ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂದುಕುಂಬಳಕಾಯಿಯ ರುಚಿಕರ ಅಡುಗೆಗಳು

ಕೈರುಚಿ
Last Updated 24 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬೂದುಕುಂಬಳಾಕಾಯಿ ದೇಹಕ್ಕೆ ತಂಪು. ಇದನ್ನು ಸೇವಿಸುವುದರಿಂದ ರಕ್ತ ವೃದ್ಧಿಯಾಗುವುದು, ಉರಿಮೂತ್ರ ನಿವಾರಣೆಯಾಗುವುದು. ಹೃದಯದ ಸಾಮರ್ಥ್ಯ ಹೆಚ್ಚುವುದು. ಹಾಗಾಗಿ ಅವುಗಳ ವಿವಿಧ ಖಾದ್ಯಗಳನ್ನು ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ:

ಬೂದುಕುಂಬಳಕಾಯಿ ರೊಟ್ಟಿ
ಬೇಕಾಗುವ ವಸ್ತುಗಳು : 2 ಕಪ್ ಅಕ್ಕಿ ಹಿಟ್ಟು, 2 ಕಪ್ ಬೂದುಕುಂಬಳ ತುರಿ, ½ ಕಪ್ ತೆಂಗಿನತುರಿ, 1 ತುಂಡು ಶುಂಠಿ, 1-2 ಹಸಿಮೆಣಸು ಯಾ 1 ಚಮಚ ಕಾರದ ಪುಡೀ, ರುಚಿಗೆ ತಕ್ಕಷ್ಟು ಉಪ್ಪು, 4-5 ಚಮಚ ತುಪ್ಪ.
ಮಾಡುವ ವಿಧಾನ : ಕುಂಬಳಕಾಯಿ ಸಿಪ್ಪೆ ತೆಗೆದು, ತುರಿದು ಉಪ್ಪು ಬೆರೆಸಿ ಇಡಿ. ಸ್ವಲ್ಪ ಹೊತ್ತಿನಲ್ಲಿ ನೀರು ಬಿಟ್ಟಿರುತ್ತದೆ. ನಂತರ ಅಕ್ಕಿ ಹಿಟ್ಟಿಗೆ ಹೆಚ್ಚಿದ ಹಸಿಮೆಣಸು ಯಾ ಕಾರದ ಪುಡಿ, ಕಾಯಿತುರಿ, ಕುಂಬಳ ತುರಿ, ಬೆರೆಸಿದ ನೀರು ಗಟೀಗೆ ಕಲಸಿ. ಬಾಳೆಲೆಯಾ ಪ್ಲಾಸ್ಟಿಕ್ ಹಾಳೆಯಲ್ಲಿ ಒತ್ತಿ ತೆಗೆದು ಬಿಸಿ ಕಾವಲಿ ಮೇಲೆ ಹಾಕಿ 2 ಬದಿ ತುಪ್ಪ ಹಾಕಿ ಚೆನ್ನಾಗಿ ಬೇಯಿಸಿ. ಈಗ ಪೌಷ್ಟಿಕ ರುಚಿಕರ ರೊಟ್ಟಿಯನ್ನು ಚಟ್ನಿಯೊಂದಿಗೆ ಸವಿಯಿರಿ.

ಬೂದುಕುಂಬಳ ಸಾಂಬಾರು
ಬೇಕಾಗುವ ವಸ್ತುಗಳು : 1 ಕಪ್ ಸಿಪ್ಪೆ, ಬೀಜ ತೆಗೆದು ಸಣ್ಣಗೆ ತುಂಡು ಮಾಡಿದ ಬೂದುಕುಂಬಳ 1½ ಕಪ್ ತೆಂಗಿನತುರಿ, ¼ ಕಪ್ ತೆಂಗಿನತುರಿಬೇಳೆ, ½ ಚಮಚ ಕೆಂಪುಮೆಣಸು ಪುಡೀ, 1 ಚಮಚ ಕೊತ್ತಂಬರಿ, 1 ಚಮಚ ಉದ್ದಿನಬೇಳೆ, ¼ ಚಮಚ ಮೆಂತೆ, ¼ ಚಮಚ ಜೀರಿಗೆ, 3-4 ಒಣಮೆಣಸು, 1 ಚಮಚ ಹುಳಿ, ½ ಚಮಚ ಬೆಲ್ಲ, 2 ಚಮಚ ಎಣ್ಣೆ, ½ ಚಮಚ ಸಾಸಿವೆ, 1 ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕಿ ಅರಸಿನ.
ಮಾಡುವ ವಿಧಾನ : ಬೂದುಕುಂಬಳ ತುಂಡು, ಉಪ್ಪು, ಮೆಣಸಿನಪುಡೀ, ಹುಳಿ, ಬೆಲ್ಲ, ಸ್ವಲ್ಪ ನೀರು ಹಾಕಿ ಬೇಯಿಸಿ. ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಸ್ವಲ್ಪ ನೀರು ಹಾಕಿ ಬೇಯಿಸಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾಅದಾಗ ಅನುಕ್ರಮವಾಗಿ ಕೊತ್ತಂಬರಿ, ಉದ್ದಿನಬೇಳೆ, ಮೆಂತೆ, ಜೀರಿಗೆ, ಕೆಂಪುಮೆಣಸು ಹಾಕಿ ಹುರಿದು, ಅರಸಿನ ಸೇರಿಸಿ. ನಂತರ ತೆಂಗಿನತುರಿ, ಸ್ವಲ್ಪ ನೀರು ಸೇರಿಸಿ ಹುರಿದ ಮಸಾಲೆ ಸೇರಿಸಿ ರುಬ್ಬಿ. ಬೆಂದ ತರಕಾರಿಗೆ ಬೇಯಿಸಿದ, ತೊಗರಿಬೇಳೆ, ರುಬ್ಬಿದ ಮಸಾಲೆ ಸಾಕಷ್ಟು ನೀರು ಸೇರಿಸಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ. ಈಗ ರುಚಿಯಾದ ಬೂದುಕುಂಬಳ ಸಾಂಬಾರು ಅನ್ನ, ಚಪಾತಿಯೊಂದಿಗೆ ಸವಿಯಲು ಸಿದ್ಧ.

ಬೂದುಕುಂಬಳಕಾಯಿ ಪಕೋಡ
ಬೇಕಾಗುವ ವಸ್ತುಗಳು : ತುರಿದ ಬೂದುಕುಂಬಳಕಾಯಿ 1 ಕಪ್, ¾ ಕಪ್ ಅಕ್ಕಿ ಹಿಟ್ಟು, ½ ಕಪ್ ಚಿರೋಟಿ ರವೆ, ½ ಕಪ್ ಈರುಳ್ಳಿ ಚೂರು, ½ ಚಮಚ ಜೀರಿಗೆ, ½ ಚಮಚ ಓಮ, ½ ಚಮಚ ಶುಂಠಿ ಪೇಸ್ಟ್, 1 ಚಮಚ ಕಾರದ ಪುಡಿ, ¼ ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ.
ಮಾಡುವ ವಿಧಾನ : ಬೂದುಕುಂಬಳ ತುರಿ, ಅಕ್ಕಿ ಹಿಟ್ಟು, ಚಿರೋಟಿ ರವೆ, ಈರುಳ್ಳಿ ಚೂರು, ಜೀರಿಗೆ ಓಮ, ಶುಂಠಿ ಪೇಸ್ಟ್, ಕಾರದ ಪುಡಿ, ತೆಂಗಿನತುರಿ ಸೇರಿಸಿ ಚೆನ್ನಾಗಿ ಕಲಸಿ. ½ ಗಂಟೆ ನಂತರ ಕೈಯಿಂದ ಸ್ವಲ್ಪ ಸ್ವಲ್ಪವೇ ತೆಗೆದು ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಪಕೋಡ ಸವಿಯಲು ಬಲು ರುಚಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT