ಗುರುವಾರ , ಜನವರಿ 21, 2021
29 °C
ಕೊರೊನಾ ಸೀಟಿ ಊದಿದ ಎರಿಕ್‌ ಫಿಗಲ್‌ ಡಿಂಗ್‌ನ ಟ್ವೀಟ್‌ ಯಾತ್ರೆ!

PV Web Exclusive | ಕೋವಿಡ್‌ 19 ‘ಅಪಶಕುನ’ದ ಹಕ್ಕಿ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ವರ್ಷಾರಂಭದಲ್ಲಿ ಒಂದು ದೊಡ್ಡ ಉದ್ಗಾರದೊಂದಿಗೆ ಆರಂಭವಾದ ಎರಿಕ್‌ ಫಿಗಲ್‌ ಡಿಂಗ್‌ ಅವರ ಟ್ವೀಟ್‌ ಸರಣಿಯು ವರ್ಷದುದ್ದಕ್ಕೂ ಕೊರೊನಾ ಕುರಿತ ಸಾರ್ವಜನಿಕ ಸಂವಹನ ಕೌಶಲ, ಜಾಗತಿಕ ಆರೋಗ್ಯ ನೀತಿಗಳು, ಕೋವಿಡ್‌ನಿಂದ ಸಂರಕ್ಷಣೆ, ಕೋವಿಡ್‌ ನಿರೋಧಕ ಲಸಿಕೆ ತಯಾರಿಕೆ ಕುರಿತ ಹಲವು ನೆಲೆಗಳ ಚರ್ಚೆಗಳನ್ನೂ ಬೆಚ್ಚಗಿಟ್ಟಿತ್ತು ಎಂಬುದಂತೂ ನಿಜ.

***

ಫೆಡರೇಶನ್‌ ಆಫ್‌ ಅಮೆರಿಕನ್‌ ಸೈಂಟಿಸ್ಟ್‌ನ ಸಾಂಕ್ರಾಮಿಕ ರೋಗಶಾಸ್ತ್ರ ತಜ್ಞ, ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್‌ ಫಿಗಲ್‌ ಡಿಂಗ್‌ ಜನವರಿ 20ರಂದು ಮೊಟ್ಟ ಮೊದಲಿಗೆ ಕೊರೊನಾ ಸೋಂಕಿನ ಕುರಿತು ಟ್ವೀಟ್‌ ಮೂಲಕ ಎಚ್ಚರಿಕೆಯ ಸೀಟಿ ಊದಿದಾಗ ವ್ಯಂಗ್ಯಕ್ಕೀಡಾಗಿದ್ದರು!

ಸಹೋದ್ಯೋಗಿಗಳು, ಸುದ್ದಿಮಾಧ್ಯಮಗಳು, ವಿಜ್ಞಾನಿಗಳು ‘ಅವರೊಬ್ಬ ಅಳಲೆಕಾಯಿ ಪಂಡಿತ’, ‘ಪ್ರಚಾರ ಪ್ರಿಯ’ ಎಂದು ಅಪಹಾಸ್ಯ ಮಾಡಿ ನಕ್ಕಿದ್ದರು. ಇನ್ನೂ ಪ್ರಕಟವಾಗದೇ ಇರುವ ಸಂಶೋಧನೆಯ ತುಣುಕೊಂದನ್ನು ನಂಬುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದರು.

ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಕಲಿತು ಬಂದ, ಚೈನಾದ ಶಾಂಘೈ ಮೂಲದ 37 ವರ್ಷ ವಯಸ್ಸಿನ ಡಿಂಗ್‌ ಸುಮ್ಮನೇ ಕೂರಲಿಲ್ಲ. ಹಾಗೆಂದು ಟ್ವೀಟ್‌ಗಳನ್ನೂ ನಿಲ್ಲಿಸಲಿಲ್ಲ. ತಮ್ಮ ಬಳಿ ಇದ್ದ ಅಂಕಿ ಅಂಶ, ಮಾಹಿತಿ ಮತ್ತು ತಮ್ಮ ಸಂಶೋಧನೆಯಿಂದ ಕಂಡುಕೊಂಡ ಹೊಳಹುಗಳನ್ನು ಆಧರಿಸಿ ಹೆಚ್ಚು ಮಾತನಾಡಲಾರಂಭಿಸಿದರು. ತೀವ್ರ ವಿವಾದ, ಕುಹಕ, ಟೀಕೆಗಳಿಗೆ ಗುರಿಯಾದ ಟ್ವೀಟ್‌ಗಳು ಅವರಿಗೆ ಅಪಾರ ಜನಪ್ರಿಯತೆಯನ್ನೂ ತಂದುಕೊಟ್ಟವು.

ವರ್ಷವಿಡೀ ಜಗತ್ತು ಕೋವಿಡ್‌ನಿಂದಾಗಿಯೇ ಅಪಾರ ಸಾವು ನೋವುಗಳಿಗೆ ಸಾಕ್ಷಿಯಾಗಿದೆ. ಮತ್ತೊಂದು ಸುತ್ತಿನಲ್ಲಿ ಸೋಂಕು ಹಬ್ಬುವ ಆತಂಕವೂ ಹೆಚ್ಚುತ್ತಿದೆ. ಕೋವಿಡ್‌ಗೆ ಲಸಿಕೆ ಯಾವಾಗ ಬರುತ್ತದೆ? ಯಾರಿಗೆ ಮೊದಲು ಸಿಗುತ್ತದೆ? ಎಂಬ ಧಾವಂತಗಳ ನಡುವೆ ಡಿಂಗ್‌ ಟ್ವೀಟ್‌ಗಳು ಜಾಗತಿಕವಾಗಿ ಜಾಗೃತಿಯ ಸೀಟಿ ಊದುತ್ತಲೇ ಇವೆ ಎಂಬುದೇ ವಿಶೇಷ.


ಸಾಂಕೇತಿಕ ಚಿತ್ರ

ಮಾಸ್ಕ್‌ ಧರಿಸಿ ಅನುಸರಿಸಬೇಕಾದ ಸುರಕ್ಷೆಯ ನಡೆ, ಸಮುದಾಯದ ಸೋಂಕು ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಬಗೆ ಹಾಗೂ ಎರಡನೇ ಸುತ್ತಿನಲ್ಲಿ ಸೋಂಕು ಹಬ್ಬುವ ಕುರಿತು ಜಗತ್ತಿನಲ್ಲಿ ನಡೆದಿರುವ ವೈವಿಧ್ಯಮಯ ಚರ್ಚೆಗಳ ಕಡೆಗೆ ಈಗ ಡಿಂಗ್‌ ಗಮನವಿದೆ. ಅವರ ಪ್ರಕಾರ ‘ಕೋವಿಡ್ ಸೋಂಕಿನ ಕುರಿತ ಅಂಕಿ ಅಂಶಗಳು ಒಂದು ದಿಕ್ಕಿನಲ್ಲಿದ್ದರೆ, ಚರ್ಚೆಗಳು ಇನ್ನೊಂದು ದಿಕ್ಕಿನಲ್ಲಿವೆ’. ಇದೂ ಚರ್ಚಾಸ್ಪದ ವಿಷಯವೇ. ಇಂಥ ವಿಷಯಗಳೇ ಅವರ ಟ್ವೀಟ್‌ಗಳ ಕೇಂದ್ರಬಿಂದು.

ಡಿಂಗ್‌ಗೆ ಇಮೋಜಿಗಳು, ದೊಡ್ಡಕ್ಷರಗಳು ಹಾಗೂ ಉತ್ಪ್ರೇಕ್ಷಿತ ಹೇಳಿಕೆಗಳೆಂದರೆ ಬಹಳ ಇಷ್ಟ. ಅವರ ಮೊದಲ ವಿವಾದಿತ ಟ್ವೀಟ್‌ನ ಮೊದಲ ಮೂರು ಪದಗಳು ‘HOLY MOTHER OF GOD'. (’ಅಯ್ಯೋ ದೇವರೇ’ ಎಂಬಂತೆ). ಒಂದು ಅಭೂತಪೂರ್ವ ಅಚ್ಚರಿ, ಬೆರಗಿನ ಕುರಿತು ಹೇಳಲು ಇಂಗ್ಲಿಷ್‌ನಲ್ಲಿ ಬಳಸುವ ಈ ಉದ್ಗಾರವನ್ನೇ ಅವರು ಕೋವಿಡ್‌ ಕುರಿತು ಹೇಳಲು ಬಳಸಿಕೊಂಡಿದ್ದರು. ಆ ಟ್ವೀಟ್‌ನಲ್ಲಿ ಮುಂದುವರೆದು, ‘the new coronavirus is a 3.8!!!’ ಎಂದು ಬರೆದಿದ್ದರು.

ಒಬ್ಬ ಸೋಂಕಿತನಿಂದ ಮತ್ತೆ ಎಷ್ಟು ಮಂದಿಗೆ ಸೋಂಕು ಹಬ್ಬಬಹುದು ಎಂಬ ಅಂಕಿ ಅಂಶ ಅದು. 2003ರಲ್ಲಿ ಚೈನಾದಲ್ಲಿ ಕಂಡು ಬಂದಿದ್ದ ತೀವ್ರ ಉಸಿರಾಟದ (SARS) ಸೋಂಕಿಗಿಂತಲೂ ಎಂಟು ಪಟ್ಟು ಹೆಚ್ಚು ವೇಗದಲ್ಲಿ ಕೊರೊನಾ ಸೋಂಕು ಹರಡುತ್ತದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು. ’ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಪರಿಸ್ಥಿತಿಯನ್ನು ಆದಷ್ಟೂ ಬೇಗ ಘೋಷಿಸುವುದು ಒಳ್ಳೆಯದು’ ಎಂಬ ಸಂದೇಶವೂ ಅವರ ಟ್ವೀಟ್‌ನಲ್ಲಿತ್ತು.

ಆದರೆ, ಅವರ ಟ್ವೀಟ್‌ ‘ಅತಿ ಭಯಾನಕವಾಗಿದೆ’ ಮತ್ತು ‘ಸಮುದಾಯದ ದಾರಿ ತಪ್ಪಿಸುವಂತಿದೆ’ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಸೈನ್ಸ್‌ ಜರ್ನಲಿಸ್ಟ್‌ಗಳು ಟೀಕಿಸಿದ್ದರು. ಸಂಶೋಧಕರು, ‘ಪರಿಸ್ಥಿತಿಯು ಅವರ ಟ್ವೀಟ್‌ನಲ್ಲಿರುವಷ್ಟು ತೀವ್ರವಾಗೇನೂ ಇಲ್ಲ’ ಎಂದೂ ಪ್ರತಿಪಾದಿಸಿದ್ದರು. ಆ ಬಳಿಕ ಡಿಂಗ್‌ ತಮ್ಮ ಟ್ವೀಟ್‌ಗಳನ್ನು ತೆಗೆದುಹಾಕಿದ್ದರೂ ಅದರ ಪ್ರಭಾವ ಕೊರೊನಾದಂತೆಯೇ ಹಬ್ಬಿದ್ದಾಗಿತ್ತು.

ಕೋವಿಡ್‌ 19 ಬಗ್ಗೆ ಡಿಂಗ್‌ ಮಾತನಾಡುವವರೆಗೂ ಅವರಿಗೆ ಟ್ವಿಟರ್‌ನಲ್ಲಿ 2 ಸಾವಿರ ಮಂದಿ ಫಾಲೋಯರ್‌ಗಳಿದ್ದರು. ಆ ಒಂದು ಟ್ವೀಟ್‌ ಪರಿಣಾಮವಾಗಿಯೇ ಫಾಲೋಯರ್‌ಗಳ ಸಂಖ್ಯೆ 2.5 ಲಕ್ಷ ಮುಟ್ಟಿತ್ತು! ಹಲವು ಪ್ರಭಾವಿಗಳು, ಆಡಳಿತಗಾರರು, ಪತ್ರಕರ್ತರೂ ಅವರ ಕಡೆಗೆ ಕುತೂಹಲದಿಂದ ನೋಡಲಾರಂಭಿಸಿದ್ದರು.


ಸಾಂಕೇತಿಕ ಚಿತ್ರ

ಅಮೆರಿಕಾದ ಪತ್ರಕರ್ತ ಡೇವಿಡ್‌ ವಾಲೆಸ್‌ ವೆಲ್ಸ್, ಮಾರ್ಚ್‌ನಲ್ಲಿ ‘ಕೊರೊನಾ ವೈರಸ್‌ ಬಗ್ಗೆ ಎಚ್ಚರಿಕೆ ಗಂಟೆಯನ್ನು ಬಾರಿಸುವುದು ಯಾಕೆ ಕಷ್ಟಕರವಾಗಿತ್ತು?’ (Why was it so hard to raise the alarm on the corona virus?) ಎಂಬ ಲೇಖನವನ್ನು New york Intelligencer ನಲ್ಲಿ ಬರೆದು ಡಿಂಗ್‌ ರೀತಿಯಲ್ಲಿ ಸೀಟಿ ಊದುವವರನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಹೇಳಿದ್ದರು.

‘ಟೀಕಿಸುವವರಿಗಿಂತಲೂ ಹೆಚ್ಚು ಓದುಗರ ಗಮನ ಸೆಳೆದಿದ್ದ ಟ್ವೀಟ್‌ ಪ್ರಕಟವಾದ ಎರಡು ತಿಂಗಳೊಳಗೆ ಜಾಗತಿಕವಾಗಿ ಕೊರೊನಾ ಸಂಕಟ ಹಬ್ಬಿ ಅಪಾರ ಸಾವು ನೋವುಗಳುಂಟಾದವು. ಸ್ವತಃ ಅಮೇರಿಕಾ ಕೂಡ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿದ್ದು ಒಂದು ಮಹಾ ಪ್ರಮಾದವೇ ಆಗಿತ್ತು. ಎಚ್ಚರಿಕೆಯ ಸೀಟಿ ಊದುವವರನ್ನು ಸುಮ್ಮನೇ ಪಕ್ಕಕ್ಕಿಡುವ ನಿರ್ಲಕ್ಷ್ಯದ ಧೋರಣೆ ಬದಲಾಗದೇ ಇರುವುದೇ ಸದ್ಯದ ಬಿಕ್ಕಟ್ಟಿಗೆ ಕಾರಣ’ ಎಂದೂ ಅವರು ವಿಷಾದಿಸಿದ್ದರು.

’ಖಚಿತವಾಗದೇ ಇದ್ದರೂ, ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆಯ ಸೀಟಿ ಊದುವುದು ಒಂದು ನೈತಿಕ ಜವಾಬ್ದಾರಿ’ ಎಂಬುದು ಡಿಂಗ್‌ ನಿಲುವು. ಈ ನಿಲುವು ಅವರ ಟ್ವೀಟ್‌ಗಳಲ್ಲಿ ಢಾಳಾಗಿ ಕಾಣಿಸುತ್ತಿದ್ದುದರಿಂದಲೇ ವಿಜ್ಞಾನಿಗಳು ಪ್ರತಿದಿನವೂ ಅವರಲ್ಲಿ ತಪ್ಪುಗಳನ್ನು ಹುಡುಕುತ್ತಿದ್ದರು. ತಪ್ಪುಗಳಿವೆ ಎನ್ನಿಸಿದ ಕೂಡಲೇ ಡಿಂಗ್‌ ಕೂಡ ತಮ್ಮದೇ ಟ್ವೀಟ್‌ಗಳನ್ನು ಮುಲಾಜಿಲ್ಲದೆ ತೆಗೆದುಬಿಡುತ್ತಿದ್ದರು. ಇದೇ ವೇಳೆ, ಅವರ ಟ್ವೀಟ್‌ಗಳು ಸಾರ್ವಜನಿಕ ನೀತಿ ನಿರೂಪಕರನ್ನೂ, ಕೊರೊನಾ ನಿಯಂತ್ರಣದ ದೃಷ್ಟಿಯಿಂದ, ಕುರ್ಚಿ ತುದಿಯಲ್ಲಿ ಕೂರುವಂತೆ ಮಾಡಿದ್ದವು ಎಂಬುದನ್ನೂ ಮರೆಯುವಂತಿಲ್ಲ.

ಇಂಥ ‘ವಿಲಕ್ಷಣ’ ನಡೆಯ ಡಿಂಗ್‌, ‘ಜಗತ್ತಿಗೆ ಎಚ್ಚರಿಕೆಯ ಸೀಟಿ ಊದುವವರು ಬೇಕು, ಅದರಲ್ಲೂ, ಅನಾಹುತ ಏರ್ಪಟ್ಟು ಎಲ್ಲವೂ ಮುಗಿದು ಹೋಗುವುದಕ್ಕಿಂತ ಮೊದಲು ಎಚ್ಚರಿಸುವವರು ಇಂದು ಹೆಚ್ಚು ಬೇಕು’ ಎನ್ನುತ್ತಾರೆ. ಅವರ ಟ್ವೀಟ್‌ ಸೀಟಿಯ ಮಹತ್ವ ಎಂಥದ್ದೆಂದರೆ, ದ ವಾಷಿಂಗ್ಟನ್‌ ಪೋಸ್ಟ್ (The Washington Post), ವಾಕ್ಸ್ (Vox), ಸ್ಯಾಲೊನ್ (Salon) ನಂಥ ಪ್ರತಿಷ್ಠಿತ ಮಾಧ್ಯಮಗಳಲ್ಲಿನ ಪ್ರಮುಖ ಚರ್ಚೆಗಳು ಈಗ ಅವರ ಟ್ವೀಟ್‌ಗಳ ಉಲ್ಲೇಖವಿಲ್ಲದೆ ಪೂರ್ಣಗೊಳ್ಳುವುದಿಲ್ಲ.

ಸಾಂಕ್ರಾಮಿಕ ರೋಗಶಾಸ್ತ್ರಕ್ಕಿಂತಲೂ ಡಿಂಗ್‌, ಅದೇ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪೌಷ್ಟಿಕತೆ ಮತ್ತು ಕ್ಯಾನ್ಸರ್‌ ಕುರಿತು ಹೆಚ್ಚು ಸಂಶೋಧನೆ ನಡೆಸಿದವರು. ಆದರೆ ಸದ್ಯ ಕೋವಿಡ್‌ ಜೊತೆಗೆ ಅವರ ಹೆಸರು ಹೆಚ್ಚು ಬೆಸೆದುಕೊಂಡಿದೆ. ಈ ವೈರುಧ್ಯದ ಬಗ್ಗೆ ಹಲವು ಸಾಂಕ್ರಾಮಿಕ ರೋಗಶಾಸ್ತ್ರತಜ್ಞರ ಅಸಮಾಧಾನವೂ ವ್ಯಾಪಕವಾಗಿಯೇ ಇದೆ.

ಸಾಂಕ್ರಾಮಿಕ ರೋಗಶಾಸ್ತ್ರ ತಜ್ಞೆ ಪೋಪೆಸ್ಕ್ ಅವರು ಡಿಂಗ್‌ ಕುರಿತು ‘ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಾನು ಹೃದಯರೋಗ ತಜ್ಞರ ಬಳಿಗೆ ಹೋಗಲಾರೆ. ಸಾಂಕ್ರಾಮಿಕ ರೋಗಶಾಸ್ತ್ರ ತಜ್ಞರೆಂದು ಕರೆದುಕೊಂಡು ತಮ್ಮನ್ನೇ ಮಾರಿಕೊಳ್ಳುವವರ ಬಗ್ಗೆ ಏನು ಮಾತನಾಡುವುದು’ ಎಂದು ನೀಡಿರುವ ಹೇಳಿಕೆಯು ಅಂಥ ಅಸಮಾಧಾನಕ್ಕೆ ಒಂದು ನಿದರ್ಶನವಷ್ಟೇ.

ಅಷ್ಟಕ್ಕೇ ಸುಮ್ಮನಾಗುವಂತಿಲ್ಲ. ಡಿಂಗ್‌ ಅವರನ್ನು ಟೀಕಿಸುವವರನ್ನು ತರಾಟೆಗೆ ತೆಗೆದುಕೊಳ್ಳುವ ಉಗ್ರ ಅಭಿಮಾನಿಗಳೂ ಇದ್ದಾರೆ! ಟ್ವೀಟ್‌ ಸಮರವೂ ಇದೆ. ಅಂಥ ಅಭಿಮಾನಿ ಸಮರಿಗರನ್ನು ಡಿಂಗ್‌ ತಮ್ಮ ಪಟ್ಟಿಯಿಂದ ತೆಗೆದಿರುವ ನಿದರ್ಶನಗಳೂ ಇವೆ.

‘ವಿಜ್ಞಾನವು ಘನತೆಯಿಂದ ಕೂಡಿರಬೇಕು. ಸಾರ್ವಜನಿಕವಾಗಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು’ ಎಂಬ ಪ್ರತಿಪಾದನೆ ಡಿಂಗ್‌ ಅವರದ್ದು. ಹೀಗಾಗಿಯೇ ಅವರು ತಮ್ಮ ಸಹೋದ್ಯೋಗಿಗಳೇ ತಮ್ಮನ್ನು ಟೀಕಿಸಿದಾಗಲೂ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೇ ಅವು‘ವಿಜ್ಞಾನ ವಿರೋಧಿ ಟ್ರೋಲ್‌ಗಳು (anti-science trolls)’ ಎಂದು ಪ್ರತಿಕ್ರಿಯಿಸಿದ್ದೂ ಉಂಟು.

’ಪರಸ್ಪರರ ನಿಲುವುಗಳ ಕುರಿತ ಭಿನ್ನಾಭಿಪ್ರಾಯಗಳನ್ನು ಖಾಸಗಿ ಸಂವಹನದ ಮೂಲಕ ಬಗೆಹರಿಸಿಕೊಳ್ಳದಿದ್ದರೆ ಜನ ವಿಜ್ಞಾನಿಗಳನ್ನು ನಿರ್ಲಕ್ಷ್ಯಿಸುವ ಅಪಾಯವಿರುತ್ತದೆ’ ಎಂಬ ನಂಬಿಕೆಯ ಡಿಂಗ್‌, ತಮ್ಮನ್ನು ಟೀಕಿಸುವವರೊಂದಿಗೆ ಖಾಸಗಿಯಾಗಿಯೇ ಚರ್ಚಿಸಲು ಬಯಸುವುದರ ಬಗ್ಗೆಯೂ ವಿರೋಧಗಳು ವ್ಯಕ್ತವಾಗಿವೆ.

ಹಾಗೆ ವಿರೋಧಿಸಿದವರು, ‘ನಾವು ಕೊರೊನಾ ಜೊತೆಗೆ ಬದುಕುತ್ತಿದ್ದೇವೆ. ಹೋರಾಡುತ್ತಿದ್ದೇವೆ. ಮುಂದೆಯೂ ಕೆಲಸ ಮಾಡಲಿದ್ದೇವೆ. ಆದರೆ ಡಿಂಗ್‌ ಆ ಬಗ್ಗೆ ಕೇವಲ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ’ ಎಂದು ನೀಡಿರುವ ಲಘು ಟೀಕೆಗಳಿಂದಲೂ ಡಿಂಗ್‌ ಕಂಗೆಟ್ಟಿಲ್ಲ ಎಂಬುದೇ ವಿಶೇಷ.

ಜನರ ಗಮನವನ್ನು ಗಕ್ಕನೆ ಸೆಳೆಯುವ ತಮ್ಮ ಸಾಮರ್ಥ್ಯದ ಕುರಿತು ಹೆಮ್ಮೆಪಡುವ ಡಿಂಗ್‌, ’ಒಂದು ಟ್ವೀಟ್‌ ಸಾಮಾನ್ಯವಾಗಿದ್ದರೆ ಹೆಚ್ಚೆಂದರೆ ಐದುನೂರು ರೀಟ್ವೀಟ್‌ಗಳನ್ನು ಪಡೆಯಬಹುದು. ಆದರೆ ಏನೂ ಪರಿಣಾಮ ಬೀರದು. ದೊಡ್ಡಮಟ್ಟದ ಪರಿಣಾಮ ಬೀರಬೇಕೆಂದರೆ ಕನಿಷ್ಠ ಸಾವಿರ ರೀಟ್ವೀಟ್‌ಗಳು ಬರಬೇಕು. ಒಮ್ಮೆ ಹಾಗೆ ಆದರೆ ಸಾಕು. ಟ್ವೀಟ್‌, ಹೆಡ್‌ಲೈನ್‌ಗಿಂತಲೂ ದೊಡ್ಡದಾಗಿ ಗಮನ ಸೆಳೆಯುವಂಥ ಮಾಹಿತಿ ಕೊಡಬೇಕಷ್ಟೇ’ ಎನ್ನುತ್ತಾರೆ. ಇಂಥ ಮಾತುಗಳ ಮೂಲಕ ಅವರು ತಜ್ಞ ಸಂವಹನಕಾರರಾಗಿಯೂ ಹೊಳೆಯುತ್ತಾರೆ.

ಇಂಥ ಡಿಂಗ್‌ ಕೆಲಸ ಮಾಡುವ ಫೆಡರೇಶನ್‌ ಮುಖ್ಯಸ್ಥರು ಅವರ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನೂ ಗಮನಿಸಲೇಬೇಕು. ‘ಫೆಡರೇಶನ್‌ನ ವಿಜ್ಞಾನಿಗಳ ಪೈಕಿ ಸೋಂಕಿನ ಬಗ್ಗೆ ಮೊದಲು ಮೌನ ಮುರಿದವರು ಡಿಂಗ್‌. ಹೀಗಾಗಿಯೇ ಈ ಕ್ಷಣದ ಲೇಟೆಸ್ಟ್‌ ಸುದ್ದಿಗಳ ಪಟ್ಟಿಯಲ್ಲಿ ಡಿಂಗ್‌ ಅವರ ಟ್ವೀಟ್‌ಗಳು ಇದ್ದೇ ಇರುತ್ತವೆ’ ಎನ್ನುತ್ತಾರೆ ಫೆಡರೇಶನ್‌ ಅಧ್ಯಕ್ಷ ನೌರಿ.

‘ಕೆಲವು ಆಯಾಮಗಳಲ್ಲಿ ಡಿಂಗ್‌ ಅವರ ಟ್ವೀಟ್‌ಗಳು ಅಸಮರ್ಪಕವಾಗಿರಬಹುದು. ಆದರೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಸರಿಯಾಗಿದ್ದರೆ ಸಾಕು’ ಎಂಬ ಅವರ ಮಾತು, ಡಿಂಗ್ ಟ್ವೀಟ್‌ಗಳ ವಿಲಕ್ಷಣ ರೂಪ, ಉತ್ಪ್ರೇಕ್ಷೆಗಷ್ಟೇ ಮಹತ್ವ ನೀಡಿ, ಅದರ ಹಿಂದಿನ ಮಾಹಿತಿಯನ್ನು ಅನುಮಾನಿಸಿದವರಿಗೆ ತಕ್ಕ ಉತ್ತರವಾಗಿಯೂ ಕಾಣುತ್ತದೆ.

ವರ್ಷಾರಂಭದಲ್ಲಿ ಒಂದು ದೊಡ್ಡ ಆತಂಕಿತ ಉದ್ಗಾರದೊಂದಿಗೆ ಆರಂಭವಾದ ಡಿಂಗ್‌ ಅವರ ಟ್ವೀಟ್‌ ಸರಣಿಯು ವರ್ಷದುದ್ದಕ್ಕೂ ಕೊರೊನಾ ಕುರಿತ ಸಾರ್ವಜನಿಕ ಸಂವಹನ ಕೌಶಲ, ಜಾಗತಿಕ ಆರೋಗ್ಯ ನೀತಿಗಳು, ಕೋವಿಡ್‌ನಿಂದ ಸಂರಕ್ಷಣೆ, ಕೋವಿಡ್‌ ನಿರೋಧಕ ಲಸಿಕೆ ತಯಾರಿಕೆ ಕುರಿತ ಹಲವು ನೆಲೆಗಳ ಚರ್ಚೆಗಳನ್ನು ಜಾಗತಿಕವಾಗಿ ಬೆಚ್ಚಗಿಟ್ಟಿತ್ತು ಎಂಬುದಂತೂ ನಿಜ.

(UNDARK ನಲ್ಲಿ ನವೆಂಬರ್‌ 25ರಂದು ಪ್ರಕಟವಾದ JANE C. HU ಅವರ Covid’s Cassandra: The Swift, Complicated Rise of Eric Feigl-Ding  ಸುದೀರ್ಘ ಲೇಖನ ಆಧಾರಿತ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು