ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ ಜ್ವರ ಎಲ್ಲ ಜ್ವರಗಳಂತಲ್ಲ

Last Updated 25 ಜುಲೈ 2022, 19:30 IST
ಅಕ್ಷರ ಗಾತ್ರ

ಮಳೆಗಾಲ ಆರಂಭವಾದೊಡನೆಯೇ ಎಲ್ಲೆಡೆ ಹಸಿರು ಮೂಡಲಾರಂಭಿಸುತ್ತದೆ. ನದಿ-ಝರಿಗಳು ಮೈತುಂಬಿ ಹರಿಯತೊಡಗುತ್ತವೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರ ಮನಸ್ಸು ಕೂಡ ಉಲ್ಲಸಿತವಾಗುತ್ತದೆ. ಆದರೆ ಮಳೆಗಾಲ ಕೆಲವು ರೋಗ-ರುಜಿನಗಳನ್ನು ಕೂಡ ಹೊತ್ತು ತರುತ್ತದೆ. ಅಬಾಲವೃದ್ಧಾದಿಯಾಗಿ ಎಲ್ಲರನ್ನೂ ಒಂದಲ್ಲ ಒಂದು ರೀತಿಯ ಜ್ವರ ಕಾಡಲಾರಂಭಿಸುತ್ತದೆ. ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವ ಅನೇಕ ರೋಗಿಗಳು ವೈದ್ಯರ ಕ್ಲಿನಿಕ್ಕಿನಲ್ಲಿ ಕಾಯುತ್ತಿರುವುದು ದಿನನಿತ್ಯದ ನೋಟವಾಗಿರುತ್ತದೆ.

ಸಾಮಾನ್ಯವಾಗಿ ಫ್ಲೂದಂತಹ ಜ್ವರ ಬಹುತೇಕ ಮಂದಿಗೆ ಬಂದು ಕೆಲವು ದಿನಗಳಲ್ಲಿ ಗುಣವಾಗಿಬಿಡುತ್ತಾರೆ. ಆದಾಗ್ಯೂ ಕೆಲವೊಂದು ತರಹದ ಜ್ವರಗಳ ಬಗ್ಗೆ ನಾವು ಎಚ್ಚರದಿಂದಿರುವುದು ಒಳ್ಳೆಯದು. ಇದರಲ್ಲಿ ಅತಿ ಮುಖ್ಯವಾದುದೆಂದರೆ ಡೆಂಗಿ ಜ್ವರ.

ಡೆಂಗಿ ಜ್ವರ ಕೂಡ ವೈರಾಣುವಿಂದಲೇ ಬರುತ್ತದೆ. ಆದರೆ ಈ ವೈರಾಣು ಉಳಿದ ಫ್ಲೂ ವೈರಾಣುಗಳಿಂತ ಭಿನ್ನ. ಫ್ಲೂ ಜ್ವರದ ವೈರಾಣು ನಾವು ಉಸಿರಾಡುವ ಗಾಳಿಯ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿದರೆ, ಡೆಂಗಿ ಜ್ವರದ ವೈರಾಣು ಸೊಳ್ಳೆಗಳ ಕಡಿತದಿಂದ ದೇಹದೊಳಗೆ ಪ್ರವೇಶಿಸುತ್ತದೆ. ಅನಾಫಿಲಿಸ್ ಸೊಳ್ಳೆಗಳ ಕಡಿತದಿಂದ ಮಲೇರಿಯಾ ಹರಡುತ್ತದೆಯೆಂದು ನಮಗೆಲ್ಲ ಗೊತ್ತೇ ಇದೆ. ಅದೇ ರೀತಿ ಡೆಂಗಿ ವೈರಾಣು ಕೂಡ ‘ಏಡಿಸ್ ಈಜಿಪ್ಟಿ’ ಎಂಬ ಇನ್ನೊಂದು ಪ್ರಭೇದದ ಸೊಳ್ಳೆಗಳ ಕಡಿತದಿಂದ ನಮ್ಮ ದೇಹದೊಳಗೆ ಪ್ರವೇಶಿಸುತ್ತದೆ. (ಅಪರೂಪದ ಸಂದರ್ಭಗಳಲ್ಲಿ ರಕ್ತಪೂರಣ ಅಥವಾ ಅಂಗದಾನದ ಮೂಲಕವೂ ವೈರಾಣು ನಮ್ಮ ದೇಹವನ್ನು ಪ್ರವೇಶಿಸಬಹುದು.)

ಏಡಿಸ್ ಈಜಿಪ್ಟಿ ಸೊಳ್ಳೆಗಳ ವಿಶೇಷತೆಯೇನೆಂದರೆ, ಇವು ನಮ್ಮನ್ನು ಹೆಚ್ಚಾಗಿ ಬೆಳಿಗ್ಗೆ ಮತ್ತು ಸಾಯಂಕಾಲದ ಹೊತ್ತಿನಲ್ಲಿ ಕಚ್ಚುತ್ತವೆ. ಅಲ್ಲದೆ ಇವು ನೆಲದಿಂದ ಒಂದೆರಡು ಅಡಿ ಎತ್ತರದಲ್ಲೇ ಹಾರಾಡುವುದರಿಂದ ಕಾಲಿಗೆ ಕಚ್ಚುವ ಮೂಲಕ ವೈರಾಣುಗಳನ್ನು ನಮ್ಮ ದೇಹದಲ್ಲಿ ಹರಡುತ್ತವೆ. ವೈರಾಣುಗಳು ಒಮ್ಮೆ ದೇಹದೊಳಕ್ಕೆ ಹೊಕ್ಕರೆ ಅವು ಚರ್ಮದಲ್ಲಿರುವ ಕೆಲವು ಜೀವಕೋಶಗಳಲ್ಲಿ ಸೇರಿಕೊಂಡು ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಾ ಹೋಗುತ್ತವೆ. ಅವು ನಿಧಾನವಾಗಿ ದೇಹದ ತುಂಬೆಲ್ಲಾ ಹಬ್ಬುತ್ತಿದಂತೆ ನಮ್ಮಲ್ಲಿ ರೋಗಲಕ್ಷಣಗಳು ಕಾಣತೊಡಗುತ್ತವೆ. ಏಕೆಂದರೆ ವೈರಾಣು ದೇಹವನ್ನು ಹೊಕ್ಕಕೂಡಲೇ ನಮ್ಮ ಜೀವಕಣಗಳು ಪ್ರತಿರೋಧವನ್ನು ಒಡ್ಡುತ್ತವೆ. ಪ್ರತಿಕಾಯಗಳು (ಆ್ಯಂಟಿಬಾಡಿ) ಉತ್ಪತ್ತಿಯಾಗಿ ವೈರಾಣುಗಳೊಂದಿಗೆ ಸೆಣಸಾಡುವಾಗ ಅನೇಕ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಈ ರಾಸಾಯನಿಕಗಳೇ ರೋಗಲಕ್ಷಣಗಳಿಗೆ ಮುಖ್ಯಕಾರಣ. ಇಷ್ಟೆಲ್ಲಾ ಆಗಲು ಸುಮಾರು 3-14 ದಿನಗಳು ಬೇಕಾಗಬಹುದು.

ರೋಗಲಕ್ಷಣಗಳು: ಜ್ವರವೇ ಡೆಂಗಿಯ ಪ್ರಮುಖ ಲಕ್ಷಣ. ಇದು ಹೆಚ್ಚಾಗಿ ದಿನ ಬಿಟ್ಟು ದಿನ ಬರುತ್ತದೆ. ಬಹುತೇಕ ರೋಗಿಗಳಲ್ಲಿ ಮೈ–ಕೈ ನೋವು, ಕಣ್ಣುರಿ ಹಾಗೂ ಹೊಟ್ಟೆನೋವು ಕಾಣಿಸಿಕೊಳ್ಳುತ್ತವೆ. ಕೆಂಪು ಗುಳ್ಳೆಗಳು ದೇಹದ ತುಂಬೆಲ್ಲ ವ್ಯಾಪಿಸಬಹುದು. ದೇಹದಾದ್ಯಂತ ನವೆಯಾಗುವುದು ಕೂಡ ಉಂಟು.
ಹೀಗೆಂದು, ನಮ್ಮನ್ನು ಕಾಡುವ ಜ್ವರಗಳೆಲ್ಲಾ ಡೆಂಗಿ ಆಗಿರಲೇಬೇಕಂತಿಲ್ಲ. ಡೆಂಗಿ ಜ್ವರ ಕೂಡ ಅನೇಕ ಬಾರಿ (ಶೇ. 80) ಸೌಮ್ಯಸ್ಥಿತಿಯಲ್ಲಿದ್ದು ಕೊಂಚ ವಿಶ್ರಾಂತಿ ಮತ್ತು ಜ್ವರದ ಮಾತ್ರೆಗಳಿಂದಲೇ ವಾಸಿಯಾಗುತ್ತದೆ. ಕೆಲವೊಮ್ಮೆ ಮಾತ್ರ ಇದು ಮುಂದಿನ ಹಂತಕ್ಕೆ ತಲುಪಿ ರೋಗಿಯಲ್ಲಿ ರಕ್ತಸ್ರಾವದ ಚಿಹ್ನೆಗಳು ಕಾಣಿಸಿಕೊಳ್ಳಬಹುದು. ಇದನ್ನು ‘ಡೆಂಗಿ ಹೆಮೊರೇಜಿಕ್ ಫೀವರ್’ ಎಂದು ಕರೆಯುತ್ತಾರೆ. ಈ ಹಂತದಲ್ಲಿ ರಕ್ತದಲ್ಲಿ ಪ್ಲೇಟೆಲೆಟ್ ಕಣಗಳು ತುಂಬಾ ಕಡಿಮೆಯಾಗಿ ಚರ್ಮದಲ್ಲಿ, ಸಂದುಗಳಲ್ಲಿ ಹಾಗೂ ದೇಹದ ಇನ್ನಿತರ ಭಾಗಗಳಲ್ಲಿ ರಕ್ತಸ್ರಾವವಾಗುತ್ತದೆ.
ರೋಗ ಇನ್ನೂ ಉಲ್ಬಣಾವಸ್ಥೆಗೆ ತಲುಪಿದಾಗ ರಕ್ತಸ್ರಾವದ ಜೊತೆ ರೋಗಿಯ ಬಿಪಿ ತೀರಾ ಕಡಿಮೆಯಾಗಿ ಉಸಿರಾಟದ ತೊಂದರೆ, ಅರೆಪ್ರಜ್ಞಾವಸ್ಥೆ ಉಂಟಾಗಬಹುದು. ಇದನ್ನು ‘ಡೆಂಗ್ಯೂ ಶಾಕ್ ಸಿಂಡ್ರೋಮ್’ ಎಂದು ಕರೆಯುತ್ತಾರೆ. ಈ ಹಂತ ರೋಗಿಯ ಜೀವಕ್ಕೆ ಅತ್ಯಂತ ಹೆಚ್ಚು ಅಪಾಯಕಾರಿ.

ಚಿಕಿತ್ಸೆ: ಮೇಲೆ ತಿಳಿಸಿದಂತಹ ರೋಗಲಕ್ಷಣಗಳು ಯಾವುದೇ ರೋಗಿಗೆ ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಬಳಿ ಕರೆದೊಯ್ದು ತಪಾಸಣೆ ಮಾಡಿಸಬೇಕು. ಡೆಂಗಿ ಜ್ವರದ ಲಕ್ಷಣಗಳು ಇದ್ದರೆ ವೈದ್ಯರು ರಕ್ತತಪಾಸಣೆಯನ್ನು ಮಾಡಿಸುತ್ತಾರೆ. ರಕ್ತದಲ್ಲಿ ಡೆಂಗಿ ವೈರಾಣುವಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಉತ್ಪತ್ತಿಯಾಗಿವೆಯೇ? ಹಾಗೂ ರಕ್ತದಲ್ಲಿ ಪ್ಲೇಟೆಲೆಟ್ ಸಂಖ್ಯೆ ಕ್ಷೀಣಿಸಿದೆಯೇ? – ಎಂದು ಪರೀಕ್ಷಿಸುವುದೇ ಈ ರಕ್ತತಪಾಸಣೆಯ ಉದ್ದೇಶ.

ಡೆಂಗಿ ವೈರಾಣುವನ್ನೇ ಸದೆಬಡಿಯಲು ಸದ್ಯಕ್ಕೆ ಯಾವುದೇ ಔಷಧ ಇಲ್ಲ. ಆದ್ದರಿಂದ ಪ್ಯಾರಸಿಟಮಾಲ್ ಜ್ವರನಿವಾರಕ ಮಾತ್ರೆ, ವಿಶ್ರಾಂತಿ ಮತ್ತು ನಿರ್ಜಲೀಕರಣವಾಗದಂತೆ ಯಥೇಚ್ಛವಾಗಿ ನೀರು ಕುಡಿಯುವುದೇ ಚಿಕಿತ್ಸೆಯ ಮುಖ್ಯ ಅಂಶಗಳು. (ಬೇರೆ ಜ್ವರ/ನೋವು ನಿವಾರಕ ಮಾತ್ರೆಗಳು ಕೆಲವೊಮ್ಮೆ ರಕ್ತಸ್ರಾವವನ್ನು ಹೆಚ್ಚು ಮಾಡುವುದರಿಂದ ಈ ಸಂದರ್ಭದಲ್ಲಿ ಅಂತಹ ಮಾತ್ರೆಗಳ ಸೇವನೆ ಅಪಾಯಕಾರಿಯಾಗಬಹುದು.)

ರೋಗಿಯ ಪ್ಲೇಟೆಲೆಟ್ ಸಂಖ್ಯೆ ತೀರಾ ಕಡಿಮೆಯಾದರೆ ರಕ್ತಪೂರಣದ ಮೂಲಕ ಸರಿಪಡಿಸಬೇಕಾಗುತ್ತದೆ. ಕಾಯಿಲೆಯ ಆರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿದರೆ ನಂತರದ ಹಂತಗಳಾದ ಡೆಂಗಿ ಹೆಮೊರೇಜಿಕ್ ಫೀವರ್ ಮತ್ತು ಡೆಂಗ್ಯೂ ಶಾಕ್ ಸಿಂಡ್ರೋಮ್‌ಗಳನ್ನು ಬಹುಮಟ್ಟಿಗೆ ತಪ್ಪಿಸಬಹುದು.

ಪ್ರತಿಬಂಧಕೋಪಾಯಗಳು

lಸೊಳ್ಳೆಗಳ ನಿರ್ಮೂಲನೆಯೇ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮನೆಗಳ, ಇನ್ನಿತರ ಕಟ್ಟಡಗಳ ಸುತ್ತ ನಿಯಮಿತವಾಗಿ ಫಾಗ್ಗಿಂಗ್ ಮಾಡಿಸುತ್ತಿರಬೇಕು.

lನಮ್ಮ ಮನೆಗಳ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಗಳಲ್ಲಿ ಕೂಡ ಅಲಂಕಾರಿಕ ನೀರಿನ ಹೊಂಡಗಳನ್ನು ಅಥವಾ ಹೂಕುಂಡಗಳನ್ನು ವಾರಕ್ಕೆ ಒಂದು ಬಾರಿಯಾದರೂ ಸ್ವಚ್ಛಗೊಳಿಸಬೇಕು.

lಸೊಳ್ಳೆಕಡಿತದಿಂದ ಪಾರಾಗಲು ನಾವು ಸೂಕ್ತ ಬಟ್ಟೆಗಳನ್ನು, ಅದರಲ್ಲೂ ಕಾಲುಗಳನ್ನು ಮುಚ್ಚುವ ದಿರಿಸನ್ನೇ ಹಾಕಬೇಕು. ಕಿಟಕಿಗೆ ಸೊಳ್ಳೆಪರದೆ, ಕೋಣೆಗಳಲ್ಲಿ ಸೊಳ್ಳೆ ಕಾಯಿಲ್‌ಗಳನ್ನು ಬಳಸಬೇಕು.

lಉತ್ತಮ ಆಹಾರವನ್ನು ಸೇವಿಸುತ್ತಾ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಪಪ್ಪಾಯಿ, ಕಿವಿ ಮತ್ತಿತರೇ ಕೆಲವು ಹಣ್ಣುಗಳು ಕೆಲಮಟ್ಟಿಗೆ ಪರಿಣಾಮಕಾರಿಯಾಗಿವೆ.

lಡೆಂಗಿ ಜ್ವರಕ್ಕೆ ಕೆಲವು ದೇಶಗಳಲ್ಲಿ ಲಸಿಕೆ ಲಭ್ಯವಿದೆಯಾದರೂ ಅದಿನ್ನೂ ಸಂಪೂರ್ಣ ಪರಿಣಾಮಕಾರಿಯಾಗಿಲ್ಲ. ಹಾಗಾಗಿ ಭಾರತದಲ್ಲಿ ಅದರ ಬಳಕೆಗೆ ಅನುಮತಿ ಇನ್ನೂ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT