ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸೇರಿಯನ್‌ ಪ್ರಸವ; ಶೀಘ್ರ ಚೇತರಿಕೆ ಹೇಗೆ?

Last Updated 23 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಸಿಸೇರಿಯನ್‌ ಅಥವಾ ಸಿ ಸೆಕ್ಷನ್‌ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದು ಅತ್ಯಂತ ಸುರಕ್ಷಿತ ವಿಧಾನವಾದರೂ, ಕೆಲವು ಅಪಾಯಗಳು ಇದ್ದೇ ಇರುತ್ತವೆ. ಮಗು ಮತ್ತು ತಾಯಿಯ ಜೀವಕ್ಕೆ ಅತ್ಯಂತ ಸುರಕ್ಷಿತವಾಗಿದ್ದರೆ ಮಾತ್ರ ಇದನ್ನು ನಡೆಸಲಾಗುತ್ತದೆ. ಹೊಕ್ಕಳಿಗಿಂತ ಕೆಳಗೆ (ಬಿಕಿನಿ ಲೈನ್‌) ಅಡ್ಡವಾಗಿ ಅಥವಾ ಕೆಲವೊಮ್ಮೆ ಉದ್ದಕ್ಕೆ ಹೊಟ್ಟೆ ಮತ್ತು ಗರ್ಭಕೋಶವನ್ನು ಕತ್ತರಿಸಿ ಮಗುವನ್ನು ಹೊರ ತೆಗೆಯುವ ವಿಧಾನವಿದು. ಶಸ್ತ್ರಚಿಕಿತ್ಸೆಯ ವಿಧಾನಗಳು ಮತ್ತು ಅನಸ್ತೇಶಿಯ ಗುಣಮಟ್ಟದ ಸುಧಾರಣೆಯಿಂದಾಗಿ, ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯರು ಶೀಘ್ರ ಚೇತರಿಸಿಕೊಳ್ಳಬಹುದು ಮತ್ತು ಶಸ್ತ್ರಚಿಕಿತ್ಸೆ ನಡೆಸಿದ 24-48 ಗಂಟೆಗಳಲ್ಲಿ ಎದ್ದು ಓಡಾಡಬಹುದು.

ಶಸ್ತ್ರಚಿಕಿತ್ಸೆಯ ನಂತರ ಶೀಘ್ರ ಚೇತರಿಕೆಗೆ ಕೆಲವು ಸಲಹೆಗಳು..

ಮನಸ್ಸು ಮುಕ್ತವಾಗಿರಲಿ
ಗರ್ಭಿಣಿಯಾಗಿದ್ದಾಗಲೇ ಸಾಮಾನ್ಯ ಹೆರಿಗೆಗೆ ವೈದ್ಯರು ಪ್ರಯತ್ನ ಪಡುವುದು ಸಾಮಾನ್ಯ. ಆದರೆ ಗರ್ಭಾವಸ್ಥೆ ಸಹಜವಾಗಿದ್ದರೂ ಕೆಲವೊಮ್ಮೆ ಮಗು ಮತ್ತು ತಾಯಿಯನ್ನು ರಕ್ಷಿಸಲು ಸಿಸೇರಿಯನ್‌ ಅಗತ್ಯ ಉಂಟಾಗಬಹುದು. ಶಸ್ತ್ರಚಿಕಿತ್ಸೆಯಿಲ್ಲದೇ ಹೆರಿಗೆಯಾಗುತ್ತದೆ ಎಂದು ಬಲವಾಗಿ ನಂಬಿಕೊಂಡಿದ್ದ ಮಹಿಳೆಯರಿಗೆ, ಸಿಸೇರಿಯನ್‌ ಮಾಡಿದ ನಂತರ ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಬಹುದು.

ಪ್ರಸವದ ನಂತರ ಆಹಾರ ಸೇವನೆ
ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯರು ದ್ರವಾಹಾರ ಸೇವನೆಯನ್ನು ಆರಂಭಿಸಬೇಕು. ಅವರಿಗೆ ಅಗತ್ಯವೆನಿಸಿದರೆ, ಕೆಲವು ಗಂಟೆಗಳ ನಂತರ ಮೆದು ಆಹಾರ ನೀಡಬಹುದು. ಇದರಿಂದ ಕರುಳಿನ ಚಲನೆ ಸುಧಾರಣೆಯಾಗಲು ಸಹಾಯವಾಗುತ್ತದೆ.

ಡಾ. ಪ್ರತಿಮಾ ರೆಡ್ಡಿ
ಡಾ. ಪ್ರತಿಮಾ ರೆಡ್ಡಿ

ನಡಿಗೆ
ಸಾಧ್ಯವಾದಷ್ಟೂ ಬೇಗ ಮಹಿಳೆಯರು ನಡೆದಾಡಲು ಆರಂಭಿಸಬೇಕು ಮತ್ತು ಇದಕ್ಕಾಗಿ ಆಸ್ಪತ್ರೆಯಲ್ಲಿನ ಫಿಸಿಯೋ ಥೆರಪಿಸ್ಟ್‌ಗಳಿಂದ ತರಬೇತಿ ಪಡೆಯಬಹುದು. ಸಂಪೂರ್ಣ ವಿಶ್ರಾಂತಿ (ಬೆಡ್‌ ರೆಸ್ಟ್‌) ಅಷ್ಟು ಒಳ್ಳೆಯದಲ್ಲ. ಯಾಕೆಂದರೆ, ಇದರಿಂದ ಕಾಲುಗಳಲ್ಲಿ ‘ಡೀಪ್‌ ವೇನ್ಸ್‌ ಥ್ರೋಂಬೊಸಿಸ್‌’ ಎಂದು ಕರೆಯಲಾಗುವ ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಉಂಟಾಗಬಹುದು.

ನೋವಿನ ಔಷಧ
ಶಸ್ತ್ರಚಿಕಿತ್ಸೆಯಾದ ಮೊದಲ ಕೆಲವು ದಿನಗಳವರೆಗೆ ನೋವು ತಡೆಯುವುದಕ್ಕಾಗಿ ನೋವಿನ ಔಷಧವನ್ನು ಶಿಫಾರಸು ಮಾಡಲಾಗುವುದು. ಬಹುತೇಕ ಮಹಿಳೆಯರಿಗೆ 24 ರಿಂದ 48 ಗಂಟೆಗಳವರೆಗೆ ಔಷಧದ ಅಗತ್ಯವಿರುತ್ತದೆ ಮತ್ತು ನಂತರ ಅಗತ್ಯವಿದ್ದಾಗ ಮಾತ್ರ ಬಳಸಬಹುದು. ಆರಂಭಿಕ ಕೆಲವು ಗಂಟೆಗಳು ಮತ್ತು ನಂತರದ ದಿನಗಳಲ್ಲಿ, ನೋವು ನಿರ್ವಹಣೆಯು ಅತ್ಯಂತ ಮಹತ್ವದ್ದು. ಯಾಕೆಂದರೆ ನೋವು ಇಲ್ಲದ ಮತ್ತು ಆರಾಮವಾಗಿರುವ ಮಹಿಳೆಯರು ಹೆಚ್ಚು ನಡೆದಾಡುವ ಮತ್ತು ಬೇಗ ಚೇತರಿಸಿಕೊಳ್ಳುವ ಸಾಧ್ಯತೆ ಅಧಿಕ.

ಮಲಬದ್ಧತೆ
ಮೊದಲ ಕೆಲವು ದಿನಗಳಲ್ಲಿ ಎದೆಯುರಿ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ನಿವಾರಿಸಲು ಸೂಕ್ತ ಔಷಧವನ್ನು ನೀಡುವುದು ಅಗತ್ಯ. ವಾಯುವಿನಿಂದಾಗಿ ಹೊಟ್ಟೆಉಬ್ಬರ ಉಂಟಾಗಿ, ನೋವು ಹೆಚ್ಚಾಗುವುದರಿಂದ ಸಮಸ್ಯೆ ಉಂಟಾಗಬಹುದು. ಮಲ ಮತ್ತು ಉದರವಾಯುವನ್ನು ಹೊರಹಾಕಲು ಎನಿಮಾ ಚಿಕಿತ್ಸೆ ನೀಡುವ ಅವಶ್ಯಕತೆ ಉಂಟಾಗಬಹುದು.

ಶುಚಿತ್ವ
ನಿಮ್ಮ ವೈದ್ಯರ ಸಲಹೆಯ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿದ ಹೊಟ್ಟೆಯ ಭಾಗವನ್ನು ಸೋಪ್‌ ಮತ್ತು ನೀರಿನಿಂದ ತೊಳೆದು ಸ್ವಚ್ಛವಾಗಿಡಿ. ಆ ಭಾಗ ಕೆಂಪಾದರೆ ಅಥವಾ ನೋವು ಕಂಡು ಬಂದರೆ ವೈದ್ಯರಿಗೆ ತಿಳಿಸಿ.

ವ್ಯಾಯಾಮ
ಆಸ್ಪತ್ರೆಯಲ್ಲಿರುವಾಗ ಸಾಧ್ಯವಾದಾಗಲೆಲ್ಲ ನಡೆದಾಡಲು ಆರಂಭಿಸಿ. ಮನೆಯಲ್ಲಿ ದಿನಕ್ಕೆ 30 ನಿಮಿಷಗಳವರೆಗೆ ನಡೆದಾಡಬಹುದು. ಇದರಿಂದ ನೀವು ಶೀಘ್ರ ಚೇತರಿಸಿಕೊಳ್ಳಬಹುದು ಮತ್ತು ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ಸಹಾಯ ಮಾಡುತ್ತದೆ. ಹಾಗೆಯೇ ಮಲಬದ್ಧತೆ ಕಡಿಮೆಯಾಗುತ್ತದೆ ಮತ್ತು ಜೀರ್ಣಕ್ರಿಯೆಗೂ ನೆರವಾಗುತ್ತದೆ.

(ಲೇಖಕಿ: ನಿರ್ದೇಶಕರು, ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಫೋರ್ಟಿಸ್‌ ಲಾ ಫೆಮ್ಮೆ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT