾಡಿದರೆ ರುಚಿಯಾದ ಹಾಗೂ ಬಹಳ ಬೇಗ ತಯಾರಾಗುವ ಬ್ಯಾಚುಲರ್ ಸ್ಟೈಲ್ ಪೀನಟ್ ರೈಸ್ ಸವಿಯಬಹುದು.

(ಲೇಖಕಿ: ಹೇಮಾಸ್ ಕುಕಿಂಗ್‌ ಯೂಟ್ಯೂಬ್ ಚಾನೆಲ್ ನಿರ್ವಾಹಕಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು