ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಬಗ್ಗೆ ಒಂದಷ್ಟು ತಿಳಿಯೋಣ: ರಕ್ತ ಹೆಪ್ಪುಗಟ್ಟಿದಲ್ಲಿ ಹೃದಯಕ್ಕೆ ಅಪಾಯ

Last Updated 28 ನವೆಂಬರ್ 2020, 20:29 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕವೂ ವೈರಾಣು ಈ ಮೊದಲು ಉಂಟುಮಾಡಿದ ನಕಾರಾತ್ಮಕ ಪರಿಣಾಮಗಳಿಂದ ಕೆಲವರಿಗೆ ರಕ್ತವು ಹೆಪ್ಪುಗಟ್ಟಿ, ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ’ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಕೊರೊನಾ ಸೋಂಕು ಹೆಚ್ಚಿನ ಅಪಾಯ ಉಂಟುಮಾಡಲಿದೆ ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ. ಸೋಂಕಿನಿಂದ ಚೇತರಿಸಿಕೊಂಡ ಬಳಿಕವೂ ಕೆಲವರ ಆರೋಗ್ಯದ ಮೇಲೆ ವೈರಾಣು ನಕಾರಾತ್ಮಕ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಕೋವಿಡ್‌ ಪೀಡಿತರಲ್ಲಿ ಕೆಲವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೀಗಾಗಿ ಕೋವಿಡ್‌ ಪ್ರಕರಣಗಳು ಇಳಿಮುಖ ಕಂಡರೂ ಸೂಕ್ತ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ.

‘ಕೋವಿಡ್‌ ಪೀಡಿತರಿಗೆ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿ, ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಸಂಭವಿಸುತ್ತಿರುವ ಕೆಲವು ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಕಾರಣವಾಗಿದೆ. ವೈರಾಣುಗಳು ದೇಹದ ಮೇಲೆ ನಡೆಸುವ ದಾಳಿಯಿಂದ ಹೃದಯದ ಮಾಂಸಖಂಡಗಳಲ್ಲಿ ಉರಿ ಊತ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಹೃದಯದ ಕ್ಷಮತೆ ಕಡಿಮೆ ಆಗಲಿದೆ. ರಕ್ತವು ಹೆಪ್ಪುಗಟ್ಟಿದ ಬಳಿಕ ಶ್ವಾಸಕೋಶಕ್ಕೆ ಹೋಗುವ ರಕ್ತನಾಳಗಳು ಮುಚ್ಚಿಹೋಗುವ ಸಾಧ್ಯತೆ ಇರುತ್ತದೆ. ಅದೇ ರೀತಿ, ಕಾಲು, ಮಿದುಳಿಗೆ ಹೋಗುವ ರಕ್ತನಾಳಗಳು ಕೂಡ ಕೆಲವು ಪ್ರಕರಣಗಳಲ್ಲಿ ಮುಚ್ಚಿರುವುದು ಗಮನಕ್ಕೆ ಬಂದಿದೆ’ ಎಂದು ರಾಜರಾಜೇಶ್ವರಿನಗರದ ಎಸ್.ಎಸ್. ಸ್ವರ್ಶ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ವಿಕ್ರಾಂತ್ ವೀರಣ್ಣ ಅವರು ತಿಳಿಸಿದರು.

‘ಕೋವಿಡ್‌ನಿಂದ ಅಂಗಾಂಗಗಳಿಗೆ ಹಾನಿಯಾಗುವ ಜತೆಗೆ ದೇಹದ ವಿವಿಧ ಭಾಗಗಳಲ್ಲಿ ರಕ್ತವು ಹೆಪ್ಪುಗಟ್ಟಲಿದೆ. ಹಾಗಾಗಿ ರಕ್ತವು ಹೆಪ್ಪುಗಟ್ಟುವುದನ್ನು ತಡೆಯಲು ಒಂದೂವರೆ ತಿಂಗಳವರೆಗೂ ಔಷಧ ನೀಡಲಾಗುತ್ತದೆ. ಚೇತರಿಸಿಕೊಂಡ ಬಳಿಕವೂ ಹೆಚ್ಚಿನ ವಿಶ್ರಾಂತಿ ಪಡೆಯಬೇಕಾಗುತ್ತದೆ. ಈಗಾಗಲೇ ಹೃದಯ ಸಮಸ್ಯೆ ಇರುವವರಿಗೆ ಕೊರೊನಾ ಸೋಂಕು ತಗುಲಿದಲ್ಲಿ ಇನ್ನಷ್ಟು ಸಂಕೀರ್ಣ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸೋಂಕಿನ ತೀವ್ರತೆ ಹೆಚ್ಚು ಇರಲಿದೆ. ಹಾಗಾಗಿ ಹೆಚ್ಚಿನ ಜಾಗೃತಿ ವಹಿಸಬೇಕು’ ಎಂದು ಹೇಳಿದರು.

‘ಎಲ್ಲ ವಯೋಮಾನದವರಿಗೂ ರಕ್ತವು ಹೆಪ್ಪುಗಟ್ಟಿ, ರಕ್ತನಾಳವು ಮುಚ್ಚುವ ಸಾಧ್ಯತೆ ಇರುತ್ತದೆ. ಚೇತರಿಸಿಕೊಂಡ ಬಳಿಕ ಮತ್ತೆ ಉಸಿರಾಟದ ಸಮಸ್ಯೆ, ಹೃದಯ ಸಮಸ್ಯೆ, ಪಾರ್ಶ್ವವಾಯು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಆಸ್ಪತ್ರೆಗೆ ತೆರಳಿ, ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗದಂತೆ ತಡೆಯಲು ಒಂದುವರೆ ತಿಂಗಳವರೆಗೆ ಔಷಧವನ್ನು ಪಡೆದರೆ ಸಾಕಾಗುತ್ತದೆ. ಚಳಿಗಾಲ ಇರುವುದರಿಂದ ವೈರಾಣುಗಳು ಹೆಚ್ಚಿನ ಅವಧಿ ಸಕ್ರಿಯವಾಗಿರುವ ಸಾಧ್ಯತೆ ಇರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT