ಗುರುವಾರ , ಮೇ 26, 2022
27 °C

ಕಳೆದು ಹೋಗದಿರಲಿ ‘ನಮ್ಮ ಸಮಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒತ್ತಡ ಇಂದಿನ ಜನಜೀವನದ ಅವಿಭಾಜ್ಯ ಅಂಗ. ಒತ್ತಡವಿಲ್ಲದವರನ್ನು ಹುಡುಕುವುದೂ ಕಷ್ಟ. ಇದರ ನಡುವೆ ‘ನಮ್ಮ ಸಮಯ’ ಎಂಬುದು ಮರೆತೇ ಹೋಗುತ್ತಿದೆ. ಹಾಗಾದರೆ ನಮ್ಮ ಕ್ಷಣವನ್ನು ಅನುಭವಿಸುವುದು ಹೇಗೆ?

ಒತ್ತಡ ತುಂಬಿದ ಬದುಕಿನ ಮಧ್ಯೆ ಸಣ್ಣ ಸಣ್ಣ ಸಂತೋಷದ ಕ್ಷಣಗಳನ್ನು ಅನುಭವಿಸುವ ವ್ಯವಧಾನವನ್ನೂ ನಾವು ಕಳೆದುಕೊಂಡಿದ್ದೇವೆ. ಹಣ ಸಂಪಾದನೆ ಮಾತ್ರವೇ ಮುಖ್ಯವಾಗಿ ನೆಮ್ಮದಿ ತರುವ ಹಲವು ಸಣ್ಣ ವಿಷಯಗಳತ್ತ ನಮ್ಮ ಗಮನ ಹೋಗುವುದೇ ಇಲ್ಲ. ಆದರೆ, ಇಂಥ ಸಣ್ಣ ಸಣ್ಣ ವಿಷಯಗಳೇ ನಮಗೆ ಉತ್ಸಾಹ ತುಂಬುತ್ತವೆ, ಮೊಗದಲ್ಲಿ ನಗು ಮೂಡುವಂತೆ ಮಾಡುತ್ತವೆ.

ಮನಸನ್ನು ಅರಳಿಸಿ,  ಮೊಗದಲ್ಲಿ ನಗು ಮೂಡುವಂತೆ ಮಾಡುವ, ಆ ‘ನಮ್ಮ ಸಮಯ’ವನ್ನು ಹುಡುಕುವುದು ಹೇಗೆ? ಅದನ್ನು ಅನುಭವಿಸುವುದು ಹೇಗೆ? ಬನ್ನಿ ನೋಡೋಣ. 

ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದರೆ, ಮುಂದಿನ ಝೂಮ್‌ ಮೀಟಿಂಗ್‌ ಬಗ್ಗೆ ತಲೆ ಕೆಡಿಸಿಕೊಂಡು ಗಡಿಬಿಡಿಯಲ್ಲಿ ಊಟ ಮಾಡುವುದಕ್ಕಿಂತ ಇರುವ ಕಡಿಮೆ ಸಮಯದಲ್ಲೇ ಆರಾಮಾಗಿ ಕುಳಿತು ಊಟ ಮಾಡುವುದು ಉತ್ತಮ. ಮನೆಯಲ್ಲಿ ಅಥವಾ ಕಚೇರಿಯಲ್ಲೇ ಊಟ ಮಾಡುವುದಾದರೆ, ಕಿಟಕಿ ಪಕ್ಕ ಕೂತು, ಹೊರಗಡೆ ನೋಡಿಕೊಂಡು, ಶುದ್ಧ ಗಾಳಿ ಪಡೆಯುತ್ತಾ ಊಟ ಮಾಡಿ. ಇದು ಮೆದುಳಿಗೆ ಒಂದಿಷ್ಟು ಆರಾಮ ನೀಡುತ್ತದೆ. ಊಟ ಮಾಡುವಾಗ ಆದಷ್ಟು ಮೊಬೈಲ್‌ನಂತಹ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಿಂದ ದೂರವಿರಿ. ಊಟ ಮುಗಿಸಿ ಐದು ನಿಮಿಷಗಳ ಸಣ್ಣ ವಾಕ್‌ ಮಾಡಿ.

ಆಪ್ತರೊಂದಿಗಿನ ಪುಟ್ಟ ಮಾತುಕತೆ ಕೂಡ ಒತ್ತಡದಿಂದ ನಿಮ್ಮನ್ನು ದೂರ ಇಡಬಹುದು. ಕೆಲಸ ಮಧ್ಯೆ ಪೋಷಕರು, ಸ್ನೇಹಿತರು, ಆಪ್ತೇಷ್ಟರೊಂದಿಗೆ ನಡೆಸುವ ಸಂಭಾಷಣೆ ಆಪ್ತಭಾವ ನೀಡಿ, ಉತ್ಸಾಹ ತುಂಬಬಲ್ಲದು. ಇಲ್ಲವಾದಲ್ಲಿ, ಕಾಫಿ ಅಥವಾ ಟೀ ಬ್ರೇಕ್‌ನಲ್ಲಿ ಕಚೇರಿಯ ಗೆಳೆಯರ ಬಳಗದೊಂದಿಗೆ ಕಾಲ ಕಳೆಯಿರಿ. ಇದು ನಿಮ್ಮ ಮನಸ್ಸಿಗೆ ಆರಾಮ ನೀಡುತ್ತದೆ.

ಕಚೇರಿಗೆ ಬರುವಾಗ ಅಥವಾ ಕಚೇರಿಯಿಂದ ಮನೆಗೆ ಹೋಗುವಾಗ, ಟ್ರಾಫಿಕ್‌ನಲ್ಲಿ ಕೆಂಪು ದೀಪ ಬಂದಾಗ ಕಚೇರಿಗೆ ತಡವಾಯಿತು ಅಥವಾ ಇನ್ನೇನ್ನನ್ನೋ ಯೋಚಿಸುವ ಬದಲು ದೀರ್ಘವಾಗಿ ಮೆಲ್ಲನೆ ಉಸಿರಾಡಿ. ಕೆಂಪು ದೀಪ ಹೋಗುವವರೆಗೂ ಹೀಗೆ ಮಾಡುವುದರಿಂದ ಮನಸ್ಸಿಗೆ ಆರಾಮವೆನಿಸುತ್ತದೆ.

ಕಚೇರಿಯಿಂದ ಮನೆಗೆ ಹೋಗುವಾಗ ನಿಮಗೆ ಇಷ್ಟವಾದ ಹಾಡು ಕೇಳಿ. ನಿಮಗೆ ಇಷ್ಟವಾದವರ ಉಪನ್ಯಾಸ/ ಮಾತುಗಳನ್ನು ಆಲಿಸಿ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ. ಮನಸ್ಸು ಪ್ರಫುಲ್ಲವಾಗುತ್ತದೆ. ಮನೆಗೆ ಹೋದ ನಂತರ ಕುಟುಂಬದವರೊಂದಿಗೆ ಆಪ್ತವಾಗಿ ಬೆರೆಯಲು ಸಹಾಯವಾಗುತ್ತದೆ

ತುಂಬಾ ಒತ್ತಡ ಎನಿಸಿದಾಗ ಕೆಲವು ಸಣ್ಣಪುಟ್ಟ ವ್ಯಾಯಾಮ ಮಾಡುವುದು ಕೂಡ ಆರಾಮ ನೀಡಬಹುದು. ಸುಮ್ಮನೆ ಕುತ್ತಿಗೆಯನ್ನು ಮೆಲ್ಲನೆ ಕೆಲವು ಸುತ್ತು ತಿರುಗಿಸುವುದು, ಭುಜವನ್ನು ತಿರುಗಿಸುವುದು ಇಂತಹ ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡುವುದರಿಂದ ಒತ್ತಡದಿಂದ ಹೊರಬರಬಹುದು. 21 ಬಾರಿ ದೀರ್ಘವಾಗಿ ಉಸಿರಾಡುವುದರಿಂದ ಗಮನವನ್ನು ಕೇಂದ್ರೀಕರಿಸುವ ಜೊತೆಗೆ, ವಿಶ್ರಾಂತಿ ಪಡೆಯಬಹುದು.

ನಮ್ಮಲ್ಲಿರುವ ಹವ್ಯಾಸಗಳೂ, ಮನಸ್ಸಿನ ಒತ್ತಡವನ್ನು ನಿವಾರಿಸಲು ನೆರವಾಗುತ್ತವೆ. ನಿಮಗೆ ಹಾಡು ಹೇಳುವ ಹವ್ಯಾಸವಿದ್ದರೆ, ಆಗಾಗ್ಗೆ ಹಾಡನ್ನು ಗುನುಗುತ್ತಿರಬಹುದು. ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಸುವವರೂ ಇದೇ ವಿಧಾನದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಬಹುದು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು