ಮಂಗಳವಾರ, ಸೆಪ್ಟೆಂಬರ್ 21, 2021
21 °C

ಮಕ್ಕಳು ಅತಿಯಾಗಿ ತಿನ್ನುವುದೇಕೆ?

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Children eating habbits

ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಮಕ್ಕಳು ಮನೆಯೊಳಗೇ ಇರುವುದರಿಂದ ಅವರಲ್ಲಿ ತಿನ್ನುವ ಪ್ರಮಾಣ ಜಾಸ್ತಿಯಾಗಿದೆ. ಇದು ಬೊಜ್ಜಿಗೂ ಕಾರಣವಾಗುತ್ತಿದ್ದು ನಿಯಂತ್ರಿಸಬೇಕಾದ ಜರೂರಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಡಲಾದ ಲಾಕ್‌ಡೌನ್‌ನಿಂದಾಗಿ ಜನರ ಮೇಲಾಗಿರುವ ದೈಹಿಕ ಪರಿಣಾಮಗಳು ಒಂದೆರಡಲ್ಲ. ನಿದ್ರೆ, ಆಹಾರ, ದೈಹಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಉಂಟಾಗಿರುವುದಲ್ಲದೇ ಮಕ್ಕಳಲ್ಲಿ ಬೊಜ್ಜು ಜಾಸ್ತಿಯಾಗಿದೆ. ಇದಕ್ಕೆ ಕಾರಣ ಮನೆಯೊಳಗೇ ಇರುವ ಮಕ್ಕಳು ತಿನ್ನುವುದು, ನಿದ್ರಿಸುವುದು, ಫೋನ್‌, ಟಿವಿ, ಕಂಪ್ಯೂಟರ್ ಮುಂದೆ ಕಾಲ ಕಳೆಯುವ ಅವಧಿ ಜಾಸ್ತಿಯಾಗಿರುವುದು. ಜೊತೆಗೆ ಕಡಿಮೆಯಾಗಿರುವ ದೈಹಿಕ ಚಟುವಟಿಕೆ, ಹೆಚ್ಚು ಕಡಿಮೆ ಇಲ್ಲದಂತಾಗಿರುವ ಕ್ರೀಡಾ ಚಟುವಟಿಕೆ.

ಸಾಮಾನ್ಯವಾಗಿ ತರಗತಿಗಳು ನಡೆಯುವ ಅವಧಿಯಲ್ಲಿ ಮಕ್ಕಳ ಊಟ– ತಿಂಡಿಗೆ, ದೈಹಿಕ ಚಟುವಟಿಕೆಗೆ, ನಿದ್ರೆಗೆ ನಿಗದಿತ ಸಮಯವಿರುತ್ತದೆ. ಶಾಲಾ ವಾತಾವರಣ ಎನ್ನುವುದು ಮಕ್ಕಳ ಆರೋಗ್ಯಕರ ತೂಕ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಬೇಸಿಗೆ ರಜೆಯಲ್ಲಿ ಮಕ್ಕಳ ಈ ಶಿಸ್ತು ಹೆಚ್ಚಿನ ಸಂದರ್ಭದಲ್ಲಿ ಮರೆಯಾಗಿ ತೂಕ ಹೆಚ್ಚುವುದು ಸಾಮಾನ್ಯ. ಸದ್ಯದ ಕೋವಿಡ್‌–19 ಪಿಡುಗಿನಿಂದಾಗಿ ಮಕ್ಕಳು ದೀರ್ಘಾವಧಿ ರಜೆ ಅನುಭವಿಸುತ್ತಿದ್ದು, ಇವೆಲ್ಲ ಚಟುವಟಿಕೆಗಳಲ್ಲಿ ಏರುಪೇರಾಗಿರುವುದರಿಂದ ಸಹಜವಾಗಿಯೇ ಹೆಚ್ಚಿನ ಮಕ್ಕಳಲ್ಲಿ ಬೊಜ್ಜು ಶೇಖರಣೆಯಾಗಿದೆ.

ಆದರೆ ಪೋಷಕರ ಹಾಗೂ ವೈದ್ಯರ ನಿದ್ರೆಗೆಡಿಸಿರುವುದು ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಕಂಡು ಬಂದಿರುವ ಸಮಸ್ಯೆಯಾದ ‘ಭಾವನಾತ್ಮಕ ಆಹಾರ ಸೇವನೆ (ಎಮೋಷನಲ್‌ ಈಟಿಂಗ್‌). ಅಂದರೆ ಸದ್ಯದ ಪರಿಸ್ಥಿತಿ ಮಕ್ಕಳಲ್ಲಿಯೂ ಒತ್ತಡವನ್ನು ಸೃಷ್ಟಿಸಿದೆ. ಜೊತೆಗೆ ಮನೆಯೊಳಗೇ ಇರುವ ಕಾರಣದಿಂದ ಬೇಸರವೂ ಸೃಷ್ಟಿಯಾಗಿದೆ.

ಬೇಸರಕ್ಕೆ ಪರಿಹಾರ ಜಂಕ್‌ ಆಹಾರವಲ್ಲ

ಆತಂಕ, ದುಃಖ, ಏಕತಾನತೆ, ಬೇಸರ, ನಕಾರಾತ್ಮಕ ಭಾವನೆಗಳು ಒತ್ತಡವನ್ನು ಸೃಷ್ಟಿಸುತ್ತವೆ. ಇದು ಹೆಚ್ಚು ತಿನ್ನುವಂತೆ ಮನಸ್ಸನ್ನು ಪ್ರೇರೇಪಿಸುತ್ತದೆ. ಅದರಲ್ಲೂ ಮಾನಸಿಕವಾಗಿ ತಾತ್ಕಾಲಿಕ ಶಮನ ನೀಡುವ ಜಂಕ್‌ ಆಹಾರ, ಹೆಚ್ಚು ಸಕ್ಕರೆ ಅಂಶವಿರುವ ಪಾನೀಯಗಳು ಇನ್ನೂ ಹೆಚ್ಚು ಸೇವಿಸುವಂತೆ ಪ್ರೇರಣೆ ನೀಡುತ್ತವೆ.

ಈ ಆತಂಕ, ಖಿನ್ನತೆ, ಗಾಬರಿ ಅಥವಾ ಏಕತಾನತೆಯ ಬೇಸರವನ್ನು ಮಕ್ಕಳು ವ್ಯಕ್ತಪಡಿಸುವುದೇ ತಿನ್ನುವ ಮೂಲಕ ಎನ್ನುತ್ತಾರೆ ತಜ್ಞರು. ಕೆಲವು ಮಕ್ಕಳು ಕಡಿಮೆ ತಿನ್ನುವುದು, ಏನೂ ತಿನ್ನದೇ ಹಟ ಮಾಡುವುದು ಜಾಸ್ತಿ. ಕೆಲವರಿಗೆ ತಮ್ಮ ಇಷ್ಟವಾದ ಆಹಾರ ಅಲಭ್ಯವಾದ ಕಾರಣ ಇನ್ನಷ್ಟು ಒತ್ತಡಕ್ಕೆ ಒಳಗಾಗುತ್ತಾರೆ.

ಒತ್ತಡ ಕಡಿಮೆ ಮಾಡಿ

ಇದನ್ನು ಪೋಷಕರೇ ಕಂಡುಕೊಂಡು ಸರಿಪಡಿಸಬೇಕಾದ ಅನಿವಾರ್ಯತೆ ಈಗ ತಲೆದೋರಿದೆ. ಕೊರೊನಾ ಸೋಂಕಿನ ಬಗ್ಗೆ, ಅದು ಸೃಷ್ಟಿಸಿರುವ ಅನಾನುಕೂಲತೆಗಳ ಬಗ್ಗೆ, ಅವೇನೂ ಶಾಶ್ವತವಲ್ಲ ಎಂಬುದರ ಕುರಿತು ತಿಳಿಹೇಳಿ ಮಕ್ಕಳ ಒತ್ತಡವನ್ನು ಕಡಿಮೆ ಮಾಡಬೇಕಾಗುತ್ತದೆ.

ಮಕ್ಕಳಿಗೆ ಪೋಷಕರೇ ಮಾದರಿ. ಪೋಷಕರ ತಿನ್ನುವ ಹಾಗೂ ವ್ಯಾಯಾಮ ಮತ್ತಿತರ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುವವರು ಅವರೇ. ಹೀಗಾಗಿ ಪೋಷಕರೇ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ತಾವೂ ನಿಯಮಗಳನ್ನು ಪಾಲಿಸಬೇಕು.

ಪರಿಹಾರ ಇಲ್ಲವೇ?

ಬೇಸರವನ್ನು ತೊಡೆಯಲು ವಿವಿಧ ಚಟುವಟಿಕೆಗಳನ್ನು ಅಳವಡಿಸಿ. ಯಾವಾಗಲೂ ಅವರನ್ನು ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿ. ಅದಕ್ಕೆ ಸರಿಯಾಗಿ ನಿಮ್ಮ ವೇಳಾಪಟ್ಟಿ ರೂಪಿಸಿ.

ಹಾಗೆಯೇ ತಕ್ಷಣಕ್ಕೆ ಅವರ ಊಟ– ತಿಂಡಿಯ ಮೇಲೆ ನಿಯಂತ್ರಣ ಹೇರುವುದೂ ಸರಿಯಲ್ಲ. ಅವರಿಗಿಷ್ಟವಾದ ಪಿಜ್ಜಾ, ಬರ್ಗರ್‌, ಎನರ್ಜಿ ಡ್ರಿಂಕ್‌ ಕೊಡಿ. ಆದರೆ ಅದಕ್ಕೆ ಮಿತಿಯಿರಲಿ. ಮನೆಯಲ್ಲೇ ದೈಹಿಕ ವ್ಯಾಯಾಮ ಮಾಡಲು ಪ್ರೋತ್ಸಾಹಿಸಿ. ಒಮ್ಮಿಂದೊಮ್ಮೆಲೇ ಮೊಳಕೆ ಕಾಳು ತಿನ್ನು.. ಲಿಂಬೆ ರಸ– ಜೇನುತುಪ್ಪ ಮಿಶ್ರಿತ ನೀರು ಕುಡಿ ಎಂದು ಒತ್ತಡ ಹೇರುವುದೂ ಸರಿಯಲ್ಲ.

(ಪೂರಕ ಮಾಹಿತಿ: ಡಾ. ಟಿ.ಎಸ್‌.ತೇಜಸ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು