ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಸಿಪಿಆರ್‌ ಎಂಬ ಹೃದಯ ಸಂಜೀವಿನಿ

Last Updated 22 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ನಾವು ‘ಹೃದಯ ಸ್ತಂಭನ’ ಎಂಬ ಶಬ್ದವನ್ನು ಹಲವಾರು ಬಾರಿ ಕೇಳುತ್ತಿದ್ದೇವೆ. ತೀರಾ ಇತ್ತೀಚೆಗಷ್ಟೇ ನಮ್ಮ ನೆಚ್ಚಿನ ನಟರೊಬ್ಬರು ಹೃದಯ ಸ್ತoಭನದಿಂದ ಮೃತಪಟ್ಟರೆಂದು ನಾವೆಲ್ಲಾ ಕಣ್ಣೀರು ಮಿಡಿದಿದ್ದೇವೆ. ಕೆಲವು ತಿಂಗಳ ಮೊದಲು ಹಿಂದಿ ಟಿವಿ ನಟರೋರ್ವರು ಕೂಡ ಹೀಗೆ ಮೃತಪಟ್ಟರೆಂದು ಸುದ್ದಿಯಾಗಿತ್ತು. ‘ಸಿಪಿಅರ್‌’ದಿಂದ ಹೃದಯ ಸ್ತoಭನಕ್ಕೆ ಚಿಕಿತ್ಸೆ ಮಾಡಬಹುದೇ?

ಸಿಪಿಅರ್‌ ಎಂದರೇನು – ಎಂದು ತಿಳಿದುಕೊಳ್ಳಲು ಇದು ಸಕಾಲ ಎನಿಸುತ್ತದೆ.

ಇದಕ್ಕೂ ಮೊದಲು ಹೃದಯ ಸ್ತಂಭನ (ಕಾರ್ಡಿಯಾಕ್‌ ಅರೆಸ್ಟ್‌) ಎಂದರೇನು – ಎಂದು ತಿಳಿದುಕೊಳ್ಳೋಣ.

ಹೃದಯ ಸ್ತಂಭನ ಎಂದರೆ ಹೃದಯದ ಬಡಿತ ಸ್ತಬ್ಧವಾಗಿ ರಕ್ತದ ಚಲನೆ ಸಂಪೂರ್ಣ ನಿಂತುಹೋಗುವುದು. ಹೃದಯ ಸ್ತಂಭನವೆಂದರೆ ಹೃದಯಾಘಾತವಲ್ಲ (ಹಾರ್ಟ್‌ ಆ್ಯಟಾಕ್‌), ಅದು ಬೇರೆ. ಹೃದಯದ ಪ್ರತಿಯೊಂದು ಬಡಿತ ರಕ್ತವನ್ನು ದೇಹದ ಮೂಲೆ ಮೂಲೆಗೂ ತಲುಪಿಸಿ ದೇಹದ ಪ್ರತಿಕಣವನ್ನೂ ಜೀವಂತವಾಗಿಡುತ್ತದೆ. ಹೃದಯದ ಬಡಿತವೇನಾದರೂ ಕೆಲ ನಿಮಿಷಗಳವರೆಗೆ ಸ್ತಬ್ಧವಾದರೆ ಸಾವು ಕಟ್ಟಿಟ್ಟ ಬುತ್ತಿ!

ಹೃದಯ ಸ್ತಂಭನವಾದಾಗ ವ್ಯಕ್ತಿಯು ಇದ್ದಕ್ಕಿದಂತೆಯೇ ಕುಸಿದುಬಿಡುತ್ತಾನೆ. ರಕ್ತದ ಚಲನೆ ಸಂಪೂರ್ಣ ನಿಂತುಹೋಗಿರುವುದರಿಂದ ಮೆದುಳಿಗೆ ಆಮ್ಲಜನಕದ ಪೂರೈಕೆ ತಪ್ಪಿ ವ್ಯಕ್ತಿಯು ಮೂರ್ಛೆ ಹೋಗುತ್ತಾನೆ. ಕೆಲ ಸಲ ಹೃದಯ ಸ್ತಂಭನಕ್ಕೆ ಸ್ವಲ್ಪ ಮುಂಚೆ ಆ ವ್ಯಕ್ತಿಗೆ ತೀವ್ರ ಎದೆನೋವು, ಉಸಿರಾಟದ ತೊಂದರೆ ಅಥವಾ ತಲೆತಿರುಗುವಿಕೆಯ ಲಕ್ಷಣಗಳು ಕಾಣಿಸಿಕೊಳ್ಳಬಹುದಾದರೂ ಇವೆಲ್ಲಾ ಕ್ಷಣಾರ್ಧದಲ್ಲಿ ನಡೆದುಹೋಗುವುದರಿಂದ ಆ ವ್ಯಕ್ತಿಯು ಸಹಾಯಯಾಚಿಸುವಷ್ಟರಲ್ಲಿ ಹೃದಯ ಸ್ತಂಭನವಾಗಿಬಿಟ್ಟಿರುತ್ತದೆ.

ಹೃದಯ ಸ್ತಂಭನವಾಗಲು ಹಲವಾರು ಕಾರಣಗಳಿವೆ:

1. ಹೃದಯಸಂಬಂಧಿ ಕಾಯಿಲೆಗಳು (ತೀವ್ರವಾದ ಹೃದಯಾಘಾತ, ಹೃದಯಬಡಿತದ ಲಯ ತಪ್ಪುವಿಕೆ)

2. ಇದ್ದಕ್ಕಿದ್ದಂತೆಯೇ ವಾಯುನಾಳ ಮುಚ್ಚಿಹೋಗುವುದು (ನೀರಿನಲ್ಲಿ ಮುಳುಗುವುದರಿಂದ, ತಿನ್ನುವ ಆಹಾರ ಸಿಕ್ಕಿಹಾಕಿಕೊಳ್ಳುವುದರಿಂದ)

3. ಯಾವುದೇ ರೀತಿಯ ಬೃಹತ್ ಆಘಾತ (ತಲೆಗೆ ತೀಕ್ಷ್ಣವಾದ ಪೆಟ್ಟು ಬೀಳುವುದು, ಅಪಘಾತವಾಗಿ ಸಿಕ್ಕಾಪಟ್ಟೆ ರಕ್ತಸ್ರಾವವಾಗುವುದು, ತೀವ್ರವಾದ ನೋವು ಇತ್ಯಾದಿ)

4. ಬರಸಿಡಿಲಿನಂತೆ ಎರಗುವ ಕೆಟ್ಟ ಸುದ್ದಿಯೂ ಕೂಡ ಕೆಲವೊಮ್ಮೆ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.

ಇನ್ನು ಹೃದಯ ಸ್ತಂಭನದ ಚಿಕಿತ್ಸೆಗೆ ಬಂದರೆ, ಅಲ್ಲಿ ಮುಖ್ಯವಾಗಿ ಮಾಡಬೇಕಾಗಿರುವುದು ಹೃದಯವನ್ನು ಪುನಶ್ಚೇತನಗೊಳಿಸಿ ಅದರ ಬಡಿತವನ್ನು ತತ್‌ಕ್ಷಣವೇ ಪುನಾರಂಭಿಸುವುದು. ಈ ಕೆಲಸವನ್ನೇ ‘ಸಿಪಿಅರ್‌’ ಅಥವಾ ‘ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್’ ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಕರೆಯುತ್ತಾರೆ. ಇದರಲ್ಲಿ, ನಮ್ಮ ಹಸ್ತಗಳ ಮೂಲಕ ಎದೆಯ ಹಂದರದಲ್ಲಿ ಪುಪ್ಪುಸದ ನಡುವೆ ಇರುವ ಹೃದಯವನ್ನು ಒತ್ತುತ್ತಾ ರಕ್ತವು ದೇಹಾದ್ಯಂತ ಚಲಿಸುವಂತೆ ನೋಡಿಕೊಳ್ಳಬೇಕು ಮತ್ತು ಬಾಯಿಯ ಮೂಲಕ ಉಸಿರನ್ನು ವ್ಯಕ್ತಿಯ ಶ್ವಾಸಕೋಶಗಳಿಗೆ ತಲುಪಿಸುವ ಪ್ರಯತ್ನ ಮಾಡಬೇಕು.

ಸಿಪಿಅರ್‌ನಲ್ಲಿ ಎರಡು ಭಾಗಗಳಿರುತ್ತವೆ. ಮೊದಲಿಗೆ, ಹೃದಯ ಸ್ತಂಭನವಾಗಿ ಮಲಗಿರುವ ವ್ಯಕ್ತಿಯ ಪಕ್ಕದಲ್ಲಿ ಕುಳಿತು ಎರಡೂ ಹಸ್ತಗಳನ್ನು (ಒಂದರ ಮೇಲೊಂದು) ಎದೆಯ ಮಧ್ಯಭಾಗಲ್ಲಿ ಇಟ್ಟು ಒತ್ತಬೇಕು. ಎದೆ ಸುಮಾರು ಎರಡು ಇಂಚುಗಳಷ್ಟು ಒಳಹೋಗಿ ಬರುವಷ್ಟು ಪ್ರಮಾಣದಲ್ಲಿ ಒತ್ತಬೇಕು. ಈ ರೀತಿ ನಿಮಿಷಕ್ಕೆ ಸುಮಾರು 100-120 ಬಾರಿ, ವೇಗದಿಂದ ಒತ್ತಬೇಕು. ಇದರಿಂದ ಹೃದಯ ಆಕುಂಚನ-ಸಂಕುಚನಗೊಂಡು ರಕ್ತಪರಿಚಲನೆ ಮತ್ತೆ ಪ್ರಾರಂಭವಾಗುತ್ತದೆ. ಎರಡನೆಯದಾಗಿ ವ್ಯಕ್ತಿಯ ತಲೆಯನ್ನು ನೇರವಾಗಿಟ್ಟು ಒಂದು ಕೈಯಿಂದ ಮೂಗನ್ನು ಮುಚ್ಚಿ, ಇನ್ನೊಂದು ಕೈಯನ್ನು ಗದ್ದದ ಮೇಲಿಟ್ಟು ಬಾಯನ್ನು ಸ್ವಲ್ಪ ಅಗಲಿಸಿ, ನಮ್ಮ ಬಾಯಿಯಿಂದ ವ್ಯಕ್ತಿಯ ಬಾಯಿಯನ್ನು ಸಂಪೂರ್ಣವಾಗಿ ಮುಚ್ಚಿ ನಮ್ಮ ಉಸಿರನ್ನು ನೀಡಬೇಕು. ಆಗ ನಮ್ಮ ಉಸಿರಿನಲ್ಲಿರುವ ಆಮ್ಲಜನಕ ವ್ಯಕ್ತಿಯ ಶ್ವಾಸಕೋಶಗಳಿಗೆ ತಲುಪಿ, ರಕ್ತನಾಳಗಳ ಮುಖಾಂತರ ಹೃದಯಕ್ಕೆ, ನಂತರ ದೇಹದ ಉಳಿದೆಲ್ಲಾ ಭಾಗಗಳಿಗೆ ತಲುಪುತ್ತದೆ.

ಸಿಪಿಅರ್‌ ಅನ್ನು ಚಿಕ್ಕ ಮಕ್ಕಳು ಅಥವಾ ಗರ್ಭಿಣಿಯರಿಗೆ ನೀಡುವಾಗ ಕೊಂಚ ಮಾರ್ಪಾಟು ಮಾಡಿಕೊಳ್ಳಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಬಾಯಿಯಿಂದ ಉಸಿರಾಟ ನೀಡದೇ ಕೇವಲ ಎದೆಯನ್ನು ಒತ್ತುವುದರ ಮೂಲಕವೇ ಸಿಪಿಅರ್‌ ಮಾಡಬಹುದು. ಇದನ್ನು ‘ಕಂಪ್ರೆಶನ್ ಓನ್ಲಿ ಲೈಫ್ ಸಪೋರ್ಟ್’ (COLS) ಎಂತಲೂ ಹೇಳುತ್ತಾರೆ.

ಸಿಪಿಅರ್‌ ಒಂದು ಸರಳ, ಪ್ರಾಣರಕ್ಷಕ ವಿಧಾನವಾಗಿದೆ. ಇದು ಎಷ್ಟು ಸರಳ ಎಂದರೆ ಸಾಮಾನ್ಯಜನರೂ ಕೂಡ ಇದನ್ನು ಕಲಿಯಬಹುದು. ಆದರೆ ಇದಕ್ಕೆ ಕೊಂಚ ತರಬೇತಿ ಬೇಕಾಗುತ್ತದೆ. ಅನೇಕ ವೈದ್ಯಕೀಯ ಕಾಲೇಜುಗಳಲ್ಲಿ ಸಿಪಿಅರ್‌ ತರಬೇತಿದಾರರು ಇರುತ್ತಾರೆ. ಇವರು ಶಾಲಾ-ಕಾಲೇಜುಗಳಲ್ಲಿ, ಫ್ಯಾಕ್ಟರಿ-ಆಫೀಸುಗಳಲ್ಲಿ ತರಬೇತಿಯ ಜೊತೆ ಪ್ರಾತ್ಯಕ್ಷಿಕೆಯನ್ನೂ ನೀಡುತ್ತಾರೆ. ಸಾಮಾನ್ಯ ಜನರೂ ಕೂಡ ಇದನ್ನು ಕಲಿಯಬಹುದು. ತುರ್ತುಪರಿಸ್ಥಿತಿಯಲ್ಲಿ ನೀಡುವ ಸಿಪಿಅರ್‌ ಒಬ್ಬ ವ್ಯಕ್ತಿಗೆ ಸಂಜೀವಿನಿಯಾಗಬಲ್ಲುದು. ನಿಮ್ಮ ಹಸ್ತಗಳಿಂದ ಜೀವವೊಂದು ಉಳಿದರೆ ಆ ಹಸ್ತಗಳು ಅಮೃತಹಸ್ತಗಳೇ ಅಲ್ಲವೇ!

(ಲೇಖಕ ಅರಿವಳಿಕೆ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT