ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಟಗಳಿಗೆ ದಾಸರಾಗುವ ಮುನ್ನ...

Last Updated 21 ಸೆಪ್ಟೆಂಬರ್ 2020, 7:08 IST
ಅಕ್ಷರ ಗಾತ್ರ

ಚಟವೆಂಬುದು ಮಾನಸಿಕ ಅವಲಂಬನೆ. ಯಾವುದೋ ಒಂದು ವಸ್ತು ಅಥವಾ ಅಭ್ಯಾಸವನ್ನು ಬಿಟ್ಟಿರಲಾರದ ಅನುಭವ. ಅದರಿಂದಾಗುವ ದುಷ್ಪರಿಣಾಮಗಳು ತಿಳಿದಿದ್ದರೂ ಅವಲಂಬನೆಯೇ ಮೇಲುಗೈ ತೋರಿ ಬಿಡಲಾರದ ಸ್ಥಿತಿಗೆ ತಳ್ಳುವ ಸನ್ನಿವೇಶ. ತನ್ನನ್ನು ತಾನು ಹಿಡಿತದಲ್ಲಿ ಇಟ್ಟುಕೊಳ್ಳಲಾರದ ಅನುಭವ. ಬಿಟ್ಟರೆ ತಾಳಲಾರದ ವೇದನೆ ಎಂಬ ಭಾವ. ಚಟವೆಂಬುದು ಡ್ರಗ್ಸ್. ಧೂಮಪಾನ, ತಂಬಾಕು, ಮಧ್ಯಪಾನವಷ್ಟೇ ಅಲ್ಲದೆ ಸ್ಕ್ರೀನ್‍ಟೈಮ್, ಸಾಮಾಜಿಕ ಜಾಲತಾಣ, ಜಂಕ್‍ಫುಡ್ ಮುಂತಾದವುಗಳನ್ನು ಒಳಗೊಂಡಿದೆ. ಕೋವಿಡ್-19 ಮಹಾಮಾರಿಯಿಂದ ಅನೇಕರ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಕಂಡಿದ್ದಾರೆ. ಜೀವನದಲ್ಲಿನ ಅನಿಶ್ಚಿತತೆ, ಆರ್ಥಿಕ ಸಂಕಷ್ಟ, ನೋವು ವೇದನೆಗಳು ಹಾಗೂ ಕಾಲ ಕಳೆಯಲು ಮಾಡಿಕೊಂಡ ಬದಲಾವಣೆಗಳು ಈಗ ಚಟವಾಗಿ ಪರಿಣಮಿಸಿತ್ತಿವೆ. ಚಟ ಹಾಗೂ ಅಭ್ಯಾಸಗಳ ನಡುವಿನ ಅಂತರವೇನೆಂದರೆ ಅಭ್ಯಾಸಗಳು ಒಳ್ಳೆಯದನ್ನು ಅಥವಾ ಕೆಟ್ಟದ್ದನ್ನು ಒಳಗೊಂಡಿದ್ದರೆ. ಚಟ ಕೇವಲ ಕೆಟ್ಟದ್ದನ್ನು ಒಳಗೊಂಡಿದೆ.

ನಮಗೆ ಚಟವಿದೆಯೆಂಬುದನ್ನು ಮನಗೊಳ್ಳುವ ಲಕ್ಷಣಗಳೇನು?

• ನಮ್ಮ ಮಿತಿಗೆ ಸಿಗದ ಅವಲಂಬನೆ.

• ಅದರಿಂದಾಗುವ ದುಷ್ಪರಿಣಾಮಗಳ ಅರಿವಿದ್ದರೂ ಅದರ ಮೇಲೆ ಅವಲಂಬಿತವಾಗುವುದು.

• ಬೇರೆಯ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು.

• ಚಟಕ್ಕೆ ಬಿದ್ದ ವಸ್ತುವನ್ನು ಪಡೆಯಲು ಜೀವನವನ್ನು ಅಪಾಯದೆಡೆಗೆ ತಳ್ಳುವುದು.

• ದೈನಂದಿನ ಚಟುವಟಿಕೆಗಳಲ್ಲಿ ನಿರಾಸಕ್ತಿ.

• ಬೇಜವಾಬ್ದಾರಿತನ ತೋರುವುದು.

ಚಟಗಳಿಗೆ ಕಾರಣವೇನು?

• ಸುತ್ತಮುತ್ತಲಿನ ವಾತಾರಣದ ಪ್ರಭಾವ.
• ಸಂಗದೋಷಗಳು.

• ಮಾನಸಿಕ ಸ್ಥಿತಿಗಳು.

• ಚಿಕ್ಕ ವಯಸ್ಸಿನಿಂದಲೆ ಇಂತಹ ವಸ್ತುಗಳ ಪ್ರಯೋಗ.

• ಅನುವಂಶೀಯ ಅಥವ ಹಿರಿಯರಲ್ಲಿನ ಚಟಗಳು ಚಿಕ್ಕವರ ಮೇಲೆ ಬೀರಿದ ಪ್ರಭಾವ.

• ಆತಂರಿಕ ಆತಂಕ, ಖಿನ್ನತೆ, ಒತ್ತಡ.

• ಒತ್ತಡಗಳನ್ನು ನಿಭಾಯಿಸಲು ವಿಫಲವಾಗುವುದು.

• ನಕಾರಾತ್ಮಕ ಚಿಂತನೆಗಳು.

• ಜೀವನದಲ್ಲಿನ ಕುತೂಹಲಗಳು.

• ಮಾನಸಿಕ ದೌರ್ಬಲ್ಯಗಳು.

ತಂಬಾಕು, ಮಧ್ಯಪಾನ ಅಥವಾ ಕೆಲವು ರಾಸಾಯನಿಕಗಳು ಮೆದುಳಿನ ಮೇಲೆ ಪ್ರಭಾವ ಬೀರಿ ಡೊಪಮಿನ್ ಎಂಬ ನ್ಯೂರೋಟ್ರಾನ್ಸ್‍ಮಿಟರನ್ನು ಸ್ರವಿಸುತ್ತದೆ. ಇದರಿಂದ ವ್ಯಕ್ತಿಯು ಒಂದು ಮಾನಸಿಕ ಆಹ್ಲಾದವನ್ನು ಪಡೆಯುತ್ತಾನೆ. ಒಮ್ಮೆ ಇದರ ಸೆಲೆಗೆ ಬಿದ್ದರೆ ಮತ್ತೊಮ್ಮೆ ಮಗದೊಮ್ಮೆ ಈ ಆಹ್ಲಾದವನ್ನು ಪಡೆಯಬೇಕೆಂಬ ದಾಹವನ್ನು ಮನಸ್ಸು ಹೊಂದುತ್ತದೆ. ಇದು ಚಟವಾಗಿ ಪರಿಣಮಿಸುತ್ತದೆ. ಈ ವಸ್ತುಗಳನ್ನು ಸೇವಿಸದೇ ಇದ್ದಾಗ ಮಿದುಳು ಖಿನ್ನತೆಗೆ ಹೋಗುವುದರಿಂದ ಮತ್ತೆ ಮತ್ತೆ ಈ ವಸ್ತುಗಳನ್ನು ಸೇವಿಸಿ ಆಹ್ಲಾದವನ್ನು ಪಡೆಯಬೇಕೆಂಬ ಹಂಬಲ ವೃದ್ಧಿಸಿ ಚಟವಾಗಿ ಪರಿಣಮಿಸುತ್ತದೆ.

ಚಟಗಳಿಂದ ಹೊರಬರಲು ಮಾಡಬಹುದಾದದ್ದೇನು?

• ಚಟಗಳನ್ನು ಬಿಡಲು ಮನಸ್ಸು ಬಹಳ ಮುಖ್ಯ ಪಾತ್ರವಹಿಸುತ್ತದೆ. ಬಿಡುವ ಮನಸ್ಸು ಮಾಡಿದೊಡನೆ ಮನಸ್ಸಿನ ದ್ವಂದ್ವಯುದ್ಧ ಪ್ರಾರಂಭವಾಗುತ್ತದೆ. ಒಂದೆಡೆ ವಸ್ತುವನ್ನು ಸೇವಿಸಿದಾಗ ಸಿಗುವ ಆಹ್ಲಾದ ಹಾಗೂ ಮತ್ತೊಂದೆಡೆ ಅದನ್ನು ಬಿಟ್ಟಾಗ ಆಗುವ ದೈಹಿಕ ಹಿಂಸೆಗಳು. ಇದೆಲ್ಲವನ್ನು ಮೀರಿ ಚಟವನ್ನು ತ್ಯಜಿಸಲು ಆ ವ್ಯಕ್ತಿಯ ಆಪ್ತರು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರ ಪಾತ್ರ ಅತಿಮುಖ್ಯ.

• ಆತ್ಮಬಲಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ. ಚಟವನ್ನು ತ್ಯಜಿಸುವ ಆತ್ಮಬಲವನ್ನು ಬೆಳೆಸಿಕೊಳ್ಳಬೇಕು.

• ಚಟವನ್ನು ತ್ಯಜಿಸುವ ಕಡೆಗೆ ಸಣ್ಣ ಹೆಜ್ಜೆಗಳೊಂದಿಗೆ ಪ್ರಾರಂಭಿಸಬೇಕು.

• ಚಟಗಳನ್ನು ಪ್ರಚೋದಿಸುವ ಸನ್ನಿವೇಶಗಳಿಂದ ದೂರ ಉಳಿಯಬೇಕು.

• ಚಟಗಳನ್ನು ಮತ್ತೊಂದು ಆರೋಗ್ಯಕರ ಅಭ್ಯಾಸದೊಂದಿಗೆ ಬದಲಾಯಿಸಿಕೊಳ್ಳಬೇಕು.

• ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಬೇಕು.

• ವೈದ್ಯರೊಂದಿಗೆ ಸಮಾಲೋಚನೆ ಒಂದು ಒಳ್ಳೆಯ ಉಪಾಯ.

• ಚಟಗಳಿಂದ ತಮಗೆ ಆಗುವ ಹಾನಿಯ ಪಟ್ಟಿ ಹಾಗೂ ಚಟದಿಂದ ದೂರವಾದಾಗ ಆಗುವ ಒಳಿತನ್ನು ಮನಗೊಳ್ಳಬೇಕು.

• ತೆಗೆದುಕೊಂಡ ನಿರ್ಧಾರಗಳ ಮೇಲೆ ಬದ್ಧತೆಯನ್ನು ತೋರಿಸಬೇಕು.

ಚಟಗಳಿಗೆ ದಾಸರಾಗುವುದು ಎಷ್ಟು ಸುಲಭವೋ ಅದರಿಂದ ಹೊರಬರುವುದು ಅಷ್ಟೇ ಕಷ್ಟದ ವಿಷಯ. ಉತ್ತಮ ಜೀವನಶೈಲಿ, ಸಕಾರಾತ್ಮಕ ಚಿಂತನೆಗಳು, ಕ್ರಿಯಾಶೀಲ ಬದುಕು, ಪರಿಶ್ರಮ, ಸಮಯದ ಸದುಪಯೋಗ, ರಚನಾತ್ಮಕ ಬದುಕು ರೂಪಿಸಿಕೊಂಡಾಗ ಮಾತ್ರ ಮನುಷ್ಯ ಯಶಸ್ಸಿನ ಕಡೆ ಸಾಗಲು ಸಾಧ್ಯ ಎಂಬುದನ್ನು ಯುವಜನತೆ ಮನಗೊಳ್ಳಬೇಕು.

– ಲೇಖಕರು ಹಿರಿಯ ದಂತ ವೈದ್ಯಾಧಿಕಾರಿ, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT