ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಧಿಹಿಟ್ಟಿನ ಕುಕೀಸ್‌, ಆಲೂ ಟಿಕ್ಕಿ ಚಾಟ್‌

Last Updated 23 ಅಕ್ಟೋಬರ್ 2021, 7:36 IST
ಅಕ್ಷರ ಗಾತ್ರ

ಗೋಧಿಹಿಟ್ಟಿನ ಕುಕೀಸ್‌

ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು – 2 ಕಪ್‌, ಕಸ್ಟರ್ಡ್ ಪುಡಿ – ಅರ್ಧ ಕಪ್‌, ಉಪ್ಪು – ರುಚಿಗೆ, ಸಕ್ಕರೆ ಪುಡಿ – 1 ಕಪ್‌, ಗೋಡಂಬಿ – 1 ಸಣ್ಣ ಕಪ್‌, ತೆಂಗಿನಕಾಯಿ ತುರಿ – 1 ಸಣ್ಣ ಕಪ್‌, ತುಪ್ಪ – ಮುಕ್ಕಾಲು ಕಪ್‌, ಏಲಕ್ಕಿ ಪುಡಿ – ಕಾಲು ಚಮಚ

ತಯಾರಿಸುವ ವಿಧಾನ: ಒಂದು ಅಗಲವಾದ ಕಪ್‌ಗೆ 2 ಕಪ್‌ ಗೋಧಿಹಿಟ್ಟು, ಅರ್ಧ ಕಪ್ ಕಸ್ಟರ್ಡ್‌ ಪುಡಿ ಹಾಗೂ ಚಿಟಿಕೆ ಉಪ್ಪು ಸೇರಿಸಿ ಜರಡಿ ಹಿಡಿದುಕೊಳ್ಳಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಮುಕ್ಕಾಲು ಕಪ್‌ ಸಕ್ಕರೆ ಪುಡಿ, ಹೆಚ್ಚಿದ ಗೋಡಂಬಿ ಹಾಗೂ ತೆಂಗಿನಕಾಯಿ ಸೇರಿಸಿ ಮಿಶ್ರಣ ಮಾಡಿ. ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಸೇರಿಸಿ ಪುನಃ ಅರ್ಧ ಕಪ್ ತು‍‍‍ಪ್ಪ ಹಾಕಿ ಕೈಯಿಂದ ಚೆನ್ನಾಗಿ ನಾದಿಕೊಳ್ಳಿ. ಪ್ಲೇಟ್‌ಗೆ ತುಪ್ಪ ಸವರಿ. ಮಿಶ್ರಣದಿಂದ ಕುಕೀಸ್ ಆಕಾರ ಕೊಟ್ಟು ಅದರ ಮೇಲೆ ಸಾಲಾಗಿ ಜೋಡಿಸಿ. ಫೋರ್ಕ್‌ನಿಂದ ಅಚ್ಚು ಮೂಡಿಸಿ. ಓವೆನ್‌ ಅನ್ನು 180 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿ ಮಾಡಿಕೊಂಡು ಕುಕೀಸ್ ಅನ್ನು ಬೇಯಿಸಿ. ಈಗ ನಿಮ್ಮ ಮುಂದೆ ರುಚಿಯಾದ ಸಿಹಿಯಾದ ಕುಕೀಸ್ ತಿನ್ನಲು ಸಿದ್ಧ. ಇದನ್ನು ಡಬ್ಬಿಯಲ್ಲಿ ವಾರಗಟ್ಟಲೇ ಇಟ್ಟುಕೊಂಡು ತಿನ್ನಬಹುದು.

ಆಲೂ ಟಿಕ್ಕಿ ಚಾಟ್‌

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗೆಡ್ಡೆ – 8, ಖಾರದಪುಡಿ – 1 ಚಮಚ, ಗರಂಮಸಾಲ – 1 ಚಮಚ, ಕಾರ್ನ್ ಫ್ಲೋರ್ – 3 ಚಮಚ, ಉಪ್ಪು – ರುಚಿಗೆ, ಇಂಗು – ಚಿಟಿಕೆ, ಕೊತ್ತಂಬರಿ ಸೊಪ್ಪು ಹೆಚ್ಚಿದ್ದು – 1 ಕಪ್‌, ಹಸಿಮೆಣಸು – 2 ಹೆಚ್ಚಿದ್ದು, ಮಿಕ್ಸರ್ – ಸಿಂಗರಿಸಲು, ಹುಣಸೆಹಣ್ಣಿನ ಚಟ್ನಿ, ಹಸಿಮೆಣಸು ಚಟ್ನಿ, ಎಣ್ಣೆ – ಕಾಯಿಸಲು, ಮೊಸರು – ಸ್ವಲ್ಪ

ತಯಾರಿಸುವ ವಿಧಾನ: ಬೇಯಿಸಿಕೊಂಡ ಆಲೂಗೆಡ್ಡೆಯನ್ನು ಚೆನ್ನಾಗಿ ಮ್ಯಾಶ್‌ ಮಾಡಿಕೊಳ್ಳಿ. ಅದಕ್ಕೆ ಖಾರದ ಪುಡಿ, ಗರಂ ಮಸಾಲೆ, ಇಂಗು, ಉಪ್ಪು, ಕಾರ್ನ್ ಫ್ಲೋರ್‌, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ವಡೆಯಾಕಾರಕ್ಕೆ ತಟ್ಟಿಕೊಳ್ಳಿ. ತವಾ ಮೇಲೆ ಇರಿಸಿ ಸ್ವಲ್ಪ ಎಣ್ಣೆ ಹಚ್ಚಿ ಎರಡೂ ಬದಿ ಕಾಯಿಸಿ. ಕಾಯಿಸಿಕೊಂಡ ಆಲೂ ಟಿಕ್ಕಿ ಮೇಲೆ ಹುಣಸೆಹಣ್ಣಿನ ಚಟ್ನಿ, ಹಸಿಮೆಣಸಿನ ಚಟ್ನಿ, ಚಾಟ್‌ ಮಸಾಲ, ಪುಡಿ ಮಾಡಿದ ಪುರಿ ಉದುರಿಸಿ, ಅದರ ಮೇಲೆ ಮೊಸರು ಹಾಗೂ ಮಿಕ್ಸರ್ ಉದುರಿಸಿದರೆ ಆಲೂ ಟಿಕ್ಕಿ ಚಾಟ್ ತಿನ್ನಲು ಸಿದ್ಧ. ಇದನ್ನು ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ.

ಅವಲಕ್ಕಿ ಮಿಕ್ಸರ್

ಬೇಕಾಗುವ ಸಾಮಗ್ರಿಗಳು: ಅವಲಕ್ಕಿ – 400 ಗ್ರಾಂ, ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು, ಹಸಿಮೆಣಸು, ಕರಿಬೇವು ತೆಂಗಿನಕಾಯಿ – ಉದ್ದಕ್ಕೆ ಕತ್ತರಿಸಿದ್ದು, ಶೇಂಗಾ – ಅರ್ಧ ಕಪ್‌, ಗೋಡಂಬಿ – 10, ಬೆಳ್ಳುಳ್ಳಿ – 8 ರಿಂದ 10, ಪುಟಾಣಿ – ಕಾಲು ಕಪ್‌, ಅರಿಸಿನ – ಅರ್ಧ ಟೀ ಚಮಚ, ಖಾರದಪುಡಿ – ಅರ್ಧ ಚಮಚ, ಉಪ್ಪು – ರುಚಿಗೆ, ಟೊಮೆಟೊ, ಈರುಳ್ಳಿ, ತೆಂಗಿನತುರಿ.

ತಯಾರಿಸುವ ವಿಧಾನ: ಅಗಲವಾದ ದಪ್ಪ ತಳದ ಪಾತ್ರೆಯಲ್ಲಿ ಅವಲಕ್ಕಿಯನ್ನು ಗರಿಗರಿಯಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಪ್ಯಾನ್ ಮೇಲೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ ಹಾಗೂ ಒಣಮೆಣಸು ಹಾಕಿ ಹುರಿದುಕೊಳ್ಳಿ. ಸಾಸಿವೆ ಸಿಡಿಯಲು ಆರಂಭಿಸಿದಾಗ ಹಸಿಮೆಣಸು ಹಾಗೂ ಕರಿಬೇವು ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ 1 ಕಪ್‌ ತೆಂಗಿನಕಾಯಿ ತುರಿ ಸೇರಿಸಿ ಮಿಶ್ರಣ ಮಾಡಿ. ಚೆನ್ನಾಗಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಶೇಂಗಾ, ಗೋಡಂಬಿ ಸೇರಿಸಿ ಕೈಯಾಡಿಸಿ. ಬೆಳ್ಳುಳ್ಳಿ ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಪುಟಾಣಿ ಸೇರಿಸಿ. ನಂತರ ಚಿಟಿಕೆ ಅರಿಸಿನ, ಖಾರದಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅವಲಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಬಡಿಸುವಾಗ ಇದರ ಜೊತೆಗೆ ಟೊಮೆಟೊ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಗೂ ತೆಂಗಿನತುರಿ ಮಿಶ್ರಣವನ್ನು ಸೇರಿಸಿ ತಿನ್ನಲು ಕೊಡಿ. ಇದನ್ನು ಸಂಜೆ ಹೊತ್ತಿಗೆ ತಿನ್ನಲು ಸ್ನ್ಯಾಕ್‌ ಆಗಿ ಬಳಸಬಹುದು.

( ಲೇಖಕಿ: ರಶ್ಮೀಸ್ ವೆಜ್ ಯೂಟ್ಯೂಬ್ ಚಾನೆಲ್ ನಿರ್ವಾಹಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT