ಶನಿವಾರ, ಸೆಪ್ಟೆಂಬರ್ 18, 2021
28 °C

ಮುಖಗವಸು, ಮೌಢ್ಯ ಮತ್ತು ದಂಡ!

ಡಿ.ಎಂ. ಹೆಗಡೆ Updated:

ಅಕ್ಷರ ಗಾತ್ರ : | |

Prajavani

‘ಮಾಸ್ಕ್‌ ಹಾಕ್ಕೊಳ್ಳದಿದ್ರೆ ದಂಡ ಹಾಕ್ತಾರೆ. ನೀವು ಮಾಸ್ಕ್‌ ಹಾಕಿಕೊಂಡು ವಾಕಿಂಗ್‌ ಹೋಗಿ ಸರ್, ಪಾರ್ಕ ಹತ್ರ ಬಿಬಿಎಂಪಿಯ ಇನ್‌ಸ್ಪೆಕ್ಟರ್‌ (ಮಾರ್ಶಲ್)‌ ಇದ್ದಾರೆ. ದಂಡ ಹಾಕ್ತಾರೆ!’

ನಮ್ಮ ಮನೆಗೆ ಪೇಪರ್‌ ಹಾಕೋಕೆ ಬಂದ ಹುಡುಗ ಕಾಳಜಿಯಿಂದ ಹೇಳಿದ. ಅವನು ಹೇಳಿದಂತೆಯೇ ಪಾರ್ಕಿನ ಹತ್ರ ಬೇಟೆಗಾರನಂತೆ ಕಾದಿರುವ ವ್ಯಕ್ತಿ ಕಂಡರು. ಅವರತ್ರ ಬೈಸಿಕೊಂಡು, ಒಂಥರಾ ನಾಚಿಕೊಂಡು ಹೋಗುವವರನ್ನೂ, ತಕ್ಷಣ ಜೇಬಿನಿಂದ ಕರವಸ್ತ್ರವನ್ನು ತೆಗೆದು ಮುಖಕ್ಕೆ ಕಟ್ಟಿಕೊಂಡು ಮುಂದೆ ಹೋಗುವವರನ್ನೂ ನೋಡಿದೆ. ನಾನು ಹೋಗಿ ಬೇಟೆಗೆ ನಿಂತವರ ಜೊತೆ ಮಾತನಾಡಿದೆ.

‘ನಮಗೇನೂ ಗೊತ್ತಿಲ್ಲ ಸರ್‌, ಮಾಸ್ಕ್‌ ಹಾಕ್ಕೋಬೇಕಂತೆ. ಹಾಕ್ಕೊಳ್ದಿದ್ರೆ ದಂಡ ಹಾಕೋಕೆ ಹೇಳಿದ್ದಾರೆ. ನೀವು ಹಾಕ್ಕೊಳ್ಳಿ ಸರ್!’ ಎಂದ.

ನಾನು ಅಲ್ಲಿಂದ ಮುಂದೆ ಹೊರಟೆ.

ಮುಖಗವಸು ಯಾರು ಧರಿಸಬೇಕು?

ಮುಖಗವಸನ್ನು ಯಾರು, ಯಾವಾಗ ಮತ್ತು ಏಕೆ ಹಾಕಿಕೊಳ್ಳಬೇಕು ಅನ್ನೋದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅದರ ಬಗ್ಗೆ ತಿಳಿದವರು, ಡಾಕ್ಟರ್ಸ್‌ ಈಗಾಗಲೇ ಹೇಳಿದ್ದಾರೆ. ಸೋಂಕಿತ ವ್ಯಕ್ತಿಯು ತನ್ನಿಂದ ಉಳಿದವರಿಗೆ ಸೋಂಕು ಹರಡದಂತೆ ತಡೆಯುವುದಕ್ಕಾಗಿ ಮುಖಕ್ಕೆ ಮುಖಗವಸು ಅನ್ನು ಹಾಕಿಕೊಳ್ಳಬೇಕು. ಇನ್ನು ಎದುರಿನ ವ್ಯಕ್ತಿಯು ಹತ್ತಿರದಿಂದ ಮಾತನಾಡುವ ಸಂದರ್ಭದಲ್ಲಿ ಅಕಸ್ಮಾತ್‌ ಅವರಿಗೇನಾದರೂ ಸೋಂಕಿದ್ದ ಪಕ್ಷದಲ್ಲಿ ಅವನಿಂದ ನಮಗೆ ವೈರಾಣು ಬರಬಾರದೆನ್ನುವುದಕ್ಕಾಗಿ ಆರೋಗ್ಯವಂತರೂ ಮುಖಗವಸು ಹಾಕಿಕೊಳ್ಳಬೇಕು. ನಮಗೇನಾದರೂ ವೈರಾಣು ಇದ್ದು, ಅದು ಬಂದಿರುವುದರ ಅರಿವು ನಮಗಾಗದೇ ಇದ್ದಾಗ, ನಮ್ಮಿಂದ ಅದು ಬೇರೆಯವರಿಗೆ ಹೋಗಬಾರದು ಎನ್ನುವ ಕಾರಣಕ್ಕಾಗಿಯೂ ಮುಖಗವಸು ಹಾಕಿಕೊಳ್ಳಬೇಕು. ಗುಂಪಲ್ಲಿ ಹೋಗುವಾಗ, ಅಂಗಡಿಗಳಿಗೆ ಹೋದಾಗ ಹಾಕಿಕೊಳ್ಳಬೇಕು.

ಇಷ್ಟು ಕಾರಣಗಳನ್ನು ಬಿಟ್ಟು ಬೇರೆ ಕಾರಣಗಳಿಗೆ ಮುಖಗವಸು ಹಾಕಿಕೊಳ್ಳಬೇಕಾಗಿಲ್ಲ. ನೀವು ಒಬ್ಬರೇ ನಿಮ್ಮ ಪಾಡಿಗೆ ಇನ್ನೊಬ್ಬ ವ್ಯಕ್ತಿಯಿಂದ ಕನಿಷ್ಠ ಮೂರರಿಂದ ಐದು ಅಡಿ ದೂರದಿಂದ ನಡೆದುಕೊಂಡು ಹೋಗುತ್ತಿರುವಿರಾದರೆ ನೀವೂ ಮುಖಗವಸು ಹಾಕಿಕೊಳ್ಳಬೇಕಾಗಿಲ್ಲ. ಇನ್ನು ಕೆಲವರಂತೂ ಕಾರಿನೊಳಗೆ ಒಬ್ಬರೇ ಎ.ಸಿ. ಹಾಕಿಕೊಂಡು ಹೋಗುತ್ತಿರುವಾಗಲೂ ಮುಖಗವಸು ಹಾಕಿಕೊಂಡಿರುತ್ತಾರೆ. ನಿಜಕ್ಕೂ ಅವರಿಗೆ ಅದರ ಅಗತ್ಯ ಇಲ್ಲ. ಮುಖಗವಸು ಹಾಕಿಕೊಳ್ಳುವುದರಿಂದ ಮಾತ್ರವೇ ಕೊರೊನಾದ ಸೋಂಕಿನಿಂದ ಖಂಡಿತವಾಗಿಯೂ ತಪ್ಪಿಕೊಳ್ಳಬಹುದು ಎನ್ನುವುದಕ್ಕೆ ಇನ್ನೂವರೆಗೆ ಪುರಾವೆಗಳಿಲ್ಲ!  

ಮತ್ತೆ, ಕೊರೊನಾ ಗಾಳಿಯಲ್ಲಿ ಹಾರಿಕೊಂಡು ಬರುವುದಿಲ್ಲ. ಹಾಗೇನಾದರೂ ಗಾಳಿಯ ಮೂಲಕ ಅದು ಬರುತ್ತಿದ್ದರೆ, ಇಷ್ಟು ಹೊತ್ತಿಗಾಗಲೇ ಜಗತ್ತಿನ ಜನಸಂಖ್ಯೆ ಖಾಲಿಯಾಗಿರುತ್ತಿತ್ತು! ಮನುಷ್ಯನ ಅಥವಾ ಪ್ರಾಣಿಯ ಬಾಯಿಂದ ಹೊರಗೆ ಬೀಳುವ ಉಗುಳಿನ ಮೂಲಕ ಅದು ಸಮೀಪ ಇರುವ ಇನ್ನೊಂದು ಪ್ರಾಣಿಯ ಬಾಯಿ, ಮೂಗು, ಕಣ್ಣುಗಳ ಮೂಲಕ ದೇಹವನ್ನು ಪ್ರವೇಶಿಸುತ್ತದೆ! ಕೊರೊನಾ ವೃದ್ಧಿಸಲಿಕ್ಕೆ ಜೀವಂತವಿರುವ ಪ್ರಾಣಿಯ ಅವಶ್ಯಕತೆ ಇದೆ. ಈ ವೈರಸ್‌ ಕೂಡ ಬಹಳಷ್ಟು ವೈರಸ್ಸುಗಳಂತೆಯೇ, ಜೀವಿಯೊಂದರ ದೇಹದಲ್ಲಿ ಆಶ್ರಯವನ್ನು ಪಡೆದುಕೊಂಡಾಗ ಮಾತ್ರ ಬದುಕುತ್ತದೆ. ಅಲ್ಲಿ ವೃದ್ಧಿಸುತ್ತದೆ. ಇನ್ನು ಕೊರೊನಾ ವೈರಸ್‌ ನಾವೆಲ್ಲರೂ ಕಲ್ಪಿಸಿಕೊಂಡಷ್ಟು ಬಲಿಷ್ಠವಾದ ವೈರಾಣುವಲ್ಲ. ಇದು ಸಾಕಷ್ಟು ರೋಗ ನಿರೋಧಕ ಶಕ್ತಿ ಇರುವ ಮನುಷ್ಯರಲ್ಲಿ ಅಸಹಾಯಕತೆಯಿಂದ ಇದ್ದು ನಿಧಾನವಾಗಿ ಸಾಯುತ್ತದೆ. ಕೊರೊನಾ ಬಂದವರೆಲ್ಲರೂ ಸಾಯುವುದಿಲ್ಲ. ಹೀಗಾಗಿ ಕಪೋಲಕಲ್ಪಿತ ಮಾತುಗಳಿಂದ ಭಯಭೀತರಾಗಬೇಕಿಲ್ಲ.  ಸೃಷ್ಟಿಯಲ್ಲಿ ಮನುಷ್ಯನೇ ಬಲಿಷ್ಠ ಪ್ರಾಣಿ. ವೈರಾಣು ತೀರಾ ಕನಿಷ್ಠ ಜೀವಕಣ.

ಮುಖಗವಸು ಧರಿಸಿ ವ್ಯಾಯಾಮ ಮಾಡಬೇಡಿ

ಮುಖಗವಸು ಹಾಕಿಕೊಂಡು ವ್ಯಾಯಾಮ, ಜೋರಾಗಿ ವಾಕಿಂಗ್‌, ರನ್ನಿಂಗ್‌ ಮಾಡುವುದರಿಂದ ಉಪಯೋಗಕ್ಕಿಂತಲೂ ಅಪಾಯವೇ ಹೆಚ್ಚು ಅಂತ ಪ್ರಖ್ಯಾತ ವೈದ್ಯರು ಹೇಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಸುತ್ತಿವೆ. ಅವುಗಳಿಂದೇನೂ ಜನರಲ್ಲಿ ನಿರೀಕ್ಷಿತ ಪರಿಣಾಮವಾದಂತಿಲ್ಲ. ಇನ್ನು ಕಾನೂನನ್ನು ಮಾಡುವವರು ಕೂಡ ನಮ್ಮಂತೆಯೇ ಇರುವವರು. ಅವರಿಗೂ ಇದರ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ. ಇಲ್ಲಿಯವರೆಗಂತೂ ಕೊರೊನಾದ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಎಲ್ಲರೂ ಟ್ರಯಲ್‌ ಎಂಡ್‌ ಎರರ್‌ ಥಿಯರಿಯಲ್ಲಿದ್ದಾರೆ.

ಮುಖಗವಸನ್ನು ಬಹಳ ಸಮಯ ಉಪಯೋಗಿಸುವುದರಿಂದ ದೇಹಕ್ಕೆ ಆಮ್ಲಜನಕದ ಕೊರತೆಯಾಗುತ್ತದೆ ಎನ್ನುವುದು ನಿಜ. ಬಹಳಷ್ಟು ಕಾರಣಗಳಿಂದ ಮಹಾನಗರಗಳಲ್ಲಿ ವಾಯುಮಾಲಿನ್ಯವಿದೆ. ಇಲ್ಲಿ ನೀರು ಅಶುದ್ಧವಾಗಿದೆ. ಗಾಳಿಯು ಅಶುದ್ಧವಾಗಿದೆ. ಹೀಗಿರುವಾಗ ಬಹಳ ಹೊತ್ತು ಮುಖಗವಸನ್ನು ಧರಿಸುವುದರಿಂದ ಇನ್ನಷ್ಟು ಆಮ್ಲಜನಕದ ಕೊರತೆಯಾಗಿ ಅನಾರೋಗ್ಯದ ಸಮಸ್ಯೆಗಳು ಉಲ್ಬಣಿಸುತ್ತವೆ.

ನಾರಾಯಣ ಹೃದಯಾಲಯದ ಮುಖ್ಯಸ್ಥರಾಗಿರುವ ಡಾ. ದೇವಿ ಶೆಟ್ಟಿಯವರು ಮೊದಲಿನಿಂದಲೂ ಜನರಿಗೆ ಎನ್95‌ (ವೈದ್ಯರು ಬಳಸುವ) ಮುಖಗವಸನ್ನು ಬಳಸಬಾರದೆಂದು ವಿನಂತಿಸುತ್ತಲೇ ಇದ್ದಾರೆ. ಎಷ್ಟೋ ಜನರು ಅದೇ ಮುಖಗವಸನ್ನು ಒಂದಿಷ್ಟು ಹೆಮ್ಮೆಯಿಂದಲೇ ಬಳಸುತ್ತಿದ್ದಾರೆ. ಈಗೀಗಂತೂ ಆಸ್ಪತ್ರೆಗಳಲ್ಲಿ ವೈದ್ಯರಿಗೇ ಈ ಮುಖಗವಸು ಸಿಗುವುದು ಕಷ್ಟವಾಗಿದೆಯಂತೆ. ಹಾಗಾಗಿ ಜನರು ತಮ್ಮ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿಕೊಂಡು ಜಾಗೃತರಾಗಿರಬೇಕು. ಎಲ್ಲರೂ ಯಾವಾಗಲೂ ಮುಖಗವಸು ಬಳಸುವುದರಿಂದ ಪವಾಡಸದೃಶವಾದ ಪ್ರಯೋಜನವೇನೂ ಆಗಲಾರದು ಎನ್ನುವುದು ಸತ್ಯ.

ಮುಖಗವಸನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಮುಖಗವಸನ್ನು ಬಹಳ ಸ್ವಚ್ಛವಾಗಿರಿಸಿಕೊಳ್ಳಬೇಕು. ದಿನಕ್ಕೆರಡು ಸಲ ಬಿಸಿನೀರಿನ ಸ್ನಾನ ಮಾಡುವುದು, ಕೊಬ್ಬರಿ ಎಣ್ಣೆಯನ್ನು ಉಪಯೋಗಿಸುವುದು ಅನುಕೂಲಕರವಾಗಬಹುದು. ತನ್ನ ಚೆಡ್ಡಿ, ಬನಿಯನ್‌ಗಳನ್ನೇ ಪ್ರತಿದಿನವೂ ತೊಳೆದು ಒಣಗಿಸಿಕೊಂಡು, ಸ್ವಚ್ಛವಾಗಿಟ್ಟುಕೊಂಡು ಬಳಸಲಾರದ ಕೋಟ್ಯಾಂತರ ಜನರಿರುವ ನಮ್ಮ ಸಮಾಜದಲ್ಲಿ ಇನ್ನು ಮುಖಗವಸನ್ನು ಸ್ವಚ್ಛವಾಗಿಟ್ಟುಕೊಂಡು ಉಪಯೋಗಿಸುವವರೆಷ್ಟೋ!

ರಸ್ತೆಗಳಲ್ಲಿ ದ್ವಿಚಕ್ರವಾಹನದಲ್ಲಿ ಹೋಗುವವರಲ್ಲಿ ಬಹುತೇಕ ಎಲ್ಲರೂ ಮುಖಕ್ಕೆ ಮುಖಗವಸು ಹಾಕಿಕೊಂಡಿರುತ್ತಾರಾದರೂ ಹೆಲ್ಮೆಟ್‌ ಅನ್ನು ಧರಿಸಿಕೊಂಡಿರುವುದಿಲ್ಲ. ಅಂದರೆ ಅವರು ಕೊರೊನಾಗೆ ಹೆದರಿಕೊಂಡಷ್ಟು ರಸ್ತೆಯ ಅಪಘಾತಕ್ಕೆ ಹೆದರಿಕೊಂಡಿಲ್ಲ! ಆದರೆ ನಿಜಕ್ಕೂ ಮುಖಗವಸಿಗಿಂತಲೂ ಹೆಲ್ಮೆಟ್‌ ಅತ್ಯಗತ್ಯ ಎನ್ನುವುದನ್ನು ಅರಿತಿದ್ದರೆ ಒಳ್ಳೆಯದು. ಏಕೆಂದರೆ ಕೊರೊನಾದಿಂದ ಸಾಯುವ ಸಾಧ್ಯತೆ ಕಡಿಮೆ. ಆದರೆ ರಸ್ತೆಯ ಅಪಘಾತದಲ್ಲಿ ಸಾಯುವ ಸಾಧ್ಯತೆ ಹೆಚ್ಚು. ಹೀಗಾಗಿ ದ್ವಿಚಕ್ರ ಸವಾರರು ಮಾತ್ರ ಮುಖಗವಸು ಜೊತೆಗೆ ಉತ್ತಮ ಗುಣಮಟ್ಟದ ಹೆಲ್ಮೆಟ್‌ ಅನ್ನು ಧರಿಸಲೇಬೇಕು.

ಭಯದಿಂದಲೂ ಜ್ವರ

ತೀವ್ರವಾದ ಭಯದಿಂದ ಜ್ವರಬರುತ್ತದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಮಗುವಾಗಿದ್ದಾಗ ಅಕಸ್ಮಾತ್‌ ಜ್ವರ ಬಂದರೆ ಮನೆಯಲ್ಲಿ ಹಿರಿಯರು ಮೊದಲಿಗೆ ಹೇಳುತ್ತಿದ್ದದ್ದು, ‘ಮಗುವೆಲ್ಲೋ ಹೆದರಿಕೊಂಡಿರಬೇಕು!’ ಅಂತ. ಭಯದಿಂದ ಜ್ವರ ಬರುತ್ತದೆ ಎನ್ನುವುದು ಇತ್ತೀಚೆಗೆ ವೈಜ್ಞಾನಿಕವಾಗಿ ದೃಢಪಟ್ಟಿದೆ. ಹಾಗಾಗಿ ಮನಸ್ಸಿನಲ್ಲಿ ಹೆದರಿಕೆಯನ್ನು ಹುಟ್ಟಿಸಿಕೊಳ್ಳಬಾರದು. ಅನವಶ್ಯಕ ಭಯದಿಂದ ಮನಸ್ಸನ್ನು ಹಗುರಾಗಿಸಿಕೊಳ್ಳಬೇಕು. ಇನ್ನೊಂದು ವಿಷಯವೆಂದರೆ, ಯಾರಿಗಾದರೂ ಸರಿ, ಅಕಸ್ಮಾತ್‌ ಜ್ವರ ಬಂದರೆ ಅದು ಕೊರೊನಾ ಆಗಿರಬೇಕೆಂದೇನಿಲ್ಲ!

‘ಕೊರೊನಾ ಒಂದು ವೈರಲ್‌ ಫೀವರ್.‌ ನೂರು ಜನರಿಗೆ ಬಂದರೆ ಇಬ್ಬರು ಮೃತಪಡುತ್ತಿದ್ದಾರೆ. ನೂರು ಜನರಿಗೆ ಹೃದಯಾಘಾತವಾದರೆ ಹತ್ತು ಜನರೂ ಬದುಕುವುದಿಲ್ಲ. ಆದರೂ ಜನರಿಗೆ ಇದರ ಬಗ್ಗೆ ಭಯವಿಲ್ಲ. ಕೊರೊನಾಗೆ ಹೆದರುತ್ತಾರೆ. ಹೀಗೆ ಹೆದರುವುದರಲ್ಲಿ ಅರ್ಥವಿಲ್ಲ’ ಎನ್ನುತ್ತಾರೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್.‌ ಮಂಜುನಾಥ್‌. ‘ಚಿಕಿತ್ಸೆಗೆ ಒಳಗಾದ ರೋಗಿಯ ಜೊತೆ ಕಾಲಕಾಲಕ್ಕೆ ಸ್ನೇಹಿತರು, ಮನೆಯವರು ಪೋನಿನಲ್ಲಿ ಮಾತನಾಡಿ ಆತ್ಮಸ್ಥೈರ್ಯ ತುಂಬಬೇಕು. ಗುಣಮುಖರಾದ ಮೇಲೆ ಎಲ್ಲರಂತೆ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು‘ ಎಂದು ಹೇಳುತ್ತಾರೆ ಅವರು.

ಒಟ್ಟಿನಲ್ಲಿ ಕೊರೊನಾ ಕೂಡ ಒಂದು ವೈರಲ್‌ ಖಾಯಿಲೆ. ಉಳಿದ ಜ್ವರಗಳಂತೆಯೇ ಇದೂ ಒಂದು ಜ್ವರ. ಅಷ್ಟೇ! ಇದನ್ನೂ ಕೂಡ ಹೆಚ್ಚು ಎಚ್ಚರಿಕೆಯಿಂದ ಎದುರಿಸಬೇಕು. ಪದ್ಮಭೂಷಣ ಡಾ. ಬಿ.ಎಂ. ಹೆಗಡೆ ಅವರು ಹೇಳಿದ ಪ್ರಕಾರ ನಮ್ಮ ದೇಶದಲ್ಲಿ ಪ್ರತಿವರ್ಷ ಹವಾಮಾನ ಬದಲಾವಣೆಯಾದಾಗ ನೆಗಡಿ, ಜ್ವರ, ಕೆಮ್ಮು, ವೈರಲ್‌ ಜ್ವರಕ್ಕೆ ಹದಿನೈದರಿಂದ ಇಪ್ಪತ್ತು ಸಾವಿರ ಜನರು ಬಲಿಯಾಗುತ್ತಿದ್ದಾರೆ. ಅದರ ಬಗ್ಗೆ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಸಹ ಜನರು ಆತಂಕದಿಂದ ಚರ್ಚೆ ಮಾಡಲಿಲ್ಲ. ಈಗಿನ ಮಹಾಮಾರಿ ಕೊರೊನಾಗೆ ಹೆದರಿದಷ್ಟು ಹೆದರಿಕೊಂಡಿರಲಿಲ್ಲ. ಮಾಧ್ಯಮಗಳಲ್ಲಿಯೂ ಸಹ ಗಾಬರಿಯಾಗುವಂತೆ ವರದಿಗಳಾಗಿರಲಿಲ್ಲ!

ಭಯದಿಂದ ಹೊರಬನ್ನಿ

ಮಳೆಗಾಲ ಶುರುವಾದಾಗ ಬರುವ ಬಹಳಷ್ಟು ನೆಗಡಿ, ಜ್ವರಗಳ ಜೊತೆಗೆ ಈ ವರ್ಷ ಈ ಕೊರೊನಾ ಕೂಡ ಸೇರಿಕೊಂಡಿದೆ. ಇದರಿಂದಾಗಿ ಜ್ವರದ ಲಕ್ಷಣ ಕಾಣಿಸಿಕೊಂಡರೆ ಸಾಕು ಕೋವಿಡ್‌ ಎಂದೇ ಭಯಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ತನಗೂ ಕೊರೊನಾ ಬರಬಹುದು ಎನ್ನುವ ಭಯದಿಂದ ಬಹಳ ಜನರು ನರಳುತ್ತಿದ್ದಾರೆ. ಈ ಭ್ರಮಿತ ಭಯದಿಂದ ಜನರಲ್ಲಿ ಖಿನ್ನತೆ ಜಾಸ್ತಿಯಾಗುತ್ತಿದೆ. ಖಿನ್ನತೆ, ಭಯ ಮುಂತಾದ ಭಾವೋದ್ವೇಗಗಳಿಂದ ಮನುಷ್ಯರಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಹಾಗಾದಾಗ ಯಾವುದೇ ರೋಗಾಣು ಸೇರಿಕೊಂಡರೆ ರೋಗವು ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಹೀಗಾಗಬಾರದು. ಮೊದಲು ಜನರು ತಮ್ಮ ಮನಸ್ಸನ್ನು ಪ್ರವೇಶಿಸಿರುವ ಈ ಅವ್ಯಕ್ತ ಭಯದಿಂದ ಹೊರಗೆ ಬರಬೇಕು. ಜನರಲ್ಲಿ ಸ್ವಲ್ಪ ಮಟ್ಟಿನ ಅರಿವು ಮತ್ತು ತಾಳ್ಮೆ ಬೇಕಾಗಿದೆ. ಇಂಥ ಸಮಯದಲ್ಲಿ ಜನರಲ್ಲಿ ಭಯವನ್ನು ಹೆಚ್ಚಿಸುವ ಸುದ್ದಿಶೂರರು ವಿಜೃಂಭಿಸುತ್ತಿರುವುದು ದುರ್ದೈವವೇ ಸರಿ.  

ಜನಜಾಗೃತಿ ಮುಖ್ಯ

ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನುವುದು ಸರಿಯಲ್ಲ. ಎಲ್ಲವನ್ನೂ ಕಾನೂನಿನ ಮೂಲಕವೇ ನಿಯಂತ್ರಿಸಲಿಕ್ಕೆ ಪ್ರಯತ್ನಿಸುವುದು ಕೂಡ ಸರಿಯಲ್ಲ. ಎರಡೂ ಸುಲಭ ಸಾಧ್ಯವಲ್ಲ. ಜನರು ಸರ್ಕಾರದ ಜನಹಿತ ಕಾರ್ಯಕ್ರಮಗಳಿಗೆ ಸ್ಪಂದಿಸಬೇಕು ಮತ್ತು ವಿಚಾರವಂತರು ತಮ್ಮ ಪ್ರದೇಶದಲ್ಲಿ ಜನಜಾಗೃತಿಯನ್ನು ಮೂಡಿಸಲಿಕ್ಕೆ ಪ್ರಯತ್ನಿಸಬೇಕು. ಜನರ ಕ್ರೀಯಾಶೀಲ ಸಹಭಾಗಿತ್ವದಿಂದ ಎಂಥದ್ದೇ ಸಾಮಾಜಿಕ, ರಾಜಕೀಯ ಅಥವಾ ಆರ್ಥಿಕ ಸಮಸ್ಯೆಯನ್ನು ಎದುರಿಸಬಹುದು. ಪ್ರಜಾಪ್ರಭುತ್ವದ ಶಕ್ತಿ ಇರುವುದೇ ಇದರಲ್ಲಿ, ಅಲ್ಲವೇ?

(ಲೇಖಕ: ಔಷಧರಹಿತ ಚಿಕಿತ್ಸಕ, ಹಿಪ್ನೋಟಿಸ್ಟ್‌, ಆಕ್ಯುಪಂಕ್ಚರಿಸ್ಟ್‌ ಮತ್ತು ಆಪ್ತಸಮಾಲೋಚಕ, ಬೆಂಗಳೂರು)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು