ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಎದುರಿಸಲು ಆರು ಕಾರ್ಯತಂತ್ರ: ಈ ಹೊಸ ಪುಸ್ತಕದಲ್ಲಿದೆ ವಿವರಣೆ

Last Updated 17 ಜೂನ್ 2021, 13:07 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ಎಂಬ ಸಾಂಕ್ರಾಮಿಕ ಕಾಯಿಲೆಯು ಜಗತ್ತನ್ನು ದುರ್ಬಲಗೊಳಿಸಿರುವ ಈ ಸಮಯದಲ್ಲಿ ಜನ ಅದರಿಂದ ಪಾರಾಗಲು ಹಲವು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇಂಥ ಸಮಯದಲ್ಲಿ ಕಾಯಿಲೆಯ ವಿರುದ್ಧ ಹೋರಾಡಲು ಬೇಕಾದ 6 ಅಂಶಗಳು ಮತ್ತು ಕೆಲವು ಪ್ರಾಯೋಗಿಕ ತಂತ್ರಗಳುಳ್ಳ ಪುಸ್ತಕವೊಂದು ಹೊರಬಂದಿದೆ.

ಪೌಷ್ಟಿಕಾಂಶ ತಜ್ಞೆ ಡಾ. ವಿಶಾಖಾ ಶಿವದಾಸಾನಿ ಅವರು ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗೆ ಸಿಲುಕಿದ್ದ ರೋಗಿಗಳ ಆರೈಕೆಗಾಗಿ ಅನುಸರಿಸಿದ ಚಿಕಿತ್ಸಾ ಮಾರ್ಗಗಳನ್ನೇ ಬಳಸಿ, ಅದರಿಂದ ಕೋವಿಡ್‌ ಅನ್ನು ತಡೆಗಟ್ಟುವ, ಕೋವಿಡ್‌ ನಂತರದ ಸಮಸ್ಯೆಗಳನ್ನು ನಿವಾರಿಸುವ ಕ್ರಮಗಳನ್ನು ಕಂಡುಕೊಂಡಿದ್ದಾರೆ.

ಈ ಚಿಕಿತ್ಸಾ ಮಾರ್ಗಗಳು ಹೊಸ ಕೋವಿಡ್ ತಳಿಗಳ ವಿರುದ್ಧವೂ ಕೆಲಸ ಮಾಡಲಿದೆ ಎಂದು ವಿಶಾಖಾ ಅವರು ಹೇಳಿದ್ದಾರೆ.

ವಿಶಾಖಾ ಅವರ ‘ಕೋವಿಡ್ ಮತ್ತು ಕೋವಿಡ್‌ ನಂತರದ ಚೇತರಿಕೆ’ ಎಂಬ ಇ–ಪುಸ್ತಕವನ್ನು ‘ಹಾರ್ಪರ್‌ಕಾಲಿನ್ಸ್ ಇಂಡಿಯಾ‘ ಈ ವರ್ಷದ ಆರಂಭದಲ್ಲಿ ಪ್ರಕಟಿಸಿತ್ತು. ಈಗ ಅದರ ಮುದ್ರಿತ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ವೈರಸ್ ರೋಗದ ಲಕ್ಷಣಗಳು, ಚೇತರಿಕೆ, ಪರಿಣಾಮಗಳು ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುವುದರ ಕುರಿತ ಸಲಹೆ ಸೂಚನೆಗಳು ಪುಸ್ತಕದಲ್ಲಿನ ಪ್ರಮುಖ ಮಾಹಿತಿಗಳೆನಿಸಿವೆ.

ವಿಶಾಖಾ ಅವರ ಆರು ಅಂಶಗಳ ತಂತ್ರವು ಆಹಾರ, ಕರುಳಿನ ಆರೋಗ್ಯ, ನಿದ್ರೆ, ವ್ಯಾಯಾಮ, ಒತ್ತಡ ನಿರ್ವಹಣೆ ಮತ್ತು ಪೂರಕಾಂಶಗಳ (ಸಪ್ಲಿಮೆಂಟ್‌) ಸಹಿತ ಆರೈಕೆ ಎಂಬ ಆರು ಅಂಶಗಳನ್ನು ಒಳಗೊಂಡಿದೆ.

‘20 ವರ್ಷಗಳಿಂದಲೂ ಪೌಷ್ಟಿಕಾಂಶ ತಜ್ಞೆಯಾಗಿ ಕೆಲಸ ಮಾಡುತ್ತಿರುವ ನಾನು, ಮಧುಮೇಹ, ಸ್ಥೂಲಕಾಯ ಸಮಸ್ಯೆಯ ಹಲವು ರೋಗಿಗಳಿಗೆ ಪರಿಹಾರ ಒದಗಿಸಿದ್ದೇನೆ. ಪೂರಕ ಔಷಧೋಪಚಾರಗಳ ಜೊತೆಗೆ ಶಿಸ್ತುಬದ್ಧ ಜೀವನ ಶೈಲಿ ಅನುಸರಿಸಿದರೆ ಕಾಯಿಲೆಗಳು ವಾಸಿಯಾಗುತ್ತವೆ,’ ಎಂದು ವಿಶಾಖಾ ಹೇಳಿದ್ದಾರೆ.

‘ಕೋವಿಡ್‌ ಚಿಕಿತ್ಸೆಯಲ್ಲಿ ಇದು ನಿಜವಾಗಿದೆ. ನೀವು ಯೋಚಿಸುವುದಕ್ಕಿಂತ ಹೆಚ್ಚಿನ ಶಕ್ತಿಯನ್ನು ನೀವು ಹೊಂದಿರುತ್ತೀರಿ. ಜೀವನ ಶೈಲಿಯು ಅದನ್ನು ಉದ್ದೀಪಿಸುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ರೋಗಿಗಳು ಚೇತರಿಸಿಕೊಳ್ಳುವುದನ್ನು ನೋಡುವುದೇ ಸಂತೋಷದ ವಿಷಯ. ಈ ಪುಸ್ತಕದಲ್ಲಿನ ನನ್ನ ಆರು ಅಂಶಗಳ ಯೋಜನೆ ಅಲ್ಪ ಮತ್ತು ದೀರ್ಘಾವಧಿಯಲ್ಲಿ ಕೋವಿಡ್ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಜನರನ್ನು ಪಾರು ಮಾಡುತ್ತದೆ,‘ ಎಂದು ವಿಶಾಖಾ ಹೇಳಿದ್ದಾರೆ.

‘ಮಲೇರಿಯಾ, ಟೈಫಾಯಿಡ್ ಅಥವಾ ಶೀತಜ್ವರದಂಥ ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸಾ ಮಾರ್ಗಸೂಚಿಗಳ ಕುರಿತು ನಮ್ಮಲ್ಲಿ ಪಠ್ಯವಿಲ್ಲ,‘ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT