ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಗುಣಮುಖರಾದ ಆರು ತಿಂಗಳ ನಂತರವೂ ಕಾಡುವ ಶ್ವಾಸಕೋಶದ ಸಮಸ್ಯೆ

ಕೊರೊನಾ ಒಂದಿಷ್ಟು ತಿಳಿಯೋಣ
Last Updated 11 ಜನವರಿ 2021, 18:45 IST
ಅಕ್ಷರ ಗಾತ್ರ

ಕೋವಿಡ್‌–19ನಿಂದ ಗುಣಮುಖರಾದ ನಾಲ್ವರಲ್ಲಿ ಮೂವರಿಗೆ ಆರು ತಿಂಗಳ ನಂತರವೂ ತೀವ್ರ ಆಯಾಸ, ಖಿನ್ನತೆ, ಕುಂದಿದ ಶ್ವಾಸಕೋಶದ ಕಾರ್ಯಕ್ಷಮತೆ ಮೊದಲಾದ ಸಮಸ್ಯೆಗಳಿವೆ ಎಂದು ಚೀನಾದ ವುಹಾನ್‌ನಲ್ಲಿ ಕೋವಿಡ್‌ ರೋಗಿಗಳ ಮೇಲೆ ನಡೆದ ವಿಸ್ತೃತವಾದ ಅಧ್ಯಯನದಿಂದ ತಿಳಿದು ಬಂದಿದೆ.

ಕೊರೊನಾ ಸೋಂಕಿನಿಂದ ಮುಕ್ತರಾದ ಲಕ್ಷಾಂತರ ಮಂದಿ ಇಂತಹ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಯಾವಾಗ ಕಡಿಮೆಯಾಗಬಹುದು ಎಂದು ಕಾತರದಿಂದ ಕಾಯುತ್ತಿದ್ದಾರೆ.

ಅತ್ಯಂತ ದೊಡ್ಡ ಅಧ್ಯಯನ ಎಂದೇ ಹೇಳಲಾಗಿರುವ ಇದರಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರನ್ನು ವೈದ್ಯರು ಸಂಪರ್ಕಿಸಿ ಅವರು ಈಗಲೂ ಅನುಭವಿಸುತ್ತಿರುವ ಸಮಸ್ಯೆಗಳ ಪಟ್ಟಿ ಮಾಡಿದ್ದಾರೆ. ಬಳಲಿಕೆ, ನಿದ್ರಾಹೀನತೆ, ಖಿನ್ನತೆ, ಆತಂಕ, ಶ್ವಾಸಕೋಶದ ಕಾರ್ಯನಿರ್ವಹಣೆಯಲ್ಲಿ ಏರುಪೇರು... ಹೀಗೆ ಹಲವು ತೊಂದರೆಗಳು ಇನ್ನೂ ಇವೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಲಾನ್ಸೆಟ್‌’ ಜರ್ನಲ್‌ನಲ್ಲಿ ಈ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದೆ. ಕೋವಿಡ್‌–19 ಮೊದಲು ಕಾಣಿಸಿಕೊಂಡ ಸ್ಥಳ ಎನ್ನಲಾದ ವುಹಾನ್‌ನ ಆಸ್ಪತ್ರೆಯಲ್ಲಿ ಜನವರಿಯಿಂದ ಮೇವರೆಗೆ ಚಿಕಿತ್ಸೆ ಪಡೆದು ಬಿಡುಗಡೆಯಾದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ರೋಗಿಗಳ ದೈಹಿಕ ಪರೀಕ್ಷೆ, ಎದೆಯ ಸಿಟಿ ಸ್ಕ್ಯಾನ್‌, ಅಲ್ಟ್ರಾಸೌಂಡ್‌, ಶ್ವಾಸಕೋಶದ ಪರೀಕ್ಷೆಗಳನ್ನು ನಡೆಸಲಾಗಿದೆ.

ಹೆಚ್ಚಿನವರಲ್ಲಿ ಸ್ನಾಯು ದೌರ್ಬಲ್ಯ ಕಾಣಿಸಿಕೊಂಡಿದೆ. ನಿದ್ರಾಹೀನತೆ ಹಾಗೂ ಖಿನ್ನತೆ ಕೂಡ ಸಾಮಾನ್ಯ ಸಮಸ್ಯೆಗಳು. ಆದರೆ ಈ ಅಧ್ಯಯನದಲ್ಲಿ ರೋಗಿಗಳ ಮೆದುಳು ಹಾಗೂ ನರಮಂಡಲದ ಕಾರ್ಯಕ್ಷಮತೆಯನ್ನು ಪರಿಗಣಿಸಿಲ್ಲ. ಹಾಗೆಯೇ ಮರೆವಿನ ಕಾಯಿಲೆ ಇದ್ದವರ ಸಂದರ್ಶನವನ್ನೂ ನಡೆಸಿಲ್ಲ.

ಆಸ್ಪತ್ರೆಗೆ ದಾಖಲಾದ ಹೆಚ್ಚಿನವರಿಗೆ ವೆಂಟಿಲೇಶನ್‌ ನೀಡಲಾಗಿತ್ತು. ವೆಂಟಿಲೇಶನ್‌ ನೆರವು ಪಡೆಯದವರೂ ಕೂಡ ಕೋವಿಡ್‌–19ನಿಂದ ಗುಣಮುಖರಾದ ಆರು ತಿಂಗಳ ನಂತರ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದಾರೆ. ಅಂದರೆ ಶ್ವಾಸಕೋಶದಿಂದ ರಕ್ತಕ್ಕೆ ಸೇರುವ ಆಮ್ಲಜನಕದ ಮಟ್ಟದಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಇಷ್ಟು ದಿನಗಳ ನಂತರವೂ ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಈ ಸಮಸ್ಯೆ ಎದುರಿಸುತ್ತಿದ್ದು, ತೊಂದರೆ ಕಡಿಮೆಯಾಗುವ ಲಕ್ಷಣಗಳಿಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗೆ ಸೇರುವ ಮುನ್ನ ಕಿಡ್ನಿ ಸರಿಯಾಗಿ ಕೆಲಸ ಮಾಡುತ್ತಿದ್ದ ರೋಗಿಗಳಲ್ಲಿ ಈಗ ಈ ಅಂಗದ ಕಾರ್ಯಕ್ಷಮತೆ ಕಡಿಮೆಯಾಗಿದೆ.

2003ರಲ್ಲಿ ಸಾರ್ಸ್‌ ಪೀಡಿತರಲ್ಲಿ ಕೂಡ ಶ್ವಾಸಕೋಶದ ಸಮಸ್ಯೆಯಾಗಿತ್ತು. ಬದುಕುಳಿದವರಲ್ಲಿ 15 ವರ್ಷಗಳ ನಂತರವೂ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆಯೇ ಹೊರತು ಸರಿ ಹೋಗಿಲ್ಲ ಎಂದು ಇಟಲಿಯ ತಜ್ಞರು ಕೂಡ ಹೇಳಿರುವುದು ಕೋವಿಡ್‌–19ನಿಂದ ಗುಣಮುಖರಾದವರಲ್ಲೂ ಆತಂಕವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT