ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಗಾಳಿಯ ಗುಣಮಟ್ಟ ಹದಗೆಟ್ಟಲ್ಲಿ ಅಪಾಯ

ಕೊರೊನಾ ಒಂದಷ್ಟು ತಿಳಿಯೋಣ
Last Updated 12 ನವೆಂಬರ್ 2020, 21:46 IST
ಅಕ್ಷರ ಗಾತ್ರ

ಬೆಂಗಳೂರು: ಪಟಾಕಿಗಳ ಸಿಡಿತ ಸೇರಿದಂತೆ ವಿವಿಧ ಕಾರಣಗಳಿಂದ ಗಾಳಿಯ ಗುಣಮಟ್ಟ ಹದಗೆಟ್ಟು, ವಾಯುಮಾಲಿನ್ಯ ಹೆಚ್ಚಿದಲ್ಲಿ ಕೋವಿಡ್ ಪೀಡಿತರು ಅಪಾಯದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಮಳೆಗಾಲ ಹಾಗೂ ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಸಹಜವಾಗಿಯೇ ವಾಯುಮಾಲಿನ್ಯದಿಂದ ಉಸಿರಾಟ ಸಂಬಂಧಿ ಕಾಯಿಲೆಗಳು ತೀವ್ರಗೊಳ್ಳುತ್ತವೆ. ಹಾಗಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳನ್ನು ಹೊಡೆಯದಿರುವುದು ಉತ್ತಮ. ದೀರ್ಘಕಾಲೀನ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳು (ಸಿಒಪಿಡಿ), ಅಸ್ತಮಾ ಹಾಗೂ ಕೋವಿಡ್‌ನಿಂದ ಬಳಲುತ್ತಿರುವವರ ಶ್ವಾಸಕೋಶಕ್ಕೆ ಪಟಾಕಿಗಳ ಹೊಗೆಯು ಅಪಾಯ ಮಾಡುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

‘ಪಟಾಕಿಗಳಿಂದ ಹೊರಹೊಮ್ಮುವ ಕಣ ದ್ರವ್ಯಗಳು (ಪಾರ್ಟಿಕ್ಯುಲೇಟ್ ಮ್ಯಾಟರ್) ಕೋವಿಡ್‌ ಹರಡುವಿಕೆಗೆ ಸಹಕಾರಿಯಾಗಲಿವೆ. ಪಟಾಕಿಗಳಲ್ಲಿರುವ ಸಿಡಿಮದ್ದುಗಳು ಮಲಿನಕಾರಕಗಳನ್ನು ಹೊಂದಿದ್ದು, ಇದು ಗಾಳಿಯ ಗುಣಮಟ್ಟವನ್ನೂ ಹದಗೆಡಿಸುತ್ತದೆ. ಕಾರ್ಬನ್, ಗಂಧಕಗಳ ಜತೆಗೆ ಕೆಲವು ಸಿಡಿಮದ್ದುಗಳಲ್ಲಿ ಆರ್ಸೆನಿಕ್, ಮ್ಯಾಂಗನೀಸ್‌ಗಳು ಇರುತ್ತವೆ. ಹೊಗೆಯಲ್ಲಿ ಸೇರುವ ಇದರ ಕಣಗಳು ಶ್ವಾಸಕೋಶಕ್ಕೆ ಕಿರಿಕಿರಿ ಉಂಟುಮಾಡಲಿವೆ. ಈ ವೇಳೆ ಕಾಣಿಸಿಕೊಳ್ಳುವ ಉಸಿರಾಟದ ಸಮಸ್ಯೆಗಳನ್ನು ಕೆಲವರಿಗೆ ಗುರುತಿಸುವುದು ಕಷ್ಟವಾಗಬಹುದು. ಯಾವುದೇ ರೀತಿಯ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಂಡರೂ ಕೂಡಲೇ ತಪಾಸಣೆಗೆ ಒಳಪಡುವುದು ಉತ್ತಮ’ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ಶ್ರೀವತ್ಸ ಲೋಕೇಶ್ವರನ್ ತಿಳಿಸಿದರು.

ಚಳಿಗಾಲದಲ್ಲಿ ಹೆಚ್ಚಿನ ರಕ್ಷಣೆ ಅಗತ್ಯ: ‘ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಎಚ್ಚರ ತಪ್ಪಬಾರದು. ಚಳಿಗಾಲ ಪ್ರಾರಂಭವಾಗಿರುವುದರಿಂದ ಹೆಚ್ಚಿನ ಸುರಕ್ಷತೆ ವಹಿಸಬೇಕಾಗುತ್ತದೆ. ವೃದ್ಧರು, ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಹಬ್ಬಗಳ ಸಂಭ್ರಮದಲ್ಲಿ ಮೈಮರೆತು, ಜನರು ಗುಂಪುಗೂಡಿದಲ್ಲಿ ಕೋವಿಡ್ ಮತ್ತೆ ದ್ವಿಗುಣಗೊಳ್ಳಬಹುದು. ಪಟಾಕಿ ಹೊಗೆಯನ್ನು ಸೋಂಕಿತರು ಸೇವಿಸಿದಲ್ಲಿ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಲಸಿಕೆ ಅಭಿವೃದ್ಧಿಯಾಗುವವರೆಗೂ ಪರಸ್ಪರ ಅಂತರ ಕಾಯ್ದುಕೊಳ್ಳುವ ಜತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದರು.

‘ಕೋವಿಡ್ ಸಾಂಕ್ರಾಮಿಕ ರೋಗವಾಗಿರುವುದರಿಂದ ಸುಲಭವಾಗಿ ಹೋಗುವುದಿಲ್ಲ. ಸ್ನೇಹಿತರ ಭೇಟಿ ಸೇರಿದಂತೆ ನಾನಾ ಕಾರಣಗಳಿಗೆ ಹೊರಗಡೆ ತಿರುಗಾಡುವುದನ್ನು ಕಡಿಮೆ ಮಾಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT