ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಹಿ ಕಹಿ ಹಾಗಲಕಾಯಿ ಆರೋಗ್ಯಕ್ಕೆ ಸವಿ ಮಿಠಾಯಿ

Last Updated 11 ಜುಲೈ 2018, 13:37 IST
ಅಕ್ಷರ ಗಾತ್ರ

ಹಾಗಲಕಾಯಿ ಎಂದಾಕ್ಷಣ ಹೆಚ್ಚಿನವರ ಮುಖ ಕಿವುಚಿಕೊಳ್ಳುತ್ತದೆ. ಅದು ಕಹಿ ಅನ್ನೋದೆ ಈ ಬೇಸರಕ್ಕೆ ಕಾರಣ.ಆದರೂ ಹಾಗಲಕಾಯಿ ಗೊಜ್ಜು ಎಂದಾಕ್ಷಣ ತಿನ್ನೋಣವೆನಿಸುತ್ತದೆ.

ಆರೋಗ್ಯಕ್ಕೆ ಹಾಗಲಕಾಯಿ ಒಳ್ಳೆಯದು ಅಂತ. ಅದು ಹಾಗಲಕಾಯಿ ಮಹಿಮೆ. ಸೌತೇಕಾಯಿಯಂತಹ ಕ್ಯುಕರ್ಬಿಟೇಸಿಯೆ ಜಾತಿಗೆ ಸೇರಿದ ಹಾಗಲಕಾಯಿಯನ್ನು ಮುಖ್ಯವಾಗಿ ಏಷ್ಯಾ ಆಫ್ರಿಕಾ ಮತ್ತು ಕೆರೇಬಿಯನ್ ದ್ವೀಪ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ .ಉಷ್ಣ ಮತ್ತು ಉಪೋಷ್ಣ ವಲಯದ ಬೆಳೆಯಾದ ಹಾಗಲಕಾಯಿ ಬಳ್ಳಿ ಬೆಳೆಯಲ್ಲಿ ಹಲವು ಪ್ರಬೇಧಗಳಿದ್ದು ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ಬೆಳೆಯುತ್ತದೆ.

ಹಾಗಲಕಾಯಿಯನ್ನು ತರಕಾರಿಯಾಗಿ ಹೆಚ್ಚು ಉಪಯೋಗಿಸಲಾಗುತ್ತದೆ. ಅದರ ಎಳೆಯ ಚಿಗುರು ಬಳ್ಳಿ ಮತ್ತು ಎಲೆಗಳನ್ನು ಕೂಡ ಸೊಪ್ಪಿನ ಪದಾರ್ಥವಾಗಿ ಉಪಯೋಗಿಸುತ್ತಾರೆ. ಹಾಗಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶರ್ಕರಪಿಷ್ಠ ಪ್ರೋಟಿನ್, ವಿಟಮಿನ್ ಎ ಮತ್ತು ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಕೆರೋಟಿನ್, ಗ್ಲೂಕೋಸೈಡ್ ಇತ್ಯಾದಿ ಅಂಶಗಳು ಹೇರಳವಾಗಿದ್ದು ಇದನ್ನು ಸೇವಿಸುವವರ ಆರೋಗ್ಯ ಚೆನ್ನಾಗಿರುತ್ತದೆ ಎನ್ನುವುದು ಸತ್ಯ.
ಆಯುರ್ವೇದದಲ್ಲೂ ಇದರ ಬಳಕೆ ಕುರಿತು ಹೇಳಲಾಗಿದ್ದು ಇದು ಹಲವು ರೀತಿಯ ರೋಗಶಮನಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಇದರ ಸೇವನೆ ಉತ್ತಮ ಪರಿಣಾಮ ನೀಡುತ್ತದೆ. ಹಾಗಲಕಾಯಿ ದೇಹದಲ್ಲಿನ ಮೇದೋಜೀರಕ ಗ್ರಂಥಿಯನ್ನು ಉತ್ತೇಜಿಸಿ ಇನ್ಸುಲಿನ್ ಉತ್ಪಾದನೆಗೆ ಪ್ರಚೋದಿಸುತ್ತದೆ. ಮಧುಮೇಹ ರೋಗಿಗಳು ಹಾಗಲಕಾಯಿಯನ್ನು ನೆರಳಿನಲ್ಲಿ ಒಣಗಿಸಿ ಕುಟ್ಟಿ ಪುಡಿ ಮಾಡಿಟ್ಟುಕೊಂಡು ನಿಯಮಿತವಾಗಿ ಪ್ರತಿದಿನ ಸೇವಿಸುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು.

ಹಾಗಲಕಾಯಿಯನ್ನು ನಿಂಬೆರಸದೊಂದಗೆ ಮಿಶ್ರಣ ಮಾಡಿ ಸೇವಿಸಿದರೆ ನಮ್ಮ ರಕ್ತ ಶುದ್ಧಿಯಾಗುವುದಲ್ಲದೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಯಕೃತ್ತನ್ನು ಶುದ್ಧಗೊಳಿಸಿ ಜೀವಕೋಶಗಳ ಪುನರುತ್ಪಾದನೆಯಲ್ಲಿ ಹಾಗಲಕಾಯಿ ಸಹಾಯ ಮಾಡುತ್ತದೆ.ಕಿಡ್ನಿಯನ್ನು ಶುದ್ಧಗೊಳಿಸುವಲ್ಲಿ ಮತ್ತು ಮೂತ್ರಕೋಶದಲ್ಲಿ ಸಂಗ್ರಹವಾಗುವ ಸಣ್ಣಪುಟ್ಟ ಕಲ್ಲುಗಳನ್ನು ನಿವಾರಿಸುವಲ್ಲಿ ಹಾಗಲಕಾಯಿ ಔಷಧಿಯಾಗಿ ಕೆಲಸ ಮಾಡುತ್ತದೆ.

ಹಾಗಲಕಾಯಿಯ ರಸ ಸೇವನೆ ನಮ್ಮಲ್ಲಿ ಜೀರ್ಣ ಕ್ರಿಯೆಯನ್ನು ಉತ್ತಮ ಪಡಿಸಿ ಹುಳಿತೇಗು, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯ ಹುಣ್ಣು ಮೊದಲಾದ ತೊಂದರೆಗಳಿಂದ ಕಾಪಾಡುತ್ತದೆ. ಹೇರಳವಾಗಿ ನಾರಿನಂಶ ಹೊಂದಿರುವ ಹಾಗಲಕಾಯಿಯ ಬೀಜದಲ್ಲಿ ವಿರೇಚಕ ತೈಲ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಾಗಲಕಾಯಿ ಪಲ್ಯ ಸೇವಿಸುವವರಲ್ಲಿ ಮಲಬದ್ಧತೆ ಸಮಸ್ಯೆ ಕಡಿಮೆ ಇರುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು ಬೊಜ್ಜನ್ನು ಕಡಿಮೆ ಮಾಡುವಲ್ಲಿಯೂ ಸಹಕಾರಿ. ಚರ್ಮದ ತುರಿಕೆ ಹುಳುಕಡ್ಡಿ ಇತ್ಯಾದಿಗಳ ತಡೆಗೂ ಇದು ಉಪಯುಕ್ತ.

ಇದನ್ನು ನಿಯಮಿತವಾಗಿ ಬಳಸುವುದರಿಂದ ತೀವ್ರ ಉಸಿರಾಟದ ತೊಂದರೆಗಳಾದ ಅಸ್ತಮ ಮತ್ತು ಶ್ವಾಸನಾಳಗಳ ಒಳಪೊರೆಯ ಊರಿಯೂತಗಳನ್ನು ನಿಯಂತ್ರಣದಲ್ಲಿಡಬಹುದು. ಹೊಟ್ಟೆ ಹುಳುವಿನ ಸಮಸ್ಯೆಗೆ ಹಾಗಲಕಾಯಿ ರಸವನ್ನು ಮೂರ್ನಾಲ್ಕು ದಿನಗಳ ಕಾಲ ಸೇವಿಸಿ ಪರಿಹಾರ ಕಂಡುಕೊಳ್ಳಬಹುದು.

ತಲೆ ಕೂದಲಿನ ಹೊಳಪಿಗಾಗಿ ಹಾಗಲ ಕಾಯಿ ರಸದ ಜೊತೆ ಮೊಸರನ್ನು ಸೇರಿಸಿ ಬಳಸಬಹುದು. ಹಾಗಲಕಾಯಿ ರಸದ ಬಳಕೆಯಿಂದ ಕೂದಲು ಸೀಳುವಿಕೆಯ ಸಮಸ್ಯೆ ಕೂಡ ನಿಯಂತ್ರಣದಲ್ಲಿಡಬಹುದು. ಬಾಲನೆರೆ ತಪ್ಪಿಸಲು ಮತ್ತು ಕೂದಲು ಕಪ್ಪಾಗಿಡಲು ಕೂಡ ಇದು ಸಹಕಾರಿ. ಜೀರಿಗೆಯ ಜೊತೆ ಹಾಗಲಕಾಯಿ ತುಂಡುಗಳನ್ನು ಸೇರಿಸಿ ರುಬ್ಬಿ ವಾರಕ್ಕೆ ಎರಡು ಸಲ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಹಾಗಲಕಾಯಿಯ ಜ್ಯೂಸ್ ಮಾಡಿಕೊಂಡು ಅದರಿಂದ ವಾರಕ್ಕೆ ಮೂರ್ನಾಲ್ಕುಬಾರಿ ಮುಖ ತೊಳೆದು ಬಳಿಕ ತಣ್ಣೀರಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ. ತ್ವಚೆಯ ಸೌಂದರ್ಯ ವರ್ಧನೆಗೂ ಮೊಡವೆಗಳ ನಿವಾರಣೆಗೂ ಹಾಗಲಕಾಯಿ ರಸವನ್ನು ಬಳಸಲಾಗುತ್ತದೆ.ಇದರಲ್ಲಿನ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಅಂಶಗಳು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತವೆ.
ಹಾಗಲಕಾಯಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಆ್ಯಂಟಿ ಆಕ್ಸಿಡೆಂಟ್‍ಗಳಿದ್ದು ಕ್ಯಾನ್ಸರ್‍ಕಾರಕ ಜೀವಕೋಶಗಳು ದೇಹದಲ್ಲಿ ಬೆಳವಣಿಗೆ ಹೊಂದದಂತೆ ತಡೆಯುವಲ್ಲಿ ಸಹಕರಿಸುತ್ತವೆ. ಇದು ರಕ್ತನಾಳಗಳಲ್ಲಿ ತಡೆಯನ್ನುಂಡು ಮಡುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಿ ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ.

ತಪ್ಪದೇ ನೆನಪಿಡಿ. ಹಾಗಲ ಕಾಯಿ ಆರೋಗ್ಯಕ್ಕೆ ಉತ್ತಮ ಎಂದು ದಿನಂಪ್ರತಿ ಸೇವನೆ ಮಾಡುವುದು ನರಗಳ ದುರ್ಬಲತೆಗೂ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಹೆಚ್ಚಿನ ಹಾಗಲಕಾಯಿ ಬಳಕೆಯಿಂದ ಅತಿಸಾರ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಹಾಗಲಕಾಯಿಯನ್ನು ದೀರ್ಘಕಾಲದವರೆಗೆ ನಿರಂತರವಾಗಿ ಬಳಸುವುದು ಒಳ್ಳೆಯದಲ್ಲ. ತರಕಾರಿ ರೂಪದಲ್ಲಿ ವಾರಕ್ಕೆ ಒಂದೆರಡು ಬಾರಿ ಮಾತ್ರ ಸೇವನೆ ಮಾಡುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT