ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ–ಕುಶಲ: ಮಾದಕ ವ್ಯಸನದ ಗೀಳು

–ಡಾ. ಶ್ರೀನಿವಾಸ ಹರಪನಹಳ್ಳಿ
Published 5 ಫೆಬ್ರುವರಿ 2024, 20:35 IST
Last Updated 5 ಫೆಬ್ರುವರಿ 2024, 20:35 IST
ಅಕ್ಷರ ಗಾತ್ರ

ಪರಿಚಯಸ್ಥರೊಬ್ಬರು ಫೋನಾಯಿಸಿ ‘ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ; ಒಂದು ಬಾರಿ ವೈದ್ಯರೊಂದಿಗೆ ಮಾತಾಡುತ್ತೀರಾ’ ಎಂದಾಗ ನನಗೆ ಆಶ್ಚರ್ಯವಾಯಿತು. ‘ಯಾಕೆ? ಏನಾಯಿತು?’ ಎಂದು ಕೇಳಿದೆ. ಆಗ ಅವರು ‘ಇತ್ತೀಚಿಗೆ ಕೆಲ ತಿಂಗಳುಗಳಿಂದ ಗುಟ್ಕಾ ತಿನ್ನಲು ಪ್ರಾರಂಭಿಸಿದ್ದ. ಅದನ್ನು ಬಿಡಲು ಎಷ್ಟು ಹೇಳಿದರೂ ಕೇಳದೇ ಮೊನ್ನೆ ಅತಿಯಾಗಿ ತಿಂದು ಆಫೀಸಿನಲ್ಲಿ ತಲೆಸುತ್ತು ಬಂದು ಬಿದ್ದುಬಿಟ್ಟ. ವೈದ್ಯರ ಹತ್ತಿರ ತೋರಿಸಿದಾಗ ಅವರು ಮಾನಸಿಕ ರೋಗತಜ್ಞರ ಬಳಿ ಕರೆದುಕೊಂಡು ಹೋಗಲು ಹೇಳಿದರು. ಬಾಬು ಗುಟ್ಕಾವ್ಯಸನದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ ಅಂತಾ ಆ ತಜ್ಞರು ಹೇಳಿದ್ರು. ಅದಕ್ಕೆ ಈಗ ಅಡ್ಮಿಟ್ ಮಾಡಿದ್ದೇವೆ’ ಎಂದರು.

ಇಂದು ಬಾಬುನಂತಹ ಅನೇಕ ಯುವಜನರು ಮಾದಕವ್ಯಸನದ ಗೀಳಿಗೆ ಸಿಲುಕಿದ್ದಾರೆ. ಒಂದೆಡೆ ಭಾರತ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದರೆ, ಇನ್ನೊಂದೆಡೆ ಭಾರತದ ಯುವಶಕ್ತಿ ಮಾದಕವ್ಯಸನದ ಗೀಳಿನಿಂದ ಬಳಲುತ್ತಿದೆ. ಜನಸಂಖ್ಯೆಯ ಶೇ 30ಕ್ಕೂ ತುಸು ಹೆಚ್ಚಿರುವ ಯುವಶಕ್ತಿ ದೇಶದ ಬಹುದೊಡ್ಡ ಆಸ್ತಿ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಶೇ 1.5-2.5 ಜನರು ಮಾದಕವ್ಯಸನಿಗಳಾಗಿದ್ದಾರೆ. ಭಾರತವಷ್ಟೇ ಅಲ್ಲ ಅನೇಕ ಮುಂದುವರೆದ ರಾಷ್ಟ್ರಗಳಲ್ಲೂ ಇದೊಂದು ಬಹುದೊಡ್ಡ ಪಿಡುಗಾಗಿದೆ. ಯಾವುದೇ ದೇಶವಾಗಲಿ ಯುವಜನರು ಆ ದೇಶದ ಭವಿಷ್ಯದ, ಅಭಿವೃದ್ಧಿಯ ದ್ಯೋತಕ. ಶಿಕ್ಷಣ, ತಂತ್ರಜ್ಞಾನದ ಬಳಕೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಯುವಜನರ ಕೊಡುಗೆ ಮಹತ್ತರವಾದುದು. ಇಂತಹ ಸಶಕ್ತ ಯುವಕಾರ್ಯಪಡೆ ನಿಧಾನವಾಗಿ ಮಾದಕವ್ಯಸನದ ಗೀಳಿಗೆ ಸಿಲುಕುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಅಷ್ಟೇಕೆ, ಈ ಗೀಳು ಸಿನೆಮಾ ತಾರೆಯರು, ಕ್ರೀಡಾಪಟುಗಳು, ಉದ್ಯಮಿಗಳು ಮತ್ತು ವೈದ್ಯರನ್ನೂ ಬಿಟ್ಟಿಲ್ಲ.

ಗೀಳು ಕೇವಲ ಮಾದಕವಸ್ತುಗಳದ್ದೇ ಮಾತ್ರವಲ್ಲ. ಇನ್ನೂ ಅನೇಕ ವಸ್ತುಗಳು ಈ ಪಟ್ಟಿಯಲ್ಲಿ ಸೇರುತ್ತವೆ. ಮಾದಕವ್ಯಸನದಲ್ಲಿ ಹಲವಾರು ವಿಧಗಳಿವೆ. ಅಫೀಮು ಜಾತಿಯ ಗಾಂಜಾ ಮತ್ತು ಚರಸ್ ಒಂದು ಬಗೆಯ ಗಿಡದಿಂದ ದೊರೆತರೆ, ಹೆರಾಯಿನ್, ಎಕ್ಟಾಸಿ ಮತ್ತು ‘ಎಲ್‌ಎಸ್‌ಡಿ’ಯಂತಹ ಮಾದಕವಸ್ತುಗಳು ರಾಸಾಯನಿಕಗಳಿಂದ ತಯಾರಿಸಲ್ಪಡುತ್ತವೆ. ಈ ಮಾದಕವಸ್ತುಗಳ ಬಳಕೆ ಕಾನೂನುಬಾಹಿರ. ಇದಲ್ಲದೇ ಕೆಟಮಿನ್, ಆಂಫೆಟಾಮಿನ್, ಫೆಂಟಾನಿಲ್ ಎಂಬ ಔಷಧಗಳನ್ನು ಕೂಡ ಕೆಲವರು ನಶೆಗಾಗಿ ಬಳಸಿ ಅದರ ದಾಸರಾಗಿದ್ದಾರೆ. ಈ ವಸ್ತುಗಳು ಆರಂಭದಲ್ಲಿ ಮಿದುಳನ್ನು ಪ್ರಚೋದಿಸಿದರೂ ನಂತರ ನರದೌರ್ಬಲ್ಯಕ್ಕೆ ಕಾರಣವಾಗುತ್ತವೆ. ಮದ್ಯಪಾನ ಕೂಡ ಗೀಳಿನ ವಸ್ತುವಾಗಿದೆ. ಇತ್ತೀಚಿಗೆ ಮೊಬೈಲ್ ಫೋನಿನ ಅತಿಬಳಕೆಯೂ ಗೀಳೆಂದೇ ಪರಿಗಣಿಸಲ್ಪಟ್ಟಿದೆ. ಅಂಕಿ-ಅಂಶಗಳ ಪ್ರಕಾರ ಗುಟ್ಕಾ ಜಗತ್ತಿನ 4ನೇ ಅತಿ ಹೆಚ್ಚು ಗೀಳಿನ ವಸ್ತುವಾಗಿದೆ.

ಗೀಳೆಂದರೆ ಯಾವುದೇ ವಸ್ತುವನ್ನು ಅತಿಯಾಗಿ ಉಪಯೋಗಿಸುವುದು ಮತ್ತು ಅದು ಸಿಗದಿದ್ದಾಗ ತೀವ್ರವಾದ ದೈಹಿಕ ಮತ್ತು ಮಾನಸಿಕ ಕ್ಷೋಭೆಗೆ ಒಳಗಾಗುವುದು. ದೈನಂದಿನ ಒತ್ತಡ, ಒಂಟಿತನ, ಆನುವಂಶೀಯತೆ, ಅಂಧಾನುಕರಣೆ ಮತ್ತು ಪಾಲಕರ ಬೇಜವಾಬ್ದಾರಿತನ – ಇವೆಲ್ಲಾ ಗೀಳಿಗೆ ಬೀಳಲು ಮುಖ್ಯ ಕಾರಣಗಳು. ಇಂಥ ವ್ಯಕ್ತಿಗಳು ನಿದ್ರಾಹೀನತೆ, ಸಿಡುಕುತನ ಮತ್ತು ಚಂಚಲತೆಯಿಂದ ಬಳಲುತ್ತಿರುತ್ತಾರೆ. ಸುಸ್ತು, ಕೈಕಾಲುಗಳಲ್ಲಿ ನವೆ, ಕೆಲಸದಲ್ಲಿ ನಿರಾಸಕ್ತಿ ಮತ್ತು ಸಮಾಜಘಾತುಕ ವರ್ತನೆ ಕೂಡ ಈ ವ್ಯಕ್ತಿಗಳಲ್ಲಿ ಕಂಡುಬರುತ್ತವೆ. ಈ ಲಕ್ಷಣಗಳು ಗೀಳಿನ ವಸ್ತುವಿನ ಮೇಲೆ ಅವಲಂಬಿತವಾಗಿರುತ್ತವೆ. ಅನೇಕಬಾರಿ ಆ ವ್ಯಕ್ತಿಗೆ ತಾನು ಗೀಳಿಗೆ ಒಳಗಾಗಿದ್ದೇನೆ ಎಂಬ ಅಂಶವೇ ಗಮನಕ್ಕೆ ಬರುವುದಿಲ್ಲ. ಸಾಮಾನ್ಯವಾಗಿ ಮನೆಯ ಮಂದಿ, ಸ್ನೇಹಿತರು ಅಥವಾ ಸಹೋದ್ಯೋಗಿಗಳೇ ವ್ಯಕ್ತಿಯ ಚರ್ಯೆಯಲ್ಲಿ ಆಗಿರುವ ಬದಲಾವಣೆಯನ್ನು ಮೊದಲು ಗಮನಿಸುತ್ತಾರೆ.

ಈ ಗೀಳಿನಿಂದ ಹೊರಬರುವುದು ಹೇಗೆ? ‘ನಾನು ಗೀಳಿನಿಂದ ಬಳಲುತ್ತಿದ್ದೇನೆ, ಇದರಿಂದ ಹೊರಬರಲೇಬೇಕು’ ಎಂಬ ಇಚ್ಛೆಯೇ ಇದರ ಮೊದಲ ಹೆಜ್ಜೆ. ನಂತರ ತಜ್ಞರು ಚಿಕಿತ್ಸೆಯ ಹಲವು ಹಂತಗಳನ್ನು ಸೂಚಿಸುತ್ತಾರೆ. ಇದು ಕೇವಲ ಐದಾರು ದಿನಗಳಲ್ಲಿ ಮುಗಿಯುವ ಚಿಕಿತ್ಸೆಯಲ್ಲ. ಮೊದಲಿಗೆ ಗೀಳಿನ ಲಕ್ಷಣಗಳನ್ನು ಅವಲೋಕಿಸಿ ನಂತರ ಆಪ್ತಸಮಾಲೋಚನೆ, ಮಾತ್ರೆಗಳು, ವ್ಯಸನಕೇಂದ್ರದಲ್ಲಿ ದಾಖಲಾತಿ – ಹೀಗೆ ಹಂತಹಂತವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಜೊತೆಗೆ ಗೀಳಿನ ವಸ್ತುಗಳು ಮಾಡಿರುವ ಶಾರೀರಿಕ ಹಾನಿಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಗುಟ್ಕಾದಿಂದ ಬರಬಹುದಾದ ಬಾಯಿಯ ಕ್ಯಾನ್ಸರ್, ಮದ್ಯಪಾನ ಮತ್ತು ಇತರೆ ರಾಸಾಯನಿಕ ವಸ್ತುಗಳಿಂದ ಯಕೃತ್ತಿನ ಕಾಯಿಲೆ, ಚರ್ಮದ ತೊಂದರೆಗಳು, ಶ್ವಾಸಕೋಶದ ಸೋಂಕು, ಖಿನ್ನತೆ. ಸ್ಕಿಝೋಪ್ರೇನಿಯಾ ಇತ್ಯಾದಿಗಳ ಮೇಲೂ ನಿಗಾ ಇಡಬೇಕಾಗುತ್ತದೆ. ಕೊನೆಯಲ್ಲಿ ಗೀಳಿನಿಂದ ಮುಕ್ತರಾಗಿ ಈಗ ಸುಧಾರಿಸಿರುವ ವ್ಯಕ್ತಿಗಳಿಂದ ಸಲಹೆ-ಬುದ್ಧಿಮಾತುಗಳ ಆರೈಕೆಯೂ ಬೇಕಾಗುತ್ತದೆ.

ಶಾಲಾ-ಕಾಲೇಜು ಮಟ್ಟದಲ್ಲೇ ಈ ಮಾದಕವ್ಯಸನದ ಗೀಳಿನ ಬಗ್ಗೆ ತಿಳಿವಳಿಕೆ, ಔಷಧಗಳ ಸದ್ಬಳಕೆ ಮತ್ತು ದೇಶದಾದ್ಯಂತ ಜನಜಾಗೃತಿ ಅಭಿಯಾನದ ಮೂಲಕ ಇದನ್ನು ಮೂಲದಿಂದಲೇ ನಿರ್ನಾಮ ಮಾಡುವ ಪಣವನ್ನು ನಾವೆಲ್ಲ ತೊಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT