ಬುಧವಾರ, ಆಗಸ್ಟ್ 17, 2022
29 °C

ಕೋವಿಡ್‌-19: ದೀರ್ಘಾವಧಿಯಲ್ಲಿ ಮೆದುಳಿಗೆ ಧಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19 ಗುಣವಾದರೂ ಕೆಲವರಲ್ಲಿ ಸ್ಮರಣ ಶಕ್ತಿ ಕಡಿಮೆಯಾಗುವುದು, ಮಾತನಾಡುವಾಗ ತಡವರಿಸುವುದು, ಏಕಾಗ್ರತೆಯ ಕೊರತೆ ಮೊದಲಾದ ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಿದ್ದು, ಇವು ದೀರ್ಘಕಾಲ ಕಾಡಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಇದಕ್ಕೆ ಕಾರಣ ಮೆದುಳಿನ ಮುಂಭಾಗ (ಫ್ರಂಟಲ್‌ ಲೋಬ್‌)ಕ್ಕೆ ಕೋವಿಡ್‌–19ನಿಂದ ತಗಲಿರುವ ಧಕ್ಕೆ ಅಥವಾ ಗುಣವಾದ ನಂತರವೂ ಮೆದುಳಿಗೆ ಆಮ್ಲಜನಕದ ಪೂರೈಕೆಯಲ್ಲಾಗಿರುವ ಕೊರತೆ ಎಂಬುದನ್ನು ಹೊಸ ಅಧ್ಯಯನ ದೃಢಪಡಿಸಿದೆ.

ಹಲವರಿಗೆ ಈ ಸಮಸ್ಯೆಗಳ ಜೊತೆಗೆ ಮೈಗ್ರೇನ್‌, ಸ್ನಾಯುವಿನ ಸಮಸ್ಯೆ, ವಿಪರೀತ ಸುಸ್ತು, ಕೆಲವೊಮ್ಮೆ ತಲೆ ಸುತ್ತುವ ಸಮಸ್ಯೆಯಲ್ಲದೇ ನರಗಳಲ್ಲಿ ನೋವು ಕೂಡ ಕಾಣಿಸಿಕೊಂಡಿದೆ. ಕೊರೊನಾ ಸೋಂಕು ತಗಲುವ ಮುನ್ನ ಯಾವುದೇ ಕಾಯಿಲೆಯಿಲ್ಲದೇ ಆರೋಗ್ಯವಂತರಾಗಿ ಇದ್ದವರಲ್ಲಿ ಕೂಡ ಈ ತೊಂದರೆಗಳು ಕಾಣಿಸಿಕೊಂಡಿವೆ ಎಂದು ಬ್ರಿಟನ್‌ನ ‘ಸೀಝರ್‌: ಯೂರೋಪಿಯನ್‌ ಜರ್ನಲ್‌ ಆಫ್‌ ಎಪಿಲೆಪ್ಸಿ’ಯಲ್ಲಿ ಪ್ರಕಟವಾದ ವಿಸ್ತೃತ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ. ಈ ಆಧ್ಯಯನವನ್ನು ಯೂರೋಪ್‌ ಹಾಗೂ ಏಷ್ಯಾದ ಆಯ್ದ ಕೋವಿಡ್‌ ರೋಗಿಗಳ ಮೇಲೆ ನಡೆಸಲಾಗಿದೆ.

‘ಬ್ರೈನ್‌ ಫಾಗ್‌’ ಎಂದೇ ಕರೆಯಲಾಗುವ ಸಮಸ್ಯೆಯಲ್ಲಿ ವ್ಯಕ್ತಿ ಮಾತನಾಡಲು ತೊದಲಿಸುತ್ತಾನೆ ಮತ್ತು ವಾಕ್ಯವನ್ನು ಪೂರ್ಣಗೊಳಿಸಲು ಕಷ್ಟಪಡಬೇಕಾಗುತ್ತದೆ. ತಲೆಯೊಳಗೆ ಏನು ಆಲೋಚನೆ ಬರುತ್ತಿದೆ ಎಂಬುದನ್ನು ಹೇಳಲೂ ಕೂಡ ಆಗದಂತಹ ಮರೆವು. ಓದಲು, ಟಿವಿ ವೀಕ್ಷಿಸಲು ಕೂಡ ಸಾಧ್ಯವಾಗದಂತಹ ತೊಂದರೆಗಳು ಉಂಟಾಗಬಹುದು.

ಕೋವಿಡ್‌–19 ಶುರುವಾದ ಸಂದರ್ಭದಲ್ಲಿ ರೋಗಿಗಳ ಉಸಿರಾಟ ಮತ್ತು ಹೃದಯಿ ಸಂಬಂಧಿ ತೊಂದರೆಗಳನ್ನು ಪರಿಹರಿಸಲು ವೈದ್ಯರು ಹೆಚ್ಚಿನ ಲಕ್ಷ್ಯ ಕೊಟ್ಟಿದ್ದರು. ಆದರೆ ದಿನಗಳು ಉರುಳಿದಂತೆ ನರವ್ಯೂಹಕ್ಕೆ ಸಂಬಂಧಪಟ್ಟ ದೀರ್ಘಾವಧಿ ಲಕ್ಷಣಗಳು ಗೋಚರಿಸುತ್ತಿರುವುದು ಪತ್ತೆಯಾಗಿದೆ. ಇದು ಪಾರ್ಶ್ವವಾಯು, ಮೂರ್ಛೆರೋಗ ಅಥವಾ ಮೆದುಳಿನಲ್ಲಿ ರಕ್ತಸ್ರಾವದಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಈ ವರದಿಯಲ್ಲಿ ಎಚ್ಚರಿಸಲಾಗಿದೆ.ಸಾವಿರಕ್ಕೂ ಅಧಿಕ ಕೋವಿಡ್‌–19 ರೋಗಿಗಳ ಮೆದುಳಿನ ಎಲೆಕ್ಟ್ರೊಎನ್ಸೆಫಲೊಗ್ರಾಮ್‌ (ಇಇಜಿ) ದಾಖಲೆಗಳನ್ನು ಅಧ್ಯಯನ ಮಾಡಲಾಗಿದೆ. ಶೇ 80ರಷ್ಟು ರೋಗಿಗಳಲ್ಲಿ ವೈರಸ್‌ನಿಂದಾಗಿ ಮೆದುಳಿನ ಮುಂಭಾಗಕ್ಕೆ ಧಕ್ಕೆಯಾಗಿದ್ದು, ಸ್ಮರಣಶಕ್ತಿಗೆ, ಸಂವಹನಶಕ್ತಿಗೆ, ಆಲೋಚನಾಶಕ್ತಿಗೆ, ಏಕಾಗ್ರತೆಗೆ ತೊಂದರೆಯಾಗಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಮೆದುಳಿನ ಯಾವ ಭಾಗಕ್ಕೆ, ಎಷ್ಟು ಪ್ರಮಾಣದಲ್ಲಿ ವೈರಸ್‌ ಹಾನಿಯುಂಟು ಮಾಡಿದೆ; ಮೆದುಳಿನ ಸಾಮರ್ಥ್ಯ ಮರಳುತ್ತದೆಯೇ ಎಂಬುದನ್ನು ಹೇಳಬೇಕಾದರೆ ಮೆದುಳಿನ ಸ್ಕ್ಯಾನಿಂಗ್‌ ಮತ್ತಿತರ ಪರೀಕ್ಷೆಗಳ ಅಗತ್ಯವಿದೆ. ರೋಗಿಯನ್ನು ಪುನರ್‌ವಸತಿ ಕೇಂದ್ರಕ್ಕೆ ಕಳಿಸಿ ಚಿಕಿತ್ಸೆ ಕೊಡಿಸಬೇಕು. ಆದರೆ ಕೆಲವರಿಗೆ ಸಮಸ್ಯೆ ಶಾಶ್ವತವಾಗಿ ಉಳಿಯಬಹುದು ಎಂದು ಸಂಶೋಧಕರು ಎಚ್ಚರಿಸಿದ್ದು, ಕೆಲವು ಸಲಹೆಗಳನ್ನು ನೀಡಿದ್ದಾರೆ.

ಮೆದುಳಿಗೆ ಧಕ್ಕೆಯಾದ ಲಕ್ಷಣಗಳಿದ್ದರೆ ಮೆದುಳಿಗೆ ಹೆಚ್ಚು ವಿಶ್ರಾಂತಿ ನೀಡಬೇಕು. ದೊಡ್ಡ ಕೆಲಸವನ್ನು ಒಮ್ಮೆಲೇ ಮಾಡಲು ಯತ್ನಿಸದೆ ಸಣ್ಣ ಸಣ್ಣ ಕಾರ್ಯಗಳನ್ನಾಗಿ ವಿಭಾಗಿಸಿಕೊಳ್ಳಬೇಕು. ಚೆನ್ನಾಗಿ ನಿದ್ರಿಸಿ, ವ್ಯಾಯಾಮ ಮಾಡಿ. ಹಳೆಯದನ್ನು ನೆನಪು ಮಾಡಿಕೊಳ್ಳಲು ಕಷ್ಟಪಡಬೇಡಿ, ನಿತ್ಯದ ಕೆಲಸದ ಕಡೆ ಗಮನ ನೀಡಿ. ಧ್ಯಾನ ಮಾಡಿ ಮತ್ತು ಏಕಾಗ್ರತೆ ಹೆಚ್ಚಿಸುವ ಚಟುವಟಿಕೆಗಳನ್ನು ಮಾಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು