ಸೋಮವಾರ, ಮಾರ್ಚ್ 27, 2023
32 °C

ಅಡುಗೆ ಎಣ್ಣೆ ಬಳಸುವುದು ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಡುಗೆ ವಿಷಯ ಬಂದ ಕೂಡಲೇ ಎಷ್ಟೆಲ್ಲ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಬೇಕು ಎಂಬುದು ಅಡುಗೆ ಮಾಡುವವರಿಗೆ ಗೊತ್ತೇ ಇದೆ. ಜೊತೆಗೆ ಅವು ಆರೋಗ್ಯಪೂರ್ಣವಾಗಿಯೂ ಇರಬೇಕು. ಅಕ್ಕಿ, ಬೇಳೆ, ಹಿಟ್ಟು, ಮಸಾಲೆ ಸಾಮಗ್ರಿಗಳು, ತರಕಾರಿ, ಮಾಂಸ, ಮೀನು, ಎಣ್ಣೆ.. ಹೀಗೆ ಪಟ್ಟಿ ಬೆಳೆಯುತ್ತದೆ. ಈ ಅಡುಗೆ ಎಣ್ಣೆಯ ವಿಷಯ ಬಂದಾಗ ಹೆಚ್ಚು ಕಾಳಜಿ ವಹಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ಇದಕ್ಕೆ ಕಲಬೆರಕೆ ಒಂದು ಕಾರಣವಾದರೆ, ಸಂಸ್ಕರಿಸಿದ ಎಣ್ಣೆ ಅಷ್ಟು ಆರೋಗ್ಯಕರವಲ್ಲ ಎಂಬ ಆತಂಕ ಇನ್ನೊಂದು ಕಾರಣ. ಹೀಗಾಗಿ ಗ್ರಾಹಕರು ಗಾಣದ ಎಣ್ಣೆ ಅಥವಾ ವರ್ಜಿನ್‌ ಎಣ್ಣೆಯತ್ತ ಮುಖ ಮಾಡಿದ್ದಾರೆ. ಅದು ತೆಂಗಿನ ಎಣ್ಣೆಯಿರಲಿ, ಸಾಸಿವೆ, ಎಳ್ಳು, ಸೂರ್ಯಕಾಂತಿ, ಶೇಂಗಾ, ಕುಸುಬಿ, ಅಗಸೆ, ಭತ್ತದ ಹೊಟ್ಟು, ಆಲಿವ್‌... ಯಾವುದೇ ಇರಲಿ, ಸಂಸ್ಕರಿಸದ ಗಾಣದ ಎಣ್ಣೆ ಹೆಚ್ಚು ಆರೋಗ್ಯಕರ ಎಂಬುದು ತಜ್ಞರ ಅಭಿಮತ ಮಾತ್ರವಲ್ಲ, ಬಳಕೆದಾರರದ್ದೂ ಕೂಡ.

ನಾವು ಭಾರತೀಯರು ನಿತ್ಯದ ಅಡುಗೆಯಾದ ಪಲ್ಯ, ದೋಸೆ, ಚಪಾತಿಗೆ ಮಾತ್ರವಲ್ಲ, ಹಪ್ಪಳ, ಪೂರಿ, ಪಕೋಡ, ಬಜ್ಜಿ– ಬೋಂಡಾದಂಥವುಗಳನ್ನು ಕರಿಯಲು ಹೆಚ್ಚು ಎಣ್ಣೆ ಬಳಸುವುದು ವಾಡಿಕೆ. ಆದರೆ ಉಳಿತಾಯದ ದೃಷ್ಟಿಯಿಂದ ಕರಿಯಲು ಬಳಸಿದ ಎಣ್ಣೆಯನ್ನು ಹಾಗೇ ಇಟ್ಟು ಮತ್ತೆ ಬಳಸುವುದು ರೂಢಿ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅದು ಸಂಸ್ಕರಿಸಿದ ಎಣ್ಣೆಯಿರಲಿ ಅಥವಾ ಗಾಣದ ಶುದ್ಧ ಎಣ್ಣೆಯಿರಲಿ ಅದರಲ್ಲಿರುವ ಅನ್‌ಸ್ಯಾಚುರೇಟೆಡ್‌ ಕೊಬ್ಬಿನಂಶದಿಂದಾಗಿ ನಮ್ಮ ಆರೋಗ್ಯಕ್ಕೆ ಅಷ್ಟು ಸುರಕ್ಷಿತವಲ್ಲ.

ಇದು ಹೆಚ್ಚಿನ ಉಷ್ಣಾಂಶದಲ್ಲಿ ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಮತ್ತೆ ಬಳಸಿದರೆ ಹೃದ್ರೋಗ, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ತಲೆದೋರಬಹುದು. ಹೀಗಾಗಿ ಕರಿಯುವಾಗ ಎಷ್ಟು ಬೇಕೊ ಅಷ್ಟೇ ಎಣ್ಣೆಯನ್ನು ಬಳಸಿ. ಅದನ್ನು ಉಳಿಸಿಕೊಂಡು ಮತ್ತೆ ಬಳಸಬೇಡಿ. ಇನ್ನೊಂದು ಅಂಶವೆಂದರೆ ವಿನಾಕಾರಣ ಎಣ್ಣೆ ಕಾಯಲು ಬಿಡದೆ ಕರಿಯುವ ಕೆಲಸ ಬೇಗ ಬೇಗ ಮುಗಿಸಿ, ಗ್ಯಾಸ್‌ ಬಂದ್‌ ಮಾಡಿ. ಕೆಲವೊಮ್ಮೆ ಈ ಎಣ್ಣೆಯನ್ನು ತರಕಾರಿ ಪಲ್ಯ ಮಾಡಲು ಬಳಸಬಹುದು.

ಇನ್ನೊಂದು ಅಳತೆ. ಎಷ್ಟು ಪ್ರಮಾಣದಲ್ಲಿ ಅಡುಗೆ ಎಣ್ಣೆ ಬಳಸಬೇಕು ಎಂಬುದು. ಒಂದು ದಿನಕ್ಕೆ ಒಬ್ಬರು 15 ಎಂ.ಎಲ್‌. ಅಥವಾ 3 ಟೀ ಚಮಚ ಎಣ್ಣೆ ಬಳಸಬಹುದು. ಹಾಗೆಯೇ ಬೇರೆ ಬೇರೆ ಎಣ್ಣೆಯನ್ನು ಮಿಶ್ರ ಮಾಡಿ ಬಳಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು