ಮಂಗಳವಾರ, ಜುಲೈ 5, 2022
23 °C

ಶ್ವೇತಾಂಬರಿಯ ಮನದಾಳ

ಶಾರದಾ ವಗರನಾಳ Updated:

ಅಕ್ಷರ ಗಾತ್ರ : | |

ಚೆಲುವಿನ ಚಿತ್ತಾರ

ದುಂಡು ಮುಖ, ಹಾಲಿನ ಕೆನೆಯಂತಹ ಮೈಬಣ್ಣ, ಆತ್ಮವಿಶ್ವಾಸದಿಂದ ಮಿನುಗುವ ಜೋಡಿಕಂಗಳು, ಮುತ್ತುಗಳ ಸಾಲಿನಂತಹ ಹಲ್ಲುಗಳು... ಹೆಸರಿಗೆ ತಕ್ಕಂತೆ ರೂಪದರ್ಶಿ ಶ್ವೇತಾ ನಿರಂಜನ್‌ ಸೌಂದರ್ಯ ರಾಶಿಯಿದು. ಮಾಡೆಲಿಂಗ್‌ ಲೋಕದಲ್ಲಿ ಮಿಂಚುತ್ತಿರುವ ಶ್ವೇತಾ, ಒಂದು ಮಗುವಿನ ತಾಯಿ. ಇತ್ತೀಚೆಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸೆಸ್ ಕರ್ನಾಟಕ ಬ್ಯೂಟಿಪುಲ್ ಐಸ್’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 

ಶ್ವೇತಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ.  ಚಿಕ್ಕ ವಯಸ್ಸಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇತ್ತು. ಮಾಡೆಲಿಂಗ್‌ ಕ್ಷೇತ್ರವೂ ಸೆಳೆದಿತ್ತು. ಭಾರತೀಯ ವಿದ್ಯಾ ಭವನದಲ್ಲಿ ಎಂಬಿಎ ಮುಗಿಸಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಉದ್ಯೋಗದ ಜೊತೆಜೊತೆಗೇ ಮಾಡೆಲಿಂಗ್‌ನಲ್ಲೂ ಸಕ್ರಿಯರಾದರು. 

ಚಾನೆಲ್ ವಿ ನಡೆಸಿದ ವೈಬ್ಸ್ ಎಂಬ ಫ್ಯಾಷನ್ ಷೋದಲ್ಲಿ ಭಾಗವಹಿಸಿದ್ದು ಶ್ವೇತಾ ಅವರ ಮೊದಲ ಅನುಭವ.  ಈ ವರ್ಷ ಮೇ 15ರಂದು ಸಿಡೆಡ್–ಡಿ ಗೋವಾದಲ್ಲಿ ನಡೆದ ‘ಶ್ರೀಮತಿ ಇಂಡಿಯಾ ವಿವಾಶಿಯಸ್' ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

‘ಮಾಡೆಲಿಂಗ್ ಕೇವಲ ಸೌಂದರ್ಯ ಸ್ಪರ್ಧೆಯಲ್ಲ. ಇದು ಆಂತರಿಕ ಸೌಂದರ್ಯದ ಆತ್ಮವಿಶ್ವಾಸ’ ಎಂದು ಹೇಳುವ ಶ್ವೇತಾಗೆ ರೋಹಿತ್ ಬಾಲಾ ಮತ್ತು ಒಸ್ಕರಾ ಡೆ ಲಾ ರೆಂಟಾ ನೆಚ್ಚಿನ ವಿನ್ಯಾಸಕಾರರು. ಇವರ ವಿನ್ಯಾಸದ ವಸ್ತ್ರಗಳನ್ನು ತೊಟ್ಟು ಅನೇಕ ಬಾರಿ ಷೋಗಳಲ್ಲಿ ಹೆಜ್ಜೆ ಹಾಕಿದ ಖುಷಿ ಇವರದು. ಮದುವೆಯಾದ ಮೇಲೆಯೂ ಮಾಡೆಲಿಂಗ್‌ನಲ್ಲಿ ಸಕ್ರಿಯರಾಗಿರುವ ಇವರು, ‘ಮಹಿಳೆಯರು ಮದುವೆಯಾದ ನಂತರ ಅವರ ಆಸೆ, ಕನಸುಗಳನ್ನು ಎಲ್ಲಾ ಅದುಮಿಟ್ಟಂತೆ ಬದುಕುತ್ತಾರೆ. ನನ್ನ ಅಸ್ಮಿತೆಯನ್ನು ಬಿಡುವುದು ನನಗಿಷ್ಟವಿಲ್ಲ. ಮದುವೆಯ ನಂತರ, ಮೊದಲು ಎಂಬ ಗೆರೆಗಳು ಫ್ಯಾಷನ್‌ ಲೋಕದಲ್ಲಿಲ್ಲ’ ಎಂದು ವಿಶ್ವಾಸದಿಂದ ಹೇಳುತ್ತಾರೆ.

ಸಿನಿಮಾ ಕ್ಷೇತ್ರದಲ್ಲೂ ಮಿಂಚಬೇಕು ಎಂಬ ನಿರೀಕ್ಷೆಯಲ್ಲಿರುವ ಶ್ವೇತಾ ‘ಕನ್ನಡ ಮತ್ತು ತೆಲುಗಿನಲ್ಲಿ ಕೆಲ ಅವಕಾಶಗಳು ಬಂದಿತ್ತು. ಆದರೆ ನಾನು ನಟಿಸುವ ಪಾತ್ರ ಸವಾಲಿನದ್ದಾಗಿರಬೇಕು. ಸುಮ್ಮನೇ ಬಂದು ಹೋಗುವ ಪಾತ್ರದಲ್ಲಿ ನಟಿಸಲು ಇಷ್ಟವಿಲ್ಲ’ ಎಂದು ಖಡಾಖಂಡಿತವಾಗಿ ನುಡಿಯುತ್ತಾರೆ. ಇವರಿಗೆ ಬಾಲಿವುಡ್‌ನ ಕಂಗನಾ ರನೋಟ್‌ ಸ್ಫೂರ್ತಿಯಂತೆ. 

ಫಿಟ್‌ ಆಗಿರಲು ದಿನಾ ತಪ್ಪದೆ ಯೋಗ ಮತ್ತು ಧ್ಯಾನ ಮಾಡುತ್ತಾರೆ. ‘ಇದರಿಂದ ಮಾನಸಿಕ ಸಮತೋಲನ ಕಾಪಾಡಿಕೊಳ್ಳಬಹುದು. ಮಾಡೆಲಿಂಗ್‌ಗೆ ದೇಹ ಸೌಂದರ್ಯ ಅಗತ್ಯವಿರುವುದರಿಂದ ದಿನಾ ಈಜು ಮತ್ತು ಕಿಕ್ ಬಾಕ್ಸಿಂಗ್ ಮಾಡಿ ಬೆವರಿಳಿಸುತ್ತೇನೆ. ನಾನು ಪಕ್ಕಾ ಸಸ್ಯಾಹಾರಿ, ದಿನಕ್ಕೆ ಮೂರು ಸಲ ಊಟ ಮಾಡುವ ಬದಲು 6 ಸಲ ಸ್ವಲ್ಪ ಸ್ವಲ್ಪವೇ ಊಟ ಮಾಡುತ್ತೇನೆ. ಮುಂಜಾನೆ ಲಘು ಉಪಾಹಾರದ ಜೊತೆ ಕಾಫಿ, 11 ಗಂಟೆಗೆ ಹಣ್ಣುಗಳನ್ನು ಸೇವಿಸುತ್ತೇನೆ. ಮಧ್ಯಾಹ್ನ ಒಂದು ಕಪ್ ಅನ್ನ ಜೊತೆ ಸಲಾಡ್ ಸೇವನೆ ಮಾಡುತ್ತೇನೆ. ಸಂಜೆ ಸೂಪ್ ಅಥವಾ ಜ್ಯೂಸ್. ರಾತ್ರಿ 2 ಜೋಳದ ರೊಟ್ಟಿ ಜೊತೆ ಚಟ್ನಿ ಸೇವಿಸುತ್ತೇನೆ’ ಎಂದು ಸೌಂದರ್ಯದ ಗುಟ್ಟನ್ನು ಬಿಚ್ಚಿಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.