ಭಾನುವಾರ, ಸೆಪ್ಟೆಂಬರ್ 20, 2020
21 °C

ಸವಿದು ನೋಡಿಚಿಕನ್ ಸೂ‍ಪ್‌

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಸ್ಥಳೀಯವಾದ, ಸಾಂಪ್ರದಾಯಕ ಮಸಾಲೆ ಸೇರಿಸಿ ತಯಾರಿಸುವ ಕೋಳಿ ಮಾಂಸದ ಖಾದ್ಯಗಳಿಗಿಂತ ಅದಕ್ಕೊಂದಿಷ್ಟು ಸೊಪ್ಪು, ತರಕಾರಿ, ಸಾಸ್‌, ಚೀಸ್‌, ವಿನೆಗರ್‌ನಂತಹ ಸಾಮಗ್ರಿಗಳನ್ನು ಸೇರಿಸಿ ತಯಾರಿಸಿದರೆ ರುಚಿ ಜಾಸ್ತಿ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಜೊತೆಗೆ ವಿಭಿನ್ನವೆನಿಸುತ್ತದೆ. ಈಗೆಲ್ಲಾ ಸ್ಥಳೀಯ ಮಾರುಕಟ್ಟೆಯಲ್ಲೂ ಈ ಸಾಮಗ್ರಿಗಳು ಲಭ್ಯವಿದ್ದು, ಕೊಂಚ ಶ್ರಮ ವಹಿಸಿದರೆ ಮನೆಯಲ್ಲೂ ತಯಾರಿಸಿ ತಿನ್ನಬಹುದು ಎನ್ನುತ್ತಾರೆ ಮನಸ್ವಿ.

ಆಲೂ ಚಿಕನ್

ಬೇಕಾಗುವ ಸಾಮಗ್ರಿಗಳು: ಆಲಿವ್ ಎಣ್ಣೆ – 3 ಟೇಬಲ್ ಚಮಚ, ಚರ್ಮ ಹಾಗೂ ಮೂಳೆ ರಹಿತ ಚಿಕನ್ ಬ್ರೆಸ್ಟ್‌ – 4, ಹೆಚ್ಚಿದ ಟೊಮೆಟೊ – 1, ಸೋಡಿಯಂ ಚಿಕನ್ ಬ್ರಾಥ್ – 1 ರಿಂದ 2 ಕಪ್‌, ಸೋಡಿಯಂ ಸೋಯಾ ಸಾಸ್ – 3 ಟೇಬಲ್ ಚಮಚ, ಈರುಳ್ಳಿ – 1 ದೊಡ್ಡದು (ಉದ್ದಕ್ಕೆ ಹೆಚ್ಚಿಕೊಂಡಿದ್ದು), ಬೆಳ್ಳುಳ್ಳಿ – 2 ರಿಂದ 3 ಎಸಳು, ಕೆಂಪು ಆಲೂಗೆಡ್ಡೆ – 4 ದೊಡ್ಡದು (ನಾಲ್ಕು ಭಾಗವಾಗಿಸಿಕೊಂಡಿದ್ದು), ಕ್ಯಾರೆಟ್ – 3 ರಿಂದ 4 (ಸಿಪ್ಪೆ ತೆಗೆದು ಕತ್ತರಿಸಿಕೊಂಡಿದ್ದು), ಕೊತ್ತಂಬರಿ ಸೊಪ್ಪು – ಸ್ವಲ್ಪ ಹೆಚ್ಚಿಕೊಂಡಿದ್ದು, ಕಾಳುಮೆಣಸಿನ ಹುಡಿ
ತಯಾರಿಸುವ ವಿಧಾನ: ಒಂದು ಅಗಲವಾದ ದಪ್ಪ ತಳದ ಪಾತ್ರೆಗೆ ಆಲಿವ್ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ 4 ರಿಂದ 5 ನಿಮಿಷ ಕಾಯಿಸಿ. ಚಿಕನ್‌ ತುಂಡಿನ ಎರಡೂ ಭಾಗ ಕಾಯಬೇಕು. ನಂತರ ಅದಕ್ಕೆ ಟೊಮೆಟೊ, ಚಿಕನ್ ಬ್ರಾಥ್ ಹಾಗೂ ಸೋಯಾ ಸಾಸ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಕತ್ತರಿಸಿಕೊಂಡು ಈರುಳ್ಳಿ, ಬೆಳ್ಳುಳ್ಳಿ ಎಸಳು, ಆಲೂಗೆಡ್ಡೆ, ಕ್ಯಾರೆಟ್‌ ಹಾಗೂ ಕೊತ್ತಂಬರಿ ಸೊಪ್ಪನ್ನು ಚಿಕನ್‌ನ ಮೇಲೆ ಉದುರಿಸಿ.

ನಂತರ ಉರಿ ಕಡಿಮೆ ಮಾಡಿ ಸಣ್ಣ ಉರಿಯಲ್ಲಿ 45 ನಿಮಿಷ ಬೇಯಿಸಿ. ಆಗ ತರಕಾರಿ ಕೂಡ ಚೆನ್ನಾಗಿ ಬೆಂದಿರುತ್ತದೆ. ಈಗ ಆಲೂ ಚಿಕನ್ ತಿನ್ನಲು ಸಿದ್ಧ.

**

ಸಾಂಪ್ರದಾಯಕ ಚಿಕನ್ ಗ್ರೇವಿ
ಬೇಕಾಗುವ ಸಾಮಗ್ರಿಗಳು:
ಜೋಳ, ಮೈದಾ, ಗೋಧಿಹಿಟ್ಟುಗಳು – 3 ಟೇಬಲ್ ಚಮಚ, ಪೆಪ್ರಿಕಾ – 3 ಟೀ ಚಮಚ, ಪೌಲ್ಟ್ರಿ ಸೀಸನಿಂಗ್ – 1ಟೀ ಚಮಚ, ಉಪ್ಪು – 1/2 ಟೀ ಚಮಚ, ಕಾಳುಮೆಣಸಿನ ಪುಡಿ – 1/2 ಟೀ ಚಮಚ, ಚಿಕನ್ ಬ್ರೆಸ್ಟ್ – 6 ತುಂಡು (ಚರ್ಮ ಸಹಿತ), ಬೆಣ್ಣೆ – 2 ಟೀ ಚಮಚ, ಹೆಚ್ಚಿದ ಈರುಳ್ಳಿ – 1/2 ಕಪ್‌, ಕೊತ್ತಂಬರಿ ಸೊಪ್ಪು – 1/2 ಹೆಚ್ಚಿದ್ದು, ಬೆಳ್ಳುಳ್ಳಿ – 3 ಎಸಳು (ಹೆಚ್ಚಿದ್ದು), ಚಿಕನ್ ಬ್ರಾಥ್‌ – 1 ಕಪ್‌ (ಕೊಬ್ಬು ರಹಿತ), ಡ್ರೈ ವೈಟ್ ವೈನ್ – 1/4 ಕಪ್‌, ಉದ್ದಕ್ಕೆ, ತೆಳ್ಳಗೆ ಸೀಳಿಕೊಂಡ ಕ್ಯಾರೆಟ್ – 2 ಕಪ್‌.

ತಯಾರಿಸುವ ವಿಧಾನ: ಮೊದಲು ಹೇಳಿದ 5 ಪದಾರ್ಥಗಳನ್ನು ಜಿಪ್‌ ಇರುವ ದೊಡ್ಡ ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ. ನಂತರ ಅದಕ್ಕೆ ಚಿಕನ್ ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಹೊತ್ತು ಹಾಗೆ ಗಾಳಿಯಾಡದಂತೆ ಇಡಿ. ನಂತರ ಚಿಕನ್ ತುಂಡುಗಳನ್ನು ಮಾತ್ರ ತೆಗೆದಿಡಿ. ಹಿಟ್ಟಿನ ಮಿಶ್ರಣವನ್ನು ಹಾಗೇ ಕವರ್‌ನಲ್ಲಿ ಇಡಿ. ನಂತರ ದಪ್ಪ ತಳದ ತವಾದಲ್ಲಿ ಬೆಣ್ಣೆ ಹಾಕಿ ಕರಗಿಸಿ. ಅದಕ್ಕೆ ಚಿಕನ್ ಹಾಕಿ. ಚಿಕನ್‌ ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಚಿಕನ್ ಅನ್ನು ತೆಗೆದು ಒಣಗಲು ಬಿಡಿ.

ಬೇರೊಂದು ಪಾನ್‌ಗೆ ಈರುಳ್ಳಿ, ಕೊತ್ತಂಬರಿ ಹಾಗೂ ಬೆಳ್ಳುಳ್ಳಿ ಸೇರಿಸಿ. ಆಗಾಗ ಮಗುಚುತ್ತಿರಿ. ನಂತರ ಅದಕ್ಕೆ ಕವರ್‌ನಲ್ಲಿರುವ ಹಿಟ್ಟಿನ ಮಿಶ್ರಣ ಸೇರಿಸಿ ಒಂದು ನಿಮಿಷ ಕುದಿಸಿ. ಅದಕ್ಕೆ ಬ್ರಾಥ್ ಹಾಗೂ ವೈನ್ ಸೇರಿಸಿ. ಕುದಿ ಬರಿಸಿ. ನಂತರ ಕ್ಯಾರೆಟ್ ಸೇರಿಸಿ. ನಂತರ ಚಿಕನ್‌ ಅನ್ನು ಪಾನ್‌ಗೆ ಸೇರಿಸಿ, ಮಿಶ್ರ ಮಾಡಿ. ನಂತರ ಪಾತ್ರೆಯನ್ನು ಮುಚ್ಚಿ ಉರಿ ಕಡಿಮೆ ಮಾಡಿ. 25 ನಿಮಿಷ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

**

ಚೀಸ್‌ ಟೆಕ್ಸ್‌–ಮೆಕ್ಸ್‌ ಸ್ಟಫ್ಡ್‌ ಚಿಕನ್‌
ಬೇಕಾಗುವ ಸಾಮಗ್ರಿಗಳು:
ಸ್ಪ್ರಿಂಗ್ ಆನಿಯನ್ – 2 (ಹೆಚ್ಚಿದ್ದು), ಹಸಿಮೆಣಸು – 2 (ಕತ್ತರಿಸಿಟ್ಟುಕೊಳ್ಳಿ), ಕೊತ್ತಂಬರಿ ಸೊಪ್ಪು – 1,1/4 ಕಪ್‌, ನಿಂಬೆಸಿಪ್ಪೆ – 1 ಟೇಬಲ್ ಚಮಚ, ಚೀಸ್ – 4 ತುಂಡು (ತುರಿದಿಟ್ಟುಕೊಳ್ಳಿ), ಚಿಕನ್ ತುಂಡು – ಮೂಳೆ ರಹಿತ – 4 ಸಣ್ಣ ತುಂಡುಗಳು, ಆಲೀವ್ ಎಣ್ಣೆ – 3ಟೇಬಲ್ ಚಮಚ, ಉಪ್ಪು, ಕಾಳುಮೆಣಸು, ನಿಂಬೆರಸ – 3ಟೇಬಲ್ ಚಮಚ, ದೊಣ್ಣೆ ಮೆಣಸು – 2 (ತೆಳ್ಳಗೆ ಕತ್ತರಿಸಿಕೊಂಡಿದ್ದು), ಸಣ್ಣ ಕೆಂಪು ಈರುಳ್ಳಿ – 1/2 (ಉದ್ದಕ್ಕೆ ಕತ್ತರಿಸಿಕೊಂಡಿದ್ದು), ರೊಮೈನ್ ಲೆಟ್ಯೂಸ್ – 5 ಕಪ್

ತಯಾರಿಸುವ ವಿಧಾನ: 450 ಡಿಗ್ರಿ ಸೆಲ್ಷಿಯಸ್‌ನಲ್ಲಿ ಓವನ್ ಬಿಸಿ ಮಾಡಿ. ಸ್ಪ್ರಿಂಗ್ ಆನಿಯನ್ ಹಾಗೂ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹಾಗೂ ನಿಂಬೆಸಿಪ್ಪೆ ಈ ಎಲ್ಲವನ್ನೂ ಒಂದು ಬೌಲ್‌ನಲ್ಲಿ ಹಾಕಿ. ನಂತರ ಅದಕ್ಕೆ ಹೆಚ್ಚಿಕೊಂಡ ಚೀಸ್ ಸೇರಿಸಿ. ನಂತರ ಮೂಳೆ ರಹಿತ ಚಿಕನ್ ತುಂಡುಗಳಿಗೆ ಚಾಕುವಿನಿಂದ ಅಲ್ಲಲ್ಲಿ ತೂತು ಮಾಡಿ. ನಂತರ ಚೀಸ್ ಮಿಶ್ರಣದೊಂದಿಗೆ ಚಿಕನ್ ಸೇರಿಸಿ ಬೇಯಿಸಿ.

ಅದಕ್ಕೆ 2 ಚಮಚ ಆಲೀವ್ ಎಣ್ಣೆ ಹಾಕಿ ಕುದಿಸಿ. ಚಿಕನ್‌ ತುಂಡುಗಳಿಗೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಹಾಕಿ ಎರಡೂ ಕಡೆ ಬೇಯುವಂತೆ 3 ರಿಂದ 4 ನಿಮಿಷ ಕುದಿಸಿ. ನಂತರ ಚಿಕನ್ ರೋಸ್ಟ್ ಆಗುವವರೆಗೂ 10 ರಿಂದ 12 ನಿಮಿಷ ಓವನ್‌ನಲ್ಲಿ ಬೇಯಿಸಿ. ನಂತರ ಅದಕ್ಕೆ ಒಂದು ಬೌಲ್‌ ನಿಂಬೆರಸ, 1ಚಮಚ ಆಲಿವ್ ಎಣ್ಣೆ, 1‌/2 ಚಮಚ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ದೊಣ್ಣೆ ಮೆಣಸು, ಕೆಂಪು ಈರುಳ್ಳಿ ಸೇರಿಸಿ 10 ನಿಮಿಷ ಕುದಿಸಿ. ಕೊನೆಗೆ ರೊಮೈನ್ ಲೆಟ್ಯೂಸ್ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.  

**

ಪಾಟ್ ಚಿಕನ್ ಸೂಪ್‌
ಬೇಕಾಗುವ ಸಾಮಗ್ರಿಗಳು: 
ಚರ್ಮ ರಹಿತ ಚಿಕನ್ ತುಂಡುಗಳು – 3, ಉದ್ದದ ಕ್ಯಾರೆಟ್ – 2
ಕೊತ್ತಂಬರಿ ಸೊಪ್ಪು – ಸ್ವಲ್ಪ, ಈರುಳ್ಳಿ – 1 (ನಾಲ್ಕು ಭಾಗ ಮಾಡಿಕೊಂಡಿದ್ದು), ಬೆಳ್ಳುಳ್ಳಿ – 1 ಎಸಳು (ಜಜ್ಜಿಕೊಂಡಿದ್ದು), ದಾಲ್ಚಿನ್ನಿ ಎಲೆ – 1, ಕೊತ್ತಂಬರಿ ಸೊಪ್ಪು – 4 ಎಸಳು, ಕಲ್ಲು ಉಪ್ಪು
ಎಗ್ ನೂಡಲ್ಸ್ – 1, 1/2 ಕಪ್‌, ಸಬ್ಬಸ್ಸಿಗೆ ಸೊಪ್ಪು – ಅಲಂಕರಿಸಲು

ತಯಾರಿಸುವ ವಿಧಾನ: ಎಲೆಕ್ಟ್ರಿಕಲ್ ಫ್ರೆಷರ್ ಕುಕ್ಕರ್‌ ಒಳಗೆ ಒಂದು ಪಾಟ್‌ನಲ್ಲಿ ಚಿಕನ್ ಹಾಕಿ ಇಡಿ. ಅದಕ್ಕೆ ಕ್ಯಾರೆಟ್‌, ಕೊತ್ತಂಬರಿ ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ದಾಲ್ಚಿನ್ನಿ ಎಲೆ, ಕೊತ್ತಂಬರಿ, ಉಪ್ಪು ಮುಕ್ಕಾಲು ಟೀ ಚಮಚ ಹಾಗೂ ನೀರು 6 ಕಪ್ ಹಾಕಿ. ನಂತರ ಕುಕ್ಕರ್‌ನ ಮುಚ್ಚಳ ಮುಚ್ಚಿ ಹೈ ಪ್ರೆಷರ್‌ನಲ್ಲಿ 15 ನಿಮಿಷ ಕುದಿಸಿ. ನಂತರ ಕುಕ್ಕರ್‌ ಪ್ರೆಶರ್ ಬಿಡುಗಡೆ ಮಾಡಿ ಮುಚ್ಚಳ ತೆಗೆಯಿರಿ. ನಂತರ ಚಿಕನ್ ತುಂಡು, ಕ್ಯಾರೆಟ್ ಹಾಗೂ ಕೊತ್ತಂಬರಿಯನ್ನು ತಣಿಯಲು ಬಿಡಿ.

ಈಗ ಉಳಿದ ಸಾಮಗ್ರಿಗಳನ್ನು ಪಾಟ್‌ಗೆ ಹಾಕಿ. ನಂತರ ಎಲ್ಲವನ್ನೂ ಸೇರಿಸಿ ಕುದಿಸಿರಿ. ಅದಕ್ಕೆ ನೂಡಲ್ಸ್ ಸೇರಿಸಿ 5 ರಿಂದ 6 ನಿಮಿಷ ಕುದಿಸಿ. ನಂತರ ಚಿಕನ್ ಹಾಗೂ ಕ್ಯಾರೆಟ್ ಅನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಅದಕ್ಕೆ ಬ್ರಾಥ್ ಸೇರಿಸಿ ಕುದಿಸಿ. ಮೇಲೆ ತಿಳಿಸಿದ ಎಲ್ಲವನ್ನೂ ಪಾತ್ರೆಯೊಂದಕ್ಕೆ ಸೇರಿಸಿ ನಂತರ ಸಬ್ಬಸ್ಸಿಗೆ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಅಲಂಕರಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು