ಎಳೆಯ ಮಕ್ಕಳ ಆರೋಗ್ಯ ವೃದ್ಧಿ ಆಗಲು, ಯಾವ ಸಮಯದಲ್ಲಿ ಅಭ್ಯಂಗ (ಉಗುರುಬೆಚ್ಚನೆಯ ಎಣ್ಣೆಯನ್ನು ಮಗುವಿಗೆ ಹಚ್ಚಿ ಮಸಾಜ್ ಮಾಡುವ ಪ್ರಕ್ರಿಯೆ) ಮಾಡಬೇಕು. ಶಿಶುಗಳ ಅಭ್ಯಂಗದ ಕುರಿತು ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಶಿಶು ಜನನವು ಸಂತಸದ ಕ್ಷಣವಾದರೂ, ಶಿಶುವಿನ ದೇಹಕ್ಕೆ ಅದು ದೊಡ್ಡ ಬದಲಾವಣೆಯ ಆರಂಭವಾಗಿರುತ್ತದೆ. ಶಿಶು ಜನನವಾದ ನಂತರ ಅದರ ದೇಹವು ತಕ್ಷಣವೇ ಸಂಪೂರ್ಣವಾಗಿ ಪರಿಪಕ್ವವಾಗಿರುವುದಿಲ್ಲ. ದೇಹದ ತಾಪಮಾನ ನಿಯಂತ್ರಣ, ಜೀರ್ಣಶಕ್ತಿ, ನರವ್ಯವಸ್ಥೆ, ಚರ್ಮದ ರಕ್ಷಣಾ ಪದರ – ಇವೆಲ್ಲವೂ ಜನನದ ನಂತರ ನಿಧಾನವಾಗಿ ಹೊರಗಿನ ಪರಿಸರಕ್ಕೆ ಹೊಂದಿಕೊಳ್ಳುವ ಹಂತದಲ್ಲಿರುತ್ತವೆ. ಗರ್ಭಾವಸ್ಥೆಯಲ್ಲಿ ಶಿಶು ತಾಯಿ ದೇಹದ ಒಳಗೆ ಸುರಕ್ಷಿತ, ತೇವಯುಕ್ತ ಮತ್ತು ನಿಯಂತ್ರಿತ ವಾತಾವರಣದಲ್ಲಿ ಬೆಳೆಯುತ್ತದೆ. ಆದರೆ ಜನನದ ಬಳಿಕ ನವಜಾತ ಶಿಶು (newborn) ಗಾಳಿ, ಬೆಳಕು, ಶಬ್ದ, ಸ್ಪರ್ಶ ಮತ್ತು ತಾಪಮಾನ ಬದಲಾವಣೆಗಳಂತಹ ಹೊಸ ಅನುಭವಗಳಿಗೆ ಒಳಗಾಗಬೇಕಾಗುತ್ತದೆ. ಈ ಏಕಾಏಕಿ ಬದಲಾವಣೆಗಳು ಶಿಶುವಿನ ದೇಹದ ಮೇಲೆ ಒತ್ತಡವನ್ನುಂಟುಮಾಡುವ ಸಾಧ್ಯತೆ ಇರುತ್ತದೆ.

ಹೆರಿಗೆ (Normal delivery) ಸಮಯದಲ್ಲಿ ಶಿಶುವಿನ ತಲೆ ಎಲುಬುಗಳು ಜನನ ಮಾರ್ಗಕ್ಕೆ ಹೊಂದಿಕೊಳ್ಳುವ ಸಲುವಾಗಿ ಸ್ವಲ್ಪ ಒತ್ತಡಕ್ಕೆ ಒಳಗಾಗುತ್ತವೆ. ಈ ಪ್ರಕ್ರಿಯೆಯನ್ನು ಹೆಡ್ ಮೌಲ್ಡಿಂಗ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಹೆರಿಗೆ ಹೆಚ್ಚು ಸಮಯ ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಶಿಶುವಿನ ತಲೆ, ಎದೆ ಮತ್ತು ದೇಹದ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ಇಂತಹ ದೀರ್ಘಕಾಲದ ಹೆರಿಗೆ ಸಂದರ್ಭದಲ್ಲಿ ಕೆಲ ಶಿಶುಗಳಲ್ಲಿ ತಲೆಯ ಚರ್ಮದ ಮೇಲ್ಭಾಗದಲ್ಲಿ ಮೃದುವಾದ ಊತ ಕಾಣಿಸಿಕೊಳ್ಳುತ್ತದೆ. ಇದನ್ನು ವೈದ್ಯಕೀಯವಾಗಿ ಕ್ಯಾಪುಟ್ ಸಕ್ಸಿಡೇನಿಯಂ (Caput succedaneum) ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಅಪಾಯಕಾರಿಯಲ್ಲ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಕೆಲವು ದಿನಗಳಲ್ಲಿ ಸ್ವಯಂವಾಗಿ ಕಡಿಮೆಯಾಗುತ್ತದೆ.

ಹೆರಿಗೆ ವೇಳೆ ಉಂಟಾಗುವ ಈ ರೀತಿಯ ದೈಹಿಕ ಒತ್ತಡದಿಂದ ಶಿಶುವಿನಲ್ಲಿ ವಾತ ದೋಷದ ಅಸಮತೋಲನ ಸಂಭವಿಸಬಹುದು. ಇದರ ಪರಿಣಾಮವಾಗಿ ಶಿಶುಗಳಲ್ಲಿ ಅಶಾಂತಿ, ಹೆಚ್ಚಾಗಿ ಅಳುವುದು, ಸರಿಯಾಗಿ ನಿದ್ರೆ ಮಾಡದಿರುವುದು.

ಈ ವಾತ ಅಸಮತೋಲನವನ್ನು ಶಮನಗೊಳಿಸಿ ಶಿಶುವಿನ ದೇಹಕ್ಕೆ ಸಮರ್ಪಕ ಆರೈಕೆಯನ್ನು ಒದಗಿಸುವ ಉದ್ದೇಶದಿಂದ ಆಯುರ್ವೇದದಲ್ಲಿ ತೈಲ ಪರಿಚರ್ಯೆಗಳನ್ನು ಶಿಫಾರಸು ಮಾಡಲಾಗಿದೆ. ಇದರಲ್ಲಿ ತೈಲ ಅಭ್ಯಂಗ, ತೈಲ ಪಾರಿಷೇಕ ಮತ್ತು ಶಿರೋಪಿಚು ಮೊದಲಾದ ಕ್ರಮಗಳು ಪ್ರಮುಖವಾಗಿವೆ. ಈ ಎಲ್ಲ ಕ್ರಮಗಳಲ್ಲಿಯೂ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ವಿಧಾನವೆಂದರೆ ಅಭ್ಯಂಗ. (ಉಗುರುಬೆಚ್ಚನೆಯ ಎಣ್ಣೆಯನ್ನು ಮಗುವಿಗೆ ಹಚ್ಚಿ ಮಸಾಜ್ ಮಾಡುವುದು.)

ಎಣ್ಣೆ ಹಚ್ಚುವ ಈ ಕ್ರಮವನ್ನು ಪೋಷಕರು ಮನೆಯಲ್ಲೇ ಸುರಕ್ಷಿತವಾಗಿ ಅನುಸರಿಸಬಹುದಾದ ಸುಲಭವಾದ ಶಿಶು ಆರೈಕೆ ವಿಧಾನವಾಗಿದೆ. ಇದು ಭಾರತೀಯ ಸಂಪ್ರದಾಯದಲ್ಲಿ ಆಳವಾಗಿ ನೆಲೆಯೂರಿರುವುದರ ಜೊತೆಗೆ, ಭಾರತೀಯ ವೈದ್ಯಕೀಯ ಪದ್ಧತಿಗಳಲ್ಲಿಯೂ ವ್ಯಾಪಕವಾಗಿ ಶಿಫಾರಸು ಮಾಡಲ್ಪಟ್ಟಿದೆ.

ಮಗುವಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಆಗುವ ಲಾಭಗಳು

ನಿಯಮಿತ ಅಭ್ಯಂಗವು ಶಿಶುವಿನ ರಕ್ತಸಂಚಾರವನ್ನು ಸುಧಾರಿಸುತ್ತದೆ.

ನರ ವ್ಯವಸ್ಥೆಯನ್ನು ಸುಧಾರಿಸಿ ಮಕ್ಕಳ ಆರೋಗ್ಯವನ್ನು ಕಾಪಾಡುತ್ತದೆ.

ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ದೇಹಬಲವನ್ನು ದೀರ್ಘಕಾಲದವರೆಗೆ ವೃದ್ಧಿಸುತ್ತದೆ.

ಶಿಶು ಅಭ್ಯಂಗವನ್ನು ಯಾವ ಸಂದರ್ಭಗಳಲ್ಲಿ ಮಾಡಬಾರದು

ಶಿಶು ಅಭ್ಯಂಗವು ಬಹುತೇಕ ಸಂದರ್ಭಗಳಲ್ಲಿ ಸುರಕ್ಷಿತ ಹಾಗೂ ಲಾಭದಾಯಕವಾದರೂ, ಕೆಲವು ವಿಶೇಷ ಸ್ಥಿತಿಗಳಲ್ಲಿ ಅದನ್ನು ತಾತ್ಕಾಲಿಕವಾಗಿ ತಪ್ಪಿಸುವುದು ಅಥವಾ ಮುಂದೂಡುವುದು ಒಳ್ಳೆಯದು.

ಶಿಶುವಿನ ದೇಹ ತುಂಬಾ ಸೂಕ್ಷ್ಮವಾಗಿರುವುದರಿಂದ ಅದರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಾಗ ಅಭ್ಯಂಗ ಮಾಡಬಾರದು.

ಮಗುವಿಗೆ ಜ್ವರ ಇದ್ದಾಗ ಅದರ ದೇಹದ ತಾಪಮಾನ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ತೈಲ ಅಭ್ಯಂಗ ಮಾಡಿದರೆ ಉಷ್ಣತೆ ಇನ್ನಷ್ಟು ಹೆಚ್ಚಾಗಿ ಮಗು ಕಿರಿಕಿರಿ ಮಾಡುತ್ತದೆ.

ಮಗುವಿನ ದೇಹದ ಮೇಲೆ ಸಣ್ಣ ಸಣ್ಣ ಕೆಂಪಾಗಿರುವ ಭಾಗಗಳಿದ್ದರೆ, ಜನನದ ವೇಳೆ ಗಂಭೀರ ಗಾಯಗಳಾಗಿದ್ದರೆ, ಅಥವಾ ವೈದ್ಯರು ವಿಶ್ರಾಂತಿ ಸೂಚಿಸಿದ್ದರೆ, ಆ ಸಮಯದಲ್ಲಿ ತೈಲ ಹಚ್ಚುವುದರಿಂದ ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇದೆ.

ತುಂಬಾ ನಿದ್ರಾವಸ್ಥೆಯಲ್ಲಿರುವ, ಹಾಲು ಕುಡಿಯಲು ನಿರಾಕರಿಸುವ ಅಥವಾ ಸೋಂಕಿನ ಲಕ್ಷಣಗಳು (ಸೆಪ್ಸಿಸ್) ಕಾಣಿಸುವ ನವಜಾತ ಶಿಶುಗಳಲ್ಲಿ ಅಭ್ಯಂಗ ಮಾಡುವುದು ಸೂಕ್ತವಲ್ಲ.

ಜನ್ಮಜಾತ ಹೃದಯ ಸಮಸ್ಯೆ ಇರುವ ಶಿಶುಗಳಲ್ಲಿ ಅಥವಾ ಉಸಿರಾಟದ ತೊಂದರೆ ಇರುವ, ಆಮ್ಲಜನಕ (ಆಕ್ಸಿಜನ್) ಅಗತ್ಯವಿರುವ ಶಿಶುಗಳಲ್ಲಿ ದೇಹದ ಮೇಲೆ ಒತ್ತಡ ನೀಡುವುದು ಅಪಾಯಕಾರಿಯಾಗಬಹುದು.

ಲಸಿಕೆ ಹಾಕಿದ ದಿನ ಶಿಶುವಿಗೆ ನೋವು, ಸ್ವಲ್ಪ ಜ್ವರ ಅಥವಾ ಅಸಹನೀಯತೆ ಇರಬಹುದು. ಆದ್ದರಿಂದ ಆ ದಿನ ತೈಲ ಅಭ್ಯಂಗವನ್ನು ಮುಂದಿನ ದಿನಕ್ಕೆ ಮುಂದೂಡುವುದು ಒಳಿತು, ಇದರಿಂದ ಶಿಶುವಿಗೆ ಆರಾಮ ದೊರೆಯುತ್ತದೆ.

ಈ ಎಲ್ಲ ಸಂದರ್ಭಗಳಲ್ಲಿ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.

ಶಿಶುವಿನ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಮತ್ತು ವೈದ್ಯರ ಮಾರ್ಗದರ್ಶನದಲ್ಲಿ ಅಭ್ಯಂಗವನ್ನು ಪುನರಾರಂಭಿಸಿದರೆ ಮಾತ್ರ ಅದು ಶಿಶುವಿನ ಆರೋಗ್ಯವನ್ನು ವೃದ್ಧಿಸುತ್ತದೆ.

ಅಭ್ಯಂಗವನ್ನು ಮಾಡುವ ಸರಿಯಾದ ಸಮಯ ಯಾವುದು

ಶಿಶುವಿಗೆ ಹಾಲು ಕುಡಿಸಿದ ತಕ್ಷಣ ಅಭ್ಯಂಗ ಮಾಡಬಾರದು. ಕನಿಷ್ಠ ಒಂದು ಗಂಟೆಯ ಅಂತರ ಇರಬೇಕಾಗುತ್ತದೆ.

ಹಾಲು ಕುಡಿಸಿದ ತಕ್ಷಣ ಶಿಶುವಿನ ಜೀರ್ಣಕ್ರಿಯೆ ಆರಂಭವಾಗಿರುತ್ತದೆ. ಆ ಸಮಯದಲ್ಲಿ ಮಸಾಜ್ ಮಾಡಿದರೆ ಹೊಟ್ಟೆಯ ಮೇಲೆ ಒತ್ತಡ ಬೀಳುವ ಸಾಧ್ಯತೆ ಇದ್ದು, ಹಾಲು ಹೊರಬರುವುದು (ರೀಗರ್ಜಿಟೇಶನ್), ವಾಂತಿ ಅಥವಾ ಅಸ್ವಸ್ಥತೆ ಉಂಟಾಗಬಹುದು.

ಮುಂದಿನ ಬಾರಿ ಅಭ್ಯಂಗಕ್ಕೆ ಭಯ ಅಥವಾ ಅಸಹಕಾರ ತೋರಿಸಬಹುದು.

ಅದೇ ರೀತಿ, ಶಿಶು ಹಸಿವಾಗಿರುವ ಸಮಯದಲ್ಲಿ ಅಭ್ಯಂಗ ಮಾಡಿದರೆ ಶಿಶು ಅಳಲು ಆರಂಭಿಸಿ, ಮಸಾಜ್ಗೆ ಸಹಕರಿಸುವುದಿಲ್ಲ. ಹಸಿವು ತೀವ್ರವಾಗಿರುವಾಗ ಶಿಶುವಿನ ಗಮನ ಸಂಪೂರ್ಣವಾಗಿ ಹಾಲಿನ ಮೇಲಿರುತ್ತದೆ; ಇಂತಹ ಸಂದರ್ಭಗಳಲ್ಲಿ ಅಭ್ಯಂಗ ಮಾಡುವ ಪ್ರಯತ್ನವು ಶಿಶುವಿಗೆ ಅಸಮಾಧಾನ ಉಂಟುಮಾಡುತ್ತದೆ. ಆದ್ದರಿಂದ ಶಿಶು ಹಸಿವಾಗಿಯೂ ಅಲ್ಲ, ಹಾಲು ಕುಡಿಸಿದ ತಕ್ಷಣವೂ ಅಲ್ಲದ, ಆರಾಮವಾಗಿರುವ ಮತ್ತು ಸಂತೃಪ್ತ ಸ್ಥಿತಿಯಲ್ಲಿರುವ ಸಮಯವೇ ಅಭ್ಯಂಗಕ್ಕೆ ಅತ್ಯುತ್ತಮ.

ಶಿಶು ಅಭ್ಯಂಗಕ್ಕೆ ಏನು ಆಯ್ಕೆ ಮಾಡಬೇಕು?

ಮೊದಲ ಎರಡು ದಿನಗಳು – ನವನೀತದ(ಬೆಣ್ಣೆ) ಮಹತ್ವ

ಹುಟ್ಟಿದ ತಕ್ಷಣದ ಶಿಶುವಿನ ದೇಹ ಮತ್ತು ಚರ್ಮ ಅತ್ಯಂತ ಸೂಕ್ಷ್ಮ ಹಾಗೂ ನಾಜೂಕಾದ ಸ್ಥಿತಿಯಲ್ಲಿರುತ್ತವೆ. ಗರ್ಭಾವಸ್ಥೆಯಲ್ಲಿ ಶಿಶು ತೇವಯುಕ್ತ, ಸಮತೋಲನದ ಮತ್ತು ಸುರಕ್ಷಿತ ಗರ್ಭೋದಕದ ವಾತಾವರಣದಲ್ಲಿ (in-utero ambience) ಬೆಳೆಯುತ್ತದೆ. ಜನನದ ನಂತರ ಏಕಾಏಕಿ ಗಾಳಿ, ಬೆಳಕು, ಹೊರಗಿನ ತಾಪಮಾನ ಮತ್ತು ಸ್ಪರ್ಶಕ್ಕೆ ಒಳಗಾಗುವುದರಿಂದ ಶಿಶುವಿಗೆ ಅಸೌಕರ್ಯ ಹಾಗೂ ದೇಹ ತಣ್ಣಗಾಗುವ ಅಪಾಯ (ನಿಯೋನೇಟಲ್ ಹೈಪೊಥರ್ಮಿಯಾ) ಉಂಟಾಗಬಹುದು.

ಈ ಸಂದರ್ಭದಲ್ಲಿಯೇ ನಮ್ಮ ಪರಂಪರೆಯಲ್ಲಿ ಜನನದ ಮೊದಲ ಒಂದು–ಎರಡು ದಿನಗಳಲ್ಲಿ ತೈಲಗಳ ಬದಲು ಶುದ್ಧ ನವನೀತವನ್ನು ಮೃದುವಾಗಿ ಹಚ್ಚುವ ದೇಹ ಆರೈಕೆ ಪದ್ಧತಿ ರೂಢಿಯಲ್ಲಿದೆ. ನವನೀತವು ಸಹಜವಾಗಿ ಸ್ನಿಗ್ಧವಾದ, ತಂಪು ಗುಣ ಹೊಂದಿದ ಹಾಗೂ ಚರ್ಮಕ್ಕೆ ಮೃದುವಾಗಿ ಹೊಂದಿಕೊಳ್ಳುವ ಪದಾರ್ಥವಾಗಿದ್ದು, ಶಿಶುವಿನ ಚರ್ಮದ ಮೇಲೆ ತೆಳುವಾದ ರಕ್ಷಣಾ ಪದರವನ್ನು ರಚಿಸುತ್ತದೆ. ಇದು ದೇಹದ ಉಷ್ಣತೆಯನ್ನು ಕಾಪಾಡುವಲ್ಲಿ ಸಹಾಯಕವಾಗಿ ಕಾರ್ಯನಿರ್ವಹಿಸಿ, ತಾಪನಷ್ಟವನ್ನು ಕಡಿಮೆ ಮಾಡುತ್ತದೆ. ಈ ರೀತಿಯಾಗಿ ನವನೀತವು ಒಂದು ಸಹಜ ಉಷ್ಣರಕ್ಷಕ (ಥರ್ಮೋ ಇನ್ಸುಲೇಟಿಂಗ್) ಪದರದಂತೆ ಕೆಲಸ ಮಾಡುತ್ತದೆ.

ನವಜಾತ ಶಿಶುವಿನ ಚರ್ಮದ ಮೇಲೆ ಕಾಣುವ ವೆರ್ನಿಕ್ಸ್ ಕೇಸಿಯೋಸಾ ಎಂಬ ಸಹಜ ಕವಚವು ಹೇಗೆ ಚರ್ಮವನ್ನು ತೇವಯುಕ್ತವಾಗಿ ಕಾಯ್ದುಕೊಳ್ಳುತ್ತದೋ, ಅದೇ ರೀತಿಯಲ್ಲಿ ನವನೀತವೂ ಹೊರಗಿನ ವಾತಾವರಣದಿಂದ ಚರ್ಮವನ್ನು ರಕ್ಷಿಸುತ್ತದೆ. ಎರಡೂ ಪದಾರ್ಥಗಳಲ್ಲೂ ರಕ್ಷಣಾ, ತೇವಸಂರಕ್ಷಣೆ ಮತ್ತು ಉಷ್ಣ ಸಂರಕ್ಷಣೆ ಎಂಬ ಗುಣಗಳಲ್ಲಿ ಸಾಮ್ಯತೆ ಕಂಡುಬರುತ್ತದೆ.

ತೈಲಾಧಾರಿತ ಪದಾರ್ಥಗಳಲ್ಲಿ ಸ್ವಲ್ಪ ಬಿಸಿತನ ಅಥವಾ ತೀಕ್ಷ್ಣತೆ ಇರುವ ಸಾಧ್ಯತೆ ಇದ್ದು, ಶಿಶುವಿನ ಆರಂಭಿಕ ದಿನಗಳಲ್ಲಿ ಅವು ಅಸೌಕರ್ಯ ಉಂಟುಮಾಡಬಹುದು. ನವನೀತವು ಯಾವುದೇ ಸಂಸ್ಕರಣೆ ಇಲ್ಲದೆ ತಯಾರಾಗಿರುವುದರಿಂದ ಶಿಶುವಿನ ಚರ್ಮಕ್ಕೆ ಹೆಚ್ಚು ಹೊಂದಿಕೆಯಾಗುತ್ತದೆ. ನಂತರ ದಿನಗಳಲ್ಲಿ ಶಿಶುವಿನ ದೇಹ ಹೊರಗಿನ ವಾತಾವರಣಕ್ಕೆ ಹೊಂದಿಕೊಂಡ ಮೇಲೆ, ಎಣ್ಣೆ ಹಚ್ಚುವ ಕ್ರಮವನ್ನು ಅನುಸರಿಸುವುದು ಸೂಕ್ತವಾಗಿರುತ್ತದೆ.

ಹೀಗಾಗಿ, ಬೆಣ್ಣೆ ಬಳಕೆ ಎಂಬುದು ಕೇವಲ ಸಂಪ್ರದಾಯವಲ್ಲ,ಅದು ಶಿಶುವಿಗೆ ಗರ್ಭಾವಸ್ಥೆಯ ಅನುಭವಕ್ಕೆ ಹತ್ತಿರವಾದ, ಸುರಕ್ಷಿತ ಮತ್ತು ಶಾಂತಕರ ಆರೈಕೆಯನ್ನು ಒದಗಿಸುವ ಜಾಣ್ಮೆಯ ವಿಧಾನವಾಗಿದೆ.

ಸೂಚನೆ: ನವನೀತವು ತಾಜಾ ಮತ್ತು ಶುದ್ಧವಾಗಿರಬೇಕು. ಸುಗಂಧ ದ್ರವ್ಯಗಳು ಅಥವಾ ಉಪ್ಪು ಸೇರಿಸಬಾರದು. ಮೃದುವಾಗಿ, ಹೆಚ್ಚು ಒತ್ತಡವಿಲ್ಲದೆ ಹಚ್ಚಬೇಕು.

ನಂತರದ ದಿನಗಳಲ್ಲಿ ಯಾವ ತೈಲ?

ಮೊದಲ ಕೆಲವು ದಿನಗಳ ನಂತರ ಶಿಶುವಿನ ದೇಹ ಹೊರಗಿನ ವಾತಾವರಣಕ್ಕೆ ಹೊಂದಿಕೊಂಡಾಗ ತೈಲ ಅಭ್ಯಂಗ ಆರಂಭಿಸಬಹುದು. ಈ ಸಂದರ್ಭದಲ್ಲಿ ಆಯುರ್ವೇದದಲ್ಲಿ ವಿವರಿಸಿದ ಔಷಧೀಯ ತೈಲಗಳು ಬಹಳ ಉಪಯುಕ್ತವಾಗುತ್ತವೆ.

⦁ ಬಲಾ ತೈಲವು ಸ್ನಾಯುಗಳು ಮತ್ತು ಸಂಧಿಗಳಿಗೆ ಬಲ ನೀಡುತ್ತದೆ.

⦁ ಅಶ್ವಗಂಧಾ ತೈಲವು ದೇಹದ ಶಕ್ತಿ ಹೆಚ್ಚಿಸಿ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ.

⦁ ಚಂದನ ಬಲಾ ತೈಲವು ತಂಪು ಗುಣ ಹೊಂದಿದ್ದು, ಚರ್ಮದ ಕೆಂಪುತನ, ಉರಿ ಮತ್ತು ಬೇಸಿಗೆಯ ಅಸೌಕರ್ಯವನ್ನು ಕಡಿಮೆ ಮಾಡುತ್ತದೆ.

ತೈಲದ ಆಯ್ಕೆ ಋತುಮಾನ, ಶಿಶುವಿನ ವಯಸ್ಸು ಮತ್ತು ದೇಹದ ಸ್ಥಿತಿಯನ್ನು ಗಮನಿಸಿ ವೈದ್ಯರ ಸಲಹೆಯೊಂದಿಗೆ ಮಾಡುವುದು ಉತ್ತಮ.

ಮಸಾಜ್ ಮಾಡುವ ಕ್ರಮ

ಅಭ್ಯಂಗಕ್ಕೆ ಬಳಸುವ ತೈಲವು ಅತ್ಯಂತ ಶುದ್ಧವಾಗಿದ್ದು, ಶಿಶುವಿನ ನಾಜೂಕಾದ ಚರ್ಮಕ್ಕೆ ಸೂಕ್ತವಾಗಿರಬೇಕು. ತೈಲವನ್ನು ತುಸು ಬಿಸಿ (lukewarm) ಮಾಡಿಕೊಳ್ಳುವುದು ಅಗತ್ಯ, ಅಂದರೆ ಶಿಶುವಿನ ದೇಹದ ತಾಪಮಾನಕ್ಕೆ ಹೊಂದಿಕೊಳ್ಳುವಷ್ಟು ಮಾತ್ರ. ತೈಲವನ್ನು ಅತಿಯಾಗಿ ಬಿಸಿಮಾಡಬಾರದು, ಏಕೆಂದರೆ ಅದು ಚರ್ಮಕ್ಕೆ ಹಾನಿ ಉಂಟುಮಾಡಬಹುದು. ಶಿಶುವಿಗೆ ಹಚ್ಚುವ ಮೊದಲು ತೈಲವನ್ನು ಕೈ ಮೇಲೆ ಹಾಕಿ ಪರೀಕ್ಷಿಸಿ, ಉತ್ತಮವಾಗಿದೆಯೇ ಎಂದು ಖಚಿತಪಡಿಸಿಕೊಂಡ ನಂತರ ಮಾತ್ರ ಬಳಸಬೇಕು. ಈ ಸಣ್ಣ ಜಾಗ್ರತೆಗಳು ಅಭ್ಯಂಗವನ್ನು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿಸುತ್ತವೆ.

ಅಭ್ಯಂಗ ಮಾಡುವ ಸ್ಥಳಕ್ಕೂ ಬಹಳ ಮಹತ್ವವಿದೆ. ಗಾಳಿಯ ಹೊಡೆತ ಇಲ್ಲದ, ಉಷ್ಣತೆ ಸಮತೋಲನದಲ್ಲಿರುವ, ಶಾಂತ ಹಾಗೂ ಸ್ವಚ್ಛವಾದ ಜಾಗವನ್ನು ಆಯ್ಕೆಮಾಡಬೇಕು. ಗಾಳಿ ಹೆಚ್ಚು ಬೀಸುವ ಜಾಗದಲ್ಲಿ ಅಭ್ಯಂಗ ಮಾಡಿದರೆ ಶಿಶುವಿಗೆ ಶೀತ ಹಿಡಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆಯ ಒಳಗಡೆ, ಬಾಗಿಲು–ಕಿಟಕಿಗಳನ್ನು ಮುಚ್ಚಿ, ಆರಾಮದಾಯಕ ವಾತಾವರಣದಲ್ಲಿ ಅಭ್ಯಂಗ ಮಾಡುವುದು ಉತ್ತಮ.

ಅಭ್ಯಂಗವನ್ನು ಆರಂಭಿಸುವಾಗ ಕ್ರಮವನ್ನು ಪಾಲಿಸುವುದು ಆಯುರ್ವೇದದ ದೃಷ್ಟಿಯಿಂದ ಸಹ ಮುಖ್ಯ. ಸಾಮಾನ್ಯವಾಗಿ ತಲೆ (ಶಿರ), ಕಿವಿಯ ಸುತ್ತಲಿನ ಭಾಗ (ಶ್ರವಣ) ಮತ್ತು ಪಾದಗಳಿಂದ ಅಭ್ಯಂಗ ಆರಂಭಿಸಿ, ನಂತರ ನಿಧಾನವಾಗಿ ದೇಹದ ಇತರ ಭಾಗಗಳಿಗೆ ಮುಂದುವರಿಸಬೇಕು. ಈ ಕ್ರಮವು ಶಿಶುವಿಗೆ ಆರಾಮವನ್ನು ನೀಡುವುದರ ಜೊತೆಗೆ ದೇಹದ ಸಂಚಾರವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಮಸಾಜ್ ಮಾಡುವಾಗ ಕೈ ಮತ್ತು ಕಾಲುಗಳಲ್ಲಿ ಮೇಲಿನಿಂದ ಕೆಳಕ್ಕೆ ಮೃದುವಾಗಿ ತೈಲ ಹಚ್ಚಬೇಕು. ಸಂಧಿಗಳಾದ ಮೂಳೆ, ಮೊಣಕಾಲು, ಮೊಣಕೈಗಳ ಮೇಲೆ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡುವುದು ಉತ್ತಮ. ಹೊಟ್ಟೆಯ ಮೇಲೆ ಮಾತ್ರ ಗಡಿಯಾರದ ದಿಕ್ಕಿನಲ್ಲಿ (clockwise) ಮೃದುವಾಗಿ ಮಸಾಜ್ ಮಾಡಬೇಕು, ಇದು ಜೀರ್ಣಕ್ರಿಯೆಗೆ ಸಹಕಾರಿ. ಪ್ರತಿಯೊಂದು ಚಲನೆಯನ್ನು ಸುಮಾರು ಏಳು ಬಾರಿ ಪುನರಾವರ್ತಿಸಬಹುದು. ಇಡೀ ಅಭ್ಯಂಗದ ಸಮಯದಲ್ಲಿ ಒತ್ತಡ ನೀಡದೇ, ಪ್ರೀತಿಯಿಂದ ಮತ್ತು ಮೃದು ಸ್ಪರ್ಶದೊಂದಿಗೆ ಮಾಡುವುದೇ ಮುಖ್ಯ.

ಮುಖದ ಗಲ್ಲಗಳು ಮತ್ತು ಕುತ್ತಿಗೆಯ ಮಡಚು ಭಾಗಗಳನ್ನು ಬಹುತೇಕ ಪೋಷಕರು ಗಮನಿಸದೇ ಬಿಡುತ್ತಾರೆ. ಆದರೆ ಈ ಭಾಗಗಳಲ್ಲಿ ಕೂಡ ಅಲ್ಪ ಪ್ರಮಾಣದ ತೈಲ ಬಳಸಿ ಮೃದುವಾಗಿ ಅಭ್ಯಂಗ ಮಾಡಬೇಕು. ಇದರಿಂದ ಚರ್ಮದ ಮಡಚುಗಳಲ್ಲಿ ಕೊಳೆ, ಬೆವರು ಅಥವಾ ಸೋಂಕು ಜಮೆಯಾಗುವುದನ್ನು ತಡೆಯಬಹುದು.

ಅಭ್ಯಂಗದ ಅವಧಿ ಸಾಮಾನ್ಯವಾಗಿ 10 ರಿಂದ 15 ನಿಮಿಷಗಳೊಳಗೆ ಇರಬೇಕು. ತುಂಬಾ ಸಮಯ ತೆಗೆದುಕೊಳ್ಳಬಾರದು. ಅಭ್ಯಂಗದ ನಂತರ ಶಿಶುವಿಗೆ ಲಘು ಪ್ಯಾಸಿವ್ ವ್ಯಾಯಾಮಗಳನ್ನು (passive colic exercises) ಮಾಡಿಸಬಹುದು, ಇದರಿಂದ ಬೇಬಿ ಕೊಲಿಕ್ ತೊಂದರೆ ಕಡಿಮೆಯಾಗಲು ಸಹಾಯವಾಗುತ್ತದೆ. ನಂತರ ಗಾಳಿ ಇಲ್ಲದ ಜಾಗದಲ್ಲಿ, ಮೃದುವಾದ ಸೂರ್ಯಕಿರಣಗಳಿಗೆ ಸ್ವಲ್ಪ ಸಮಯ ಶಿಶುವನ್ನು ಒಡ್ಡಬಹುದು ಅಥವಾ ದಪ್ಪವಾದ ಟವಲ್ನಿಂದ ಶಿಶುವನ್ನು ಮುಚ್ಚಿ ಸುಮಾರು 15–20 ನಿಮಿಷ ಆರಾಮವಾಗಿ ಇಡಬಹುದು. ಇದರ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಶಿಶುವಿಗೆ ಸ್ನಾನ ಮಾಡಿಸಿದರೆ, ಅಭ್ಯಂಗದ ಲಾಭಗಳು ಇನ್ನಷ್ಟು ಉತ್ತಮವಾಗಿ ದೊರೆಯುತ್ತವೆ.

ಎಷ್ಟು ಕಾಲ ಅಭ್ಯಂಗ ಮಾಡಬೇಕು?

ಅಭ್ಯಂಗವನ್ನು ಕೇವಲ ನವಜಾತ ಅವಸ್ಥೆಗೆ ಮಾತ್ರ ಸೀಮಿತಗೊಳಿಸಬಾರದು. ದಿನನಿತ್ಯದ ಅಭ್ಯಂಗವನ್ನು ಸಾಧ್ಯವಾದರೆ ಐದು ವರ್ಷ ವಯಸ್ಸಿನವರೆಗೆ ಮುಂದುವರಿಸುವುದು ಉತ್ತಮ. ಈ ಅವಧಿಯಲ್ಲಿ ಮಾಡಿದ ಅಭ್ಯಂಗವು ದೇಹಬಲ, ನಿದ್ರೆ, ಜೀರ್ಣಶಕ್ತಿ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯಕವಾಗುತ್ತದೆ ಎನ್ನುತ್ತಾರೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು.

ಲೇಖಕರು (ಡಾ. ಪೂರ್ಣಿಮಾ ಎನ್., ಸಹ ಪ್ರಾಧ್ಯಾಪಕಿ, ಕೌಮಾರಭೃತ್ಯ ವಿಭಾಗ, ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹೆಗ್ಗೇರಿ ಬಡಾವಣೆ ಹುಬ್ಬಳ್ಳಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.