ಶನಿವಾರ, ಜನವರಿ 23, 2021
26 °C

ಕೊರೊನಾ ಒಂದಿಷ್ಟು ತಿಳಿಯೋಣ: ಲಸಿಕೆ ಪಡೆದವರಿಂದಲೂ ಸೋಂಕು ಹರಡುವುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19ಗೆ ಲಸಿಕೆ ಬಂದಿರುವುದು ಎಲ್ಲರಲ್ಲೂ ಸಮಾಧಾನ ತಂದಿದ್ದು, ಸಾಮಾನ್ಯ ಬದುಕಿಗೆ ಹಿಂದಿರುಗುವ ತವಕದಲ್ಲಿದ್ದಾರೆ. ಆದರೆ ಲಸಿಕೆ ಹಾಕಿಸಿಕೊಂಡ ತಕ್ಷಣ ಜನಜೀವನ 2019ರ ತರಹ ಆಗಿಬಿಡುತ್ತದೆ ಎಂದುಕೊಳ್ಳಬೇಡಿ ಎಂದು ವಿಜ್ಞಾನಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಲಸಿಕೆ ಪಡೆದುಕೊಂಡ ನಂತರವೂ ಮಾಸ್ಕ್‌ ಹಾಕಿಕೊಂಡೇ ಇರಬೇಕು ಎಂದು ತಜ್ಞರು ನೀಡಿರುವ ಎಚ್ಚರಿಕೆ ಮುಂದಿನ ದಾರಿ ಅಷ್ಟೊಂದು ಸುಗಮವಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿದೆ. ಅಂದರೆ ಲಸಿಕೆ ಪಡೆದುಕೊಂಡ ಜನರು ಕೊರೊನಾ ಸೋಂಕು ಹರಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿ ಗೊತ್ತಾಗಿಲ್ಲ. ಹೆಚ್ಚು ಕಡಿಮೆ ಜಗತ್ತಿನ ಎಲ್ಲರಿಗೂ ಲಸಿಕೆ ನೀಡುವವರೆಗೂ ವೈರಸ್‌ ಸೋಂಕು ಹರಡುತ್ತಲೇ ಇರುತ್ತದೆ ಅಥವಾ ನೈಸರ್ಗಿಕವಾಗಿ ಕೆಲವರು ಈ ಸೋಂಕಿನಿಂದ ಪಾರಾಗಬಹುದು ಅಷ್ಟೇ ಎಂದು ಅಮೆರಿಕದ ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞರಾದ ಪ್ರೊ. ಜಿಪ್ಸಿಯಾಂಬರ್‌ ಡಿಸೋಜ ವಿಶ್ವವಿದ್ಯಾಲಯದ ಜರ್ನಲ್‌ನಲ್ಲಿ ಬರೆದ ಲೇಖನದಲ್ಲಿ ಹೇಳಿದ್ದಾರೆ.

ಎರಡು ಡೋಸ್‌ (2–3 ವಾರಗಳ ಅಂತರದಲ್ಲಿ) ಲಸಿಕೆ ಹಾಕಿಸಿಕೊಂಡವರ ಬದುಕಿನಲ್ಲೂ ಅಂತಹ ಬದಲಾವಣೆ ತಕ್ಷಣ ಸಾಧ್ಯವಿಲ್ಲ. ನಿತ್ಯದ ಓಡಾಟವನ್ನು ಹೆಚ್ಚು ಭಯವಿಲ್ಲದೇ ಮಾಡಬಹುದು. ಅಪಾಯಕಾರಿ ಜಾಗದಲ್ಲಿ ಕೆಲಸ ಮಾಡುವವರು, ಉದಾಹರಣೆಗೆ ಆರೋಗ್ಯ ಕ್ಷೇತ್ರದಲ್ಲಿರುವವರಿಗೆ ಅಪಾಯ ಕಡಿಮೆಯಾಗಬಹುದು. ಆದರೆ ಲಸಿಕೆ ಪಡೆದುಕೊಂಡವರು ಮಾಸ್ಕ್‌ ಧರಿಸುವುದು ಕಡ್ಡಾಯ ಹಾಗೂ ಹೆಚ್ಚು ಜನರಿರುವ ಕಡೆ ಓಡಾಡಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಎಲ್ಲರ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು ಎಂಬ ಮಾತನ್ನೂ ಸೇರಿಸಿದ್ದಾರೆ.

ಈ ಮೊದಲಿನ ಅಂಕಿ– ಅಂಶಗಳ ಪ್ರಕಾರ ಲಸಿಕೆ ಪಡೆದ ಮೇಲೆ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡುವುದು ಕಡಿಮೆಯಾಗಬಹುದು. ಆದರೆ ಈ ಪಿಡುಗನ್ನು ಪೂರ್ತಿಯಾಗಿ ನಿಲ್ಲಿಸುವ ಸಂಭವ ಕಡಿಮೆ ಎನ್ನುತ್ತಾರೆ ಅವರು. ನಿಮ್ಮ ಸ್ನೇಹಿತರು, ನೀವು ಸಾಮಾಜಿಕವಾಗಿ ಬೆರೆಯುವಂಥವರು ಲಸಿಕೆ ತೆಗೆದುಕೊಂಡರೆ ಅಷ್ಟು ಸಮಸ್ಯೆ ಇಲ್ಲ. ಆದರೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸಿ ಎನ್ನುತ್ತಾರೆ ತಜ್ಞರು.

ಎಷ್ಟೋ ಜನರಿಗೆ ಲಕ್ಷಣರಹಿತ ಸೋಂಕು ಇರುತ್ತದೆ. ಹೀಗಾಗಿ ಇತರರಿಗೆ ಹರಡುವ ಸಾಧ್ಯತೆ ಇದ್ದೇ ಇರುತ್ತದೆ. ಇನ್ನೊಂದು ಮಹತ್ವದ ಅಂಶವೆಂದರೆ ಲಸಿಕೆಯನ್ನು ಸ್ನಾಯುವಿಗೆ ಕೊಡಲಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸಿ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಅಂದರೆ ಲಸಿಕೆ ಪಡೆದುಕೊಂಡವರಿಗೆ ರಕ್ಷಣೆ ಸಿಗಬಹುದು. ಆದರೆ ಇಂಥವರು ಸೀನು ಹೊಡೆದಾಗ ಈಗಾಗಲೇ ಮೂಗಿನಲ್ಲಿರುವ ವೈರಸ್‌ ಹೊರಗೆ ಸಿಡಿದು ಇತರರಿಗೆ ಸೋಂಕು ಹರಡುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಇಲ್ಲ ಎನ್ನಲಾಗಿದೆ. ಈ ಬಗ್ಗೆ ಕ್ಲಿನಿಕಲ್ ಪ್ತಯೋಗದಲ್ಲೂ ಗಮನಹರಿಸಿಲ್ಲ. ಫ್ಲು ಲಸಿಕೆಯ ಆಧಾರದಲ್ಲಿ ಲಸಿಕೆ ಪಡೆದುಕೊಂಡವರು ಸೋಂಕು ಹರಡುವುದಿಲ್ಲ ಎಂದಷ್ಟೇ ಸಂಶೋಧಕರು ದೃಢಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು