ಅಂಧ ಮಕ್ಕಳ ಯೋಗಾಯೋಗ !

ಬುಧವಾರ, ಜೂಲೈ 17, 2019
29 °C

ಅಂಧ ಮಕ್ಕಳ ಯೋಗಾಯೋಗ !

Published:
Updated:
Deccan Herald

ಹದಿಮೂರು ವರ್ಷದ ಬಾಲಕ ಮಣಿಕಂಠ ಸರಸರನೇ ಮಲ್ಲಕಂಬದ ತುದಿಗೇರಿ ಕೂರುವ ತವಕದಲ್ಲಿದ್ದ. ಪ್ರೇಕ್ಷಕರಲ್ಲಿದ್ದ ಹಿರಿಯರೊಬ್ಬರು ‘ಏ ತಮ್ಮಾ, ನಿಧಾನಕ್ಕೆ ಹತ್ತೋ. ಎಲ್ಲೆರ ಬಿದ್ದಿ’ ಎಂದು ಎಚ್ಚರಿಕೆ ಮಾತು ಹೇಳುತ್ತಿದ್ದರು. ಅದನ್ನು ಕೇಳಿಸಿಕೊಂಡ ಮಣಿಕಂಠ ಕಣ್ಣಿನ ಗುಡ್ಡೆಗಳನ್ನು ಮೇಲೆ ಕೆಳಗೆ ತಿರುಗಿಸಿ, ‘ಏ ಹೆದರಬ್ಯಾಡ್ರೀ, ದೇವರ ನಮ್ಮ ಕಣ್ಣ ಅಷ್ಟ ಅಲ್ಲ, ಹೆದ್ರಕಿ ಅನೂ ಕಸ್ಕೊಂಡಾನ. ಹಿಂಗಾಗಿ, ನಮಗ ಬೀಳ್ತೀವಿ ಅನ್ನೂ ಭಯಾ ಇಲ್ಲ್ರೀ. ಒಂದು ವೇಳೆ ಬಿದ್ರೂ, ಮ್ಯಾಲ ಏಳೂ ಶಕ್ತಿನೂ ಆಂವ ಕೊಟ್ಟಾನ’ ಎಂದು ಹೇಳಿ ತನ್ನ ಸಹಪಾಠಿಗಳೊಂದಿಗೆ ಕಸರತ್ತು ಆರಂಭಿಸಿದ.

ಮಣಿಕಂಠ ಮಾತ್ರವಲ್ಲ, ಅವನ ಹಾಗೆಯೇ ಕಣ್ಣಿಲ್ಲದ ಸರಸ್ವತಿ ಕಬಾಡರ, ಭೀಮಶಿ ಕಬಾಡರ, ವಿದ್ಯಾ ತಡಸಗೇರಿ, ಹನುಮಂತ ಬಾರ್ಕೇರ, ಜ್ಯೋತಿ ಬಾಗೇವಾಡಿ, ಹನುಮಂತ ಮಾದರ, ಅಯ್ಯಪ್ಪ ಅಂತಕನವರ, ಪೂರ್ಣಾನಂದ ಬನ್ನಿದಿನ್ನಿ, ಸಜನಿ ಬಡಿಗೇರ, ಕೃಷ್ಣ ಬನ್ನಿದಿನ್ನಿ, ನವೀನ ಬಾರ್ಕೇರ, ನಿರುಪಾದಿಗೌಡ ಪೊಲೀಸ್‌ಪಾಟೀಲ, ನೇಹಾ ಬರಗುಂಡಿ, ಗಂಗಮ್ಮ ವಾಲಿಕಾರ, ರೋಹಿತ ಚೆನ್ನಳ್ಳಿ, ಆನಂದ ಪಟಾತ, ಸಾವಿತ್ರಿ ಕಟಗಿ, ಮಲ್ಲಿಕಾರ್ಜುನ ಗಟ್ಟಿ, ಅಕ್ಷತಾ ಸಂಗಟಿ ಅವರಂಥ ಹಲವು ವಿದ್ಯಾರ್ಥಿಗಳು ಅವನಷ್ಟೇ ಸಮರ್ಥವಾಗಿ ಮಲ್ಲಕಂಬ ಏರಿ, ಕಸರತ್ತು ಮಾಡಿ, ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದರು.

ಒಬ್ಬ ಕಂಬ ಏರಿ ತುದಿಯಲ್ಲಿ ಕುಳಿತು ಏಕ ಪದ್ಮಾಸನ ಹಾಕಿ, ಹಿಂದಕ್ಕೆ ವಾಲಿದರೆ, ಮತ್ತೊಬ್ಬ ಅದೇ ಕಂಬದ ತುದಿಯಲ್ಲಿ ನಿಂತು ಸೆಲ್ಯೂಟ್ ಹೊಡೆದ. ಇನ್ನೊಬ್ಬ ಕಂಬಕ್ಕೆ ದೊಗ್ಗಾಲು ಹಾಕಿ ಜೋತಾಡಿದರೆ, ಮಗದೊಬ್ಬ ಬಾವಲಿಯಂತೆ ನೇತಾಡುತ್ತಿದ್ದ. ಕಂಬದ ಮೇಲೆ ಕಸರತ್ತು ಮಾಡುತ್ತಿದ್ದ ಹುಡುಗರು, ಅಲ್ಲಿಯೇ ಯೋಗಾಸನದ ಬಹುತೇಕ ಭಂಗಿಗಳನ್ನು ಹಾಕಿಬಿಟ್ಟರು. ‘ಅಪ್ಪಿತಪ್ಪಿ, ಸ್ವಲ್ಪ ಕೈ ತಪ್ಪಿದರೆ, ಮೂಳೆ ಪುಡಿ ಪುಡಿಯಾಗುತ್ತವೆ’ ಎಂದುಕೊಳ್ಳುತ್ತಿದ್ದ ಪ್ರೇಕ್ಷಕರು, ಇವರ ಕಸರತ್ತು ನೋಡುತ್ತಾ ಕುಕ್ಕರಗಾಲಲ್ಲಿ ಕುಳಿತುಬಿಟ್ಟರು.

ಇವರೆಲ್ಲ ಗದಗ ಜಿಲ್ಲೆ ರೋಣ ತಾಲ್ಲೂಕು ಹೊಳೆಆಲೂರಿನ ‘ಜ್ಞಾನಸಿಂಧು ಅಂಧಮಕ್ಕಳ ಶಾಲೆ’ಯ ವಿದ್ಯಾರ್ಥಿಗಳು. ಹುಟ್ಟಿದಾಗಿನಿಂದ ಜಗತ್ತನ್ನೇ ನೋಡಿಲ್ಲದ ಈ ಮಲ್ಲ–ಮಲ್ಲಿಯರು ಅದೇ ಜಗತ್ತೇ ಬೆರಗಾಗುವಂಥ ‘ಕಸರತ್ತು’ ಮಾಡುತ್ತಾರೆ. ಯೋಗ ಪ್ರದರ್ಶಿಸುತ್ತಾರೆ. ಇವರು ಮಲ್ಲಕಂಬ ಏರುವಾಗ ಅನುಸರಿಸುವ ಸಮಯದ ಸಂಯೋಜನೆ, ಪರಸ್ಪರ ಹೊಂದಾಣಿಕೆ ನೋಡಿದಾಗ, ಬಹುಶಃ ಕಣ್ಣಿದ್ದವರೂ ಇಷ್ಟು ನಿಖರವಾಗಿ ಮಾಡಲು ಸಾಧ್ಯವಿಲ್ಲವೇನೋ ಎನ್ನಿಸುತ್ತದೆ. ಆಗ ಮಣಿಕಂಠ ಹೇಳಿದ ‘ದೇವರು ಭಯವನ್ನು ಕಿತ್ತುಕೊಂಡಿದ್ದಾನೆ’ ಎಂಬ ಮಾತು ನಿಜವೆನಿಸುತ್ತದೆ.

ಎಂಟು ವರ್ಷಗಳ ಹಿಂದೆ...

ಕನ್ನಡದ ಕುಲಪುರೋಹಿತರೆಂದೇ ಗುರುತಿಸುವ ಆಲೂರು ವೆಂಕಟರಾಯರ ಕ್ಷೇತ್ರದಲ್ಲಿನ ಈ ಶಾಲೆ ದೇಶದ ಪ್ರಥಮ ಅಂಧ ಮಕ್ಕಳ ಯೋಗ ಶಾಲೆ ಎಂಬ ಹೆಗ್ಗಳಿಕೆ ಪಡೆದಿದೆ. ಸ್ಥಳೀಯ ಯಚ್ಚರೇಶ್ವರ ಮಠದ ಸ್ವಾಮೀಜಿ ಪ್ರೇರಣೆ ಹಾಗೂ ಬೆಂಗಳೂರಿನ ‘ನೆಸ್ಟ್’ ಸಂಸ್ಥೆಯ ನೆರವಿನಿಂದ ಕೆಲೂರ ಕುಟುಂಬದವರು ಜುಲೈ 2010ರಲ್ಲಿ ಈ ಶಾಲೆ ಆರಂಭಿಸಿದರು. ಶಾಲೆ ಕಟ್ಟುವಲ್ಲಿ ಈ ಕುಟುಂಬದ ಯೋಗಪಟು ಶಿವಾನಂದ ಕೆಲೂರ, ಅವರ ತಾಯಿ ತುಳಸಮ್ಮ ಹಾಗೂ ಅವರ ಸಹೋದರರ ಶ್ರಮ, ತ್ಯಾಗ ಅನನ್ಯ.

ಶಾಲೆ ಆರಂಭಿಸಿದಾಗ 5 ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಈಗ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, 10 ಬೋಧಕರು ಇದ್ದಾರೆ. ಇದರಲ್ಲಿ 8 ಜನ ಬೋಧಕರು ಅಂಧರು. ಎಲ್ಲ ಅಂಧ ಮಕ್ಕಳ ಶಾಲೆಯಲ್ಲಿರುವಂತೆಯೇ ಇಲ್ಲೂ ಮಕ್ಕಳಿಗೆ ಬ್ರೈಲ್ ಲಿಪಿ ಆಧಾರಿತ ಓದು–ಬರಹ, ಕಂಪ್ಯೂಟರ್ ತರಬೇತಿ, ಚಲನವಲನ ತರಬೇತಿ, ಕರಕುಶಲ, ಕ್ರೀಡೆ, ಕೃಷಿ ತರಬೇತಿ, ಸಂಗೀತ ಶಿಕ್ಷಣದ ಜೊತೆಗೆ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಸ್ಪರ್ಶಾನುಭವದ ಮೂಲಕ ಯೋಗ ಹಾಗೂ ಮಲ್ಲಕಂಬ ತರಬೇತಿ ಕೊಡುತ್ತಿದ್ದಾರೆ.

ಬಹುತೇಕ ಸಂದರ್ಭಗಳಲ್ಲಿ ಕುಟುಂಬದವರಿಂದಲೇ ತಿರಸ್ಕೃತರಾಗುವ ಅಂಧ ಮಕ್ಕಳನ್ನು ಕೆಲೂರ ಕುಟುಂಬದವರು ತಮ್ಮ ಮಕ್ಕಳೆಂದೇ ಭಾವಿಸಿ, ಬದ್ಧತೆಯಿಂದ ಅವರ ಸೇವೆ ಮಾಡುತ್ತಿದ್ದಾರೆ. ಮಕ್ಕಳಿಗೆ ಸ್ನಾನ, ಶೌಚಾದಿ ಸೇವೆಗಳನ್ನೂ ನಿಸ್ವಾರ್ಥದಿಂದ ಮಾಡುತ್ತಿರುವ ಶಿವಾನಂದ ಅವರ ತಾಯಿ ತುಳಸಮ್ಮ ಅವರ ಹೃದಯ ಶ್ರೀಮಂತಿಕೆ ದೊಡ್ಡದು.

ಯೋಗ ಕಲಿಸುವ ಸಾಹಸ:

ಪೂರ್ಣ ಅಂಧತ್ವವಿರುವ ಮಕ್ಕಳಿಗೆ ಯೋಗ ಕಲಿಸಲು ಶಿವಾನಂದ ತುಂಬಾ ಶ್ರಮಪಡುತ್ತಾರೆ. ಧ್ವನಿ ಮೂಲಕವೇ ವಿವಿಧ ಆಸನದ ಭಂಗಿಗಳನ್ನು ವಿವರಿಸುತ್ತಾರೆ. ಮಯೂರಾಸನದಂಥ ಕಠಿಣ ಆಸನದಲ್ಲಿ ಗಂಟೆಗಟ್ಟಲೇ ನಿಲ್ಲುವ ಅವರು, ಪ್ರತಿ ವಿದ್ಯಾರ್ಥಿಯೂ ಸ್ಪರ್ಶದ ಮೂಲಕವೇ ಈ ಆಸನದ ಭಂಗಿಯನ್ನು ಮನದಟ್ಟು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಾರೆ. ಒಂದೇ ಭಂಗಿಯಲ್ಲಿ ದೀರ್ಘ ಕಾಲ ನಿಲ್ಲುವ ತಮ್ಮ ತಾಳ್ಮೆ ಮತ್ತು ಕಷ್ಟ ಸಹಿಷ್ಣುತೆ ಗುಣಗಳನ್ನು ತಮ್ಮ ವಿದ್ಯಾರ್ಥಿಗಳಿಗೂ ಕಲಿಸುತ್ತಾರೆ.

ಈ ಮಕ್ಕಳು ನಡೆಸಿಕೊಡುವ ಯೋಗಾಸನ, ಮಲ್ಲಕಂಬದಂತಹ ಕಸರತ್ತಿನ ಪ್ರದರ್ಶನಕ್ಕೆ ಮನಸೋಲದವರಿಲ್ಲ. ಮಕ್ಕಳ ಕಸರತ್ತು ನೋಡಿ ಖ್ಯಾತ ಯೋಗ ಗುರು ಬಿ.ಕೆ.ಎಸ್.ಅಯ್ಯಂಗಾರ್ ಅವರು, ‘ಶಹಬ್ಬಾಸ್’ ಎಂದು ಬೆನ್ನುತಟ್ಟಿದ್ದಾರೆ. ‘ನಾನು ವಿಶ್ವದ ವಿವಿಧೆಡೆ ಲಕ್ಷಾಂತರ ಜನರಿಗೆ ಯೋಗ ತರಬೇತಿ ನೀಡಿದ್ದೇನೆ. ಆದರೆ, ಒಬ್ಬ ಅಂಧನಿಗೂ ಯೋಗ ಕಲಿಸಿಲ್ಲ. ಆದರೆ, ಶಿವಾನಂದ ಕೆಲೂರ ಹಾಗೂ ಅವರ ಕುಟುಂಬದವರು ತಮ್ಮ ಯೋಗ ಶಾಲೆಯಲ್ಲಿ ಆ ಸಾಧನೆ ಮಾಡಿದ್ದಾರೆ. ಈ ಅಂಧ ಮಕ್ಕಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡುವುದು ಒಂದು ರೋಮಾಂಚಕ ಸನ್ನಿವೇಶವೇ ಸರಿ’ ಎಂದು ಪ್ರಶಂಸಿಸಿ ಮೆಚ್ಚುಗೆ ಪತ್ರ ನೀಡಿದ್ದಾರೆ.

ಇಂಥ ತಂಡ ರಾಜ್ಯ, ದೇಶದ ವಿವಿಧೆಡೆ ಯೋಗ, ಮಲ್ಲಕಂಬ ಪ್ರದರ್ಶನಗಳನ್ನು ನೀಡಿದೆ. ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ಬಂದಿದೆ.ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿರುವ ಈ ತಂಡ ಶೀಘ್ರವೇ ಅಮೆರಿಕದಲ್ಲಿ ಯೋಗ ಪ್ರದರ್ಶನ ನೀಡಲು ಸಜ್ಜಾಗುತ್ತಿದೆ. 'ಪ್ರಯಾಣಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಪಾಸ್‌ಪೋರ್ಟ್‌, ವೀಸಾ ತಯಾರಿ ನಡೆದಿದೆ' ಎನ್ನುತ್ತಾರೆ ‘ನೆಸ್ಟ್’ ಸಂಸ್ಥೆಯ ಪದಾಧಿಕಾರಿ ರವೀಂದ್ರ ಭಟ್ಟ.

ಸಾಲು ಸಾಲು ಪ್ರದರ್ಶನಗಳು:

2010, 2011 ಮತ್ತು 2012ರಲ್ಲಿ ನಿರಂತರವಾಗಿ ಮೂರು ಬಾರಿ ಮೈಸೂರು ದಸರಾದಲ್ಲಿ, 2014 ಮತ್ತು 2015ರಲ್ಲಿ ಚಾಲುಕ್ಯ ಉತ್ಸವದಲ್ಲಿ, 2012ರಲ್ಲಿ ರನ್ನ ಉತ್ಸವದಲ್ಲಿ, 2016ರಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, 2015ರಲ್ಲಿ ಮತ್ತು 2017ರಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಲೆಯ ವಿದ್ಯಾರ್ಥಿಗಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದ್ದಾರೆ.

ದೆಹಲಿಯಲ್ಲಿ ವಿಶ್ವ ಯೋಗ ದಿನ, ಯೋಗ ಸಪ್ತಾಹ ಮತ್ತು ಅಂತರರಾಷ್ಟ್ರೀಯ ಯೋಗ ಹಬ್ಬದಲ್ಲಿ ಈ ಶಾಲೆ ಮಕ್ಕಳು ಪ್ರದರ್ಶನ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಹೊರ ನಾಡು ಕನ್ನಡಿಗರ ಸಮ್ಮೇಳನ, ಯೋಗ ಒಲಿಂಪಿಯಾಡ್, 2017ರಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾಗೂ ಉದಯ ವಾಹಿನಿಯ ‘ಲಿಟಲ್ ಚಾಂಪ್ಸ್‌’ ವೇದಿಕೆಯಲ್ಲಿ ಶಾಲೆಯ ಮಕ್ಕಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡಿದ್ದು ವಿಶೇಷ ಸಾಧನೆಯಾಗಿದೆ.

ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಉತ್ಕೃಷ್ಟ ಸಾಧನೆ

2012ರಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶಾಲೆಯ ಮಕ್ಕಳು ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದ್ದು ಉತ್ಕೃಷ್ಟ ಸಾಧನೆ. ಏಕೆಂದರೆ, ಈ ಸ್ಪರ್ಧೆಯಲ್ಲಿ 40 ದೇಶಗಳಿಂದ ಬಂದಿದ್ದ ಸಾಮಾನ್ಯ (ಕಣ್ಣು ಕಾಣುವ) ಸ್ಪರ್ಧಾಳುಗಳುಗಳ ಎದುರು ಜ್ಞಾನಸಿಂಧು ಶಾಲೆಯ 8 ಅಂಧ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದರು.

ಬೇಕಿದೆ ನೆರವಿನ ಹಸ್ತ:

ಇಷ್ಟೆಲ್ಲ ಸಾಧನೆ ಮಾಡಿರುವ ಈ ಸಂಸ್ಥೆಗೆ ಆರ್ಥಿಕ ಕೊರತೆ ಕಾಡುತ್ತಿದೆ. ಶಾಲೆ ಆರಂಭವಾಗಿ ಎಂಟು ವರ್ಷಗಳು ಕಳೆದರೂ ಇನ್ನೂ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಸ್ವಂತ ಕಟ್ಟಡದ ನಿರ್ಮಾಣಕ್ಕಾಗಿ ಹಾಗೂ ಪ್ರೌಢಶಾಲೆ ವಿಭಾಗ ಆರಂಭಕ್ಕಾಗಿ ಆರ್ಥಿಕ ನೆರವಿನ ಅಗತ್ಯವಿದೆ.

ಈ ಅಂಧಮಕ್ಕಳ ಯೋಗ ಶಾಲೆಯಲ್ಲಿ ಪ್ರವೇಶ ಪಡೆಯುವವರು ಮತ್ತು ಅಂಧ ಮಕ್ಕಳ ಯೋಗ ಹಾಗೂ ಮಲ್ಲಕಂಬ ಪ್ರದರ್ಶನ ಏರ್ಪಡಿಸುವವರು, ಶಾಲೆಗೆ ಆರ್ಥಿಕ ನೆರವು ನೀಡಲು ಆಸಕ್ತಿ ಹೊಂದಿರುವವರು ಮೊ. 99455 55574 ಅಥವಾ 98453 72887 ಸಂಪರ್ಕಿಸಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಕೆಲೂರ ಕೋರಿದ್ದಾರೆ.

ಸಾಧನೆಯ ಹಾದಿ, ಪ್ರಶಸ್ತಿಗಳ ಗರಿ

* ಶಾಲೆಯ ವಿದ್ಯಾರ್ಥಿಗಳ ಯೋಗ ಸಾಧನೆ ಮೆಚ್ಚಿ 2010ರಲ್ಲಿ ವಿದ್ಯಾರ್ಥಿಗಳಾದ ಸರಸ್ವತಿ ಕಬಾಡರ್, ಭೀಮಸಿ ಕಬಾಡರ್, ಅಯ್ಯಪ್ಪ ಅಂತಕನವರ ಅವರಿಗೆ ‘ಯೋಗ ಸಿರಿ’ ಪ್ರಶಸ್ತಿ ಲಭಿಸಿದೆ.

2011ರಲ್ಲಿ ಶಿರಡಿ ಸಾಯಿಬಾಬಾ ಟ್ರಸ್ಟ್ ರಾಷ್ಟ್ರೀಯ ಪ್ರಶಸ್ತಿ, ‘ಬಾಗಲಕೋಟೆ ಹಬ್ಬ’ ಉತ್ಸವ ಸಮಿತಿಯಿಂದ ‘ಕಲಾ ಭೂಷಣ’ ಪ್ರಶಸ್ತಿ ಹಾಗೂ ಬಸವರಾಜ ಹೊರಟ್ಟಿ ಅವರ ‘ಅವ್ವ ಟ್ರಸ್ಟ್’ ಪ್ರಶಸ್ತಿಗಳು ಸಂದಿವೆ.

2016ರಲ್ಲಿ ಶಾಲೆಯ ಸಂಚಾಲಕಿ ತುಳಸಮ್ಮ ಕೆಲೂರ ಅವರಿಗೆ ರಾಜ್ಯ ಸರ್ಕಾರ ‘ಕನ್ನಡ ರಾಜ್ಯೋತ್ಸವ’ ಪ್ರಶಸ್ತಿ ನಿಡಿ ಗೌರವಿಸಿದೆ.

16ರಲ್ಲಿ ಕಲಬುರ್ಗಿಯ ದಿಗ್ಗಾಂವಿ ಸ್ಮರಣಾರ್ಥ ಟ್ರಸ್ಟ್‌ನ ರೂ 5 ಲಕ್ಷ ಮೊತ್ತದ ರಾಷ್ಟ್ರೀಯ ‘ಕಾಯಕ ಸಿರಿ’ ಪ್ರಶಸ್ತಿಯನ್ನು ‘ಜ್ಞಾನಸಿಂಧು’ ಶಾಲೆಗೆ ನೀಡಿದ್ದಾರೆ. ₹ 50 ಸಾವಿರ ಮೊತ್ತದ ‘ಕಾಯಕ ಯೋಗಿ’ ಪ್ರಶಸ್ತಿಯನ್ನು ಶಾಲೆಯ ಸಂಚಾಲಕಿ ತುಳಸಮ್ಮ ಅವರಿಗೆ ಲಭಿಸಿದೆ.

ವಿದ್ಯಾರ್ಥಿ ಮಣಿಕಂಠನಿಗೆ 2017ರ ಮಕ್ಕಳ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಸ್ಥಾನ ನೀಡಿ, ‘ಚಿಣ್ಣರ ಚಿನ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

2017ರ ಜುಲೈನಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿಯೂ ಮಣಿಕಂಠನಿಗೆ ಒಲಿದಿದೆ.

ದೆಹಲಿಯಲ್ಲಿರುವ ‘ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ’ 2018ರಲ್ಲಿ ಈ ಶಾಲೆಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.

ಸಾಧನೆಯ ಹಾದಿ, ಪ್ರಶಸ್ತಿಗಳ ಗರಿ

2010ರಲ್ಲಿ ವಿದ್ಯಾರ್ಥಿಗಳಾದ ಸರಸ್ವತಿ ಕಬಾಡರ, ಭೀಮಸಿ ಕಬಾಡರ, ಅಯ್ಯಪ್ಪ ಅಂತಕನವರ ಅವರಿಗೆ ‘ಯೋಗ ಸಿರಿ’ ಪ್ರಶಸ್ತಿ ಲಭಿಸಿದೆ. 2011ರಲ್ಲಿ ಶಿರಡಿ ಸಾಯಿಬಾಬಾ ಟ್ರಸ್ಟ್ ರಾಷ್ಟ್ರೀಯ ಪ್ರಶಸ್ತಿ, ‘ಬಾಗಲಕೋಟೆ ಹಬ್ಬ’ ಉತ್ಸವ ಸಮಿತಿಯಿಂದ ‘ಕಲಾ ಭೂಷಣ’ ಪ್ರಶಸ್ತಿ , ಬಸವರಾಜ ಹೊರಟ್ಟಿ ಅವರ ‘ಅವ್ವ ಟ್ರಸ್ಟ್’ ಪ್ರಶಸ್ತಿಗಳು ಸಂದಿವೆ.

2016ರಲ್ಲಿ ಶಾಲೆಯ ಸಂಚಾಲಕಿ ತುಳಸಮ್ಮ ಕೆಲೂರ ಅವರಿಗೆ ರಾಜ್ಯ ಸರ್ಕಾರ ‘ಕನ್ನಡ ರಾಜ್ಯೋತ್ಸವ’, ‘ಕಾಯಕ ಯೋಗಿ’ ಪ್ರಶಸ್ತಿಗಳು ಲಭಿಸಿದೆ.

ಕಲಬುರ್ಗಿಯ ದಿಗ್ಗಾಂವಿ ಸ್ಮರಣಾರ್ಥ ಟ್ರಸ್ಟ್‌ನ ರಾಷ್ಟ್ರೀಯ ‘ಕಾಯಕ ಸಿರಿ’ ಪ್ರಶಸ್ತಿಯನ್ನು ‘ಜ್ಞಾನಸಿಂಧು’ ಶಾಲೆಗೆ ನೀಡಿದ್ದಾರೆ.

ವಿದ್ಯಾರ್ಥಿ ಮಣಿಕಂಠನಿಗೆ 2017ರ ಮಕ್ಕಳ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಸ್ಥಾನ ನೀಡಿ, ‘ಚಿಣ್ಣರ ಚಿನ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2017ರಲ್ಲಿ ಮಣಿಕಂಠನಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, 2018ರಲ್ಲಿ ಶಾಲೆಗೆ ದೆಹಲಿಯ ‘ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ’ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.

ಭಾಳ ಸಲ ಬಿದ್ದ, ಎದ್ದೇವ್ರೀ ಮಲ್ಲಕಂಬ ಮಾಡುವಾಗ ಗಾಳ್ಯಾಗ ತೇಲಿದಾಂಗ ಆಕ್ಕೇತಿ. ಕಂಬ ಹತ್ತೂವಾಗ, ಹಗ್ಗಾ ಏರೂವಾಗ ಭಾಳ ಸಲ ಬಿದ್ದ, ಎದ್ದೇವ್ರೀ. ಒಬ್ಬರ ಕೈ ಹಿಡದ ಒಬ್ರು, ಒಬ್ಬರ ಮ್ಯಾಲ ಹತ್ತಿ ಒಬ್ರು ಕಸರತ್ತ ಮಾಡಕಾ ಕಲಿತೇವ್ರಿ.

-ವಿದ್ಯಾ ತಡಸಗೇರಿ, ವಿದ್ಯಾರ್ಥಿ ಕಿತ್ತಲಿ, ಬಾದಾಮಿ ತಾ.

ಶಿವಾನಂದ ಸರ್ ಯೋಗಾಸನ ಮಾಡುವಾಗ ಅವರ ಮೈ, ಕೈ, ಕಾಲ ಮುಟ್ಟಿ ಅವರ ಹ್ಯಾಂಗ್ ನಿಂತಾರ... ಹ್ಯಾಂಗ ಕುಂತಾರ ಅಂತ ತಿಳಕೊಂಡ ಮನಸಿನ್ಯಾಗ ಒಂದ ಕಲ್ಪನಾ ಮಾಡಕೋತೇವ್ರಿ. ಕಣ್ಣ ಇಲ್ಲದಿದ್ದ್ರೂ ಕಲ್ಪನಾ ಮಾಡಕೊಳ್ಳು ಶಕ್ತಿ ನಮ್ಗ ಕೊಟ್ಟದ್ದ ಕೂಡ ಯೋಗಾಸನರಿ ಸರ್...

-ಮಣಿಕಂಠ ತುಡಬಿನ,  ವಿದ್ಯಾರ್ಥಿ ಹನುಮಸಾಗರ, ಬಾದಾಮಿ ತಾ.

 

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇವನ್ನೂ ಓದಿ....

ವಿಶ್ವ ಯೋಗ ದಿನ | ಆರೋಗ್ಯಯುತ ವಿಶ್ವಕ್ಕೆ ಯೋಗ

ಯೋಗ ಶುರು ಮಾಡೋಣ...

ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ ವ್ಯತ್ಯಾಸ!

ಸೂರ್ಯ ನಮಸ್ಕಾರ ಕಲಿಯೋಣ ಬನ್ನಿ...

ಚೈತನ್ಯ ತುಂಬುವ ಪ್ರಾಣಾಯಾಮ

ಸಮಚಿತ್ತದ ಬೇರು ‘ಧ್ಯಾನ’

‘ಯೋಗ’ ಅರಿತರೆ 100 ವರ್ಷ

ಯೋಗಮಯವಾದ ಮೈಸೂರು ಅರಮನೆ

ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ ವ್ಯತ್ಯಾಸ!​

ಯೋಗಕ್ಕೂ ಮುನ್ನ ಮಾಡಿ ವಾರ್ಮ್‌ ಅಪ್​

ಸೂರ್ಯ ನಮಸ್ಕಾರ ಏಕೆ?​

ಸೂರ್ಯ ನಮಸ್ಕಾರದ ಲಾಭಗಳು

ಸೂರ್ಯ ನಮಸ್ಕಾರ ಕಲಿಯೋಣ ಬನ್ನಿ...​1

* ಸೂರ್ಯ ನಮಸ್ಕಾರ ಅಭ್ಯಾಸ ಕ್ರಮ 2

ಮಕ್ಕಳ ಗೂನುಬೆನ್ನು ನಿವಾರಣೆಗೆ ಆಸನಗಳು

ಬೆನ್ನೆಲುಬು, ಕಿಬ್ಬೊಟ್ಟೆಯ ಆರೋಗ್ಯಕ್ಕೆ ಮಂಡಲಾಸನ

ಹೃದಯಕ್ಕೆ ಮೃದು ಅಂಗಮರ್ಧನ ನೀಡುವ ಕಪೋತಾಸನ

ಮಂಡಿ, ಕೀಲು ನೋವು ನಿವಾರಣೆಗೆ ಘೇರಂಡಾಸನ

ದುರ್ಗಂಧ ಶ್ವಾಸ ತಡೆಗೆ ಆಸನಗಳು

ಹೊಟ್ಟೆಯಲ್ಲಿನ ದುರ್ಮಾಂಸ ನಿವಾರಣೆಗೆ ಆಸನಗಳು

ಭುಜ - ಕಾಲುಗಳ ಬಲಕ್ಕೆ ವೀರ ಭದ್ರಾಸನ

ಜನನೇಂದ್ರಿಯ ಆರೋಗ್ಯ ಸುಸ್ಥಿತಿಗೆ ಸಮಕೋನಾಸನ

ಜ್ಞಾಪಕ ಶಕ್ತಿ ಹೆಚ್ಚಿಸುವ ಆಸನಗಳು

ಬೇಸಿಗೆಯಲ್ಲಿ ದೈಹಿಕ ಬಳಲಿಕೆ ನಿವಾರಣೆ ಹೇಗೆ?

ಕುದುರೆ ಸವಾರಿಗೆ ಸಹಕಾರಿ ಉತ್ಕಟಾಸನ

ಮನೋಬಲ ವೃದ್ಧಿಸುವ ಊರ್ಧ್ವ ಧನುರಾಸನ

ಮಹಿಳೆಯರೇ, ಯೋಗಾಭ್ಯಾಸಕ್ಕೆ ಮುನ್ನ ಈ ಮುನ್ನೆಚ್ಚರಿಕೆ ಗಮನಿಸಿಕೊಳ್ಳಿ

ಜೀರ್ಣಶಕ್ತಿ ವೃದ್ಧಿಗೆ ಶಲಭಾಸನ

ತಾರುಣ್ಯ ವೃದ್ಧಿಗೆ ಧನುರಾಸನ ಹಂತಗಳು

ಹೊಟ್ಟೆನೋವು ನಿವಾರಕ ಧನುರಾಸನ

ಥೈರಾಯ್ಡ್‌, ಉಸಿರಾಟ ಸಮಸ್ಯೆ ನಿವಾರಕ ಮತ್ಸ್ಯಾಸನ

ಚಳಿ ತಡೆವ ಯೋಗನಿದ್ರಾಸನ

ಸಕ್ಕರೆ ಕಾಯಿಲೆಗೆ ರಾಮಬಾಣ ಮಯೂರಾಸನ

ಸರ್ವಾಂಗಾಸನದ ವಿವಿಧ ಹಂತಗಳ ಪರಿಚಯ

ಸರ್ವ ರೋಗಗಳಿಗೂ ಮದ್ದು ಸರ್ವಾಂಗಾಸನ

ದೈಹಿಕ ಸದೃಢತೆ ನೀಡುವ ಸರ್ವಾಂಗಾಸನ ಹಂತಗಳು

ಸರ್ವಾಂಗಾಸನದ ಹಂತಗಳು

ಅಂಧ ಮಕ್ಕಳ ಯೋಗಾಯೋಗ !

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !