ಭಾನುವಾರ, ಮಾರ್ಚ್ 26, 2023
23 °C

ಕ್ಷೇಮ ಕುಶಲ | ಅತಿಯಾದರೆ ಅಮೃತವೂ ವಿಷ!

ಡಿ. ಎಂ. ಹೆಗಡೆ Updated:

ಅಕ್ಷರ ಗಾತ್ರ : | |

Prajavani

‘ಕೊರೊನಾದ ಪ್ರತಾಪ ಇನ್ನೂ ಮುಗಿದಿಲ್ಲ; ಇನ್ನೂ ಮೂರ್ನಾಲ್ಕು ವರ್ಷ ಇದರ ಅಲೆಗಳು ಆಗಾಗ ಬಂದು ಅಪ್ಪಳಿಸುತ್ತಲೇ ಇರುತ್ತವೆ. ಜನರಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗುವ ತನಕ ಇದು ಹೀಗೇ ಮುಂದುವರೆಯುತ್ತದೆ. ನಾವು ನಿಸರ್ಗದ ನಿಯಮವನ್ನು ಅರ್ಥ ಮಾಡಿಕೊಳ್ಳಬೇಕು. ಆಹಾರ, ಆಚಾರಗಳನ್ನು ಬದಲಾಯಿಸಿಕೊಳ್ಳಬೇಕು. ಸಹಜವಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು’ – ಎನ್ನುವುದು ನನ್ನ ಮಿತ್ರರೊಬ್ಬರ ಸ್ಪಷ್ಟ ಅಭಿಪ್ರಾಯ.

ಇಷ್ಟಾಗಿಯೂ ನನ್ನ ಗೆಳತಿ ಅನಿತಾ ರೆಡ್ಡಿ ಹೇಳಿದ್ದನ್ನು ನಿಮಗೆ ಹೇಳಬೇಕು. ಆಕೆಯ ಚಿಕ್ಕಮ್ಮ ಒಬ್ಬರು ವಹಿಸಿದ ಅತಿಯಾದ ಕಾಳಜಿಯ ದುಷ್ಪರಿಣಾಮದ ಬಗ್ಗೆ ನಾವು ತಿಳಿದುಕೊಳ್ಳಬೇಕು. ಐವತ್ತೈದರ ಆಕೆಗೆ ಕೊರೊನಾದ ಬಗ್ಗೆ ಅತಿಯಾದ ಆತಂಕವಿತ್ತು. ಅತಿರಂಜಿತ ವರದಿಗಳಿಂದ ಆಕೆ ಗಾಬರಿಗೊಂಡಿದ್ದರು. ಅವರನ್ನು ಅತಿಯಾದ ಭಯ ಆವರಿಸಿಕೊಂಡಿತ್ತು.

ಯೂಟ್ಯೂಬ್‌, ವಾಟ್ಸ್‌ಆ್ಯಪ್‌ಗಳಲ್ಲಿ ಬಂದ ವಿಡಿಯೊಗಳನ್ನು ನೋಡಿದರು. ಅವರಿವರ ಪುಕ್ಕಟೆ ಸಲಹೆಗಳನ್ನು ಕೇಳಿದರು. ದಿನಕ್ಕೆ ಮೂರ್ನಾಲ್ಕು ಸಲ ಸ್ನಾನ ಮಾಡಿದರು. ಹತ್ತಾರು ಸಲ ಕೈ ತೊಳೆದುಕೊಂಡರು. ಮನೆಯನ್ನು ಸ್ವಚ್ಛಗೊಳಿಸುವುದು ನಿತ್ಯದ ಕಾಯಕವಾಯಿತು. ಇಷ್ಟರ ಜೊತೆಗೆ ಬೆಳಗಿನಿಂದ ರಾತ್ರಿಯ ತನಕ ಬೇರೆ ಬೇರೆ ರೀತಿಯ ಕಷಾಯಗಳನ್ನು ಕುಡಿದರು. ಹಸಿದ ಹೊಟ್ಟೆಗೊಂದು ಕಷಾಯ. ಉಂಡಮೇಲೊಂದು ಕಷಾಯ. ಸಾಯಂಕಾಲಕ್ಕೊಂದು ಕಷಾಯ. ರಾತ್ರಿ ಮಲಗುವ ಮೊದಲೊಂದು ಕಷಾಯ. ಅಂತೇನೇನೋ ಮಾಡಿದರು. ಮನೆಯವರಿಗೂ ಕಷಾಯವನ್ನು ಕುಡಿಸಿದರು. ಪಥ್ಯ ಮಾಡಿದರು. ತನಗೆ ಮತ್ತು ತನ್ನ ಮನೆಯವರಿಗೆ ಕೊರೊನಾ ಬಂದು ಕಾಡಬಾರದೆಂದು ಹರಕೆ ಹೊತ್ತರು. ಇಷ್ಟರಲ್ಲಾಗಲೇ ಆಕೆಯ ಸಾಮಾನ್ಯಜ್ಞಾನ ಕೈಕೊಟ್ಟಿತ್ತು. ಲಾಕ್‌ಡೌನ್‌ ಇತ್ತಾದ್ದರಿಂದ ಜನಸಂಪರ್ಕವೂ ಇರಲಿಲ್ಲ. ತೀರ ಅನಿರೀಕ್ಷಿತವಾದ ಈ ಸಮಸ್ಯೆಯನ್ನು ಎಲ್ಲರೂ ಅವರದ್ದೇ ಆದ ತಿಳಿವಳಿಕೆಯಂತೆ ನಿರ್ವಹಿಸುತ್ತಿದ್ದರು. ಅವರವರ ಥಿಯರಿಯನ್ನು ಕೇಳಿದವರಿಗೂ ಹೇರುತ್ತಿದ್ದರು. ಹೀಗೆಯೇ ಕೆಲವು ತಿಂಗಳು ಕಳೆದವು.

ಕೊರೊನಾದ ಮೊದಲನೆಯ ಅಲೆ ಮುಗಿದು ಜನಜೀವನ ನಿಟ್ಟುಸಿರು ಬಿಡುವ ಸಮಯಕ್ಕೆ ಈಕೆಯ ಮೈತೂಕ ಗಮನಾರ್ಹವಾಗಿ ಇಳಿದಿತ್ತು. ಅಶಕ್ತತೆ ಕಾಡತೊಡಗಿತ್ತು. ಆಸ್ಪತ್ರೆಗೆ ಹೋಗಲೇಬೇಕಾದ ಪರಿಸ್ಥಿತಿಯೂ ಬಂತು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆಯ ಸ್ವಯಂವೈದ್ಯಕೀಯವನ್ನು ಬಿಡುವಂತೆ ಗದರಿಸಿದರು. ಹೀಗೇ ನಿತ್ಯ ಪಥ್ಯ, ಕಷಾಯ ಮುಂದುವರೆಸಿದರೆ ಆರೋಗ್ಯ ಹದಗೆಡಲಿಕ್ಕೆ ಕೊರೊನಾ ಪಾಸಿಟಿವ್‌ ಬರಬೇಕಾಗಿಲ್ಲ. ಪರಿಸ್ಥಿತಿ ಕೈಮೀರುವ ಮೊದಲು ಸಮತೋಲನವಾದ ಆಹಾರವನ್ನು ಶುರು ಮಾಡಿ ಎಂದು ಬುದ್ಧಿ ಹೇಳಿದರು. ವೈದ್ಯರ ಮಾತನ್ನು ಅರೆ ಮನಸ್ಸಿನಿಂದಾದರೂ ಕೇಳಿದ ಆಕೆ ಕೆಲವು ದಿನಗಳಲ್ಲಿ ನಿಧಾನವಾಗಿ ಸಹಜ ಸ್ಥಿತಿಗೆ ಬಂದರಂತೆ.

ಅತಿಯಾದ ಕಾಳಜಿ, ಅತಿಯಾದ ಪಥ್ಯ, ಅತಿಯಾದ ಕಷಾಯ ಸೇವನೆ, ಅತಿಯಾದ ಉಪವಾಸಗಳಿಂದ ಅನಾಹುತವಾಗುವ ಸಂಭವಗಳೇ ಜಾಸ್ತಿ. ಮನೆ, ಮೈ, ಮನಸ್ಸು ಸ್ವಚ್ಛವಾಗಿರಬೇಕು. ಕಾಯಿಸಿದ ನೀರನ್ನು ಕುಡಿಯಬೇಕು. ತೊಳೆದು ಒಣಗಿಸಿದ ಬಟ್ಟೆಯನ್ನು ಧರಿಸಬೇಕು. ಎರಡು ತಿಂಗಳಿಗೊಮ್ಮೆಯಾದರೂ ಹಾಸಿಗೆ ಬಟ್ಟೆಯನ್ನು ತೊಳೆದು ಒಣಗಿಸಬೇಕು. ವರ್ಷಕ್ಕೆ ನಾಲ್ಕು ಸಲ ಕಿಟಕಿಯ ಕರ್ಟನ್‌ಗಳನ್ನು ತೊಳೆದು ಸ್ವಚ್ಛಗೊಳಿಸಬೇಕು. ಮನೆ ಮತ್ತು ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿರುವಂತೆ ಗಮನಹರಿಸಬೇಕು. ಎಲ್ಲವೂ ನಿಜ. ಆದರೆ ಯಾವುದೇ ಆದರೂ ಅತಿಯಾದರೆ ಅದರಿಂದ ಅನಾಹುತವೇ ಆಗುತ್ತದೆ ಎನ್ನುವುದನ್ನೂ ಅರಿತಿರಬೇಕು.

ಯಾವುದನ್ನೂ ಅತಿರೇಕಕ್ಕೆ ಕೊಂಡೊಯ್ಯಬಾರದು. ಮಾತಾದರೂ ಅಷ್ಟೇ. ಮೌನವಾದರೂ ಅಷ್ಟೇ. ಊಟವಾದರೂ ಅಷ್ಟೇ. ಆಟವಾದರೂ ಅಷ್ಟೇ. ಎಲ್ಲಕ್ಕೂ ಒಂದು ಇತಿಮಿತಿ ಇರಬೇಕು. ಒಳ್ಳೆಯ ಆಹಾರ ಎಂದು ಜಾಸ್ತಿ ತಿಂದರೆ ಅಜೀರ್ಣವಾಗುತ್ತದೆ. ಲಿಂಬು ತಿಂದರೆ ಅಸಿಡಿಟಿ; ಹಾಲು ಕುಡಿದರೆ ಗ್ಯಾಸು. ಮೊಸರು ತಿಂದರೆ ಶೀತ. ಮಾಂಸ ತಿಂದರೆ ಪಾಪ. ಬರೀ ತರಕಾರಿ ತಿಂದರೆ ಸಾಲದು. ಬೇರೇನೇನನ್ನೋ ತಿನ್ನಲು ಆಗದು. ಹೀಗೇ ಪ್ರತಿಯೊಬ್ಬರದ್ದೂ ಒಂದೊಂದು ವಾರಾತ.

ನಮ್ಮ ಆರೋಗ್ಯವನ್ನು ನಾವು ಹೇಗೆ ಸರಿಯಾಗಿಟ್ಟುಕೊಳ್ಳಬಹುದು ಎನ್ನುವುದನ್ನು ನಾವೇ ಗಮನಿಸಿಕೊಂಡು ಅದರಂತೆ ಅನುಸರಿಸಿಕೊಂಡು ಹೋಗಬೇಕು. ಅವರಿಗಾಗಿದ್ದು ನಿಮಗೆ ಆಗದಿರಬಹುದು. ತೀರ್ಥ ಕುಡಿದರೆ ಶೀತ. ಆರತಿ ತಗೊಂಡರೆ ಉಷ್ಣ ಎನ್ನುವ ನಾಜೂಕಿನವರು ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಒಳ್ಳೆಯದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು