ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯ ಬೇಗುದಿಗೆ ಪರಿಹಾರಗಳು

Last Updated 20 ಮಾರ್ಚ್ 2023, 21:45 IST
ಅಕ್ಷರ ಗಾತ್ರ

ಹೆಚ್ಚು ನೀರು ಕುಡಿದಷ್ಟೂ ಮತ್ತೆ ಹಸಿವೆ ಅಡಗುತ್ತದೆ. ಹದ ಬಿಸಿ ನೀರು ಕುಡಿಯಲು ಬಳಸಿರಿ.

ಋತುರಾಜ ಎಂಬ ಹೆಸರಿನದು ವಸಂತ. ಕೋಗಿಲೆ, ಗಿಣಿವಿಂಡು ಕಲರವದ ಮಾಸಗಳು ಚೈತ್ರ ಮತ್ತು ವೈಶಾಖ. ಚಳಿಯ ದಿನಗಳು ಮುಗಿದು ಬಿಸಿಲ ಧಗೆ ದಿನ ದಿನವೂ ಏರುಮುಖ. ಬಿಸಿಲ ತಾಪಕ್ಕೆ ಎದ್ದು ಚಕ್ರಾಕಾರದ ಸುಳಿಗಾಳಿಗೆ ಧೂಳಿನ ಮೋಡಗಳು ಮುಗಿಲೆತ್ತರ. ಮರುಗಳಿಗೆಗೆ ಬಾನಿನಿಂದ ಧರೆಗಿಳಿಯುವ ಮಳೆ ಗಾಳಿಯ ಆರ್ಭಟ. ಒಟ್ಟಿನಲ್ಲಿ ನೆಗಡಿ, ತಲೆನೋವು, ಕಣ್ಣುಬೇನೆಗಳಷ್ಟೇ ಅಲ್ಲ. ಕುಗ್ಗುವ ಹಸಿವೆ, ಏರುವ ನೀರಡಿಕೆ, ಆಗಾಗ ತಲೆದೋರುವ ಉರಿಮೂತ್ರ, ಮಲಬದ್ಧತೆಯಂತಹ ಸಮಸ್ಯೆಗಳು; ಇವು ವಸಂತಕಾಲದ ಉದ್ದಕ್ಕೆ ಕಾಡುವ ಸಮಸ್ಯೆಗಳು.

ಕಫ ಹೆಚ್ಚಿದ ಕಾರಣ ಹಸಿವೆ ಕಡಿಮೆ. ನೀರಡಿಕೆ ಹೆಚ್ಚುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿದಷ್ಟೂ ಮತ್ತೆ ಹಸಿವೆ ಅಡಗುತ್ತದೆ. ಹದ ಬಿಸಿನೀರು ಕುಡಿಯಲು ಬಳಸಿರಿ. ಮಲಬದ್ಧತೆ ನಿವಾರಣೆಗೆ ಇದು ಸಹಕಾರಿ. ಹಗಲು ನಿದ್ದೆಯು ಕಫ ಹೆಚ್ಚಲು ಕಾರಣ. ರೋಗಿಗಳು, ವೃದ್ಧರು ಕೊಂಚ ವಿಶ್ರಾಂತಿ ಪಡೆಯಲಾದೀತು. ಹಾಗೆಂದು ಹಾಸಿಗೆಯುದ್ದಕ್ಕೆ ಕಾಲು ಚಾಚಿ ಮಲಗುವುದು ತರವಲ್ಲ. ಕುಳಿತ ಭಂಗಿಯ ನಿದ್ದೆ ಲೇಸು. ಹೆಸರು ಬೇಳೆಯ ಬಳಕೆಗಿರಲಿ ಮಹತ್ವ. ಈ ಸೀಸನ್ನು ಬಂದಾಗ ದೊರಕುವ ಮಾವು, ಹಲಸು, ಅನಾನಸು, ಕಿತ್ತಳೆಗಳಿಂದ ಲಾಭ. ಅವುಗಳ ರಸ ತೆಗೆದು ಬಳಸಿರಿ. ಐಸ್ ಸೇರಿಸದಿರಿ.

ಬೇಸಿಗೆಯ ತಲೆನೋವು
ಪ್ರಖರ ಬಿಸಿಲಡಿ ಕೆಲಸ ಮಾಡುವುದಷ್ಟೆ ಅಲ್ಲ, ಮನೆಯೊಳಗೆ ಇದ್ದರೂ ತಾಪದ ಝಳಕ್ಕೆ ತಲೆನೋವು ಕಾಡೀತು. ಅಣಿಲೆಕಾಯಿಯ ಪುಡಿಯನ್ನು ಶೇಖರಿಸಿಟ್ಟುಕೊಳ್ಳಿರಿ. ಬಿಸಿಲುಗಾಲದ ಉದ್ದಕ್ಕೂ ಅರೆ ಚಮಚದಿಂದ ಒಂದು ಚಮಚ ತನಕ ಸೇವಿಸಬೇಕಾದೀತು. ಬೆಲ್ಲ ಮತ್ತು ಜೇನುಗೂಡಿಸಿ ನಿತ್ಯ ಸೇವಿಸಲಾದೀತು. ಇಂತಹ ಅದ್ಭುತ ಮದ್ದು ಬೇರಿಲ್ಲ. ತಲೆನೋವು ಕಳೆಯುತ್ತದೆ. ಮಲಬದ್ಧತೆ ಮಾಯ. ಹರಳೆಣ್ಣೆ ಹದ ಬಿಸಿ ಪಾದದಡಿ ಹಚ್ಚಿ ಮಲಗಿರಿ. ಸುಂದರ ನಿದ್ದೆ ನಿಮಗೆ ನಿಶ್ಚಿತ. ಶುಂಠಿರಸದ ಲೇಪ, ಅರೆದ ಗಂಧ, ಚಂದನದ ಲೇಪದಿಂದ ತಲೆನೋವಿನ ತೀವ್ರತೆಗೆ ಕಡಿವಾಣ. ಸುಖನಿದ್ರೆಗೆ ಸೋಪಾನ.

ಕೆಂಗಣ್ಣು
ಬೇಸಿಗೆಯುದ್ದಕ್ಕೆ ಕಣ್ಣು ಕೆಂಪಾಗುವ ಉರಿಯೂತದ ಸಮಸ್ಯೆ ಸಾಮಾನ್ಯ. ವೈರಾಣು ಜನಿತ ಈ ತೊಂದರೆಗೆ ‘ಮದ್ರಾಸ್ ಐ’ ಎಂಬ ಹೆಸರಿದೆ. ಮಲಪ್ರವೃತ್ತಿ ಸರಾಗವಿದ್ದರೆ ಇದರ ಕಾಟದಿಂದ ಪಾರಾಗಬಹುದು. ಒಬ್ಬರಿಗೆ ಸೋಂಕು ತಗಲಿದರೆ ಮನೆಯ ಮಂದಿಗೆಲ್ಲ ಇದು ಹರಡುವ ಸಂಭಾವ್ಯತೆ. ಆಯುರ್ವೇದ ಸಂಹಿತೆಗಳು ಈ ತೊಂದರೆಗೆ ‘ಅಭಿಷ್ಯಂದ’ ಎಂಬ ಹೆಸರಿಟ್ಟು ಚಿಕಿತ್ಸೆ ಮತ್ತು ತಡೆಯ ಉಪಾಯ ಬರೆದಿರಿಸಿವೆ. ತೆಂಗಿನೆಣ್ಣೆ ಮತ್ತು ತುಪ್ಪ ಸಮಪಾಲು ಬೆರೆಸಿರಿ. ಸೌಟಿನಲ್ಲಿ ಹಾಕಿ ಸ್ಟವ್ ಮೇಲಿರಿಸಿರಿ. ಹದ ಬಿಸಿಯಾಗಲಿ. ನೆತ್ತಿ ಭಾಗಕ್ಕೆ ಚೆನ್ನಾಗಿ ಮಾಲೀಷು ಮಾಡಿಕೊಳ್ಳಿರಿ. ಹತ್ತು ನಿಮಿಷದೊಳಗಾಗಿ ತಲೆಸ್ನಾನ ಕೈಗೊಳ್ಳಿರಿ. ಕೂದಲೊಣಗಿಸಿಕೊಳ್ಳಿರಿ. ದೇಹದ ರೋಗನಿರೋಧಕ ಕಸುವು ಹೆಚ್ಚಾಗಲು ಇಂತಹ ಸರಳ ವಿಧಾನ ಅನುಸರಿಸಲಾದೀತು. ವೈರಾಣು ಜನಿತ ಸಮಸ್ಯೆ ಕಣ್ಣಿಗೆ, ಮೂಗಿಗೆ ತಗಲದಂತೆ ತಡೆ ಬೇಲಿ ಇದು. ಅದಕ್ಕೆ ಬೇವು ಬೆಲ್ಲದಷ್ಟೆ ಯುಗಾದಿ ಎಣ್ಣೆಸ್ನಾನ ಸಹ ಮಹತ್ವದ್ದು. ಇಂದು ಅಂತಹ ಸಂಪ್ರದಾಯದ ಆಚರಣೆ ಎಂದಿಗಿಂತ ಹೆಚ್ಚು ಪ್ರಸ್ತುತ. ರೋಗ ಬರದ ತಡೆ ಹಾದಿಯೇ ಚಿಕಿತ್ಸೆಗಿಂತ ಹೆಚ್ಚು ಫಲಕಾರಿ.
ಸ್ನಾನದ ನೀರಿಗೆ ಲಾವಂಚದ ಹುಲ್ಲು, ಲಭ್ಯವಿದ್ದರೆ ಗಂಧದ ಪುಡಿ, ಪನ್ನೀರೆಲೆ, ಪಚ್ಚೆ ತೆನೆ, ವೀಳ್ಯದೆಲೆ ಅಥವಾ ಅವುಗಳ ಸುವಾಸನೆ ಬೀರುವ ತೈಲ ಹಾಕಿ ಮಿಂದರೆ ಮೈ ಉರಿ ಮಾಯ. ಬೆವರಿನ ಅತಿ ದುರ್ಗಂಧಕ್ಕೆ ತಡೆಯಾದೀತು. ದೇಹ ಮತ್ತು ಮನಸ್ಸು ಆಹ್ಲಾದಮಯ. ಸದ ಉಲ್ಲಾಸದ ದಿನ ನಿಮ್ಮದಾಗಲಿ.

ಕೆಮ್ಮು, ನೆಗಡಿ
ಕಫದ ಉಪಟಳ ಅಷ್ಟಿಷ್ಟಲ್ಲ. ನಿಲ್ಲದ ನೆಗಡಿ, ನಿರಂತರ ಕೆಮ್ಮು ಕಾಡುವ ಬೇಸಿಗೆಯ ದಿನಗಳು ದುರ್ಭರ. ಹಾಗೆಂದು ದಿನ ದಿನವೂ ಮಾತ್ರೆ ನುಂಗುವ ಚಪಲ ಒಳ್ಳೆಯದಲ್ಲ. ಕಾಯುವಾಗಲೇ ನೀರಿಗೆ ಮೆಣಸು ಕಾಳು ಹಾಕಿರಿ. ಹದ ಬಿಸಿ ಪಾನದಿಂದ ಕಫದ ಉದ್ರೇಕಕ್ಕೆ ಕಡಿವಾಣ. ಹಸಿ ಶುಂಠಿ ಸಹ ಇಂತಹದೇ ಬಳಕೆಗೆ ಯೋಗ್ಯ. ತುಳಸಿಯ ರಸ, ಈರುಳ್ಳಿ ರಸದ ಸಂಗಡ ಜೇನುಗೂಡಿಸಿ ನೆಕ್ಕಿದರೆ ಗಂಟಲುರಿ, ಕೆರೆತ, ಕೆಮ್ಮು ಪರಿಹಾರ.

ಉರಿಮೂತ್ರ, ಮೂತ್ರಕಟ್ಟು
ಮೊದಲೇ ಸೆಖೆ. ಹಾಗೆಂದು ಎಸಿ, ಕೂಲರ್, ಫ್ಯಾನ್ ಅತಿ ಬಳಕೆಗೆ ಕಡವಾಣವಿರಲಿ. ಬೆವರು ಖಂಡಿತ ವಿಷವಸ್ತುಗಳನ್ನು ಹೊರ ಹಾಕುವ ದೈವನಿರ್ಮಿತ ವ್ಯವಸ್ಥೆ. ಎಸಿ, ಕೂಲರ್ ಅತಿ ಬಳಸಿದರೆ ಅದು ಸಹ ಅವ್ಯವಸ್ಥೆಗೆ ಹೆದ್ದಾರಿ. ಕಲ್ಲಂಗಡಿ ಕಂಡಾಗ ಖುಷಿ. ಅದರೆ ಅದನ್ನೂ ಅತಿಯಗಿ ಸೇವಿಸಬಾರದು. ಮೂತ್ರಕಟ್ಟು ತೊಂದರೆಗೆ ಸಿಲುಕುವಿರಿ. ಬಾರ್ಲಿನೀರು, ಎಳನೀರು ಬಳಕೆಯಿಂದ ಲಾಭ. ಮಜ್ಜಿಗೆ ಬಳಸಿರಿ. ಮೊಸರು ಬೇಡವೇ ಬೇಡ. ಅದರ ಜಿಡ್ಡಿನಂಶ ತೆಗೆದಾಗ ಪಚನ ಕ್ರಿಯೆಗದು ಸಹಕಾರಿ. ಅಂತಹ ತಾಜಾ ಮಜ್ಜಿಗೆ ಹೇರಳ ಬಳಸಿರಿ. ರಾಮನವಮಿಯ ಕೋಸಂಬರಿ, ಪಾನಕ, ಮಜ್ಜಿಗೆಗಳ ಪರಿಪಾಠವಂತೂ ಪೂರ್ವಿಕರ ಆರೋಗ್ಯ ಕಾಳಜಿಯ ಆಶಯ; ನಿರೋಗದತ್ತ ಹೆದ್ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT