ಬುಧವಾರ, ಜುಲೈ 28, 2021
29 °C

ಪುರುಷರಲ್ಲಿ ಹೆಚ್ಚುತ್ತಿರುವ ಲೈಂಗಿಕ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ಅಗಾಧ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಇಲ್ಲಿ ಫಲವಂತಿಕೆಯ ಸಮಸ್ಯೆ ಕಡಿಮೆ ಎಂದು ಮೇಲ್ನೋಟಕ್ಕೆ ಅನಿಸದೇ ಇರದು. ಆದರೆ ಅಧ್ಯಯನವೊಂದರ ವರದಿಯ ಪ್ರಕಾರ ಹೆಚ್ಚಿನ ಸಂಖ್ಯೆಯ ಪುರುಷರಲ್ಲಿ ಜನನಾಂಗ ಗಡಸಾಗುವ (ಎರೆಕ್ಟೈಲ್‌ ಡಿಸ್‌ಫಂಕ್ಷನ್‌– ಇಡಿ) ಸಮಸ್ಯೆ ಇದೆಯಂತೆ.

‘ಫೈಝರ್‌ ಅಪ್‌ಜಾನ್‌’ ನಡೆಸಿದ ಸಮೀಕ್ಷೆಯ ಪ್ರಕಾರ ಪುರುಷರಲ್ಲಿ ಈ ಸಮಸ್ಯೆಯಿಂದಾಗಿ ಲೈಂಗಿಕ ಅತೃಪ್ತಿ ಕಾಡುವುದಲ್ಲದೇ ಸಂತಾನಹೀನತೆಗೂ ಕಾರಣವಾಗುತ್ತದೆ. ಇದಕ್ಕೆ ಚಿಕಿತ್ಸೆ ಎಲ್ಲಾ ಕಡೆ ಲಭ್ಯವಿದ್ದರೂ ಕೂಡ ಸಂಕೋಚದ ಕಾರಣದಿಂದ ವೈದ್ಯರಲ್ಲಿಗೆ ಹೋಗಲು ಬಹಳಷ್ಟು ಗಂಡಸರು ಹಿಂಜರಿಯುತ್ತಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 40 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಪುರುಷರಲ್ಲಿ ಶೇ 30ರಷ್ಟು ಮಂದಿಗೆ ಈ ‘ಇಡಿ’ ಸಮಸ್ಯೆಯಿದೆ.

‘ಮೊದಲೆಲ್ಲ 50– 60 ವರ್ಷ ವಯಸ್ಸಿನ ನಂತರ ಈ ನಿಮಿರುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಬದಲಾದ ಜೀವನಶೈಲಿಯಿಂದಾಗಿ 25–30 ವರ್ಷಕ್ಕೇ ಈ ಸಮಸ್ಯೆ ಬರ್ತಾ ಇದೆ. ಬ್ಯುಸಿ ಜೀವನಶೈಲಿಯಿಂದಾಗಿ ಲೈಂಗಿಕ ಚಟುವಟಿಕೆಯತ್ತ ಗಮನಹರಿಸುವುದು ಕಡಿಮೆಯಾಗಿದೆ. ಆಹಾರ ಸೇವನೆಯಲ್ಲಿ ಅಶಿಸ್ತು, ಧೂಮಪಾನ, ಮದ್ಯಪಾನವೂ ಈ ಸಮಸ್ಯೆಗೆ ಕಾರಣ’ ಎನ್ನುತ್ತಾರೆ ಹುಬ್ಬಳ್ಳಿಯ ಕಿಮ್ಸ್‌ನ ಮನೋವೈದ್ಯಕೀಯ ವಿಭಾಗದ ಹಿರಿಯ ವೈದ್ಯ ಡಾ.ಶಿವಾನಂದ ಬಿ. ಹಿರೇಮಠ.

ಇನ್ನೊಂದು ವಿಷಯವೆಂದರೆ ಶೇ 82ರಷ್ಟು ಮಹಿಳೆಯರು ತಮ್ಮ ಸಂಗಾತಿಗೆ ವೈದ್ಯರ ಬಳಿ ಚಿಕಿತ್ಸೆ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರಂತೆ. ಸ್ನೇಹಿತರ ಸಲಹೆ, ಮನೆಮದ್ದು ಮೊದಲಾದವುಗಳ ಮೇಲೆ ಸಮಯ ವ್ಯರ್ಥ ಮಾಡುವುದರ ಬದಲು ತಜ್ಞರ ಬಳಿ ಹೋಗುವಂತೆ ಒತ್ತಾಯಿಸಿರುವುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ ಮಹಿಳೆಯರು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಮೂತ್ರಶಾಸ್ತ್ರ ತಜ್ಞರು, ಆ್ಯಂಡ್ರೊಲಾಜಿಸ್ಟ್‌, ಸೆಕ್ಸಾಲಾಜಿಸ್ಟ್‌, ಇತರ ವೈದ್ಯರು ಭಾಗವಹಿಸಿದ್ದರು.

ಚಿಕಿತ್ಸೆಗೆ ಹಿಂಜರಿಕೆಯೇಕೆ?

‘ನಿಯಮಿತ ಹಾಗೂ ಅಧಿಕೃತ ಲೈಂಗಿಕ ಚಟುವಟಿಕೆ ಕೆಲವರಲ್ಲಿ ಕಮ್ಮಿಯಾಗಿದೆ. ಮಾನಸಿಕ ಸಮಸ್ಯೆಗೆ ನೀಡುವ ಔಷಧಗಳು, ಸಣ್ಣ ವಯಸ್ಸಿನಲ್ಲೇ ಅತಿಯಾದ ಪೋರ್ನೊಗ್ರಫಿಯತ್ತ ಆಕರ್ಷಣೆ ಕೂಡ ಈ ಸಮಸ್ಯೆಗೆ ಕಾರಣ. ಅಂದರೆ ಲೈಂಗಿಕ ಆಸಕ್ತಿಯೇ ಕುಂಠಿತವಾಗುತ್ತದೆ’ ಎನ್ನುವ ಅವರು, ‘ಸಮಸ್ಯೆ ಪರಿಹಾರಕ್ಕೆ ವೈದ್ಯರ ಬಳಿ ಬರದೆ ವಯಾಗ್ರಾ ಮತ್ತಿತರ ಔಷಧಗಳ ಮೊರೆ ಹೋಗುತ್ತಾರೆ’ ಎನ್ನುತ್ತಾರೆ.

ನಿಯಂತ್ರಣವಿಲ್ಲದ ಮಧುಮೇಹ, ಹೈಪರ್‌ಟೆನ್ಶನ್‌, ದೈಹಿಕ ಚಟುವಟಿಕೆ ಇಲ್ಲದಿರುವುದು, ಆರೋಗ್ಯಕರ ಜೀವನಶೈಲಿ ಅನುಸರಿಸದಿರುವುದೂ ಪುರುಷರ ಈ ಲೈಂಗಿಕ ಸಮಸ್ಯೆಗೆ ಕಾರಣ. ಜೊತೆಗೆ ಸಂಗಾತಿ ಮಧ್ಯೆ ಆತ್ಮೀಯತೆ, ಪ್ರೀತಿಯ ಕೊರತೆ.

‘ದಂಪತಿಗೆ ಆತ್ಮೀಯತೆ ಹೆಚ್ಚಿಸಿಕೊಳ್ಳುವ ಕುರಿತು ಚಿಕಿತ್ಸೆ ನೀಡಬೇಕಾಗುತ್ತದೆ. 30–35 ವರ್ಷಕ್ಕೇ ಮಕ್ಕಳು, ಅವರ ವಿದ್ಯಾಭ್ಯಾಸ ಎಂದು ಚಿಂತೆ ಹೆಚ್ಚಿಸಿಕೊಂಡು ಲೈಂಗಿಕ ಕ್ರಿಯೆ ಬಗ್ಗೆ ಅನಾಸಕ್ತಿ ಬೆಳೆಸಿಕೊಂಡವರು 50 ವರ್ಷದ ನಂತರ ಈ ನಿಮಿರುವಿಕೆ ಸಮಸ್ಯೆ ಎದುರಿಸುತ್ತಾರೆ’ ಎನ್ನುವ ಡಾ. ಹಿರೇಮಠ, ‘ನಿಮ್ಮ ವೈಯಕ್ತಿಕ ಬದುಕಿನ ಬಗ್ಗೆ ಗಮನ ಕೊಡಿ’ ಎಂದು ಅಂಥವರಿಗೆ ಸಲಹೆ ನೀಡುತ್ತಾರೆ.

ದೈಹಿಕ ಸಮಸ್ಯೆಯೂ ಇದಕ್ಕೆ ಕಾರಣ. ಅಂಥವರು ಔಷಧ, ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆಯ ಮೊರೆ ಹೋಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು