ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ 20 ಸಾವಿರ ವರ್ಷಗಳ ಹಿಂದೆಯೇ ಇದ್ದಿರಬಹುದು: ಸಂಶೋಧಕರು

Last Updated 26 ಜೂನ್ 2021, 10:58 IST
ಅಕ್ಷರ ಗಾತ್ರ

'ಚೀನಾದ ಉಹಾನ್‌ ಎಂಬ ಪ್ರದೇಶದಲ್ಲಿ ಕೋವಿಡ್‌ 19 ಎಂಬ ಸೋಂಕು ಹುಟ್ಟಿಕೊಂಡಿತು' ಎಂದೇ ವಿಶ್ವದಾದ್ಯಂತ ನಂಬಲಾಗಿದೆ. ಇದೊಂದು ಬಯೋ ವೆಪನ್‌ ಎಂದು ಅನುಮಾನಿಸಲಾಗಿದೆ. ಯುದ್ಧದಂತಹ ಸನ್ನಿವೇಶದಲ್ಲಿ ಶತ್ರು ದೇಶದ ಮೇಲೆ ಪ್ರಯೋಗಿಸಲು ಚೀನಾ ಅಭಿವೃದ್ಧಿ ಪಡಿಸಿದ್ದ ಸೋಂಕು ಸೋರಿಕೆಯಾಗಿ ವಿಶ್ವವನ್ನೇ ಸಂಕಷ್ಟಕ್ಕೆ ಸಿಲುಕಿದೆ ಎಂದೂ ವಾದಿಸಲಾಗುತ್ತಿದೆ.

2011ರಲ್ಲಿ ಬಿಡುಗಡೆಯಾದ ಕಾಂಟಜಿಯನ್‌ ಎಂಬ ಸಿನಿಮಾದಲ್ಲಿ ಇಂತಹ ಸೋಂಕು ಹಾಂಗ್‌ಕಾಂಗ್‌ನಲ್ಲಿ ಹುಟ್ಟಿ, ಪ್ರಪಂಚದಾದ್ಯಂತ ವಿಸ್ತರಿಸಿಕೊಳ್ಳುವ ಅಂಶವಿದ್ದುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಕೊರೊನಾ ವೈರಸ್‌ 20 ಸಾವಿರ ವರ್ಷಗಳ ಹಿಂದೆಯೇ ಭೂಮಿಯ ಮೇಲಿದ್ದಿರಬಹುದು ಎಂದು ಸಂಶೋಧಕರು ತಿಳಿಸಿರುವುದು ಕುತೂಹಲ ಕೆರಳಿಸಿದೆ.

20 ಸಾವಿರ ವರ್ಷಗಳ ಹಿಂದೆ ಪೂರ್ವ ಏಷ್ಯಾದಲ್ಲಿ ಕೊರೊನಾ ಸೋಂಕು ಹರಡಿದ್ದಿರಬಹುದು. ಚೀನಾ, ಜಪಾನ್‌ ಮತ್ತು ವಿಯೆಟ್ನಾಮ್‌ನ ಜನರ ಡಿಎನ್‌ಎ ಅಲ್ಲಿ ಇದಕ್ಕೆ ಪೂರಕವಾದ ಅಂಶ ಪತ್ತೆಯಾಗಿದೆ. ಈ ಪ್ರದೇಶಗಳ ಜನರ 42 ವಂಶವಾಹಿಯಲ್ಲಿ ಕೊರೊನಾ ವೈರಸ್‌ ಕುಟುಂಬದ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯು ಆನುವಂಶಿಕ ರೂಪಾಂತರಗಳಲ್ಲಿ ಪತ್ತೆಯಾಗಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ. 'ಕರೆಂಟ್‌ ಬಯಾಲಜಿ'ಯಲ್ಲಿ ಬಿಡುಗಡೆಯಾದ ಅಧ್ಯಯನ ಲೇಖನದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಕರೆಂಟ್ ಬಯಾಲಜಿಯಲ್ಲಿ ಪ್ರಕಟಗೊಂಡ ಲೇಖನದಲ್ಲಿ ಏನಿದೆ?
ಕೊರೊನಾ ಸೋಂಕು ಸಾರ್ಸ್‌-ಕೋವ್‌-2ನಿಂದಾಗಿ ಉದ್ಭವಿಸಿರುವ ಕೋವಿಡ್‌ 19 ಎಂಬ ಅಂಟುರೋಗವು ವಿಶ್ವದಾದ್ಯಂತ 38 ಲಕ್ಷಕ್ಕೂ ಹೆಚ್ಚು ಜನರ ಪ್ರಾಣವನ್ನು ಕಿತ್ತುಕೊಂಡಿದೆ. ಇದರಿಂದಾಗಿ ಕೋಟ್ಯಂತರ ಡಾಲರ್‌ಗಳಷ್ಟು ನಷ್ಟ ಸಂಭವಿಸಿದೆ. ಕೊರೊನಾ ವೈರಸ್‌ ಕುಟುಂಬಕ್ಕೆ ಮೆರ್ಸ್‌(MERS) ಮತ್ತು ಸಾರ್ಸ್‌ (SARS) ವೈರಸ್‌ಗಳು ಸಂಬಂಧಿಗಳಾಗಿವೆ. ಇವು ಕಳೆದ 20 ವರ್ಷಗಳಲ್ಲಿ ಭಾರಿ ಪ್ರಮಾಣದ ಸಾವುನೋವಿಗೆ ಕಾರಣವಾಗಿದ್ದವು.

ಪೂರ್ವ ಇತಿಹಾಸದಲ್ಲಿ ವ್ಯಾಪಿಸಿದ ಸೋಂಕಿನ ಬೆನ್ನುಹತ್ತಿದರೆ ಭವಿಷ್ಯದ ಸೋಂಕು ಹರಡುವಿಕೆಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಹಕಾರಿ ಆಗಬಹುದು ಎಂಬುದನ್ನು ನಮ್ಮ ಅಧ್ಯಯನ ಫಲಿತಾಂಶ ಹೇಳುತ್ತಿದೆ.

20ನೇ ಶತಮಾನದಲ್ಲಿ ಮೂರು ಬಗೆಯ ಇನ್‌ಫ್ಲೂವೆಂಜಾ ವೈರಸ್‌ ಕಾಣಿಸಿಕೊಂಡು ಲಕ್ಷಂತಾರ ಪ್ರಾಣ ಹಾನಿಗಳು ಸಂಭವಿಸಿವೆ. 1918-20ರಲ್ಲಿ ಸ್ಪಾನಿಶ್‌ ಫ್ಲೂ, 1957-58ರಲ್ಲಿ ಏಷ್ಯನ್‌ ಫ್ಲೂ ಮತ್ತು 1968-69ರಲ್ಲಿ ಹಾಂಗ್‌ಕಾಂಗ್‌ ಫ್ಲೂ ಎಂಬ ಸಾಂಕ್ರಾಮಿಕ ರೋಗಗಳು ಕೊರೊನಾ ವೈರಸ್‌ಗೂ ಮೊದಲು ಅಪಾರ ಪ್ರಾಣ ಹಾನಿಗಳಿಗೆ ಕಾರಣವಾಗಿವೆ. ಸಾಂಕ್ರಮಿಕ ರೋಗದ ಇತಿಹಾಸವನ್ನು ಕೆದಕಿದರೆ ಸಾವಿರಾರು ವರ್ಷಗಳ ಹಿಂದಕ್ಕೆ ಹೋಗುತ್ತದೆ. ಮನುಷ್ಯನ ಉಗಮದ ಇತಿಹಾಸದಷ್ಚೇ ಸೋಂಕಿನ ಇತಿಹಾಸವಿರಬಹುದು ಎಂದೆನಿಸುತ್ತದೆ.

ಪ್ರಾಚೀನ ವಲಸಿಗರಿಂದ ಸೋಂಕು ಹರಡಲು ಕಾರಣವಾಗಿರುತ್ತದೆ. ಹೊಸ ಪ್ರದೇಶಗಳಿಗೆ ಹೋದಾಗ ರೋಗ ಉಂಟು ಮಾಡುವ ರೋಗಾಣುಗಳನ್ನು ಎದುರಿಸುವ ಸಂದರ್ಭ ಎದುರಾಗುತ್ತದೆ. ವಾತಾವರಣದ ಸವಾಲಿನ ಜೊತೆಗೆ ರೋಗಾಣುಗಳ ದಾಳಿಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಉತ್ಪಾದನೆ ಚುರುಕುಗೊಂಡಿರುತ್ತದೆ. ಹಾಗಾಗಿ ಪೂರ್ವಜರು ಸಂರಕ್ಷಿತರಾಗಿದ್ದಾರೆ. ಹೀಗೆ ರೋಗಾಣುಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯು ಅಭಿವೃದ್ಧಿಯಾಗುತ್ತ ಬಂದಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಸೋಂಕಿನ ಸರಳ ರಚನೆಯಲ್ಲಿ ಒಂದೇ ಗುರಿ ಹೊಂದಿರುತ್ತದೆ. ತನ್ನದೇ ಹೆಚ್ಚೆಚ್ಚು ನಕಲುಗಳನ್ನು ಅಭಿವೃದ್ಧಿ ಪಡಿಸುವುದೇ ಅದರ ಕೆಲಸ. ಆದರೆ ಅವುಗಳು ಅಷ್ಟು ಸರಳವಾಗಿ ಸ್ವತಂತ್ರವಾಗಿ ಉತ್ಪದಾನೆ ಮಾಡಲು ಅಶಕ್ತವಾಗಿವೆ. ಬೇರೆ ಜೀವಕೋಶಗಳ ಜೊತೆ ಸಂಯೋಗಗೊಂಡು ಅಥವಾ ಅವುಗಳ ಮೇಲೆ ದಾಳಿ ನಡೆಸಿ ತನ್ನ ವಂಶವನ್ನು ಹೆಚ್ಚಿಸಿಕೊಳ್ಳಬಲ್ಲವು. ಜೀವಕೋಶದಲ್ಲಿರುವ ನಿರ್ದಿಷ್ಟ ಪ್ರೋಟಿನ್‌ ಜೊತೆಗೆ ಪರಸ್ಪರ ಪ್ರಭಾವ ಬೀರಿದರೆ ಸೋಂಕಿನ ದಟ್ಟತೆ ಹೆಚ್ಚುತ್ತದೆ. ಈ ನಿರ್ದಿಷ್ಟ ಪ್ರೋಟಿನ್‌ಅನ್ನು ವೈರಲ್‌ ಇಂಟೆರಾಕ್ಟಿವ್‌ ಪ್ರೋಟಿನ್ಸ್‌(VIPs) ಎನ್ನಲಾಗುತ್ತದೆ.

ಪ್ರಾಚೀನ ಸೋಂಕಿಗೆ ಪುರಾವೆ
ವಿಶ್ವದಾದ್ಯಂತ 26 ಪ್ರದೇಶಗಳಲ್ಲಿ ಸುಮಾರು 2,500 ಜನರ ಜೀನೋಮ್‌ಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಸೋಂಕಿನ ಜೊತೆಗೆ ಪರಸ್ಪರ ಪ್ರಭಾವ ಹೊಂದಬಲ್ಲ ಪ್ರೋಟಿನ್‌ ಇರುವ 42 ವಿವಿಧ ಮಾನವ ವಂಶವಾಹಿಗಳಲ್ಲಿ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯು ಅಭಿವೃದ್ಧಿ ಆಗಿರುವುದನ್ನು ಗಮನಿಸಿದ್ದೇವೆ. ಇಂತಹ ವಿಐಪಿಗಳ ಗುರುತು ಪ್ರಸ್ತುತ ಪೂರ್ವ ಏಷ್ಯಾದ ಐದು ಜನಸಮುದಾಯದಲ್ಲಿ ಕಾಣಿಸಿಕೊಂಡಿದೆ. ಇದರಿಂದ ಪೂರ್ವ ಏಷ್ಯಾದ ಜನರ ಪೂರ್ವಜರು ಕೊರೊನಾ ವೈರಸ್‌ನಂತಹ ರೋಗಗಳನ್ನು ಎದುರಿಸಿದ್ದಾರೆ ಎಂಬುದು ತಿಳಿಯುತ್ತದೆ ಎಂದಿದ್ದಾರೆ.

ಹೆಚ್ಚುವರಿಯಾಗಿ 42 ವಂಶವಾಹಿಗಳು ಶ್ವಾಸಕೋಶದಲ್ಲೇ ಪತ್ತೆಯಾಗಿರುವುದು ಸಂಶೋಧನಾ ವರದಿಗೆ ಪುಷ್ಠಿ ನೀಡಿದೆ. ಪ್ರಸ್ತುತ ಕೋವಿಡ್‌ 19 ಸೋಂಕು ಪ್ರಮುಖವಾಗಿ ಶ್ವಾಸಕೋಶದ ಮೇಲೆ ದಾಳಿ ನಡೆಸುತ್ತಿರುವುದರಿಂದ ಸಂಶೋಧಕರ ಅಧ್ಯಯನ ವರದಿಗೂ ಸಾಮ್ಯತೆ ಬರುತ್ತಿದೆ. ಸಾರ್ಸ್‌-ಕೋವ್‌-2 ವೈರಾಣುಗಳ ಜೊತೆಗೆ 42 ವಂಶವಾಹಿಗಳಲ್ಲಿ ಕಂಡುಬಂದ ವಿಐಪಿಗಳು ನೇರವಾಗಿ ಸಂಪರ್ಕ ಹೊಂದುವುದನ್ನು ಪತ್ತೆ ಮಾಡಿರುವುದಾಗಿ ಸಂಶೋಧಕರು ಹೇಳಿದ್ದಾರೆ. ಕೋವಿಡ್‌ 19ರ ಮೂಲ ಸಾರ್ಸ್‌-ಕೋವ್‌-2 ಆಗಿರುವುದರಿಂದ ಅಧ್ಯಯನ ವರದಿಗೆ ಹೆಚ್ಚು ತೂಕ ಸಿಕ್ಕಿದೆ.

ಬರಹ: ಯಾಸಿನ್‌ ಸೌಯ್ಲಿಮಿ ಮತ್ತು ರೇ ಟೊಬ್ಲರ್‌, ಆಸ್ಟ್ರೇಲಿಯನ್‌ ನ್ಯಾಷನಲ್‌ ಯೂನಿವರ್ಸಿಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT