ಶನಿವಾರ, ಜುಲೈ 31, 2021
27 °C

ನೆರಳ ಮುಂದಿದೆ ಬೆಳಕಿನ ಹಾದಿ...

ಅನನ್ಯ ಆರ್‌.ಪಿ. Updated:

ಅಕ್ಷರ ಗಾತ್ರ : | |

Prajavani

ಸದ್ಯ ತಲೆದೋರಿರುವ ಪರಿಸ್ಥಿತಿಯಿಂದಾಗಿ ಬದುಕಿನ ಬಗ್ಗೆ ನಕಾರಾತ್ಮಕ ಧೋರಣೆ ಬೆಳೆಸಿಕೊಂಡು ಹತಾಶರಾಗುವುದು ಸರಿಯಲ್ಲ. ಇತರರ ಬಗ್ಗೆ ಸಹಾನುಭೂತಿ ತೋರಿಸಿ, ಕೈಯಲ್ಲಾದ ನೆರವು ನೀಡುವುದರಿಂದ ಬದುಕಿನಲ್ಲಿ ಕಷ್ಟವನ್ನು ಎದುರಿಸಲು ಪ್ರೇರಣೆ ಸಿಗುತ್ತದೆ.

ಈ ಕೊರೊನಾ ಸೋಂಕು ಶುರುವಾದಾಗ ಮನೆಯೊಳಗೇ ಇದ್ದರೂ ಕೂಡ ಬಹುತೇಕ ಮಂದಿ ಸಮಯವನ್ನು, ಬದುಕನ್ನು ಹೇಗೋ ನಿಭಾಯಿಸಿದರು. ಲಾಕ್‌ಡೌನ್‌ ಆದಾಗಲೂ ‘ಮನೆಯ ಕೆಲಸವೇ ಬೇಕಾದಷ್ಟಿದೆ. ಮನೆಯನ್ನು ನೀಟಾಗಿಡಬೇಕು, ಯಾವತ್ತೋ ಅರ್ಧಕ್ಕೆ ಹಾಕಿದ ಕಸೂತಿಯನ್ನು ಪೂರ್ತಿ ಮಾಡಬೇಕು. ಅಡುಗೆಮನೆ, ವಾರ್ಡ್‌ರೋಬ್‌ ಎಲ್ಲವನ್ನೂ ಸ್ವಚ್ಛಗೊಳಿಸಬೇಕು, ಆನ್‌ಲೈನ್‌ನಲ್ಲಿ ಏನಾದರೂ ಹೊಸತನ್ನು ಕಲಿಯಬೇಕು..’ ಎಂದೆಲ್ಲ ಕೆಲಸಗಳ ಪಟ್ಟಿಯನ್ನು ನೆನಪಿಸಿಕೊಂಡರು; ಕೆಲಸವನ್ನು ಮಾಡಿ ಮುಗಿಸಿದರು; ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಸಂಭ್ರಮಿಸಿದರು.

ಆದರೆ ದಿನಗಳು ಉರುಳಿದವು; ತಿಂಗಳುಗಳು ಕಳೆದವು. ಈ ಕೋವಿಡ್‌–19 ಪಿಡುಗು ಮಾತ್ರ ಹೆಚ್ಚಾಗುತ್ತಲೇ ಇದೆ, ಜೊತೆಗೆ ಆತಂಕ ಕೂಡ. ಇಂತಹ ಚಟುವಟಿಕೆಗಳು ನಮ್ಮ ಮುಂದೆ ಬೇಕಾದಷ್ಟಿದ್ದರೂ ಮಾಡುವ ಹುಮ್ಮಸ್ಸಿಲ್ಲ, ಬದುಕು ಇಷ್ಟೇನೆ ಎಂಬ ಏಕತಾನತೆಯ ಜೊತೆ ಭವಿಷ್ಯದಲ್ಲಿ ಇಷ್ಟೂ ಲವಲವಿಕೆ ಇರದೆ ಹೇಗೆ ಕಳೆಯಬೇಕು ಎಂಬ ದುಗುಡ.

‘ಮೊದಲು ಇಂತಹ ಆಲೋಚನೆಗಳಿಗೆ ಕಡಿವಾಣ ಹಾಕುವುದು ಹೇಗೆ ಎಂಬುದನ್ನು ಅರಿತರೆ ಬದುಕಿನಲ್ಲಿ ಬೇಕಾದಷ್ಟು ಗುರಿಗಳು ಗೋಚರಿಸುತ್ತವೆ. ಇಂತಹ ಕಷ್ಟದ ದಿನಗಳಲ್ಲೂ ಒಂದು ಸುಖದ ಬೆಳಕಿಂಡಿ ಕಾಣಿಸುತ್ತದೆ’ ಎನ್ನುತ್ತಾರೆ ಪುಣೆಯ ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕ ಪ್ರೊ. ದಿನಮಣಿ ಎಂ. ಗಾಯತೊಂಡೆ.

ಸಹಾನುಭೂತಿ

ಇಂತಹ ನಕಾರಾತ್ಮಕ ಆಲೋಚನೆಗಳಿಗೆ ತಡೆ ಒಡ್ಡುವ ಗೋಡೆಗಳು ಬಹಳಷ್ಟಿವೆ. ಅದರಲ್ಲೊಂದು ಪರರ ಬಗ್ಗೆ ತೋರಿಸುವ ಸಹಾನುಭೂತಿ, ಬೇರೆಯವರಿಗೆ ಮಾಡುವ ಸಣ್ಣಪುಟ್ಟ ನೆರವು. ಇದು ಮನಸ್ಸಿನೊಳಗಿನ ಖಾಲಿ ಖಾಲಿ ಭಾವನೆಯನ್ನು ಆಚೆ ನೂಕಿ ಜೀವನದಲ್ಲಿ ಏನಾದರೂ ಸಾಧಿಸಬಹುದು ಎಂಬ ಉತ್ಸುಕತೆಯನ್ನು ತುಂಬುತ್ತದೆ.

ಕೆಲವರಿಗೆ ಈ ಸಹಾನುಭೂತಿ ಎನ್ನುವುದು ಹುಟ್ಟುಗುಣ. ಆದರೆ ಇಂತಹ ಕಠಿಣ ಸಂದರ್ಭದಲ್ಲಿ ಇದನ್ನು ಬೆಳೆಸಿಕೊಳ್ಳುವುದು ಕಷ್ಟವೇನಲ್ಲ. ಇದು ನಿಮಗೆ ನೀವೇ ಬೆಳೆಸಿಕೊಳ್ಳಬಹುದಾದ ಗುಣ ಕೂಡ. ‘ಬೇರೆಯವರ ಮಾತನ್ನು ಸಹಾನುಭೂತಿಯಿಂದ ಆಲಿಸುವುದು, ಅವರ ಕಷ್ಟದಲ್ಲಿ ನೆರವಾಗುವುದು, ‘ಇನ್ನೊಬ್ಬರ ಜಾಗದಲ್ಲಿ ನಾನೇ ಇದ್ದರೆ..’ ಎಂಬುದನ್ನು ಕಲ್ಪಿಸಿಕೊಂಡು ಅದನ್ನು ಅರಿಯುವುದು.. ಹೀಗೆ ಬೇರೆಯವರಿಗೆ ಸಹಾನುಭೂತಿ ತೋರಿಸುತ್ತ ನಿಮಗೆ ನೀವೇ ಬದುಕಿನಲ್ಲಿ ಸಾಧಿಸುವ, ಕನಿಷ್ಠ ಆತಂಕದಿಂದ ಪಾರಾಗಿ ಮುನ್ನಡೆಯುವ ಪ್ರೇರಣೆ ಪಡೆಯಬಹುದು’ ಎನ್ನುತ್ತಾರೆ ಪ್ರೊ.ಗಾಯತೊಂಡೆ

* ಅಂತರ ಕಾಪಾಡಿಕೊಳ್ಳುವುದು, ಸ್ವಯಂ ದಿಗ್ಬಂಧನ, ಕ್ವಾರಂಟೈನ್.. ಎಂದೆಲ್ಲ ಹೊಸ ಜನಜೀವನದ ಸೂತ್ರಗಳನ್ನು ಅಳವಡಿಸಿಕೊಳ್ಳುವ ತರಾತುರಿಯಲ್ಲಿ ನೀವಿರುವಾಗ ನಿಮ್ಮ ಲಕ್ಷ್ಯ ನಿಮ್ಮ ಕುಟುಂಬದ ಕಡೆ ಮಾತ್ರ ಇರುವುದು ಸಹಜ. ಆದರೆ ನಿಮ್ಮ ಮನಸ್ಸನ್ನು ಕ್ರಮೇಣ ನೆರೆಯವರ ಬಗ್ಗೆ ಹರಿಸಿ. ನಂತರ ನಿಮ್ಮ ಬೀದಿಯಲ್ಲಿರುವ ಇತರರ ಕುರಿತು ಗಮನ ನೀಡಿ. ಸದ್ಯಕ್ಕೆ ನಡೆಯುತ್ತಿರುವ ವಿದ್ಯಮಾನಗಳಿಂದ ಆಗಿರುವ ಕಷ್ಟ ನಿಮ್ಮ ಗಮನಕ್ಕೆ ಬಂದು ಸಹಾಯಹಸ್ತ ಚಾಚುವುದು ಖಂಡಿತ. ದೈಹಿಕ ಅಂತರ ಕಾಯ್ದುಕೊಂಡ ಮಾತ್ರಕ್ಕೆ ಮಾನಸಿಕವಾಗಿಯೂ ದೂರವಾಗಬೇಕಾಗಿಲ್ಲ.

* ಈ ಪಿಡುಗು ನಿಮ್ಮ ಬದುಕಿನ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ಅವಲೋಕನ ಮಾಡಿಕೊಳ್ಳಿ. ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದೀರಾ ಅಥವಾ ದೀರ್ಘ ರಜೆಯಲ್ಲಿದ್ದೀರಾ? ಶಾಲೆ ಆರಂಭವಾಗದ್ದರಿಂದ ಮಕ್ಕಳು ಹೇಗೆ ಕಾಲ ಕಳೆಯುತ್ತಿದ್ದಾರೆ, ಅದರಿಂದ ನೀವು ಯಾವ ರೀತಿ ಚಡಪಡಿಸುತ್ತಿದ್ದೀರಾ? ಹಣಕಾಸಿನ ಪರಿಸ್ಥಿತಿಯ ಬಗ್ಗೆ ಯಾವ ರೀತಿ ನಿಮಗೆ ಚಿಂತೆಯಿದೆ ಅಥವಾ ಹೇಗೊ ಹೊಂದಾಣಿಕೆ ಮಾಡಿಕೊಂಡರಾಯಿತು ಎಂಬ ನಿರ್ಧಾರಕ್ಕೆ ಬಂದಿದ್ದೀರಾ? ಈ ತಿಂಗಳು ಸಾಕಾಗುವಷ್ಟು ದಿನಸಿ ಮನೆಯಲ್ಲಿದೆಯಾ? – ಇವೇ ಮೊದಲಾದ ಆಲೋಚನೆಗಳನ್ನು ಇತರರ ಬಗ್ಗೆಯೂ ಮಾಡಿ. ಅವರು ಉದ್ಯೋಗ ಕಳೆದುಕೊಂಡಿದ್ದರೆ.. ಹೊರಗೆ ಹೋಗಿ ಕೆಲಸ ಮಾಡುವ ಅನಿವಾರ್ಯತೆ ಎದುರಾದರೆ.. ಜೀವನಾವಶ್ಯಕ ವಸ್ತುಗಳಿಗಾಗಿ ಪರದಾಡುತ್ತಿದ್ದರೆ.. ಒಂದಿಷ್ಟು ಅವರಿಗೆ ನೆರವು ನೀಡುವ ಮನಸ್ಸು ಮಾಡಬಹುದು.

* ನಿಮ್ಮ ಮಕ್ಕಳು ಜಾಸ್ತಿ ಹೊತ್ತು ಟಿವಿ ನೋಡಿದರೆ ಕೋಪಗೊಳ್ಳಬೇಡಿ. ಆಟವಾಡಿಕೊಂಡು, ಶಾಲೆಗೆ ಹೋಗಿ ಸ್ನೇಹಿತರ ಜೊತೆ ಹರಟೆ ಹೊಡೆದುಕೊಂಡಿರುವ ಮಕ್ಕಳು ಮನೆಯಲ್ಲೇ ಇರಬೇಕಾದ ಪರಿಸ್ಥಿತಿಯನ್ನು ನೆನೆದು ಹೊಂದಿಕೊಂಡು ಹೋಗಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು