ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನ್‌ವೆಜ್‌ ಪ್ರಿಯೆ...

Last Updated 6 ಸೆಪ್ಟೆಂಬರ್ 2018, 2:07 IST
ಅಕ್ಷರ ಗಾತ್ರ

ಕೆಲವರಿಗೆ ಅಡುಗೆ ಮನೆ ಅಂದ್ರೆ ಅಲರ್ಜಿ. ಅಮ್ಮನ ಒತ್ತಾಯಕ್ಕೆ ಅಡುಗೆ ಕಲಿಯುವ ಪ್ರಯತ್ನ ಮಾಡುತ್ತಾರೆ. ಆದರೆ ನನಗೆ ಅಡುಗೆ ಬಗ್ಗೆ ಹೆಚ್ಚು ಆಸಕ್ತಿ.ಸಣ್ಣವಳಿದ್ದಾಗ ಅಮ್ಮನಿಗೆ ಅಡುಗೆಯಲ್ಲಿ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದೆ. ಹಾಗೇ ಅಡುಗೆಯನ್ನು ನೋಡುತ್ತಾ ಕಲಿತೆ. ನನಗೆ ನಾನ್‌ವೆಜ್‌ ಅಂದ್ರೆ ತುಂಬ ಇಷ್ಟ. ಹೊರಗಡೆ ಊಟಕ್ಕೆ ಹೋದಾಗಲೂ ನನ್ನ ಆಯ್ಕೆ ಮಾಂಸಾಹಾರ ಖಾದ್ಯಗಳೇ.

ನಾನು ಮೊದಲ ಅಡುಗೆ ಮಾಡಿದ್ದು ಆರೇಳು ವರ್ಷಗಳ ಹಿಂದೆ. ಯೂಟ್ಯೂಬ್‌ ನೋಡಿಕೊಂಡು ಚಿಲ್ಲಿ ಚಿಕನ್‌ ಮಾಡಿದ್ದೆ. ಆದರೆ ಅದರಲ್ಲಿ ಚಿಕನ್‌ ತುಂಡಿಗಿಂತ ಚಿಲ್ಲಿನೇ ಜಾಸ್ತಿಯಾಗಿತ್ತು. ಮೊದಲ ಬಾರಿ ಏನು ತಪ್ಪು ಮಾಡಿದ್ದೀನೋ ಅದನ್ನು ನೆನಪಿಟ್ಟುಕೊಂಡು ಎರಡನೇ ಬಾರಿ ಇನ್ನಷ್ಟು ಚೆನ್ನಾಗಿ ಮಾಡಿದೆ. ಅದನ್ನು ಮನೆಯವರೆಲ್ಲಾ ತುಂಬ ಇಷ್ಟಪಟ್ಟು ತಿಂದರು.

ಈಗ ವೆಜ್‌, ನಾನ್‌ವೆಜ್‌ ಅಡುಗೆಗಳನ್ನು ಮಾಡುತ್ತೇನೆ. ನಾನ್‌ವೆಜ್‌ನಲ್ಲಿ ತುಂಬ ವಿಧದ ಅಡುಗೆ ಮಾಡಲು ಕಲಿತುಕೊಂಡಿದ್ದೀನಿ. ತರಕಾರಿಯಲ್ಲಿ ಸೊಪ್ಪು ಪಲ್ಯ, ರಸಂ, ಮಶ್ರೂಮ್‌ ಫ್ರೈಡ್‌ರೈಸ್‌ ಚೆನ್ನಾಗಿ ಮಾಡ್ತೀನಿ. ನನ್ನ ಅಪ್ಪನಿಗೆ ನಾನು ಮಾಡುವ ಬಿರಿಯಾನಿ, ಚಿಕನ್‌ ಫ್ರೈ ತುಂಬ ಇಷ್ಟ. ನಾನು ಮನೆಯಲ್ಲಿದ್ದಾಗ ಆಗಾಗ ನನ್ನಿಂದ ಮಾಡಿಸಿಕೊಂಡು ತಿನ್ನುತ್ತಾರೆ.ನಾನು ಮೊದಲ ಬಾರಿ ಬಿರಿಯಾನಿ ಮಾಡಿದ್ದೆ. ಧಮ್‌ ಬಿರಿಯಾನಿ ಮಾಡಲು ತಯಾರಿ ಮಾಡಿದ್ದೆ. ಕೊನೆಗೆ ಏನೇನೋ ಆಗಿ ಬಿರಿಯಾನಿ ಆಗಿತ್ತು. ಆದರೆ ರುಚಿ ಮಾತ್ರ ಅದ್ಭುತವಾಗೇ ಬಂದಿತ್ತು. ಮನೆಯಲ್ಲಿ ಎರಡು ಬಾರಿ ಹಾಕಿಸಿಕೊಳ್ಳುವವರು ಅವತ್ತು ಬಿರಿಯಾನಿಯನ್ನು ನಾಲ್ಕು ಬಾರಿ ಹಾಕಿಸಿಕೊಂಡು ತಿಂದಿದ್ದರು.

ನನಗೆ ಮನೆಯಡುಗೆಯೇ ಇಷ್ಟ. ಶೂಟಿಂಗ್‌ಗೆ ಬೆಳಿಗ್ಗೆ ಬೇಗ ಹೋಗಬೇಕಾಗಿದ್ದರಿಂದ ದಿನದ ಮೂರು ಹೊತ್ತು ಹೋಟೆಲ್‌ ಅಡುಗೆಯನ್ನೇ ತಿನ್ನುತ್ತೇವೆಯಲ್ಲಾ. ರುಚಿ ಕಾಣದ ನಾಲಿಗೆಗೆ ಮನೆಯಡುಗೆ ಸಿಕ್ಕಾಗ ಅದರ ಖುಷಿಯೇ ಬೇರೆ.

ರಜಾದಿನಗಳಲ್ಲಿ ಮನೆಯವರ ಜೊತೆ ಹೋಟೆಲ್‌ ಊಟಕ್ಕೂ ಹೋಗುತ್ತೇನೆ. ಕಸ್ತೂರಿನಗರ, ಸಿ.ವಿ.ರಾಮನ್‌ ನಗರದಲ್ಲಿ ಎರಡು– ಮೂರು ಸಣ್ಣ ಸಣ್ಣ ಬಿರಿಯಾನಿ ಹೋಟೆಲ್‌ಗಳಿವೆ. ಮೈಸೂರಿಗೆ ಹೋಗುವಾಗ ಸಿಗುವ ಹನುಮಂತು ಬಿರಿಯಾನಿ, ಸಕಲೇಶಪುರ ರಸ್ತೆಯಲ್ಲಿನ ಮುರಳಿ ಮಿಲಿಟರಿ ಹೋಟೆಲ್‌ನ ಬಿರಿಯಾನಿ, ಚಿಕನ್‌ ಸ್ಪೆಷಲ್‌ ನನಗೆ ತುಂಬ ಇಷ್ಟ. ಆ ಕಡೆ ಹೋದಾಗಲೆಲ್ಲಾ ಅಲ್ಲಿಗೆ ಭೇಟಿ ಇದ್ದದ್ದೇ. ಬೆಂಗಳೂರಿನಲ್ಲಿ ನಂದಿನಿ ಹೋಟೆಲ್‌ಗೆ ಚಿಲ್ಲಿ ಚಿಕನ್‌ ತಿನ್ನೋಕೆ ಆಗಾಗ ಹೋಗ್ತಿರ್ತೀನಿ. ನನಗೆ ಡಯೆಟ್‌ ಮಾಡೋಕಾಗಲ್ಲ. ಆದರೆ ಎಷ್ಟು ತಿಂತಿನೋ ಅಷ್ಟೇ ವರ್ಕೌಟ್‌ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT