ಗುರುವಾರ , ಫೆಬ್ರವರಿ 20, 2020
18 °C

ದಿನೇಶ್ ಬಾಬುವಿನ ಹಗಲುಗನಸಿನ ಅಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನಿರ್ದೇಶಕ ದಿನೇಶ್ ಬಾಬು ಹಗಲುಗನಸಿನೊಂದಿಗೆ ಮತ್ತೆ ಬರುತ್ತಿದ್ದಾರೆ. ತಾವು ಕಂಡ ಹಗಲುಗನಸನ್ನು ಸಿನಿಮಾ ಆಗಿಸಿರುವುದಷ್ಟೇ ಅಲ್ಲ, ಅದಕ್ಕೆ ‘ಹಗಲುಗನಸು’ ಎಂದೇ ಹೆಸರಿಟ್ಟಿದ್ದಾರೆ. ಈ ಕನಸಿನಲ್ಲಿ ಭರಪೂರ ರಂಜನೆಯ ಪ್ಯಾಕೇಜ್ ಇರಲಿದೆಯಂತೆ.

ಇತ್ತೀಚೆಗೆ ಚಿತ್ರದ ಹಾಡೊಂದರ ಧ್ವನಿಮುದ್ರಣದ ಸಂದರ್ಭದಲ್ಲಿ ಅವರು ತಮ್ಮ ಚಿತ್ರತಂಡದೊಂದಿಗೆ ಪತ್ರಕರ್ತರಿಗೆ ಮುಖಾಮುಖಿಯಾದರು. ‘ತಾನೇನೂ ಮಾತಾಡಲಾರೆ’ ಎಂದು ಶಪಥ ಮಾಡಿಯೇ ಕೂತಿದ್ದ ಅವರು ಕೊನೆಯವರೆಗು ತುಟಿಬಿಚ್ಚಲಿಲ್ಲ. 

ಮಾಸ್ಟರ್ ಆನಂದ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲು ಮಾತಿಗಿಳಿದಿದ್ದೂ ಅವರೇ. ‘ಕಥೆಯೇ ದಿನೇಶ್ ಬಾಬು ಅವರ ಸಿನಿಮಾದ ನಾಯಕ. ಅವರು ಮೊದಲು ಕಥೆಯನ್ನು ಕಟ್ಟಿಕೊಳ್ಳುತ್ತಾರೆ. ನಂತರ ಅದಕ್ಕೆ ಹೊಂದುವ ನಾಯಕನನ್ನು ಹುಡುಕುತ್ತಾರೆ. ಅವರು ಜತೆಗಿದ್ದರೆ ನಮಗೆ ಸಿಗುವ ಆತ್ಮವಿಶ್ವಾಸವೇ ಬೇರೆ ಥರದ್ದು’ ಎಂದ ಅವರು ‘ಹಗಲು ಗನಸು’ ಸಿನಿಮಾದಲ್ಲಿ ಮಾಸ್‌ಗೆ ಇಷ್ಟವಾಗುವಂಥ ಕ್ಲಾಸ್ ಕಾಮಿಡಿ ಇದೆ ಎಂದೂ ಹೇಳಿದರು.‌ ಆನಂದ್ ಅವರಿಗೇ ಈ ಚಿತ್ರದಲ್ಲಿ ಹೆಚ್ಚು ಹಗಲುಗನಸು ಬೀಳುತ್ತವಂತೆ. ಅವರ ಕನಸಲ್ಲಿನಲ್ಲಿ ಅತಿ ಹೆಚ್ಚು ಮಿಂಚುವ ಹುಡುಗಿಯಾಗಿ ಸನಿಹಾ ಯಾದವ್ ಕಾಣಿಸಿಕೊಳ್ಳಲಿದ್ದಾರೆ. 

‘ಒಳ್ಳೆಯ ನಿರ್ದೇಶಕ ಜತೆ, ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಕಳೆದ ಒಂದು ವರ್ಷದಿಂದ ಕಾಯುತ್ತಿದ್ದೆ. ಫೇಸ್‌ಬುಕ್ ಮೂಲಕ ದಿನೇಶ್ ಬಾಬು ಅವರನ್ನು ಪರಿಚಯ ಮಾಡಿಕೊಂಡೆ. ಅವರೇ ಕರೆದು ಅವಕಾಶ ಕೊಟ್ಟರು. ಈ ಚಿತ್ರ ನನ್ನ ಪಾಲಿಗೆ ನಿಜಕ್ಕೂ ಹಗಲುಗನಸು’ ಎಂದು ಹೇಳಿಕೊಂಡರು ಸನಿಹಾ.

ಆನಂದ್ ಅವರ ಜತೆಗೆ ಅಶ್ವಿನ್ ಹಾಸನ್ ಮತ್ತು ನೀನಾಸಂ ಅಶ್ವತ್ಥ್ ಕೂಡ ಮುಖ್ಯಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಶ್ವತ್ಥ್‌ಗೆ  ಜತೆಯಾಗಿ ವಾಣಿಶ್ರೀ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ನಾಲ್ಕು ದಿನಗಳಲ್ಲಿ ಒಂದು ಮನೆಯಲ್ಲಿ ನಡೆಯುವ
ಕಥೆ ಇದು. 

ಮನ್‌ದೀಪ್‌ ರಾಯ್ ‘ಹಗಲುಗನಸು’ವಿನಲ್ಲಿ ದೆವ್ವವಾಗಿ ಚಿತ್ರದುದ್ದಕ್ಕೂ ಇರಲಿದ್ದಾರಂತೆ. ಅಂದರೆ ಹಾರರ್ ಸಿನಿಮಾ ಅಂದುಕೊಳ್ಳಬೇಡಿ. ಅವರು ಒಳ್ಳೆಯ ದೆವ್ವ. ಮನೆಯ ವರಾಂಡಾದಲ್ಲಿಯೇ ಕುಳಿತುಕೊಂಡು ಎಲ್ಲ ಚಟುವಟಿಕೆಗಳನ್ನೂ ಅವಲೋಕಿಸುವ, ಎಲ್ಲರನ್ನೂ ನಕ್ಕು ನಗಿಸುವ ಕಾಮಿಡಿ ದೆವ್ವ.

ಚಿತ್ರದ ನಿರ್ದೇಶನದ ಜತೆಗೆ ಛಾಯಾಗ್ರಹಣ, ಸಂಭಾಷಣೆಯ ಜವಾಬ್ದಾರಿಯನ್ನೂ ದಿನೇಶ್ ಬಾಬು ಅವರೇ ವಹಿಸಿಕೊಂಡಿದ್ದಾರೆ. ಕಾರ್ತಿಕ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪದ್ಮನಾಭ ಮತ್ತು ಅಚ್ಯುತ್ ರಾಜ್ ಹಣ ಹೂಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು