ಮಂಗಳವಾರ, ಜೂನ್ 15, 2021
21 °C

PV Web Exclusive| ಸಾವಿಲ್ಲದ, ನೋವಿಲ್ಲದ ದಶ ಸೂತ್ರಗಳು

ರಶ್ಮಿ ಎಸ್ Updated:

ಅಕ್ಷರ ಗಾತ್ರ : | |

Prajavani

ನಾವು ಮತ್ತೊಂದು ಕೋವಿಡ್‌ ಕರ್ಫ್ಯೂ ಎದುರಿಸುತ್ತಿದ್ದೇವೆ. ಆದರೆ ಕಳೆದ ವರ್ಷದಂತೆ ಖುಷಿಯಾಗಿಲ್ಲ. ಯಾರೂ ಪಾನಿಪುರಿ, ದಹಿವಡೆ ಮಾಡಿ ಫೋಟೊ ಹಂಚ್ತಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಹೋದರೆ ಸಂತಾಪ ಸೂಚಕ ಸಂದೇಶಗಳು ಮನಸು ಭಾರ ಮಾಡುತ್ತಿವೆ. ಬದುಕಿದ್ದೇವೆ. ಬದುಕುತ್ತಿದ್ದೇವೆ ಎಂಬುದೇ ಭಗವನ್‌ ಕೃಪೆ ಎಂಬಂತೆ ಆಗಿದೆ. 

ಅಲ್ಲೆಲ್ಲೋ ದೂರ ಕುಳಿತು, ಸಾವಿನ ಕುಣಿಕೆ ಎಸೆದು ಎಳೆದೊಯ್ತಿದ್ದ ಯಮರಾಯ ಸಹ ತನ್ನ ವೇಷ ಬದಲಿಸಿದ್ದಾನೆ. ಮನೆ ಸುತ್ತ ಸುಳಿಯುವ ಕಳ್ಳ ಬೆಕ್ಕಿನ ವೇಷ ಧರಿಸಿ, ನಮ್ಮ ಸುತ್ತಲೂ ಸುಳಿಯುತ್ತಿದ್ದಾನೆ. ಯಾವಾಗ ಯಾರ ಪ್ರಾಣಪಕ್ಷಿಯ ಮೇಲೆ ಮನಸಾಗುವುದೋ.. ಧಿಡೀರ್‌ ಅಂತ ದಾಳಿ ಮಾಡ್ತಾನೆ. ಉಸಿರಾಡಲಾಗದೆ, ಪ್ರಾಣಪಕ್ಷಿ ದೇಹದಿಂದ ಮುಕ್ತವಾಗುತ್ತಿದೆ.

ಜೀವ, ಆಮ್ಲಜನಕಕ್ಕಾಗಿ ಪರದಾಡುವುದು, ಅದನ್ನು ಅಸಹಾಯಕರಾಗಿ ನೋಡುವುದು, ಅವರ ಸಾವಿಗಿಂತಲೂ ಬದುಕಿದವರ ಜೀವನ ಭೀಕರವಾಗಿಸುತ್ತಿದೆ. ಈ ಸಾಂಕ್ರಾಮಿಕ ರೋಗದ ಪರ್ವ ಒಂದೊಮ್ಮೆ ಮುಗಿಯಬಹುದು. ಈ ಸಮಯದಲ್ಲಿ ಸಾವನ್ನು ಸನಿಹದಿಂದ ಕಂಡವರು, ಸಾವಿನ ಮನೆಯಲ್ಲಿದ್ದವರು, ಗೌರವದ ವಿದಾಯ ಹೇಳದವರು ಅವರು ಜೀವನಪೂರ್ತಿ ಬಳಲಲಿದ್ದಾರೆ.

ನಮ್ಮಲ್ಲಿ ಸಾವು ಚಿಕಿತ್ಸೆ ಇಲ್ಲದೆ, ಸ್ಪಂದಿಸದೆ, ಸಿಗದೆ ಸಂಭವಿಸುತ್ತಿಲ್ಲ. ಎಲ್ಲ ಇದ್ದೂ, ಸೌಲಭ್ಯಗಳಿಲ್ಲದೆ ಸಾಯುತ್ತಿರುವುದು ವ್ಯವಸ್ಥೆಯಿಂದಾಗುತ್ತಿರುವ ಹತ್ಯೆಗಳಾಗಿವೆ. 

ಸತ್ಯವನ್ನು ಮುಚ್ಚಿಡುವ ಸ್ಥಾಪಿತ ಯತ್ನ ಅಥವಾ ಪೂರ್ವನಿಯೋಜಿತ ಪ್ರಯತ್ನಗಳೂ ಸಾವುಗಳ ಮುಂದೆ ಮಂಡಿಯೂರುತ್ತಿವೆ. ಕೆಲವೆಡೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಬೊಗಸೆ ಒಡ್ಡಿ ಆಮ್ಲಜನಕಕ್ಕೆ ಬೇಡಿಕೆ ಇರಿಸುತ್ತಿದ್ದಾರೆ. ಇದೆಂಥ ವಿಪರ್ಯಾಸ. ನಮಗೆ ನೀಡಬೇಕಿರುವ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಬೇಕು. ಬೇಡಿಕೆ ಇರಿಸಬೇಕು. ಅದಕ್ಕೆ ಅವರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಬೇಕು.. ಎಷ್ಟುದ್ದದ ಪ್ರಕ್ರಿಯೆ.

ಇಷ್ಟೆಲ್ಲ ಆದಮೇಲೆಯೂ ವೈದ್ಯರ ಮೇಲೆ ಸಾವಿನ ಆರೋಪ, ಅಪವಾದಗಳ ತೂಗುಕತ್ತಿ ಇದ್ದೇ ಇರುತ್ತದೆ. ಯಾವ ವೈದ್ಯರೂ  ತಮ್ಮ ಬಳಿ ಬರುವ ರೋಗಿಯು ಕೊನೆಯುಸಿರೆಳೆಯಲಿ ಎಂದು ಬಯಸುವುದಿಲ್ಲ. ಆದರೆ ಅವ್ಯವಸ್ಥೆಯ ಮುಂದೆ ಅವರೂ ತಲೆಬಾಗಬೇಕಾದ ಅನಿವಾರ್ಯ ಸೃಷ್ಟಿಯಾಗಿರುವುದು ಅವರ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಶುಶ್ರೂಷಕರು, ವೈದ್ಯಕೀಯ ಸಿಬ್ಬಂದಿ ಪ್ರತಿದಿನ ಇಂಥ ಸಾವಿನೊಂದಿಗೆ ಮುಖಾಮುಖಿಯಾಗುವುದು, ಅದಕ್ಕೆ ಉತ್ತರಗಳನ್ನೂ, ಸಮಜಾಯಿಷಿಗಳನ್ನು ಸಿದ್ಧಪಡಿಸಿಕೊಳ್ಳುವುದು, ಮಾಧ್ಯಮವನ್ನು ಎದುರಿಸುವುದು, ಆಡಳಿತವನ್ನು ಎದುರಿಸುವುದು, ಸಂಬಂಧಿಕರ ಆಕ್ರಂದನ.. ಇವುಗಳನ್ನೆಲ್ಲ ನಿಭಾಯಿಸುವುದರಲ್ಲಿ ಅವರಿಗೂ ಸಾಕುಬೇಕಾಗುತ್ತಿದೆ. ಮಾನಸಿಕ ಒತ್ತಡ ಹಾಗೂ ಖಿನ್ನತೆಯನ್ನು ನಿಭಾಯಿಸುವುದು ಅವರಿಗೂ ಕಷ್ಟವಾಗುತ್ತಿದೆ. ಇವೆಲ್ಲವೂ ಒಂದೆಡೆಯಾದರೆ, ಈ ಸೋಂಕನ್ನು ಹೊತ್ತು ಮನೆಗೊಯುತ್ತಿದ್ದೇವೆಯೆ? ಸೋಂಕು ಸಾಗಣೆದಾರರಾಗುತ್ತಿದ್ದೇವೆಯೇ ಎಂಬ ಆತಂಕವನ್ನೂ ನಿಭಾಯಿಸಬೇಕು. 

ಸೋಂಕಿದು ಹೀಗೆ ಅಂತ ಹೇಳದಷ್ಟು ಹರಡುತ್ತಿದೆ. ಪೆಥಲಜಿಯ ವರದಿಗಳು ನೆಗೆಟಿವ್‌ ಅಂದ್ರೂ ಎದೆಗೂಡು ಪಾಸಿಟಿವ್‌ ಅಂತಿದೆ. ಸಿ.ಟಿ. ಸ್ಕ್ಯಾನ್‌ ಮಾಡಿಸಬೇಕಾ, ಎಕ್ಸ್‌ರೆ ಮಾಡಿಸಬೇಕಾ? ಲಕ್ಷಣ ಕಂಡು ಬಂದ ತಕ್ಷಣವೇ ತಪಾಸಣೆಗೆ ಹೋದರೂ ಫಲಿತಾಂಶ ಬರುವವರೆಗೂ ಕಾಯಬೇಕು. ಅಲ್ಲಿಯವರೆಗೂ ಮುನ್ನೆಚ್ಚರಿಕೆ ಕ್ರಮವನ್ನು ಬಳಸುತ್ತೇವೆಯೇ?

ಇದೆಲ್ಲವೂ ನಮಗಲ್ಲ, ನಮಗೇನೂ ಆಗುವುದಿಲ್ಲ ಎಂದು ಕೊಂಡಂತೆ ಇದ್ದವರ ಮನೆಬಾಗಿಲಿಗೆ ಸಾವು ಬಂದು ನಿಂತಿದೆ. ಪುಪ್ಪಸದೊಳಗೆ ಸೋಂಕು ಸದ್ದಿಲ್ಲದೆ ಮನೆ ಮಾಡುತ್ತಿದೆ. ಹೀಗಿರುವಾಗ ನಾವೆಲ್ಲ ಮಾಡಬೇಕಿರುವುದು ಏನು?

ತೀರ ಸರಳವಾಗಿ ಯಶ್ವಂತ್‌ ಸರದೇಶಪಾಂಡೆಯವರು ಒಂದು ಹಾಡು ಹೇಳಿದ್ದಾರೆ.

ಒಂದು, ಎರಡು
ಕರೋನ ಹೊರಡು !
ಮೂರು, ನಾಲ್ಕು
ಮಾಸ್ಕ್‌ ಹಾಕು !
ಐದು, ಆರು
ದೂರ ದೂರ ಇರು !
ಏಳು, ಎಂಟು
ಮನೆಗೆ ಅಂಟು !
ಒಂಭತ್ತು, ಹತ್ತು
ಹೊರಗೋದರೆ ಕುತ್ತು !
ಒಂದರಿಂದ ಹತ್ತು
ವ್ಯಾಕ್ಸಿನ್ ಹಾಕಿ, ಇರು ಮಸ್ತು...!!
- ಚಂದಪ್ಪ

ಇಷ್ಟೇ ಸರಳ. ಈ ಹೊತ್ತಿನ ಈ ಹತ್ತರ ಅಂಕಿ ನಮ್ಮನ್ನು ಉಳಿಸುತ್ತದೆ. ನಮ್ಮನ್ನು ಸುರಕ್ಷಿತವಾಗಿಡುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು