ಮಂಗಳವಾರ, ಅಕ್ಟೋಬರ್ 27, 2020
28 °C

PV Web Exclusive: ಸೊಂಟದ ವಿಷಯ, ಬೇಡ ನಿರ್ಲಕ್ಷ್ಯ

ಸುದೇಶ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

Prajavani

ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಆ ಯುವಕನಿಗೆ ವಿಪರೀತ ಭುಜದ ನೋವು. ಐವತ್ತರ ಆಸುಪಾಸಿನ ವ್ಯಕ್ತಿಗೆ ಕೆಳಮಟ್ಟದ ಸೊಂಟ ನೋವು. ಗೃಹಿಣಿಯೊಬ್ಬರಿಗೆ ನಿಲ್ಲಲು ಅಸಾಧ್ಯ ಎನಿಸುವಂತೆ ಹಿಮ್ಮಡಿ ನೋವು. ಪಿಯುಸಿ ವಿದ್ಯಾರ್ಥಿಗೆ ಸಹಿಸಲು ಅಗದಂತಹ ಕುತ್ತಿಗೆ ನೋವು.

ಈ ನೋವುಗಳೆಲ್ಲ ಹಿಂದೆಯೂ ಇದ್ದವು. ಆದರೆ, ಕೊರೊನಾ ಕಾಲದಲ್ಲಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಕಾರಣ, ಜೀವನಶೈಲಿಯಲ್ಲಿ ಆಗಿರುವ ಬದಲಾವಣೆ.

ಐಟಿ ಕಂಪನಿಯ ಉದ್ಯೋಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರು ಸೋಫಾ, ಹಾಸಿಗೆ, ಡೈನಿಂಗ್‌ ಟೇಬಲ್‌–ಹೀಗೆ ಎಲ್ಲೆಂದರಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿದ್ದರು. ಐವತ್ತರ ಸಮೀಪದ ವ್ಯಕ್ತಿ ಗೋಡೆಗೆ ಬೆನ್ನುಹಾಕಿ, ಕಾಲುಗಳನ್ನು ಚಾಚಿ ತೊಡೆಮೇಲೆ ಲ್ಯಾಪ್‌ಟಾಪ್‌ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಗೃಹಿಣಿಗೆ ಲಾಕ್‌ಡೌನ್‌ ನಂತರ ಮನೆಯಲ್ಲಿ ವಿಪರೀತ ಕೆಲಸ. ಮಗ, ಸೊಸೆ, ಮಗಳು, ಅಳಿಯ, ಮೊಮ್ಮಕ್ಕಳು ಎಲ್ಲರೂ ಇದ್ದಾರೆ. ಅವರಿಗೆ ಬಗೆಬಗೆ ತಿಂಡಿ, ಊಟ, ಆಗಾಗ ಟೀ, ಕಾಫಿ ಮಾಡಿಕೊಡುತ್ತಲೇ ಇರಬೇಕು. ಹೀಗಾಗಿ ಅವರು ಅಡುಗೆಮನೆಯಲ್ಲಿ ಹಲವು ತಾಸು ನಿಂತೇ ಕೆಲಸ ಮಾಡುತ್ತಾರೆ. ಪಿಯುಸಿ ಹುಡುಗನ ಕತೆಯೇ ಬೇರೆ. ಈತ ಆನ್‌ಲೈನ್‌ ಕ್ಲಾಸ್‌, ಆನ್‌ಲೈನ್‌ ಕೋಚಿಂಗ್‌ ನವರು ನೀಡುವ ಅಸೈನ್‌ಮೆಂಟ್‌ಗಳನ್ನು ಲ್ಯಾಪ್‌ಟಾಪ್‌ನಲ್ಲಿ ತಡರಾತ್ರಿವರೆಗೂ ಮಾಡಿ ಕುತ್ತಿಗೆಯನ್ನು ಅತ್ತಿತ್ತ ಅಲ್ಲಾಡಿಸಲು ಸಾಧ್ಯವಾಗದಂತಹ  ನೋವು.

ಭುಜ, ಕುತ್ತಿಗೆ, ಬೆನ್ನು ಹಾಗೂ ಸೊಂಟ ನೋವು ಬರುವುದು ಮನೆಯಿಂದ ಕೆಲಸ (ವರ್ಕ್‌ ಫ್ರಂ ಹೋಂ) ಮಾಡುವವರಿಗೆ ಮಾತ್ರ ಎನ್ನುವುದು ಹಲವರ ನಂಬಿಕೆ. ಆದರೆ, ಕೊರೊನಾ ಕಾಲ ವಿದ್ಯಾರ್ಥಿಗಳು,  ಗೃಹಿಣಿಯರಿಗೂ ಈ ನೋವನ್ನು ತಂದುಕೊಟ್ಟಿದೆ.

‘ಮನೆಯಿಂದ ಕೆಲಸ ಮಾಡುವವರಲ್ಲಿ ಶಿಸ್ತು ಮಾಯವಾಗಿದೆ. ಏಕೆಂದರೆ, ಅಲ್ಲಿ ತಾವಷ್ಟೇ ಇರುವುದರಿಂದ ಹಾಸಿಗೆ ಮೇಲೆ ಮಲಗಿ, ಕಟ್ಟೆ ಮೇಲೆ ಕುಳಿತು, ಗೋಡೆ ಒರಗಿ ಕೆಲಸ ಮಾಡುತ್ತಾರೆ. ಕೆಲವರು ಎತ್ತರದ ಟೇಬಲ್‌, ಅದಕ್ಕೆ ಹೊಂದಿಕೆಯಾಗದ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಇವೆಲ್ಲದರ ಮೊತ್ತವೇ ಕುತ್ತಿಗೆ, ಭುಜ, ಬೆನ್ನು ಹಾಗೂ ಸೊಂಟನೋವು‘ ಎಂದು ಮೈಸೂರಿನ ಫಿಸಿಯೋಥೆರಪಿಸ್ಟ್‌ ರಾಘವೇಂದ್ರ ಹೇಳುತ್ತಾರೆ.

ಸರಿಯಾದ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದು ಬಹಳ ಮುಖ್ಯ. ಆದರೆ, ಬಹುತೇಕರು ಭಂಗಿ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಹೇಗೆ ಕುಳಿತರೂ ನಡೆಯುತ್ತಿದೆ ಎನ್ನುವ ಉಡಾಫೆ ಮನೋಭಾವ. ಹೆಚ್ಚು ಹೊತ್ತು ಕುಳಿತೇ ಕೆಲಸ ಮಾಡುವುದು, ಆಗಾಗ ಎದ್ದು ಓಡಾಡದಿರುವುದೂ ಇದೆ. ಇಷ್ಟೇ ಅಲ್ಲದೇ ಮಾನಸಿಕ ಒತ್ತಡವೂ ಕೂಡ ಇಂತಹ ನೋವುಗಳಿಗೆ ಮೂಲವಾಗುತ್ತದೆ. ಅದರಲ್ಲೂ ಮನೆ ಮತ್ತು ಕಚೇರಿ ಎರಡೂ ಕಡೆ ಕೆಲಸ ಮಾಡುವ ಮಹಿಳೆಯರಿಗೆ ಇದು ಹೆಚ್ಚು ಕಾಡುತ್ತದೆ. ಇಂತಹ ಸಮಸ್ಯೆಗಳಿಗೆ ಆರಂಭದಲ್ಲೇ ಚಿಕಿತ್ಸೆ ಪಡೆದು ಸರಿಪಡಿಸಿಕೊಳ್ಳಬೇಕು. ಇಲ್ಲದೇ ಹೋದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.

ಹೀಗೆ ಮಾಡಿ
*ಕೆಲಸದ ನಡುವೆ ಪ್ರತಿ 45 ನಿಮಿಷಕ್ಕೊಮ್ಮೆ 5 ನಿಮಿಷ ಬ್ರೇಕ್‌ ತೆಗೆದುಕೊಳ್ಳಿ.

*ಆಗಾಗ ನೀರು ಕುಡಿಯುತ್ತಿರಿ.

*ದೇಹಕ್ಕೆ ಅಗತ್ಯವಾದ ವ್ಯಾಯಮ ಮಾಡಿ.

*ಯೋಗಾಭ್ಯಾಸ ಇಲ್ಲವೇ ಈಜುವುದನ್ನು ಮಾಡಿ.

*ಕುಳಿತುಕೊಳ್ಳುವ ಭಂಗಿಯನ್ನು ಪದೇಪದೇ ಪರಿಶೀಲಿಸಿ.

*ಒಳಾಂಗಣ ಅಥವಾ ಹೊರಾಂಗಣ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ.

*ಕೆಲಸಕ್ಕೆಂದೇ ಸರಿಯಾದ ಕುರ್ಚಿ, ಟೇಬಲ್‌ ಹೊಂದಿಸಿಕೊಳ್ಳಿ.

*ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ 30 ನಿಮಿಷಗಳಿಗೊಮ್ಮೆ ನಿಂತಿದ್ದರೆ ಕುಳಿತುಕೊಳ್ಳಬೇಕು. ಕುಳಿತಿದ್ದರೆ ನಿಂತುಕೊಳ್ಳಬೇಕು.

*ಹೆಚ್ಚು ಹೊತ್ತು ಆನ್‌ಲೈನ್‌ ಕ್ಲಾಸ್‌ನಲ್ಲಿ ಇರುವ ವಿದ್ಯಾರ್ಥಿಗಳೂ ಸಹ ಆಗಾಗ ಎದ್ದು ಓಡಾಡಬೇಕು. ಮೈ ಮುರಿಯಬೇಕು.

 *ನೋವು ತೀವ್ರವಾಗಿದ್ದರೆ ಸ್ವಯಂ ವೈದ್ಯರಾಗದೇ, ಕೂಡಲೇ ವೈದ್ಯರು ಇಲ್ಲವೇ ಫಿಸಿಯೋಥೆರಪಿಸ್ಟ್‌ ಬಳಿಗೆ ಹೋಗಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು