ಶುಕ್ರವಾರ, ಜೂನ್ 18, 2021
25 °C

ಮಟನ್‌ ಕೈಮಾ ಉಂಡೆ ಸಾರು, ಸುಕ್ಕಾ

ರೇಖಾ ಎಂ. Updated:

ಅಕ್ಷರ ಗಾತ್ರ : | |

Prajavani

ಮಟನ್‌ ಕೈಮಾ ಉಂಡೆ ಸಾರು

ಬೇಕಾಗುವ ಸಾಮಗ್ರಿಗಳು: ಮಟನ್‌ –250 ಗ್ರಾಂ, ಮಟನ್ ಮೂಳೆ – 4 ಪೀಸ್‌, ಹುರಿಗಡಲೆ ಪುಡಿ – 1 ಚಮಚ, ಅರಿಸಿನ – 1/4 ಚಮಚ, ಖಾರದಪುಡಿ – 1 ಚಮಚ, ಕೊತ್ತಂಬರಿ ಪುಡಿ – 2 ಚಮಚ, ಲವಂಗ, ಚಕ್ಕೆ, ಗಸಗಸೆ – 1/2 ಚಮಚ, ಸೋಂಪು– 1/2 ಚಮಚ, ತೆಂಗಿನತುರಿ – ಅರ್ಧ ಕಪ್‌, ಈರುಳ್ಳಿ – 3, ಹಸಿಮೆಣಸಿನಕಾಯಿ – 1, ಅರ್ಧ ಇಂಚು ಶುಂಠಿ, ಬೆಳ್ಳುಳ್ಳಿ – 8 –9 ಎಸಳು, ಕೊತ್ತಂಬರಿ ಸೊಪ್ಪು, ಕಾಳುಮೆಣಸಿನ ಪುಡಿ – 1/2 ಚಮಚ, ಮಟನ್‌ ಮಸಾಲ– 1/2 ಚಮಚ, ಅಡುಗೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಕೈಮಾ ಉಂಡೆ ಮಾಡಲು: ಶುಂಠಿ ಬೆಳ್ಳುಳ್ಳಿ ಪೇಸ್ಟ್‌– 1/2 ಚಮಚ, ಈರುಳ್ಳಿ–2, ಕೊತ್ತಂಬರಿ ಸೊಪ್ಪು– 1ಕಪ್.

ತಯಾರಿಸುವ ವಿಧಾನ: ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಲವಂಗ, ಚಕ್ಕೆ, ಗಸಗಸೆ, ಕಾಳುಮೆಣಸು, ಸೋಂಪು ಹಾಕಿ ಹುರಿಯಬೇಕು. ನಂತರ ಟೊಮೆಟೊ ಹಾಕಿ ಸ್ವಲ್ಪ ಹುರಿಯಬೇಕು. ತಣ್ಣಗಾದ ಮೇಲೆ ತೆಂಗಿನಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಕೊತ್ತಂಬರಿ ಪುಡಿ ಹಾಕಿ ಸ್ವಲ್ಪ ನೀರು ಬೆರೆಸಿ, ನುಣ್ಣಗೆ  ರುಬ್ಬಬೇಕು. ತಯಾರಾದ ಮಸಾಲೆಯಲ್ಲಿ 2 ಚಮಚ ಬೇರೆಯೇ ತೆಗೆದಿಡಿ.

ಇನ್ನೊಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ, ಈರುಳ್ಳಿ ಮತ್ತು ಮಟನ್‌ ಮೂಳೆ ಹಾಕಿ ಹುರಿಯಿರಿ. ಸ್ವಲ್ಪ ಅರಿಸಿನ ಸೇರಿಸಿ. ನಂತರ ರುಬ್ಬಿದ ಮಸಾಲೆಯನ್ನು ಅದಕ್ಕೆ ಹಾಕಿ. ಹದಕ್ಕೆ ತಕ್ಕಂತೆ ನೀರು ಬೆರೆಸಿ ಕುದಿಸಿ. ತೊಳೆದಿಟ್ಟ ಮಟನ್‌ ಮತ್ತು ತೆಗೆದಿಟ್ಟ ರುಬ್ಬಿದ ಮಸಾಲೆಯನ್ನು ಬೆರೆಸಿ ಮಿಕ್ಸಿಗೆ ಹಾಕಿ. ಹೆಚ್ಚು ರುಬ್ಬಬೇಡಿ. ತರಿತರಿಯಾಗಿ ಇರಬೇಕು. ಉಂಡೆ ಕಟ್ಟುವಂತಾದರೆ ಸಾಕು. ರುಬ್ಬಿದ ಮಟನ್‌ಗೆ ಮೆಣಸಿನ ಪುಡಿ, ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕಡಲೆಹಿಟ್ಟು ಹಾಕಿ ಕಲೆಸಿಕೊಂಡು, ಉಂಡೆ ಮಾಡಿಕೊಳ್ಳಬೇಕು. ಸಾರು ಚೆನ್ನಾಗಿ ಕುದಿದ ಮೇಲೆ ಉಂಡೆಯನ್ನು ಅದಕ್ಕೆ ಹಾಕಿ. ಹದಿನೈದು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಯಾದ ಕೈಮಾ ತಿನ್ನಲು ತಯಾರಾಗುತ್ತದೆ.

ಮಟನ್‌ ಸಾರು

ಬೇಕಾಗುವ ಸಾಮಗ್ರಿಗಳು: ಮೇಕೆ ಮಟನ್‌ – ಅರ್ಧ ಕೆಜಿ, ಅರಿಸಿನ –1 ಚಮಚ, ಕೊತ್ತಂಬರಿ ಪುಡಿ – 3 ಚಮಚ, ಖಾರದ ಪುಡಿ – 2 ಚಮಚ, ಗರಂ ಮಸಾಲ – 1 ಚಮಚ, ಎಣ್ಣೆ – 2 ಚಮಚ, ಕೊತ್ತಂಬರಿ – 1/2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು

ರುಬ್ಬಲು ಬೇಕಾಗುವ ಸಾಮಗ್ರಿಗಳು: ಹುರಿಗಡಲೆ – 1 ಚಮಚ, ಕತ್ತರಿಸಿಟ್ಟುಕೊಂಡ ತೆಂಗಿನಕಾಯಿ – 1/2 ಕಪ್‌, ಪುದಿನ – 1/2 ಕಪ್‌, ಟೊಮೆಟೊ – 1, ಈರುಳ್ಳಿ – 1, ಶುಂಠಿ – 2 ಇಂಚು, ಹಸಿಮೆಣಸು – 3, ಕೊತ್ತಂಬರಿ ಸೊಪ್ಪು – 1/4 ಕಪ್‌

ತಯಾರಿಸುವ ವಿಧಾನ: ಕುಕರ್‌ಗೆ ಮಟನ್‌ ಮತ್ತು ನೀರು, ಎಣ್ಣೆ, ಪುದಿನ, ಕೊತ್ತಂಬರಿ ಸೊಪ್ಪು, ಅರಿಸಿನ, ಖಾರದ ಪುಡಿ, ಉಪ್ಪು ಹಾಕಿ ಕಲೆಸಿ, 4–5 ವಿಷಲ್‌ ಹಾಕಿ ಬೇಯಿಸಿ. ಹುರಿದುಕೊಂಡ ಸಾಮಗ್ರಿಗಳನ್ನು ರುಬ್ಬಬೇಕು. ಬೆಂದ ಮಟನ್‌ಗೆ ಅರಿಸಿನ, ಕೊತ್ತಂಬರಿ ಬೀಜದ ಪುಡಿ, ಖಾರದ ಪುಡಿ ಮತ್ತು ರುಬ್ಬಿದ ಮಸಾಲೆಯನ್ನು ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಹಾಕಬೇಕು. ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು. ಬೇಕಾದಷ್ಟು ನೀರು ಹಾಕಿ ಬೆರೆಸಬೇಕು. ಮುಚ್ಚಳ ಮುಚ್ಚಿ ಒಂದು ವಿಷಲ್‌ ಕೂಗಿಸಿದರೆ ಸಾರು ತಯಾರಾಗುತ್ತದೆ.

ಮಟನ್‌ ಸುಕ್ಕಾ

ಬೇಕಾಗುವ ಸಾಮಗ್ರಿಗಳು: ಬೇಯಿಸಿಕೊಂಡ ಮಟನ್‌ ಮಾಂಸ – 300 ಗ್ರಾಂ, ಗುಂಟೂರು ಮೆಣಸು– 8, ಕೊತ್ತಂಬರಿಕಾಳು –2 ಚಮಚ, ಜೀರಿಗೆ – 1/2 ಚಮಚ, ಕಾಳುಮೆಣಸು – 2 ಚಮಚ, ಈರುಳ್ಳಿ – 2, ಕೊತ್ತಂಬರಿ ಸೊಪ್ಪು – 1/4 ಕಪ್‌, ಕರಿಬೇವು – 1/4 ಕಪ್‌, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1/2 ಚಮಚ, ಹಸಿಮೆಣಸಿನಕಾಯಿ – 2, ಒಗ್ಗರಣೆಗೆ – ಒಣ ಮೆಣಸು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ: ಬಾಣಲೆಗೆ ಕೊತ್ತಂಬರಿ ಕಾಳು, ಜೀರಿಗೆ, ಕಾಳುಮೆಣಸು, ಒಣ ಮೆಣಸು ಹಾಕಿ ಹುರಿಯಬೇಕು. ತಣ್ಣಗಾದ ಮೇಲೆ ನೀರು ಬೆರೆಸದೇ ರುಬ್ಬಬೇಕು. ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ, ಹಸಿಮೆಣಸು, ಕರಿಬೇವು, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಹುರಿಯಬೇಕು. ನಂತರ ಅದಕ್ಕೆ ಬೇಯಿಸಿಟ್ಟುಕೊಂಡ ಮಟನ್‌ ಸೇರಿಸಬೇಕು. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಅದು ಸರಿಯಾಗಿ ಬೆಂದ ನಂತರ, ತಯಾರಿಸಿಟ್ಟುಕೊಂಡ ಸುಕ್ಕಾ ಮಸಾಲೆ ಸೇರಿಸಬೇಕು. ಕೊನೆಯಲ್ಲಿ ಕೊತ್ತಂಬರಿಸೊಪ್ಪು, ಕರಿಬೇವು ಸೇರಿಸಿ, ಡ್ರೈ ರೋಸ್ಟ್‌ ಮಾಡಿದರೆ ಸವಿಯಾದ ಮಟನ್‌ ಸುಕ್ಕಾ ತಯಾರಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.