ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್ತಾ ಸ್ವಾದ ಯಾರಿಗೆ ಇಷ್ಟವಾಗಲ್ಲ ಹೇಳಿ..

Last Updated 13 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಪಾಸ್ತಾ ರುಚಿ ಯಾರಿಗೆ ಸೇರೋದಿಲ್ಲ ಹೇಳಿ. ಈ ಇಟಾಲಿಯನ್‌ ಆಹಾರ ಭಾರತದೊಳಗೆ ಬಂದು ಬಹಳಷ್ಟು ವರ್ಷಗಳೇ ಕಳೆದಿವೆ. ಇದರ ಸ್ವಾದಕ್ಕೆ ಭಾರತದ ಮಸಾಲೆಗಳೂ ಒಂದಿಷ್ಟು ಸೇರಿಕೊಂಡು ಭಾರತದ್ದೇ ತಿನಿಸು ಎಂಬಂತಾಗಿಬಿಟ್ಟಿದೆ. ಈ ಸರಳವಾದ ಆಹಾರದಲ್ಲಿ ಎರಡೋ ಮೂರೋ ಸಾಮಗ್ರಿಗಳಷ್ಟೇ ಸೇರಿಕೊಂಡಿರುವುದು. ನೀರು ಮತ್ತು ಗೋಧಿ ಹಿಟ್ಟು, ಕೆಲವೊಮ್ಮೆ ಮೊಟ್ಟೆ. ಈ ಮೊಟ್ಟೆಯನ್ನು ಸೇರಿಸಿದರೆ ಪಾಸ್ತಾಗೆ ಅದರದ್ದೇ ಆದ ಸ್ವಾದ ಸೇರಿಕೊಂಡು ಇನ್ನಷ್ಟು ಕಬಳಸಿಬಹುದು. ರೆಸಿಪಿಯನ್ನು ಮಾಡೋದು ಕೂಡ ಸುಲಭವೇ. ಆದರೆ ಇನ್ನಷ್ಟು ರುಚಿ ಬರಬೇಕು ಎಂದರೆ, ಬಿಡುವಿದ್ದರೆ ಹೆಚ್ಚುವರಿ ಸಾಮಗ್ರಿಗಳನ್ನೆಲ್ಲ ಸೇರಿಸಿ ಮಾಡಬಹುದು.

ಬೆಂಗಳೂರಿನ ಉಪಾಹಾರಗೃಹಗಳನ್ನೇ ತೆಗೆದುಕೊಂಡರೆ ಇಟಾಲಿಯನ್‌ ಪಾಸ್ತಾ ಮತ್ತು ಸಾಸ್‌ ಬೇರೆ ಬೇರೆ ಕಡೆ ಬೇರೆ ಬೇರೆ ರುಚಿ ಕೊಡುತ್ತದೆ. ಆದರೆ ಪಾಸ್ತಾ ತೆಳುವಾಗಿದ್ದರೆ, ಸಾಸ್‌ ಕೂಡ ತೆಳುವಾಗಿದ್ದರೆ ಸೂಕ್ತ. ಪಾಸ್ತಾ ಹೆಚ್ಚು ದಪ್ಪವಾಗಿದ್ದರೆ, ಮಂದವಾದ ಸಾಸ್‌ ಆಯ್ಕೆ ಮಾಡಿಕೊಳ್ಳಿ. ಹಾಗೆಯೇ ಪಾಸ್ತಾ ಆಕಾರ ಕೂಡ. ನೀವು ಯಾವ ರೀತಿಯ ತರಕಾರಿ ಬಳಕೆ ಮಾಡುತ್ತೀರೋ, ಅದಕ್ಕೆ ಅನುಗುಣವಾಗಿ ಪಾಸ್ತಾ ಆಕಾರವನ್ನು ಆಯ್ಕೆ ಮಾಡಬಹುದು.

ಸುಮಾರು 500– 600 ಬಗೆಯ ಆಕಾರದ ಪಾಸ್ತಾ ಜಗತ್ತಿನಾದ್ಯಂತ ಲಭ್ಯ. ಭಾರತದ ಮಳಿಗೆಗಳಲ್ಲೇ 30–40 ಬಗೆಯವು ಸಿಗುತ್ತವೆ. ಇಟಲಿಯ ಜನಪ್ರಿಯ ಪಾಸ್ತಾ ತಯಾರಕರಾದ ಬರಿಲ್ಲಾ ಕಂಪನಿಯೇ 150ಕ್ಕೂ ಅಧಿಕ ಆಕಾರಗಳಲ್ಲಿ ಈ ಪಾಸ್ತಾವನ್ನು ಮಾರಾಟ ಮಾಡುತ್ತದೆ.

ಪಾಸ್ತಾ ಮೇಲ್ಮೈ ಜಾಸ್ತಿಯಿದ್ದು, ಅಂಚುಗಳು ಚೂಪಾಗಿದ್ದರೆ ಸಾಸ್‌ ಹೆಚ್ಚು ಅಂಟಿಕೊಳ್ಳುತ್ತದೆ. ಹಾಗೆಯೇ ಟೇಪ್‌ ತರಹ, ಕೆಲವೊಮ್ಮೆ ಸ್ಪಾಗೆಟ್ಟಿ ಆಕಾರದ ಪಾಸ್ತಾ ಕೂಡ ಹೆಚ್ಚು ಬಳಕೆಯಾಗುತ್ತದೆ. ಇದಕ್ಕೆ ಟೊಮೆಟೊ, ಬೆಳ್ಳುಳ್ಳಿ ಹಾಗೂ ಚೀಸ್‌ ಸೇರಿಸಿದರೆ ಹೆಚ್ಚು ರುಚಿಕರ.

ಸಾಸ್‌ ಕೂಡ ಹಾಗೆಯೇ. ಟೊಮೆಟೊ, ಕ್ಯಾರೆಟ್‌, ಕೊತ್ತಂಬರಿ ಸೊಪ್ಪು ಬಳಸಿ ಮಾಡುವ ಸಾಸ್‌ ಅತ್ಯಂತ ಜನಪ್ರಿಯ. ಇನ್ನು ಪಾಸ್ತಾಗೆ ಬಿಳಿ ಬಣ್ಣದ ಸಾಸ್‌ ಕೂಡ ಸೇರಿಸಬಹುದು. ಸೋಯಾ ಸಾಸ್‌, ಕಾರ್ನ್‌ಫ್ಲೋರ್‌ನಿಂದ ಮಾಡಿದ ಸಾಸ್‌ ಇದಕ್ಕೆ ಬೆರೆಸಬಹುದು. ಇದರ ಜೊತೆಗೆ ಹುರಿದ ಅಣಬೆ ಒಳ್ಳೆಯ ಕಾಂಬಿನೇಶನ್‌. ಕ್ರೀಂ, ವಿನೆಗರ್‌ ಅನ್ನು ಈ ತರಹದ ಪಾಸ್ತಾಗೆ ಸುರಿದು ಹುರಿಯಬಹುದು.

ಸರಳವಾಗಿ ಪಾಸ್ತಾ ಮಾಡುವ ಬಗೆ

ಬೇಕಾಗುವ ಸಾಮಗ್ರಿ: ಒಂದು ಪ್ಯಾಕ್‌ ಪಾಸ್ತಾ, ಒಂದು ಕಪ್‌ ಸಣ್ಣಗೆ ಹೆಚ್ಚಿದ ಕ್ಯಾರೆಟ್‌, ಬೀನ್ಸ್‌. ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಒಂದು ಟೀ ಚಮಚ, ಮೆಣಸಿನಕಾಯಿ ಬೀಜ ಅರ್ಧ ಟೀ ಚಮಚ, ಟೊಮೆಟೊ ಸಾಸ್‌ ಮೂರು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು ಸ್ವಲ್ಪ, ಎಣ್ಣೆ ಸ್ವಲ್ಪ.

ಮಾಡುವ ವಿಧಾನ: ಪಾಸ್ತಾವನ್ನು ಕುದಿಯುವ ನೀರಿಗೆ ಹಾಕಿ ಬಸಿದಿಟ್ಟುಕೊಳ್ಳಿ. ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಮೆಣಸಿನಕಾಯಿ ಬೀಜ ಹಾಕಿ ಹುರಿಯಿರಿ. ಕ್ಯಾರೆಟ್‌, ಬೀನ್ಸ್‌ ಚೂರು ಹಾಕಿ ಬೇಯಿಸಿ. ನಂತರ ಬೇಯಿಸಿದ ಪಾಸ್ತಾ ಹಾಕಿ ಹುರಿದು ಉಪ್ಪು ಸೇರಿಸಿ. ಮೇಲೆ ಟೊಮೆಟೊ ಸಾಸ್‌ ಹಾಕಿ ಮಿಕ್ಸ್‌ ಮಾಡಿ, ಸ್ಟವ್‌ ಬಂದ್‌ ಮಾಡಿ. ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. ರುಚಿಕರ ಪಾಸ್ತಾ ತಿನ್ನಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT