ಹರಿದ ಹಸಿರು ಪರದೆ; ಜನರಿಗಿಲ್ಲ ನೆರಳು..!

ಸೋಮವಾರ, ಮೇ 27, 2019
23 °C
ಜೂನ್‌ ಸಾತ್‌ವರೆಗೂ ಇರಲಿ ನೆರಳಿನ ಪರದೆ; ವಿಜಯಪುರಿಗರ ಒತ್ತಾಸೆ

ಹರಿದ ಹಸಿರು ಪರದೆ; ಜನರಿಗಿಲ್ಲ ನೆರಳು..!

Published:
Updated:
Prajavani

ವಿಜಯಪುರ: ನಗರದ ಸಂಚಾರ ಸಿಗ್ನಲ್‌ಗಳಲ್ಲಿ ಬೈಕ್‌ ಸವಾರರಿಗೆ ಬಿಸಿಲಿನಿಂದ ರಕ್ಷಣೆ ನೀಡಲು, ಮಹಾನಗರ ಪಾಲಿಕೆ ಆಡಳಿತ ಅಳವಡಿಸಿದ್ದ ಹಸಿರು ಪರದೆಗಳು ಹರಿದು ಹೋಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ಕಡು ಬೇಸಿಗೆಯ ಸೂರ್ಯನ ಪ್ರಖರ ಶಾಖ ತಪ್ಪದಾಗಿದೆ.

ಮಹಾತ್ಮಗಾಂಧಿ ಚೌಕ್‌, ಕೇಂದ್ರ ಬಸ್‌ ನಿಲ್ದಾಣ, ವಾಟರ್ ಟ್ಯಾಂಕ್‌, ಬಸವೇಶ್ವರ ವೃತ್ತದ ಸಿಗ್ನಲ್‌ನ ರಸ್ತೆಗಳು ಸೇರಿದಂತೆ, ನಗರದ ಒಟ್ಟು 13 ರಸ್ತೆಗಳಿಗೆ ಹಸಿರು ಪರದೆ ಅಳವಡಿಸುವ ಮೂಲಕ ಮಹಾನಗರ ಪಾಲಿಕೆ ಆಡಳಿತ ನೆರಳಿನ ವ್ಯವಸ್ಥೆ ಮಾಡಿತ್ತು.

ಇದಕ್ಕೆ ವಿಜಯಪುರಿಗರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತು. ಇದೀಗ ಬಸವೇಶ್ವರ ವೃತ್ತ, ಗಾಂಧಿ ಚೌಕ್‌ನ ತಲಾ ಒಂದು ರಸ್ತೆ ಬಿಟ್ಟರೆ, ಉಳಿದ ಎಲ್ಲೆಡೆಯ ಬಹುತೇಕ ಪರದೆಗಳು ಹರಿದು ಹೋಗಿದ್ದು, ಬೈಕ್‌ ಸವಾರರು ಮತ್ತೆ ಸುಡು ಬಿಸಿಲಿನಲ್ಲೇ ಹಸಿರು ಸಿಗ್ನಲ್‌ಗಾಗಿ ಕಾದು ನಿಲ್ಲಬೇಕಿದೆ.

‘ಸಿಗ್ನಲ್‌ಗಳಿರುವ ರಸ್ತೆಯ ಎರಡು ಬದಿಯಲ್ಲಿ ಕಂಬಗಳನ್ನು ನೆಟ್ಟು, ಪರದೆ ಹಾಕಿ ನೆರಳಿನ ವ್ಯವಸ್ಥೆ ಮಾಡಿದ್ದರಿಂದ ಬೈಕ್‌ ಸವಾರರಿಗೆ ಅನುಕೂಲವಾಗಿತ್ತು. ಆದರೆ ಒಂದೆರೆಡು ದಿನದಲ್ಲಿಯೇ ಈ ಪರದೆಗಳು ಹರಿದು ಹೋಗಿದ್ದು, ಮರಳಿ ಹಾಕುವ ಕೆಲಸವಾಗಿಲ್ಲ. ಹೀಗಾಗಿ ಜನರು ಸುಡು ಬಿಸಿಲಿನಲ್ಲೇ ನಿಲ್ಲುವ ತ್ರಾಸು ತಪ್ಪಿಲ್ಲ. ಬಿಸಿಲು ಮುಗಿಯುವವರೆಗೆ ಪರದೆಗಳಿದ್ದರೆ, ಈ ಕೆಲಸ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ’ ಎನ್ನುತ್ತಾರೆ ಬೈಕ್‌ ಸವಾರ ಸಿದ್ದನಗೌಡ ಬಿರಾದಾರ.

‘ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಒಳ್ಳೆಯ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಅವುಗಳನ್ನು ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳು ಸರಿಯಾಗಿ ನಿರ್ವಹಿಸದಿದ್ದರೆ, ಯೋಜನೆಗಳು ಹಳ್ಳ ಹಿಡಿಯುವುದು ಗ್ಯಾರಂಟಿ. ಸಿಗ್ನಲ್‌ಗಳಲ್ಲಿ ಅಳವಡಿಸಲಾದ ಎಲ್ಲ ಪರದೆಗಳು ಹರಿದು ಹೋಗಿದ್ದು, ನೋಡಿದರೆ ಪಾಲಿಕೆ ಆಡಳಿತ ಕಾಟಾಚಾರಕ್ಕೆ ಎಂಬಂತೆ ಈ ಕೆಲಸ ಮಾಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ’ ಎಂಬ ದೂರು ಜಾವೀದ್‌ ಪಿಂಜಾರರದ್ದು.

‘ತಾಪಮಾನ ಹೆಚ್ಚಿದ್ದರಿಂದ ಸಿಗ್ನಲ್‌ಗಳಲ್ಲಿ ನಿಲ್ಲುವ ಬೈಕ್‌ ಸವಾರರಿಗೆ ತುಂಬಾ ತೊಂದರೆ ಆಗುತ್ತದೆ. ಇದನ್ನು ತಪ್ಪಿಸಲು ಮಾರ್ಚ್‌ ತಿಂಗಳಲ್ಲಿ ನಗರದ ಪ್ರತಿಯೊಂದು ಸಿಗ್ನಲ್‌ಗಳಲ್ಲಿ ವಾಹನಗಳು ನಿಲ್ಲುವ ರಸ್ತೆಯಲ್ಲಿ ಹಸಿರು ಪರದೆಗಳನ್ನು ಹಾಕಿ ನೆರಳು ಮಾಡಲಾಗಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಔದ್ರಾಮ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !