ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಳಿಗೆಯಲಿ ಎಲ್ಲ ಬದಲಾಯ್ತು!

Last Updated 2 ಮೇ 2020, 19:30 IST
ಅಕ್ಷರ ಗಾತ್ರ

ನಾನೊಬ್ಬ ಭಾರತದಲ್ಲಿ ಕಲಿತು ಲಂಡನ್‌ನ ಆಸ್ಪತ್ರೆಯೊಂದರಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಕನ್ಸಲ್ಟೆಂಟ್ ಫಿಸಿಷಿಯನ್. ಲಂಡನ್ ಕೋವಿಡ್ 19 ದವಡೆಯಲ್ಲಿ ದೊಡ್ಡದಾಗಿ ಸಿಕ್ಕಿಕೊಂಡಿರುವ ಮಹಾನಗರಗಳಲ್ಲಿ ಒಂದು. ಕಳೆದ ಕೆಲವು ದಿನಗಳಲ್ಲಿ ಗುರುತಿಸಲಾಗದಷ್ಟು ಬದಲಾದ ಊರಿನ ಜನರು, ವೈದ್ಯಕೀಯ ಸಿಬ್ಬಂದಿ, ಸಂತ್ರಸ್ತರ ಕಥೆ-ವ್ಯಥೆಗಳನ್ನು ನನ್ನ ಅನುಭವದ ಮಸೂರದಲ್ಲಿ ಕಂಡಂತೆ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ...

ಮಾರ್ಚ್ 10, 2020. ಎಂದಿನಂತೆಯೇ ಆಸ್ಪತ್ರೆಗೆ ಬಂದಿದ್ದೆ. ಆನ್-ಕಾಲ್ ಇದ್ದದ್ದರಿಂದ ಹೊಸದಾಗಿ ಆಸ್ಪತ್ರೆಗೆ ಭರ್ತಿಯಾದವರ ವಿವರವನ್ನು ಕಿರಿಯ ವೈದ್ಯರಿಂದ ಕೇಳಿ ರೋಗಿಗಳನ್ನು ಪರೀಕ್ಷಿಸಿ, ಸೂಕ್ತ ಔಷಧೋಪಚಾರ ಮಾಡುವುದು ನನ್ನ ಅಂದಿನ ಡ್ಯೂಟಿ. ಹಾಗೆ ನೋಡುತ್ತಿದ್ದವರಲ್ಲಿ ಒಬ್ಬರು ಕಳೆದ ವರ್ಷ ಅರವತ್ತು ದಾಟಿದ್ದ, ಭಾರತ ಮೂಲದ ವ್ಯಕ್ತಿ. ಕ್ಯಾನ್ಸರ್‌ಗೆ ವಾರದ ಹಿಂದೆ ಕೊಡಲಾದ ಕಿಮೊಥೆರಪಿ ಅವರ ರಕ್ತದ ಬಿಳಿಕಣಗಳನ್ನು ಸೊನ್ನೆಗೆ ಹತ್ತಿರದಷ್ಟು ಕುಗ್ಗಿಸಿ, ಅವರ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿತ್ತು.

ಆ ಕಾರಣದಿಂದ ಬಂದಜ್ವರ ಅವರನ್ನು ಆಸ್ಪತ್ರೆಗೆ ಬರುವ ಹಾಗೆ ಮಾಡಿತ್ತು. ಅವರಿಗೆ ಕ್ಯಾನ್ಸರ್ ಹೆಚ್ಚೇನೂಹರಡಿರಲಿಲ್ಲ. ಅವರ ಎಕ್ಸ್-ರೇಯೂ ನಾರ್ಮಲ್‌ ಆಗಿಯೇ ಇತ್ತು. ಅವರಿಗೊಂದು ಆಂಟಿಬಯೊಟಿಕ್, ಮತ್ತೆ ಬಿಳಿರಕ್ತಕಣಗಳನ್ನು ಹಿಗ್ಗಿಸುವ ಔಷಧಿ ಕೊಟ್ಟು, ಬೇರೆ ಸೋಂಕು ತಗುಲದಂತೆ ಪ್ರತ್ಯೇಕ ಕೋಣೆಯಲ್ಲಿ ಅವರನ್ನು ಇರಿಸುವ ವ್ಯವಸ್ಥೆ ಮಾಡಿದೆ. ಇಲ್ಲಿಯವರೆಗೆ ಬೇರೇನೂ ವಿಶೇಷವಿರಲಿಲ್ಲ. ಆದರೆ, ಅವರಿಗೆ ಜ್ವರವಿದ್ದರಿಂದ ಯಾವುದಕ್ಕೂ ಇರಲಿ ಅಂತ ಕಳುಹಿಸಿದ್ದ ಮೂಗಿನ ಮತ್ತು ಗಂಟಲಿನ ದ್ರವ ‘ಕೋವಿಡ್‌ 19 ಪಾಸಿಟಿವ್’ ಆಗಿ ದೃಢಪಟ್ಟಿದ್ದು ಎಲ್ಲವನ್ನೂ ಬದಲಾಯಿಸಿತ್ತು.

ಮಾರನೆಯ ದಿನ ಅವರ ಉಸಿರಾಟ ಕಷ್ಟವಾಗಿ ಮೊದಲು ಮೂಗಿನ ನಳಿಗೆಯಲ್ಲಿ, ನಂತರ ಮೂಗು ಮುಚ್ಚುವ ಮಾಸ್ಕ್‌ನಿಂದ ಹೆಚ್ಚು ಆಕ್ಸಿಜನ್ ಕೊಡಬೇಕಾಯಿತು. ಹೊಸದಾಗಿ ತೆಗೆದ ಎಕ್ಸ್-ರೇ ಶ್ವಾಸಕೋಶದ ತುಂಬ ಕೊರೊನಾ ಮಾಡುತ್ತಿದ್ದ ರಾಡಿಯನ್ನು ತೋರಿಸಿತ್ತು. ಗುಣವಾಗದಷ್ಟು ಉಲ್ಬಣಗೊಂಡ ಆ ತೊಂದರೆ ಕೇವಲ ನಾಲ್ಕೇ ದಿನದಲ್ಲಿ ಅವರ ಉಸಿರನ್ನು ಅಳಿಸಿತ್ತು.

ಹೀಗೆ ಮಾರ್ಚ್ 10ರಂದು ಕೊರೊನಾ ಇರಬಹುದೇನೋ ಎನ್ನುವ ಅನುಮಾನದಲ್ಲಿ ಶುರುವಾದದ್ದು ಇಂದು ಕೊರೊನಾ ಇಲ್ಲದ ರೋಗಿಗಳೇ ಆಸ್ಪತ್ರೆಗಳಲ್ಲಿ ಇಲ್ಲದಷ್ಟು ಪರಿಸ್ಥಿತಿ ಬದಲಾಗಿದೆ. ಅಂದಿನಿಂದ ಇಂದಿನವರೆಗೆ- ನಾಲ್ಕು ವಾರಗಳಲ್ಲಿ 450ಕ್ಕೂ ಹೆಚ್ಚು ಜನ ನಮ್ಮ ಆಸ್ಪತ್ರೆಯಲ್ಲೇ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಈ ಸಂಖ್ಯೆ ಲಂಡನ್‌ನಲ್ಲಿ 3,000 ಮೀರಿದೆ. ಯು.ಕೆ.ಯಲ್ಲಿ ಇಪ್ಪತೈದು ಸಾವಿರ ದಾಟಿದೆ. ಇನ್ನೂ ಹಲವು ವಾರಗಳು ಕೊರೊನಾದ ಆರ್ಭಟ ಮುಂದುವರಿಯುವುದು ಎಂಬ ವಿಚಾರ ಎಂಥವರಲ್ಲಿಯೂ ಭಯ ಹುಟ್ಟಿಸುವಂತಿದೆ.

ಕೊರೊನಾದ ಸುಳಿಯಲ್ಲಿ...

ಸುಲಭದಲ್ಲಿ ಒಬ್ಬರಿಂದ ಹಲವರಿಗೆ ಹರಡಿಕೊಳ್ಳುವ ಶಕ್ತಿಯ ಕೊರೊನಾದ ಹಿಡಿತಕ್ಕೆ ಸಿಕ್ಕ ಜನರ ಸಂಖ್ಯೆ ಒಂದರಿಂದ ಹತ್ತಾಗಿ, ಹತ್ತು ನೂರಾಗಿ, ನೂರು ಸಾವಿರವಾಗಲು ಹಲವು ದಿನಗಳಷ್ಟೇ ಸಾಕಾಗಿತ್ತು. ಆ ವೇಗಕ್ಕೆ ಸರಿಯಾಗಿ ಬದಲಾಗಲು ಯಾವ ವ್ಯವಸ್ಥೆಗೆ ಸಾಧ್ಯ? ಸುನಾಮಿಯ ಅಲೆಗೆ ಕೊಚ್ಚಿಹೋದ ದಡಗಳ ಊರುಗಳಂತೆ, ಕೊರೊನಾದ ಅಲೆಯಲ್ಲಿ ಲಂಡನ್ ಸದ್ಯಕ್ಕೆ ಮುಳುಗಿದೆ.

ಇಲ್ಲಿನಆಸ್ಪತ್ರೆಗಳಲ್ಲಿ ದಿನಕ್ಕೊಂದು ಹೊಸ ವಾರ್ಡ್‌ ಕೊರೊನಾ ವಾರ್ಡ್ ಆಗಿ ಬದಲಾಗುತ್ತಿದೆ. ಆ ವಾರ್ಡ್‌ಗಳಲ್ಲಿ ಅವರನ್ನ ನಾಲ್ಕೋ, ಆರೋ ಬೆಡ್ಡಿನ ಬೇಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಮುಖಕಿಟ್ಟು ಆಗಾಗ ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ ಪರೀಕ್ಷಿಸಿ, ತುಂಬಾ ಹೆಚ್ಚು ಆಕ್ಸಿಜನ್ ಬೇಕಿದ್ದಲ್ಲಿ ಒಂದೋ ಮುಖಕ್ಕೆ ಕಟ್ಟುವ ಮಾಸ್ಕಿನ ಮೂಲಕ ಹೆಚ್ಚು ಒತ್ತಡದಲ್ಲಿ ಆಕ್ಸಿಜನ್ ತಳ್ಳುವ ಯಂತ್ರದ ಮೂಲಕವೋ ಅಥವಾ ಶ್ವಾಸನಾಳಕ್ಕೆ ಟ್ಯೂಬ್ ಹಾಕಿ ಕೃತಕ ಉಸಿರಾಟದ ವ್ಯವಸ್ಥೆ ಮಾಡುವ ಮೂಲಕವೋ ಅವರ ಆರೈಕೆ ಮಾಡುವುದು ಬಿಟ್ಟರೆ ಬೇರೆ ಉಪಾಯ ಇಲ್ಲ.

ಬೆಳಿಗ್ಗೆ ಕೆಲಸ ಶುರು ಮಾಡುವ ಮೊದಲು, ಮನೆಯಿಂದ ಹಾಕಿಕೊಂಡು ಹೋದ ಬಟ್ಟೆಯ ಬದಲು ಆಸ್ಪತ್ರೆಯ ಸರ್ಜಿಕಲ್ ಸ್ಕ್ರಬ್ (ಅಂಗಿ-ಪೈಜಾಮ)ಧರಿಸಿ, ಅವತ್ತು ಯಾರೆಲ್ಲಾ ಕೆಲಸಕ್ಕೆ ಬಂದಿದ್ದಾರೆ ಎಂದು ಪಟ್ಟಿ ಮಾಡೋದು. ಯಾಕಂದ್ರೆ ಕೊರೊನಾ ಡಾಕ್ಟ್ರು-ನರ್ಸ್‌ಗಳಿಗೆ ಯಾವ ಡಿಸ್ಕೌಂಟ್ ಕೊಡಲ್ಲ. ಅಲ್ಲದೆ, ಆ ರೋಗಿಗಳನ್ನು ಹತ್ತಿರದಿಂದ ನೋಡೋದ್ರಿಂದ ಅದನ್ನ ಮೈಗಂಟಿಸಿಕೊಳ್ಳೋ ರಿಸ್ಕ್ ಬೇರೆ ಜಾಸ್ತಿ. ಶೇಕಡ 30ರಷ್ಟು ಡಾಕ್ಟ್ರು, ನರ್ಸ್‌ಗಳು ಕೊರೊನಾದಿಂದ ಕೆಮ್ಮುತ್ತಾ ಇರುವುದರಿಂದ, ಆಸ್ಪತ್ರೆಯಲ್ಲಿ ಇರೋ ಡಾಕ್ಟ್ರು, ನರ್ಸ್‌ಗಳನ್ನು ಎಲ್ಲಾ ವಾರ್ಡ್‌ಗಳಿಗೆ ಸಮವಾಗಿ ಹಂಚಿದ ನಂತರವೇ ರೋಗಿಗಳನ್ನು ನೋಡೋದಕ್ಕೆ ಶುರು ಮಾಡೋದು.

ವಾರ್ಡ್ ಪ್ರವೇಶ ಮಾಡೋ ಮುನ್ನ ಮುಖಕ್ಕೊಂದು ಮಾಸ್ಕ್, ಕಣ್ಣಿಗೊಂದು ದೊಡ್ಡ ಕನ್ನಡಕ, ತಲೆ ಮೇಲೊಂದು ತೆಳುಬಟ್ಟೆಯ ಟೋಪಿ ಇವಿಷ್ಟು ಅವಶ್ಯಕ. ಮತ್ತೆ ಪ್ರತಿ ರೋಗಿಯ ಹತ್ತಿರ ಹೋಗುವಾಗ ಮೈಮೇಲೆ ತೆಳು ಪ್ಲಾಸ್ಟಿಕ್‌ನ ಏಪ್ರಾನ್, ಕೈಗೆ ಗ್ಲೋವ್ಸ್‌ ಕಡ್ಡಾಯ. ಮಾಸ್ಕ್‌ಗಳಲ್ಲಿ ಹಲವು ತರ- ಅವು ಕೊಡುವ ರಕ್ಷಣೆಗೆ ಅನುಗುಣವಾಗಿ. ಕನಿಷ್ಠದಲ್ಲಿ ಸರ್ಜಿಕಲ್ ಮಾಸ್ಕ್ ಇದ್ದರೆ; ಗರಿಷ್ಠದಲ್ಲಿ ಎನ್‌95 ಹೆಸರಿನ ಮಾಸ್ಕ್. ಲಭ್ಯತೆಗೆ ಅನುಗುಣವಾಗಿ ಯಾರು ಯಾವ ರೀತಿಯ ಮಾಸ್ಕ್‌ ಹಾಕಬೇಕು ಎನ್ನುವ ನಿಯಮಗಳನ್ನು ರಾಷ್ಟ್ರಮಟ್ಟದಲ್ಲಿಬರೆಯುತ್ತ, ಬದಲಾಯಿಸುತ್ತಾ ಇದ್ದಾರೆ. ಹೆಚ್ಚಿನ ವೈದ್ಯರು ಮತ್ತು ನರ್ಸ್‌ಗಳು ಯಾವುದು ಲಭ್ಯವಿದೆಯೋ ಅವುಗಳಿಂದ ತಮ್ಮ ಮುಖ, ಮೈ, ಕೈಗಳನ್ನು ಆದಷ್ಟು ರಕ್ಷಿಸಿಕೊಂಡು ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ‘ಹೆಚ್ಚು ರಕ್ಷಣೆಯ ವಸ್ತುಗಳನ್ನು ಕೊಡಿ’ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಬರೆಯುತ್ತಿದ್ದಾರೆ.

ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನ ಮಂತ್ರಿಗೆ ರಕ್ಷಣೆಯ ವಸ್ತುಗಳ ಅಲಭ್ಯತೆ ಬಗ್ಗೆ ಕೆಲವು ದಿನಗಳ ಹಿಂದೆ ಮೆಸೇಜ್ ಮಾಡಿದ್ದ ಲಂಡನ್‌ನ ವೈದ್ಯರೊಬ್ಬರು ಮೊನ್ನೆ ಕೊರೊನಾ ಸೋಂಕಿನಿಂದ ತೀರಿಕೊಂಡರು. ಹೀಗೆ ಜೀವ ಕಳೆದುಕೊಂಡವರು ಇವರೊಬ್ಬರೇ ಅಲ್ಲ. ಇದುವರೆಗೆ ಇಂಗ್ಲೆಂಡ್‌ನ ಆಸ್ಪತ್ರೆಯಲ್ಲಿ ಕೆಲಸ ಮಾಡುವ 19 ಸಿಬ್ಬಂದಿ ಕೊರೊನಾ ಸೋಂಕು ತಗುಲಿ ಸತ್ತಿದ್ದಾರೆ. ಅದರಲ್ಲಿ 10 ಮಂದಿ ಹಿರಿಯ ವೈದ್ಯರು. ಈ ಸಂಖ್ಯೆ ಇನ್ನು ಹೆಚ್ಚದಿರಲಿ ಎನ್ನುವ ಪ್ರಾರ್ಥನೆಯನ್ನಷ್ಟೇ ನಮ್ಮಿಂದ ಮಾಡೊಕ್ಕಾಗೋದು. ಕಾಣದ ವೈರಿಯೊಡನೆ, ಸರಿಯಾದ ಅಸ್ತ್ರಗಳು, ಕವಚಗಳೂ ಇಲ್ಲದೆ ಯುದ್ಧ ಮಾಡುವಾಗ ಮುಂದಿನ ಸಾಲಿನ ಸೈನಿಕರ ಬಲಿ ತಪ್ಪಿಸಲಾಗದ ಅನಿವಾರ್ಯತೆ ಎನ್ನೋದನ್ನು ಸರ್ಕಾರ ಮತ್ತು ಸಮಾಜ ಒಪ್ಪಿಕೊಂಡಂತಹ ಸ್ಥಿತಿಯಲ್ಲಿ ನಮಗೆ ಉಳಿದಿರೋದು ಪ್ರಾರ್ಥನೆಯೊಂದೇ.

ನಮ್ಮ ಸೇವೆ ಮಾಡುವ ವಿಧಾನ ಕೊರೊನಾ ಸುಳಿಯಲ್ಲಿ ಸಂಪೂರ್ಣ ಬದಲಾಗಿದೆ. ಮಾಸ್ಕ್‌ಗಳಲ್ಲಿ ಕಣ್ಣು, ಮುಖ ಮುಚ್ಚಿಕೊಂಡಿರುವುದರಿಂದ, ಮಾತಿನಲ್ಲಿ ಮಾತ್ರ ರೋಗಿಯ ನೋವು, ಭಾವನೆಗಳಿಗೆ ಸ್ಪಂದಿಸಲು ಸಾಧ್ಯ. ಮತ್ತೆ ಆದಷ್ಟು 6 ಅಡಿ ದೂರ ನಿಂತು ಮಾತನಾಡುವುದರಿಂದ, ಮೈ ಮುಟ್ಟಿ, ಕೈ ಮುಟ್ಟಿ ತೋರಿಸುತ್ತಿದ್ದ ಸಾಂತ್ವನ, ಸಮಾಧಾನಗಳಿಗೆ ಈಗ ಜಾಗವಿಲ್ಲ. ಮೂರು-ನಾಲ್ಕು ವಾರದ ಹಿಂದೆ ಸ್ಟೆಥೋಸ್ಕೋಪ್ ಮಾಡುತ್ತಿದ್ದ ಕೆಲಸ ಈಗ ಎಕ್ಸ್-ರೇ ಯಂತ್ರ ಮಾಡುತ್ತಿದೆ. ರೋಗಿಯ ಸಂಬಂಧಿಗಳುಆಸ್ಪತ್ರೆಗೆ ಬರುವುದೂ ಕಡಿಮೆ. ಆ ಸಂಬಂಧಿಗಳೂಕೊರೊನಾದಿಂದ ದಾಖಲಾಗಿರುವ, ತೀರಿ ಹೋಗಿರುವ ಅಥವಾ ಮನೆಯಲ್ಲಿ ಕ್ವಾರೆಂಟೈನ್ ಸ್ಥಿತಿಯಲ್ಲಿರುವ ಉದಾಹರಣೆಗಳು ಬಹಳಷ್ಟಿವೆ.

‘ಹೋದ ವಾರದವರೆಗೆ ಯಾವುದೇ ತೊಂದರೆಯಿರದಿದ್ದ, ನಿಮ್ಮ45 ವರ್ಷದ ಮಗಳು ಮತ್ತೆ ಆಸ್ಪತ್ರೆಯಿಂದ ಜೀವಂತ ಮರಳುವುದಿಲ್ಲ. ನಿಮಗೆ ಅವಳನ್ನ ಮತ್ತೆ ನೋಡಲಿಕ್ಕಾಗೋದಿಲ್ಲ’ ಎಂದು 80 ವರ್ಷದ ಅವಳ ಅಪ್ಪನಿಗೆ ಫೋನಿನಲ್ಲಿ ಹೇಗೆ ಹೇಳುವುದು? ಅವರ ಮೌನದ ಅಳು, ಜೋರಾದ ಆಕ್ರಂದನವನ್ನು ಹೇಗೆ ಸಮಾಧಾನಿಸೋದು? ಪ್ರತಿದಿನ ಮೂರೋ, ನಾಲ್ಕೋ ಕುಟುಂಬಕ್ಕೆ ಹೀಗೆ ಫೋನ್‌ನಲ್ಲಿ ಆಡಿದ ಮಾತು, ಕೇಳಿಸಿಕೊಂಡ ಅಳು, ಇವೆಲ್ಲವನ್ನು ನುಂಗಿಕೊಂಡು ಮತ್ತೆ ಮಾರನೇ ದಿನದ ಕೆಲಸಕ್ಕೆ ತಯಾರಾಗಬೇಕು. ಪ್ರತಿದಿನವೂ ಇದೇದಿನಚರಿ.ಕೊರೊನಾದಿಂದ ಸಾಯುತ್ತಿರುವವರ ಶವಗಳನ್ನು ಹೂತಿಡುವವರೆಗೆ ಕಾಯ್ದಿಡಲು ಶೈತ್ಯಾಗಾರಗಳನ್ನೂ ಇಲ್ಲಿ ಹೊಸದಾಗಿ ನಿರ್ಮಾಣ ಮಾಡಬೇಕಾಗಿದೆ.

ಎಲ್ಲರೂ ಸಮಾನ...

ವೈರಸ್‌ಗೆ ಎಲ್ಲಾ ಮನುಷ್ಯರೂ ಒಂದೇ. ಆದರೆ, ಕೊರೊನಾ ವೈರಸ್ ಹರಡಿರುವ ಮತ್ತು ಅದರಿಂದ ಜೀವ ಕಳೆದುಕೊಂಡವರ ಹಿನ್ನೆಲೆ ನೋಡಿದರೆ ತೆರೆದುಕೊಳ್ಳುವ ಸತ್ಯ ಬೇರೆಯದೇ. ಉದಾಹರಣೆಗೆ ಇಂಗ್ಲೆಂಡಿನಲ್ಲಿ ಕೊರೊನಾಪೀಡಿತರಲ್ಲಿ ಶೇಕಡ 30ರಷ್ಟು ಜನರು ಜನಾಂಗೀಯ ಅಲ್ಪಸಂಖ್ಯಾತರು. ಅಂದರೆ, ಒಂದೋ ಭಾರತದ ಉಪಖಂಡ ಅಥವಾ ಆಫ್ರಿಕಾದ ಮೂಲದವರು. ಈ ಮೂಲದವರ ಒಟ್ಟಾರೆ ಜನಸಂಖ್ಯೆ ಶೇಕಡ 10ರಷ್ಟಿದೆ. ಇವರಲ್ಲೇಕೆ ಕೊರೊನಾ ಇಷ್ಟು ಹೆಚ್ಚು ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಯಾರಿಗೂ ಗೊತ್ತಿಲ್ಲ. ಬಡತನ, ನಗರ ಜನಸಾಂದ್ರತೆ, ಬಸ್‌- ರೈಲುಗಳಲ್ಲಿ ಓಡಾಟ –ಹೀಗೆ ಒಂದಷ್ಟು ಕಾರಣಗಳ ಪಟ್ಟಿ ಮಾಡಬಹುದು.

ಈ ಹಿನ್ನೆಲೆಯನ್ನು ಯೋಚಿಸುವಂತೆ ಮಾಡಿದ್ದು ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ಭಾರತೀಯ ಮೂಲದ ಜನರ ಸಂಖ್ಯೆ. ಹಲವು ದಶಕಗಳಿಂದ ಇಲ್ಲಿರುವ ಗುಜರಾತಿನವರು, ಪಂಜಾಬಿನವರು; ಪಾಕಿಸ್ತಾನದಿಂದ ಇಲ್ಲಿಗೆ ಬಂದವರು;ಈಗೀಗ ಇಲ್ಲಿಗೆ ಬರುತ್ತಿರುವ ಗೋವಾದ ಜನರು. ಈ ಕೊನೆಯ ಗುಂಪಿನ ಜನರಲ್ಲಿ ಹೆಚ್ಚಿನ ಕೊರೊನಾ ಪೀಡಿತರು 40ರಿಂದ 55 ವರ್ಷದ ಒಳಗಿನವರು. ಅವರಲ್ಲಿ ಕೆಲವರುಕೃತಕ ಉಸಿರಾಟದ ವ್ಯವಸ್ಥೆಗಾಗಿ ಐಸಿಯುನಲ್ಲಿದ್ದಾರೆ. ಮತ್ತೆ ಕೆಲವರಿಗೆ ಸ್ಟ್ರೋಕ್ ಆಗಿದೆ; ಹೃದಯಾಘಾತವಾಗಿದೆ.

ಒಟ್ಟಾರೆ ಆಸ್ಪತ್ರೆಗೆ ದಾಖಲಾದ ನಾಲ್ವರ ಪೈಕಿ ಮೂವರು ಗುಣವಾಗಿ ಮನೆಗೆ ಹೋಗುತ್ತಾರೆ. ಉಳಿದ ಒಬ್ಬರಲ್ಲಿ, ಹೆಚ್ಚಿನವರು ಕೃತಕ ಉಸಿರಾಟಕ್ಕೆ ಐಸಿಯುನಲ್ಲಿ ಒಂದಿಷ್ಟು ವಾರಗಳ ಕಾಲ ಇರುತ್ತಾರೆ. ಆ ಪೈಕಿ ಇಬ್ಬರಲ್ಲಿ ಒಬ್ಬರು(ಶೇಕಡ 50) ಮಾತ್ರ ಗುಣವಾಗುತ್ತಾರೆ. ಸಾಕಷ್ಟು ಐಸಿಯು ಇಲ್ಲದ ಕಡೆ ಮರಣಿಸುವವರ ಪ್ರಮಾಣ ಹೆಚ್ಚು. ಇದೇಕಾರಣಕ್ಕೆ ಲಂಡನ್‌ನಲ್ಲಿ ನಾಲ್ಕು ಸಾವಿರ ಬೆಡ್ಡಿನ ತಾತ್ಕಾಲಿಕಆಸ್ಪತ್ರೆಯೊಂದನ್ನು ಕೋವಿಡ್ ರೋಗಿಗಳಿಗಾಗಿ ಕಾನ್ಫರೆನ್ಸ್ ಸೆಂಟರ್‌ವೊಂದರಲ್ಲಿ ನಿರ್ಮಿಸಿದ್ದಾರೆ.

ಸ್ನೇಹಸಿರಿಯ ಸೆಲೆ

ಈ ಸಾವು-ನೋವಿನ ಸಂಕಟದಲ್ಲಿ ಒಂದಿಷ್ಟು ಸಾಂತ್ವನ ಕೊಡುವುದು ಸುತ್ತಲಿನ ಸಮಾಜದ ಸಹಾಯದ ಮನೋಭಾವ ಮಾತ್ರ. ವಾರಕ್ಕೊಮ್ಮೆ ಸಂಜೆ 8ಕ್ಕೆ ಐದು ನಿಮಿಷದ ಚಪ್ಪಾಳೆಯಲ್ಲಿ ದೇಶವಿಡೀ ಶುಶ್ರೂಷಕರ ಸೇವೆ ಸ್ಮರಿಸಿ ಉತ್ತೇಜಿಸುತ್ತದೆ. ಅಲ್ಲದೆ, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ಶಾಪ್‌ಗಳಲ್ಲಿ ಮೊದಲ ಆದ್ಯತೆ; ಆಗಾಗ ಉಚಿತ ಊಟ, ಡಿಸ್ಕೌಂಟ್‌ಗಳು. ಇಂಗ್ಲೆಂಡಿನಲ್ಲಿ ಸರ್ಕಾರವೂ ಹಲವು ಲಕ್ಷ ಸಂಖ್ಯೆಯಸ್ವಯಂಸೇವಕರ ಗುಂಪೊಂದನ್ನು ಕಟ್ಟಿದೆ. ವೃದ್ಧರಿಗೆ ಊಟ, ಔಷಧಿ ತಲುಪಿಸುವುದು, ಆಸ್ಪತ್ರೆಯ ಹೊರಗೆಲಸ ಇತ್ಯಾದಿ ಸೇವೆಗಳಿಗೆ ಅವರ ಸಮಯ ಬಳಸಿಕೊಳ್ಳುವುದು ಸರ್ಕಾರದ ಉದ್ದೇಶ. ಈ ಸಹಾಯ, ಸಹಕಾರ ಮನೋಭಾವ ಉಳಿದ ದಿನಗಳಲ್ಲಿ ಎಲ್ಲಿ ಹೋಗುತ್ತದೆ ಎನ್ನುವುದು ನನಗೆ ಕಾಡುತ್ತಿರುವ ಪ್ರಶ್ನೆ.

ಹೇಗೆ ಇಲ್ಲಿಗೆ ಬಂದೆವು ನಾವು? ಎಲ್ಲಿ ತಪ್ಪಿದ್ದು ಮನುಕುಲದ ಹೆಜ್ಜೆ? ದುಡ್ಡಿನ ದರ್ಪದಿಂದಲೇ ಎಲ್ಲವನ್ನೂ ಬೆಳೆಯುವ, ಅಳೆಯುವ ‘ಅಳೆ-ಮಾರಿ’ಗಳ ದುಷ್ಟಕೂಟದಿಂದ ಇನ್ನಾದರೂ ಮನುಷ್ಯ ಪ್ರಪಂಚ ಹೊರಬಂದು ಸಮತೆ- ಮಮತೆಯ ಹೊಸ ಸಮಾಜ ಕಟ್ಟದಿದ್ದರೆ, ಕೊರೊನಾದ ಸುನಾಮಿಯ ನಂತರ ಹಸಿವು, ಬಡತನದ ಕಂಪನ ಮತ್ತಷ್ಟು ಲಕ್ಷ ಜೀವಗಳ ಬಲಿ ತೆಗೆದುಕೊಳ್ಳದೇ? ಆ ಬದಲಾವಣೆಯ ಬೀಜವನ್ನು ಕೊರೊನಾ ಉಳಿಸಿ ಹೋಗುವುದೇ? ಒಂದು ವೇಳೆಹಾಗೆ ಬಿತ್ತಿಹೋದರೆ ಮಾತ್ರ ನಮ್ಮ ನಾಳೆಗಳು ಉಳಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT