ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಸೆಗೆ ಸಾಥ್ ಪೋರ್ಕ್‌ ಫ್ರೈ

Last Updated 28 ಜೂನ್ 2019, 19:30 IST
ಅಕ್ಷರ ಗಾತ್ರ

ತಣ್ಣನೆ ಮಳೆ ಸುರಿಯುವಾಗ ಕಾಳುಮೆಣಸು ಸವರಿದ ಹಂದಿ ಪೆಪ್ಪರ್ ಡ್ರೈ ಸವಿಯುತ್ತಿದ್ದರೆ ಅದರ ಮಜವೇ ಬೇರೆ. ಅಕ್ಕಿಹಿಟ್ಟಿನಲ್ಲಿ ಮಾಡಿದ ಹಂದಿ ಮಾಂಸದ ಸಾರಿನ ರುಚಿಯನ್ನು ಸವಿಯುವುದೇ ಹಿತ. ಸೋಯ ಸಾಸ್, ವಿನೆಗರ್, ಮಸಾಲೆಪುಡಿಯನ್ನೆಲ್ಲಾ ಸೇರಿಸಿ ಕಲೆಸಿ ಕರಿದ ಫ್ರೈನ ಘಮ ಮೂಗಿನ ಹೊಳ್ಳೆಗೆ ತಾಕಿದರೆ ಬಾಯಿಯಲ್ಲಿ ನೀರೂರುತ್ತದೆ. ಹಾಗಾದರೆ ಇನ್ನೇಕೆ ತಡ ಈ ರೆಸಿಪಿಯನ್ನೆಲ್ಲಾ ಮನೆಯಲ್ಲಿ ತಯಾರಿಸಿ ಬಾಯಿ ರುಚಿ ಹೆಚ್ಚಿಸಿಕೊಳ್ಳಿ ಎನ್ನುತ್ತಿದ್ದಾರೆ ಎಂ. ಎಸ್. ಧರ್ಮೇಂದ್ರ

ಅಕ್ಕಿಹಿಟ್ಟಿನ ಹಂದಿಮಾಂಸದ ಸಾರು

ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1 ಕೆ.ಜಿ (ಹೆಚ್ಚು ಮಾಂಸ ಮತ್ತು ದಪ್ಪ ಕಡಿಮೆಯಿರುವ ಸ್ವಲ್ಪ ಚರ್ಬಿ), ಶುಂಠಿ ಪೇಸ್ಟ್ – 1 ಚಮಚ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಕೊತ್ತಂಬರಿ ಪುಡಿ – 3 ಚಮಚ, ಖಾರದ ಪುಡಿ – 3 ಚಮಚ, ಅರಿಸಿನ ಪುಡಿ – ಸ್ವಲ್ಪ, ಗರಂ ಮಸಾಲೆ – ಸ್ವಲ್ಪ, ಮೆಣಸಿನ ಪುಡಿ(ಪೆಪ್ಪರ್) – ಸ್ವಲ್ಪ, ಅಕ್ಕಿಹಿಟ್ಟು – 5 ಚಮಚ, ಈರುಳ್ಳಿ – 3, ಟೊಮೆಟೊ – 2, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:ಈರುಳ್ಳಿ, ಕೊತ್ತಂಬರಿ, ಟೊಮೆಟೊ ಕತ್ತರಿಸಿಟ್ಟುಕೊಳ್ಳಿ, ಅಕ್ಕಿಹಿಟ್ಟನ್ನು ಸಣ್ಣ ಉರಿಯಲ್ಲಿ ಹುರಿದಿಟ್ಟುಕೊಳ್ಳಿ.ಚೆನ್ನಾಗಿ ತೊಳೆದ ಪೋರ್ಕ್ ಅನ್ನು ಕುಕ್ಕರ್‌ನಲ್ಲಿ ಹಾಕಿ ಉಪ್ಪನ್ನು ಬೆರೆಸಿದ ನಂತರ ಸ್ವಲ್ಪ ಅರಿಸಿನ ಪುಡಿ ಮತ್ತು ಕತ್ತರಿಸಿಟ್ಟುಕೊಂಡಿರುವ ಪದಾರ್ಥಗಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಪುಡಿ, ಖಾರದಪುಡಿ, ಮೆಣಸಿನಪುಡಿ, ಗರಂ ಮಸಾಲೆ ಮತ್ತು ಸ್ವಲ್ಪ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮುಕ್ಕಾಲು ಭಾಗ ಬೇಯಿಸಿದ ನಂತರ ಮುಚ್ಚಳ ತೆಗೆದು ಚೆನ್ನಾಗಿ ಬೇಯಿಸಿ. ಬೆಂದ ನಂತರ ಹುರಿದ ಅಕ್ಕಿಹಿಟ್ಟನ್ನು ಸ್ವಲ್ಪ ನೀರಿಗೆ ಹಾಕಿ ಕಲಸಿ ಸಾರಿಗೆ ಹಾಕಿ ಕುದಿ ಬರುವತನಕ ಬೇಯಿಸಿ (ಒಗ್ಗರಣೆಗೆ ಎಣ್ಣೆಯ ಅವಶ್ಯಕತೆಯಿಲ್ಲ).

ಪೋರ್ಕ್ ಫ್ರೈ (ಕೂರ್ಗ್ ಶೈಲಿ)

ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1/2 ಕೆ.ಜಿ (ಮಾಂಸ ಮತ್ತು ಚರ್ಬಿ), ಶುಂಠಿ ಪೇಸ್ಟ್ – 1 ಚಮಚ, ಬೆಳ್ಳುಳ್ಳಿ – 2 ಉಂಡೆ, ಖಾರದ ಪುಡಿ – 1 ಚಮಚ, ಪೆಪ್ಪರ್(ಕಾಳು ಮೆಣಸು) – 1 ಚಮಚ, ಕೊತ್ತಂಬರಿ – 2 ಚಮಚ, ಚಕ್ಕೆ – 3 ತುಂಡು, ಲವಂಗ – 4, ಏಲಕ್ಕಿ – 2, ಜೀರಿಗೆ – ಸ್ವಲ್ಪ, ಮೆಂತ್ಯ – 10 ಕಾಳು, ಬ್ಯಾಡಗಿ ಮೆಣಸಿನಕಾಯಿ – 8, ಗಸೆಗಸೆ – ಸ್ವಲ್ಪ, ಅರಿಸಿನ ಪುಡಿ – ಸ್ವಲ್ಪ, ಸಾಂಬಾರು ಈರುಳ್ಳಿ – 4, ಈರುಳ್ಳಿ – 1, ಹಸಿ ಮೆಣಸಿನಕಾಯಿ – 5, ಕ್ಯಾಪ್ಸಿಕಂ – 1, ಕರಿಬೇವು – 2 ಕಡ್ಡಿ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಹುಣಸೆಹುಳಿ, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಪೋರ್ಕ್‍ಗೆ ಅರಿಸಿನ ಪುಡಿ, ಖಾರದಪುಡಿ, ಸಾಂಬಾರು ಈರುಳ್ಳಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ನೀರು ಹಾಕದೆ ಕುಕ್ಕರ್‌ನಲ್ಲಿ 3 ವಿಷಲ್ ಹಾಕಿಸಿಟ್ಟುಕೊಳ್ಳಿ.

ಮಸಾಲೆ ಪುಡಿಗೆ: ಕೊತ್ತಂಬರಿ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಮೆಂತ್ಯ, ಬ್ಯಾಡಗಿ ಮೆಣಸಿನಕಾಯಿ, ಗಸೆಗಸೆಯನ್ನು ಬಾಣಲಿಯಲ್ಲಿ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೂ ಹುರಿದು ಆರಿದ ನಂತರ ಪುಡಿ ಮಾಡಿಟ್ಟುಕೊಳ್ಳಿ.

ಈರುಳ್ಳಿ, ಬೆಳ್ಳುಳ್ಳಿಯನ್ನು ಸಣ್ಣಗೆ, ಕ್ಯಾಪ್ಸಿಕಂ ಮತ್ತು ಹಸಿಮೆಣಸಿನಕಾಯಿಯನ್ನು ಉದ್ದವಾಗಿ ಕತ್ತರಿಸಿಕೊಳ್ಳಿ.

ಫ್ರೈ ಪ್ಯಾನ್‍ಗೆ ಎಣ್ಣೆ ಹಾಕಿ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ ಮತ್ತು ಉಪ್ಪನ್ನು ಒಂದಾದ ನಂತರ ಒಂದನ್ನು ಹಾಕುತ್ತಾ ಚೆನ್ನಾಗಿ ಫ್ರೈ ಮಾಡಿದ ಮೇಲೆ ಬೆಂದ ನೀರಿನ ಸಮೇತ ಪೋರ್ಕ್ ಅನ್ನು ಹಾಕಿ ಸ್ವಲ್ಪ ಸಮಯ ಬೇಯಿಸಿ. ನಂತರ ಮಸಾಲೆಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಬೇಯಿಸಿ. ಇನ್ನೇನು ಒಲೆಯಿಂದ ಇಳಿಸಬೇಕು ಎನ್ನುವಾಗ ಹುಣಸೆಹುಳಿ ಹಾಕಿ ಮಿಕ್ಸ್ ಮಾಡಿ ಬೇಯಿಸಿ. ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವನ್ನು ಹಾಕಿ ಮುಚ್ಚಳ ಮುಚ್ಚಿ.

ಪೋರ್ಕ್ ಸೋಯಾ ಪೆಪ್ಪರ್ ಡ್ರೈ

ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1/2 ಕೆ.ಜಿ (ಹೆಚ್ಚು ಚರ್ಬಿ ಮತ್ತು ಕಡಿಮೆ ಕೆಂಪು ಮಾಂಸ), ಹಸಿಮೆಣಸಿನ ಕಾಯಿ – 6, ಶುಂಠಿ ಪೇಸ್ಟ್ – 1 ಚಮಚ, ಬೆಳ್ಳುಳ್ಳಿ – 2 ಉಂಡೆ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಪುದಿನ ಸೊಪ್ಪು – ಸ್ವಲ್ಪ, ಕಾಳುಮೆಣಸು (ಪೆಪ್ಪರ್) – 2 ಚಮಚ, ಕೊತ್ತಂಬರಿ ಪುಡಿ – 2 ಚಮಚ, ಖಾರದಪುಡಿ – 1 ಚಮಚ, ಅರಿಸಿನ ಪುಡಿ – ಸ್ವಲ್ಪ, ಈರುಳ್ಳಿ – 3, ಸೋಯಾ ಸಾಸ್ – 3 ಚಮಚ, ವಿನಿಗರ್ – 2 ಚಮಚ, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಪೋರ್ಕ್‌ಗೆ ಅರಿಸಿನ ಪುಡಿ, ಖಾರದಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಕುಕ್ಕರ್‌ನಲ್ಲಿ ಬೇಯಿಸಿ ಬಸಿದಿಟ್ಟುಕೊಳ್ಳಿ. ಕೊತ್ತಂಬರಿಪುಡಿಯನ್ನು ಕಾವಲಿ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಕಪ್ಪು ಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ. ಸಣ್ಣಗೆ ಈರುಳ್ಳಿ, ಪುದಿನ, ಕೊತ್ತಂಬರಿ ಕತ್ತರಿಸಿಟ್ಟುಕೊಳ್ಳಿ. ಪೆಪ್ಪರ್, ಹಸಿಮೆಣಸಿನಕಾಯಿಯನ್ನು ಹುರಿದು ಜಜ್ಜಿಟ್ಟುಕೊಳ್ಳಿ.

ತೆರೆದ ಪಾತ್ರೆಗೆ ಎಣ್ಣೆ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಜಜ್ಜಿದ ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಬೇಯಿಸಿ, ಶುಂಠಿ ಪೇಸ್ಟ್ ಮತ್ತು ಜಜ್ಜಿದ ಹಸಿಮೆಣಸಿನಕಾಯಿ, ಬೇಯಿಸಿದ ಮಾಂಸ, ಪುದಿನ ಮತ್ತು ಉಪ್ಪು ಹಾಕಿ ಫ್ರೈ ಮಾಡಿದ ಮೇಲೆ ಕೊತ್ತಂಬರಿ ಪುಡಿ, ಜಜ್ಜಿದ ಪೆಪ್ಪರ್, ಸೋಯಾ ಸಾಸ್ ಹಾಕಿ ಸ್ವಲ್ಪ ಬೇಯಿಸಿ. ವಿನಿಗರ್ ಹಾಕಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪು ಉದುರಿಸಿ ಮುಚ್ಚಳ ಮುಚ್ಚಿ ಒಲೆಯಿಂದ ಕೆಳಗಿಳಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT