ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಕ್ಯಾನ್ಸರನ್ನು ಗೆಲ್ಲಲು ಶಿಸ್ತಿನ ಜೀವನ

Last Updated 25 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಕ್ಯಾನ್ಸರ್ ಎಂದರೆ ಮಾನವನ ಕೋಟಿ ಕೋಟಿ ಆರೋಗ್ಯವಂತ ಜೀವಕೋಶಗಳಲ್ಲಿ ಒಂದು ಜೀವಕೋಶ ತನ್ನ ನಿಯಂತ್ರಿತ ಕಾರ್ಯಗಳನ್ನು ಬದಲಾಯಿಸಿಕೊಂಡು ಅನಿಯಂತ್ರಿತ ಜೀವಕೋಶವಾಗಿ ತನ್ನಷ್ಟಕ್ಕೆ ತಾನು ವೇಗವಾಗಿ ಕೋಶ ವಿಭಜನೆ ಮಾಡಿಕೊಳ್ಳುತ್ತ ಒಂದು ಜೀವಕೋಶ ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ ಕೆಲವೇ ದಿನಗಳಲ್ಲಿ ಕೋಟಿ ಕೋಟಿ ಜೀವಕೋಶಗಳ ದೊಡ್ಡ ಗಂಟಾಗುವುದಕ್ಕೆ ಕ್ಯಾನ್ಸರ್ ಎಂದು ಕರೆಯಬಹುದು.

ಈ ಕ್ಯಾನ್ಸರನ್ನು ಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಒಂದು ಕೆಡುಕಿಲ್ಲದ (Malignant) ಮತ್ತು ಎರಡನೆಯದು ಕೇಡು ತರುವ (Benign) ಕ್ಯಾನ್ಸರ್ ಎಂದು ಕರೆಯುತ್ತಾರೆ. ಕೆಡುಕಿಲ್ಲದ ಕ್ಯಾನ್ಸರ್ ಒಂದು ಗಂಟಿನ ರೂಪದಲ್ಲಿ ಒಂದೇ ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಸುಲಭವಾಗಿ ತೆಗೆದುಹಾಕಬಹುದು. ಆದರೆ ಕೇಡು ತರುವ ಕ್ಯಾನ್ಸರ್ ಒಂದು ಕಡೆ ಬೆಳೆಯುವಾಗ ಕೆಲವು ಜೀವಕೋಶಗಳು ಆ ಗೆಡ್ಡೆಯಿಂದ ತಪ್ಪಿಸಿಕೊಂಡು ರಕ್ತನಾಳಗಳ ಮೂಲಕ ದೇಹದ ಬೇರೆ ಬೇರೆ ಅಂಗಗಳಿಗೆ ಹೋಗಿ ಅಲ್ಲಿನ ಜೀವಕೋಶಗಳ ಮೇಲೆ ಆಕ್ರಮಣ ಮಾಡಿ ಅಲ್ಲಿಯೂ ಕೂಡ ತಮ್ಮ ಅಧಿಪತ್ಯವನ್ನು ಸ್ಥಾಪಿಸಿ ಹೊಸ ಹೊಸ ಗೆಡ್ಡೆಗಳಾಗಿ ಆ ಅಂಗಗಳ ಪ್ರತಿನಿತ್ಯದ ಕಾರ್ಯಗಳಿಗೆ ಅಡೆತಡೆಯನ್ನು ಮಾಡುತ್ತವೆ. ಉದಾಹರಣೆಗೆ, ನಮ್ಮ ಯಕೃತ್ತು ಅಥವಾ ಲಿವರಿನಲ್ಲಿ ಆಗಿರುವ ಕ್ಯಾನ್ಸರ್ ಜೀವಕೋಶಗಳು ಶ್ವಾಶಕೋಶಗಳಿಗೆ ಅಥವಾ ಮೂತ್ರಪಿಂಡಗಳಿಗೆ ಹೋಗಿ ಅಲ್ಲಿಯೂ ಕ್ಯಾನ್ಸರ್ ಬೆಳೆಯುವ ಹಾಗೆ ಮಾಡುತ್ತವೆ. ಈ ಕ್ಯಾನ್ಸರ್ ಜೀವಕೋಶಗಳು ಹಲವು ಬಾರಿ ದೇಹದ ಇತರ ಅಂಗಗಳಿಗೆ ಅಥವಾ ಭಾಗಗಳಿಗೆ ವೇಗವಾಗಿ ಪಸರಿಸುವುದನ್ನು ಸ್ಥಾನಾಂತರ (Metastasis) ಎಂದು ಕರೆಯುತ್ತಾರೆ. ಜೊತೆಗೆ ರಕ್ತದಲ್ಲಿ ಕೀವು ಅಥವಾ ಸತ್ತ ಜೀವಕೋಶಗಳ ಭಗ್ನಾವಶೇಷಗಳ ಮಲಿನ ದ್ರವಗಳನ್ನು ಹೆಚ್ಚು ಹೆಚ್ಚು ಸೂಸುತ್ತವೆ. ಈ ಎಲ್ಲಾ ಕಾರಣಗಳಿಂದ ಸ್ಥಾನಾಂತರಗೊಂಡ ಕ್ಯಾನ್ಸರ್ ಜೀವಕೋಶಗಳು ಹೆಚ್ಚು ಹೆಚ್ಚು ಅಪಾಯಕಾರಿಯಾಗಿರುತ್ತವೆ. ದೇಹದ ಬೇರೆ ಬೇರೆ ಅಂಗಗಳ ಜೊತೆ ಈ ಕ್ಯಾನ್ಸರ್ ಜೀವಕೋಶಗಳು ಸೇರಿಕೊಳ್ಳುವುದರಿಂದ ಇವನ್ನು ಸುಲಭವಾಗಿ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲು ಸಾಧ್ಯವಿಲ್ಲ.

ಈ ರೀತಿ ದೇಹದ ಬೇರೆ ಬೇರೆ ಅಂಗಗಳ ಮೇಲೆ ಬೆಳೆಯುವ ಕ್ಯಾನ್ಸರ್‌ಗಳನ್ನು ವಿಂಗಡಿಸಿ ಅವುಗಳಿಗೆ ಬೇರೆ ಬೇರೆ ಹೆಸರನ್ನು ಕೊಟ್ಟಿದ್ದಾರೆ.

ಕ್ಯಾನ್ಸರ್‌ಗೆ ಕಾರಣಗಳು
ಕ್ಯಾನ್ಸರ್ ಬರಲು ಬಹುಮುಖ್ಯ ಕಾರಣ ದೇಹದ ಬೇರೆ ಬೇರೆ ಜೀವಕೋಶಗಳಲ್ಲಿನ ವಂಶವಾಹಿನಿಗಳಲ್ಲಿ ಅಸಹಜ ಬದಲಾವಣೆಗಳಾಗುವುದರಿಂದ ಎಂದು ಹೇಳಬಹುದು (Mutations). ಈ ಅಸಹಜ ಬದಲಾವಣೆಗಳು ಬೇರೆ ಬೇರೆ ಕಾರಣಗಳಿಂದ ಆಗಬಹುದು. ಅವುಗಳಲ್ಲಿ ಬಹುಮುಖ್ಯವಾಗಿ ನಮ್ಮ ಜೀವನಶೈಲಿ ಎಂದು ಹೇಳಬಹುದು. ನಮ್ಮ ಜೀವನಶೈಲಿ ಉತ್ತಮವಾಗಿದ್ದರೆ ಹಲವು ಕ್ಯಾನ್ಸರ್‌ಗಳನ್ನು ನಾವು ಸುಲಭವಾಗಿ ತಡೆಗಟ್ಟಬಹುದು.

ಉತ್ತಮ ಜೀವನಶೈಲಿಯನ್ನು ಪ್ರತಿಯೊಬ್ಬರೂ ಸುಲಭವಾಗಿ ಬೆಳೆಸಿಕೊಳ್ಳಬಹುದು. ಬೆಳಿಗ್ಗೆ ಬೇಗ ಏಳುವುದು. ರಾತ್ರಿ ಸಮಯಕ್ಕೆ ಸರಿಯಾಗಿ ಮಲಗುವುದು. ಉತ್ತಮ ಸತ್ವಯುತ ಆಹಾರವನ್ನು ಹಿತವಾಗಿ ಮಿತವಾಗಿ ಸೇವಿಸುವುದು. ನೀರನ್ನು ಹೆಚ್ಚಾಗಿ ಕುಡಿಯುವುದು. ವಾಯುವಿಹಾರ ಮಾಡುವುದು, ದೈಹಿಕ ಶ್ರಮಕ್ಕೆ ಮಹತ್ವ ಕೊಡುವುದು. ವಾಯುಮಾಲಿನ್ಯದಿಂದ ದೂರ ಇರುವುದು. ಧೂಮಪಾನ, ಮದ್ಯಪಾನದಿಂದ ದೂರ ಇರುವುದು, ಟಿವಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್‌ಗಳನ್ನು ಹಿತವಾಗಿ ಮಿತವಾಗಿ ಬಳಸುವುದು. ಕುಳಿತೇ ಮಾಡುವ ಕೆಲಸಗಳ ಮಧ್ಯೆ ಆಗಾಗ ಓಡಾಡುವುದು. ಕೆಲವು ಕ್ಯಾನ್ಸರ್ ಕಾರಕ ವೈರಸ್ಸುಗಳ ಸೋಂಕಿಗೆ ಲಸಿಕೆಗಳನ್ನು ಪಡೆಯುವುದು. ಹೆಚ್ಚು ಹೆಚ್ಚು ಕರಿದ ಆಹಾರಗಳನ್ನು, ಅತಿ ಹೆಚ್ಚು ಸಿಹಿಪದಾರ್ಥಗಳನ್ನು, ಅತಿ ಹೆಚ್ಚು ಎಣ್ಣೆಯ ಪದಾರ್ಥಗಳನ್ನು ಸೇವಿಸುವುದನ್ನು ತ್ಯಜಿಸುವುದು.

ಮನೆಯಲ್ಲಿ ಗಾಳಿ ಬೆಳಕು ಸರಿಯಾಗಿ ಬರುವ ಹಾಗೆ ನೋಡಿಕೊಳ್ಳುವುದು, ಮುಂಜಾನೆ ಮತ್ತು ಸಂಜೆಯ ಸೂರ್ಯನ ಬೆಳಕಿನಲ್ಲಿ ಓಡಾಡುವುದು. ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು. ಕೊಳೆತ ಅಥವಾ ಹಳಸಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮತ್ತು ಕೀಟನಾಶಕ, ಕಳೆನಾಶಕಗಳ ಜೊತೆಗೆ ಇನ್ನು ಕೆಲವು ವಿಷಯುಕ್ತ ರಾಸಾಯನಿಕ ವಸ್ತುಗಳು (carcinogens) ನಮ್ಮ ಆಹಾರದಲ್ಲಿ ಸೇರಿ ಕ್ಯಾನ್ಸರ್ ಬರಬಹುದು. ಇವನ್ನು ನಾವು ದೂರವಿಡುವುದರಿಂದ ಕ್ಯಾನ್ಸರನ್ನು ತಡೆಗಟ್ಟಬಹುದು. ಜೊತೆಗೆ ಮಧುಮೇಹ, ಬೊಜ್ಜು ಮತ್ತು ಸ್ಥೂಲಕಾಯತೆಯಿಂದ ಕೂಡ ಕ್ಯಾನ್ಸರ್ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT