ಗುರುವಾರ , ಮೇ 26, 2022
23 °C

ಏನಾದ್ರೂ ಕೇಳ್ಬೋದು | ದಂಪತಿಗಳಲ್ಲಿ ಲೈಂಗಿಕ ಜ್ಞಾನದ ಕೊರತೆ

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

24ರ ಯವತಿ. ಮಾರ್ಚ್‌ ತಿಂಗಳಲ್ಲಿ ಮದುವೆಯಾಗಿದ್ದೇನೆ. ನಾವಿಬ್ಬರೂ ತೆಳ್ಳಗಿದ್ದೇವೆ. 10-15 ನಿಮಿಷದ ಲೈಂಗಿಕ ಕ್ರಿಯೆಯ ನಂತರ ಪತಿಗೆ ಸ್ಖಲನವಾಗುತ್ತದೆ. ನಾವು ಸರಿಯಾದ ಲೈಂಗಿಕಕ್ರಿಯೆ ನಡೆಸುತ್ತಿದ್ದೇವೆಯೇ ಮತ್ತು ನಾನು ಗರ್ಭವತಿಯಾಗುತ್ತೇನೆಯೇ ಎನ್ನುವ ಆತಂಕ ಕಾಡುತ್ತಿದೆ. ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ.

ಲೈಂಗಿಕ ಕ್ರಿಯೆಯಿಂದ ಇಬ್ಬರಿಗೂ ತೃಪ್ತಿ ಸಮಾಧಾನಗಳು ಆಗುತ್ತಿವೆಯೇ? ಆಗುತ್ತಿದೆ ಎಂದಾದರೆ ನೀವು ಸೇರುತ್ತಿರುವ ರೀತಿ ಸರಿಯಾಗಿದೆ ಎಂದಾಯಿತಲ್ಲವೇ? ಇಬ್ಬರೂ ತೆಳ್ಳಗಿರುವುದು ನಿಮ್ಮ ಲೈಂಗಿಕ ತೃಪ್ತಿಗೆ ಮಕ್ಕಳಾಗುವುದಕ್ಕೆ ಸಂಬಂಧವಿರದ ಅಂಶ. ಸಂಭೋಗದ ನಂತರ ಸ್ಖಲನವಾದ ಹೆಚ್ಚಿನ ವೀರ್ಯವು ಹೊರಹೋಗುತ್ತದೆ ಎನ್ನುವುದು ನಿಮ್ಮ ಅನುಮಾನ ಆತಂಕಕ್ಕೆ ಕಾರಣವಿರಬಹುದೇ? ಹೀಗೆ ಹೊರಹೋಗುವುದು ಸಹಜವೇ. ಮದುವೆಯಾಗಿ ಇನ್ನೂ ವರ್ಷವೂ ಆಗಿಲ್ಲದಿರುವಾಗ ಮಕ್ಕಳನ್ನು ಪಡೆಯುವ ಆತುರವೇಕೆ? ಸದ್ಯ ಲೈಂಗಿಕ ಸುಖವನ್ನು ಹೊಂದುತ್ತಾ ಇಬ್ಬರ ನಡುವಿನ ಬಾಂಧವ್ಯವನ್ನು ಗಟ್ಟಿಮಾಡಿಕೊಳ್ಳಬಹುದಲ್ಲವೇ? ಇದರಿಂದ ಮುಂದಿನ ಸಂತಾನವನ್ನು ಉತ್ತಮವಾಗಿ ಬೆಳೆಸಲು ಸಹಾಯವಾಗುತ್ತದೆ. ಅಗತ್ಯವಿದ್ದರೆ ನಿಮ್ಮ ಕುಟುಂಬ ವೈದ್ಯರೊಡನೆ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಚರ್ಚೆಮಾಡಿ.

****

ಪುರುಷ, ಥೈರಾಯ್ಡ್‌ ಸಮಸ್ಯೆಯಿದೆ. ಲೈಂಗಿಕ ಆಸಕ್ತಿ ಕಡಿಮೆಯಿದೆ. ನೀಲಿಚಿತ್ರ ನೋಡುವುದರಿಂದ ಆಸಕ್ತಿ ಹೆಚ್ಚಾಗುತ್ತಿದೆ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ನಿಮ್ಮ ಪ್ರಶ್ನೆಯಲ್ಲಿ ಸ್ಪಷ್ಟತೆಯಿಲ್ಲ. ವಯಸ್ಸು ಮತ್ತು ಕುಟುಂಬದ ವಿವರಗಳನ್ನು ನೀಡಿಲ್ಲ. ನೀಲಿಚಿತ್ರ ನೋಡಿದಾಗ ಲೈಂಗಿಕ ಆಸಕ್ತಿ ಕೆರಳುತ್ತದೆ ಎಂದು ನೀವು ಹೇಳುತ್ತಿದ್ದೀರಲ್ಲವೇ? ಹಾಗಿದ್ದರೆ ನಿಮಗೆ ಆಸಕ್ತಿ ಕಡಿಮೆಯಿದೆ ಎಂದು ಹೇಗೆ ಹೇಳಲು ಸಾಧ್ಯ. ನಿಮ್ಮ ಪತ್ನಿಯೊಡನೆ ಲೈಂಗಿಕ ಆಸಕ್ತಿ ಮೂಡುತ್ತಿಲ್ಲ ಎನ್ನುವುದು ನಿಮ್ಮ ಅಭಿಪ್ರಾಯವೇ? ಪತ್ನಿಗೂ ಆಸಕ್ತಿ ಇದೆಯೇ? ಇದ್ದರೆ ಅವರು ಬಯಸುವ ಲೈಂಗಿಕತೆ ಎಂತಹದ್ದು ಎಂದು ಕೇಳಿದ್ದೀರಾ? ನಿಮ್ಮ ಲೈಂಗಿಕ ಆಸಕ್ತಿಗಳನ್ನು ಅವರಿಗೆ ಹೇಳಿಕೊಂಡಿದ್ದೀರಾ? ಇಬ್ಬರ ಬಯಕೆಗಳನ್ನೂ ಪೂರೈಸಿಕೊಳ್ಳುವುದು ಹೇಗೆಂದು ಮಾತನಾಡಿದ್ದೀರಾ? ಇಂತಹ ವಿಚಾರಗಳನ್ನು ಇಬ್ಬರೂ ಮುಕ್ತವಾಗಿ ಚರ್ಚೆ ಮಾಡಿದರೆ ನೀಲಿಚಿತ್ರಗಳ ಅಗತ್ಯವಿಲ್ಲದೆ ನಿಮ್ಮ ಲೈಂಗಿಕ ಆಸಕ್ತಿಯೂ ಸಹಜವಾಗಿ ಕೆರಳುತ್ತದೆ.

***

ಪುರುಷ. 10 ವರ್ಷದಿಂದ ಹಸ್ತಮೈಥುನ ಸಮಸ್ಯೆಯಿದೆ. ಮದುವೆಯಾಗಿ 2ವರ್ಷವಾಗಿದೆ. ಈಗ ಮಕ್ಕಳಾಗುತ್ತಿಲ್ಲ. ಪರಿಹಾರವೇನು.

ಹೆಸರು, ಊರು ತಿಳಿಸಿಲ್ಲ.

ಹಸ್ತಮೈಥುನಕ್ಕೂ ಮಕ್ಕಳಾಗುವುದಕ್ಕೂ ಸಂಬಂಧವಿಲ್ಲ ಎಂದು ಈ ಅಂಕಣದಲ್ಲಿ ಹಲವಾರು ಬಾರಿ ಹೇಳಲಾಗಿದೆ. ವೀರ್ಯಾಣುಗಳು ಸ್ಖಲನವಾಗದೆ ಹೊರಹೋಗದಿದ್ದರೂ ಅನಿರ್ದಿಷ್ಟ ಕಾಲದವರೆಗೆ ದೇಹದಲ್ಲಿ ಜೀವಂತವಾಗಿರುವುದಿಲ್ಲ. ನಿರ್ದಿಷ್ಟ ಸಮಯದ ನಂತರ ಅವು ನಾಶವಾಗಿ ಹೊಸದು ಸೃಷ್ಟಿಯಾಗುತ್ತಲೇ ಇರುತ್ತವೆ. ಮಕ್ಕಳಾಗದಿರುವುದಕ್ಕೆ ಹಲವಾರು ಕಾರಣಗಳಿರಬಹುದು. ನಿಮ್ಮ ಕುಟುಂಬ ವೈದ್ಯರಲ್ಲಿ ಸಲಹೆ ಪಡೆಯಿರಿ.

***

24ರ ಯುವತಿ. ಬಿಕಾಂ ಓದಿದ್ದೇನೆ. ಹಳ್ಳಿಯಲ್ಲಿ ಬೆಳೆದಿದ್ದು ಮೂರು ವರ್ಷಗಳಿಂದ ಅಜ್ಜಿಯ ಜೊತೆ ಬೆಂಗಳೂರಿನಲ್ಲಿದ್ದೇನೆ. ಕೆಲಸಕ್ಕೆ ಹೋಗುವ ಆಸೆಯಿದ್ದರೂ ಕೀಳರಿಮೆಯಿಂದ ಹೋಗಲಾಗುತ್ತಿಲ್ಲ. ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬಿಸಿದ್ದೇನೆ ಎನ್ನುವ ನೋವಿದೆ. ಸ್ನೇಹಿತರು ಕಡಿಮೆ. ಒಂದೇ ವಿಷಯದ ಕುರಿತು ಯೋಚಿಸುತ್ತೇನೆ. ನಕಾರಾತ್ಮಕ ಯೋಚನೆಗಳೇ ಹೆಚ್ಚು. ಹೊಸಬರ ಜೊತೆ ಮಾತಾಡಲು ಭಯ. ಭಯದಿಂದ ಹೊರ ಬರುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ನಿಮಗೆ ಕಾಡುತ್ತಿರುವುದು ಭಯವಲ್ಲ, ನಿಮ್ಮ ಬಗೆಗೆ ನಿಮ್ಮೊಳಗೆ ಆಳವಾಗಿ ಬೇರೂರಿರುವ ಹಿಂಜರಿಕೆ. ಕೆಲಸವನ್ನು ಪಡೆದುಕೊಳ್ಳಲು ನನಗೆ ಯೋಗ್ಯತೆಯಿದೆಯೇ? ಸಿಗುವ ಕೆಲಸವನ್ನು ನಿಭಾಯಿಸುವ ಶಕ್ತಿ ಇದೆಯೇ? ಸಾಧ್ಯವಾಗದಿದ್ದರೆ ಎಲ್ಲರಿಂದ ಅವಮಾನಿತಳಾಗುತ್ತೇನೆಯೇ? ಎಲ್ಲರ ಜೊತೆ ಬೆರೆತು ಸ್ನೇಹವನ್ನು ಗಳಿಸಲು ನನಗೆ ಸಾಧ್ಯವೇ? ಬೇರೆಯವರಿಂದ ಸ್ನೇಹ, ಗೌರವವನ್ನು ಪಡೆದುಕೊಳ್ಳುವ ಯೋಗ್ಯತೆ ನನಗಿದೆಯೇ? ಇಂತಹ ಹಲವಾರು ರೀತಿಯ ಹಿಂಜರಿಕೆಗಳು ನಿಮ್ಮನ್ನು ಕಾಡುತ್ತಿರಬಹುದು. ಮೊದಲು ಎಲ್ಲವನ್ನೂ ನಿಧಾನವಾಗಿ ಪಟ್ಟಿ ಮಾಡಿಕೊಳ್ಳಿ. ನಂತರ ಇಂತಹ ನಂಬಿಕೆಗಳು ನನ್ನಲ್ಲಿ ಹೇಗೆ ಮೂಡಿರಬಹುದು ಎಂದು ಯೋಚಿಸಿ. ನಿಮ್ಮ ಬಾಲ್ಯದ ಸಾಕಷ್ಟು ಅನುಭವಗಳು ನೆನಪಾಗಬಹುದು. ಬಾಲ್ಯದಲ್ಲಿ ಹೀಗೆ ಕೇಳಿದ್ದು ಕುಟುಂಬದವರ ಶಿಕ್ಷಕರ ಸುತ್ತಲಿನವರ ಅಭಿಪ್ರಾಯ ಮಾತ್ರ. ಅದು ನಿಮ್ಮ ಕುರಿತು ನೀವೇ ಹುಡುಕಿಕೊಂಡ ಸತ್ಯವಲ್ಲ ಅಲ್ಲವೇ? ನಿಮ್ಮನ್ನು ನೀವೇ ತಿಳಿದುಕೊಳ್ಳಬೇಕಾದರೆ ಸೂಕ್ತವಾದ ಒಂದು ಕೆಲಸವನ್ನು ಹುಡುಕಿ ಬದಲಾವಣೆಗೆ ನಾಂದಿ ಹಾಡಿ. ಸೋಲುಗಳನ್ನು ಒಪ್ಪಿಕೊಂಡು ಗೆಲುವನ್ನು ಆನಂದಿಸುತ್ತಾ ಮುನ್ನಡೆಯಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು