ಶನಿವಾರ, ನವೆಂಬರ್ 28, 2020
18 °C

ಏನಾದ್ರು ಕೇಳ್ಬೊದು: ಮದುವೆಯು ಕನಸಿಗೆ ಅಡ್ಡಿಯಾಗುತ್ತದೆಯೇ?

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

Prajavani

ವಯಸ್ಸು 21. ತಂದೆ ಮತ್ತು ತಾಯಿ ನಾನು ಸಣ್ಣವನಾಗಿರುವಾಗಲೇ ತೀರಿಹೋದರು. ಅಜ್ಜ ಮತ್ತು ಅಜ್ಜಿ ಸಾಕಿದರು. ಸಧ್ಯಕ್ಕೆ ನಾನು ಮತ್ತು ಅಜ್ಜಿ ಮಾತ್ರ ಇದ್ದೇವೆ. ಕೃಷಿಯಿಂದ ಬರುವ ಆದಾಯದಿಂದ ಬದುಕು ಸಾಗುತ್ತಿದೆ. ಆರ್ಥಿಕವಾಗಿ ಪರವಾಗಿಲ್ಲ. ನನಗೆ ಐಎಎಸ್‌ ಓದುವ ಆಸೆ. ಆದರೆ ಮನೆಯಲ್ಲಿ ಓದಲು ಅವಕಾಶವಿಲ್ಲ. ಅಜ್ಜಿ ತೀರಿಹೋದರೆ ನನಗೆ ಯಾರೂ ಇಲ್ಲದಂತಾಗುತ್ತದೆ. ಅವರಿಗೆ ಆದಷ್ಟು ಬೇಗ ಮದುವೆ ಮಾಡುವ ಆಸೆ. ಮದುವೆಯಾದರೆ ನನ್ನ ಕನಸುಗಳು ಹಾಳಾಗುತ್ತವೆ. ಸ್ಪಷ್ಟತೆಯಿಲ್ಲದಂತಾಗಿ ಮುಂದಿನ ಜೀವನ ನೆನೆಸಿಕೊಂಡರೆ ಭಯವಾಗುತ್ತದೆ. ಪರಿಹಾರ ತಿಳಿಸಿ.  

-ರಾಜ್‌, ಊರಿನ ಹೆಸರಿಲ್ಲ.

ಮದುವೆಯಾದರೆ ಕನಸುಗಳು ಏಕೆ ಹಾಳಾಗಬೇಕು? ಹುಡುಗಿಯನ್ನು ಒಪ್ಪುವ ಮೊದಲೇ ಅವರ ಜೊತೆ ನಿಮ್ಮ ಆಸಕ್ತಿ, ಕನಸುಗಳು ಎಲ್ಲವನ್ನೂ ಮಾತನಾಡಿ. ಮಕ್ಕಳನ್ನು ಪಡೆಯುವುದು ತಕ್ಷಣ ಇಷ್ಟವಿಲ್ಲವಾದರೆ ಅದನ್ನೂ ತಿಳಿಸಿ. ಅದಕ್ಕೆ ಅವರು ಸಹಕರಿಸುವುದಾದರೆ ಮಾತ್ರ ಮದುವೆಯಾಗುವ ಕುರಿತು ಯೋಚಿಸಿ. ನಿಮ್ಮನ್ನು ಕನಸುಗಳೊಂದಿಗೆ ಒಪ್ಪಿಕೊಳ್ಳುವ ಸಂಗಾತಿ ಸಿಕ್ಕರೆ ಮದುವೆ ತೊಡಕಾಗುವ ಬದಲು ಕನಸುಗಳಿಗೆ ರೆಕ್ಕೆ ಮೂಡಬಹುದಲ್ಲವೇ?

ಪದವಿ ಮುಗಿಸಿ ಪಿಎಸ್‌ಐ ಪರೀಕ್ಷೆಗೆ ಓದುತ್ತಿದ್ದೇನೆ. ಮನೆಯಲ್ಲಿದ್ದು ಓದುವುದಕ್ಕೆ ಆಗುತ್ತಿಲ್ಲ. ಕೆಲಸಕ್ಕೆ ಹೋದರೆ ಓದಲು ಸಮಯ ಸಿಗಬಹುದೇ ಎನ್ನುವ ಅನುಮಾನ. ಹೇಗೆ ನಿರ್ವಹಿಸಬೇಕೆಂದು ತಿಳಿಯದೆ ಕೆಲವೊಮ್ಮೆ ಹತಾಶನಾಗುತ್ತೇನೆ.
ಏನೆಲ್ಲಾ ಯೋಚನೆಗಳು ಕಾಡುತ್ತವೆ. ಪರಿಹಾರವೇನು?

-ಶಿವಶಂಕರ್‌, ಊರಿನ ಹೆಸರಿಲ್ಲ.

ಇಲ್ಲೊಂದು ವಿಚಿತ್ರವನ್ನು ಗಮನಿಸಿದ್ದೀರಾ? ಕಷ್ಟದ ನಿರ್ಧಾರಗಳನ್ನು ತೆಗೆದುಕೊಳ್ಳಲು ಯೋಚಿಸಲೇಬೇಕಲ್ಲವೇ? ಆದರೆ ಯೋಚಿಸುತ್ತಾ ಹೋದಂತೆ ನಿಮಗೆ ನಿರ್ಧಾರ ತೆಗೆದುಕೊಳ್ಳುವ ಕಷ್ಟಗಳು ಹೆಚ್ಚಾಗುತ್ತಿವೆ. ಇದೇಕೆ ಹೀಗೆ? ನೀವು ವಿವೇಚನಾ ಶಕ್ತಿಯನ್ನು ಬಳಸದೆ ಮುಂದೆ ಬರಬಹುದಾದ ಕಷ್ಟಗಳನ್ನು ಕಲ್ಪಿಸಿಕೊಂಡು ಈಗಲೇ ಹತಾಶರಾಗುತ್ತಿದ್ದೀರಿ. ಇದಕ್ಕೆ ಸರಳ ಪರಿಹಾರವೆಂದರೆ ಈ ಕ್ಷಣದ ಅಗತ್ಯಗಳನ್ನು ಮೊದಲು ಪೂರೈಸುವುದು. ಕೆಲಸಕ್ಕೆ ಹೋಗುವುದು ತಕ್ಷಣದ ಅಗತ್ಯವಾಗಿದ್ದರೆ ಹೋಗಿ. ನಂತರ ಕೆಲಸ ಮಾಡುತ್ತಲೇ ಓದಿಗೆ ಸಮಯ ಹೊಂದಿಸಿಕೊಳ್ಳುವ ದಾರಿಗಳನ್ನು ಹುಡುಕಿ. ಹೀಗೆ ದೂರದ ಗುರಿಯನ್ನು ಸಣ್ಣಸಣ್ಣ ಭಾಗಗಳಾಗಿ ವಿಂಗಡಿಸಿಕೊಂಡರೆ ಒತ್ತಡ ಕಡಿಮೆಯಾಗುತ್ತದೆ.

22ರ ವಿದ್ಯಾರ್ಥಿ. ಬೆಳಿಗ್ಗೆ 8 ಗಂಟೆಯಿಂದ 11ರವರೆಗೆ ಓದುತ್ತೇನೆ. ರಾತ್ರಿ 10 ಗಂಟೆಯ ಹೊತ್ತಿಗೆ ಬೇಸರವಾಗಿ ಏನು ಮಾಡಲೂ ಮನಸ್ಸಾಗುವುದಿಲ್ಲ. ಕೆಟ್ಟ ಅಭ್ಯಾಸಗಳನ್ನು ಬಿಟ್ಟಿದ್ದೇನೆ. ಪರಿಹಾರ ತಿಳಿಸಿ.

-ವಿನಿದಚ್ಚು, ಊರಿನ ಹೆಸರಿಲ್ಲ.

ಕೆಟ್ಟ ಅಭ್ಯಾಸಗಳನ್ನು ಬಿಟ್ಟಿದ್ದೇನೆ ಎಂದು ಸೂಚ್ಯವಾಗಿ ಹೇಳಿದ್ದೀರಿ. ವಿವರಗಳಿದ್ದರೆ ಸಹಾಯವಾಗುತ್ತಿತ್ತು. ಹೊರಗಡೆಯ ಪ್ರಪಂಚ ಶಾಂತವಾಗಿರುವಾಗ ಕಾಡುವುದು ಬೇಸರವಲ್ಲ, ಏಕಾಂಗಿತನ. ಇದು ಜೀವನದ ಸಾಕಷ್ಟು ಸಂದರ್ಭಗಳಲ್ಲಿ ಅನಿವಾರ್ಯ. ಹಾಗಾಗಿ ಒಬ್ಬರೇ ಇರುವಾಗಲೂ ಸಮಾಧಾನದಲ್ಲಿರುವುದನ್ನು ಕಲಿಯಲೇಬೇಕಾಗುತ್ತದೆ. ಈ ಪ್ರಪಂಚದಲ್ಲಿ ನೀವೊಬ್ಬರೇ ಇರುತ್ತಿದ್ದರೆ ಮನಸ್ಸಿಗೆ ಮುದಕೊಡವುದಕ್ಕಾಗಿ ಏನು ಮಾಡುತ್ತಿದ್ದಿರಿ ಎಂದು ಯೋಚಿಸಿ. ಓದು, ಸಂಗೀತ, ಕಲೆ, ಹೊಸ ಕಲಿಕೆ- ಹೀಗೆ ಯಾವುದರಲ್ಲಿ ನಿಮ್ಮನ್ನು ತೀವ್ರವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಬಹುದು? ತಕ್ಷಣಕ್ಕೆ ಏನೂ ಇಲ್ಲ ಎನ್ನಿಸಿದರೂ ಒಪ್ಪಿಕೊಳ್ಳದೆ ಹುಡುಕಾಟ ಮುಂದುವರೆಸಿ. ಬೇರೆಬೇರೆ ಪ್ರಯೋಗಗಳನ್ನು ಮಾಡಿ. ಕೊನೆಗೆ ನಿಮಗೆ ಬೇಕಾದದ್ದು ಸಿಕ್ಕಿಯೇ ಸಿಗುತ್ತದೆ.  

ನಮ್ಮೂರಿನ ಐಪಿಎಸ್‌ ಅಧಿಕಾರಿಗಳ ಮನೆಯಲ್ಲಿದ್ದುಕೊಂಡು ಓದುತ್ತಿದ್ದೇನೆ. ಹೊರ ಊರಿನಲ್ಲಿರುವ ಅವರು ಬಂದಾಗ ಪರೀಕ್ಷೆಗಳ ಬಗೆಗೆ ಏನಾದರೂ ಸಲಹೆ ಪಡೆಯಬೇಕು ಅನ್ನಿಸುತ್ತದೆ. ಹೇಗೆ ಕೇಳುವುದು ಎನ್ನುವ ಭಯ. ನಾನೇನು ಮಾಡಲಿ?

-ಬಸವರಾಜ್‌, ಊರಿನ ಹೆಸರಿಲ್ಲ.

ಅಧಿಕಾರಿಗಳಿಂದ ಬರಬಹುದಾದ ಪ್ರತಿಕ್ರಿಯೆ ನಿಮ್ಮೊಳಗೆ ನೂರಾರು ಭಾವನೆಗಳನ್ನು ಕೆರಳಿಸುತ್ತದೆ. ಅವುಗಳೇನೆಂದು ಗುರುತಿಸಿದ್ದೀರಾ? ನಿಮ್ಮ ಬಗೆಗೆ ನಿಮ್ಮೊಳಗೆ ಇರುವ ಹಿಂಜರಿಕೆ, ಕೀಳರಿಮೆಗಳೆಲ್ಲಾ ಅಲ್ಲಿ ಕಾಣಿಸುತ್ತದೆ. ಅವುಗಳನ್ನೆಲ್ಲಾ ಸ್ವಲ್ಪ ಹಿಂದೆ ಸರಿಸಿ ಒಮ್ಮೆ ಅಧಿಕಾರಿಯೆದುರು ನಿಂತು ದೀರ್ಘವಾಗಿ ಉಸಿರಾಡುತ್ತಾ ನಿಧಾನವಾಗಿ ಹೀಗೆ ಮಾತನಾಡಿ, ‘ಸಾರ್‌ ನನಗೇನೋ ಕೇಳಬೇಕು ಅನ್ನಿಸುತ್ತಿದೆ, ಆದರೆ ಭಯವಾಗುತ್ತಿದೆ. ದಯವಿಟ್ಟು ಕೋಪಿಸದೆ ನನ್ನ ಮಾತನ್ನೂ ಕೇಳುತ್ತೀರಾ?’. ಮುಂದೆ ಕೇಳಬೇಕಾಗಿರುವುದನ್ನು ಕೇಳಿ. 

28ರ ತರುಣ, ಪತ್ನಿಗೆ 25 ವರ್ಷ. ಸ್ನಾತಕೋತ್ತರ ಓದುತ್ತಿದ್ದಾಳೆ. ಒಳ್ಳೆಯವಳು. ಮದುವೆಯಾಗಿ 16 ತಿಂಗಳುಗಳಾಗಿವೆ. ಮೊದಲ 8 ತಿಂಗಳು ಅವಳು ನನ್ನನ್ನು ಮುಟ್ಟಿಸಿಕೊಂಡಿರಲಿಲ್ಲ. ಇಷ್ಟವಿಲ್ಲವೆಂದು ಹೇಳಿದ್ದರಿಂದ ನಾನು ಬಲವಂತ ಮಾಡಲಿಲ್ಲ. ನಂತರ ಇಲ್ಲಿಯವರೆಗೆ 5 ಸಲ ಸೇರಿದ್ದೇವೆ. ಅವಳು ಈಗ 5 ತಿಂಗಳ ಗರ್ಭಿಣಿ.

-ರಮೇಶ್‌, ಊರಿನ ಹೆಸರಿಲ್ಲ.

ಪ್ರಶ್ನೆ ಅಪೂರ್ಣವಾಗಿದೆ. ಹೆಂಡತಿ ದೈಹಿಕ ಸಂಬಧ ಇಷ್ಟವಿಲ್ಲ ಎಂದು ಹೇಳಿದಾಗ ನೀವು ಅವರ ಆಸಕ್ತಿ, ಆಯ್ಕೆ, ಕಷ್ಟ, ಹಿಂಜರಿಕೆಗಳ ಬಗೆಗೆ ಮಾತನಾಡಿದ್ದೀರಾ? ಇಬ್ಬರೂ ನಿಮ್ಮನಿಮ್ಮ ಅಂತರಂಗವನ್ನು ಬಿಚ್ಚಿಡದೆ ದೇಹಸಂಬಂಧ ಮಾತ್ರ ಬೆಳೆಸಿದರೆ ಆತ್ಮೀಯತೆ ಹೇಗೆ ಸಾಧ್ಯ? ನಿಮ್ಮ ಬಗೆಗೆ ಮೊದಲು ಹೇಳುತ್ತಾ ಹೋಗಿ. ಅವರ ಬಗೆಗೆ ತಿಳಿಯುವ ಕುತೂಹಲ ವ್ಯಕ್ತಪಡಿಸಿ. ನಿಧಾನವಾಗಿ ಒಬ್ಬರಿಗೊಬ್ಬರು ಹತ್ತಿರವಾಗುತ್ತೀರಿ.  

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು