ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

National Doctors Day| ಕಣ್ಣಿಗಿರಲಿ ಪ್ರೀತಿಯ ಕಾಳಜಿ

ವೈದ್ಯರಿಗೆ ನಮನ
Published 1 ಜುಲೈ 2023, 5:31 IST
Last Updated 1 ಜುಲೈ 2023, 5:31 IST
ಅಕ್ಷರ ಗಾತ್ರ

ದೇಹದಲ್ಲಿ ಅತೀ ಸೂಕ್ಷ್ಮ ಹಾಗೂ ಅಗತ್ಯವಾದ ಅಂಗಗಳಲ್ಲಿ ಕಣ್ಣು ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಆಹಾರ, ಜೀವನಶೈಲಿಯ ಬದಲಾವಣೆಗಳಿಂದ ವಯಸ್ಸಿನ ಅಂತರವಿಲ್ಲದೆ ಕಣ್ಣಿನ ಸಮಸ್ಯೆಗಳು ಸಾಮಾನ್ಯ ಎನ್ನುವಂತಾಗಿದೆ. ಕಾಲಕ್ಕೆ ತಕ್ಕ ಹಾಗೆ ಕಣ್ಣಿನ ಆರೋಗ್ಯವನ್ನು ಯಾವ ರೀತಿ ಕಾಯ್ದುಕೊಳ್ಳಬೇಕು, ಕಣ್ಣಿನ ಸ್ವಾಸ್ಥ್ಯವನ್ನು ಉತ್ತಮವಾಗಿಸಲು ಪಾಲಿಸಬೇಕಾದ ಸಲಹೆಗಳೇನು ಎನ್ನುವ ಬಗ್ಗೆ ನಾರಾಯಣ ನೇತ್ರಾಲಯದ ನೇತ್ರತಜ್ಞ ಡಾ. ನರೇನ್‌ ಶೆಟ್ಟಿ ಒಂದಷ್ಟು ಮಾಹಿತಿ ನೀಡಿದ್ದಾರೆ …

ಆಹಾರ ಕ್ರಮ

ಕಣ್ಣಿನ ಆರೋಗ್ಯಕ್ಕೆ ಬಹುಮುಖ್ಯವಾಗಿ ಬೇಕಾಗಿರುವುದು ಆಹಾರದ ಸಮತೋಲನ. ಕಡಿಮೆ ಕಾರ್ಬೋಹೈಡ್ರೇಡ್‌ ಆಹಾರಗಳ ಸೇವನೆ, ಆರೋಗ್ಯಕರ ಕೊಬ್ಬಿನ ಅಂಶ, ಉತ್ತಮ ಪ್ರಮಾಣ ಪ್ರೋಟೀನ್‌ಯುಕ್ತ ಆಹಾರಗಳು ಅಗತ್ಯ. ಹಾಲು ಮತ್ತು ಹಾಲಿನ ಉತ್ಪನ್ನಗಳು ಕಣ್ಣು ಮಾತ್ರವಲ್ಲದೆ ದೇಹದ ಆರೋಗ್ಯವನ್ನು ಕಾಪಾಡುತ್ತವೆ. ಮಾಂಸಾಹಾರಿ ಗಳಾಗಿದ್ದರೆ ಸಂಸ್ಕರಿತ ಮಾಂಸಾಹಾರವನ್ನು ಸೇವಿಸದಿರುವುದು ಒಳ್ಳೆಯದು.

ಡಾ. ನರೇನ್‌ ಶೆಟ್ಟಿ
ಡಾ. ನರೇನ್‌ ಶೆಟ್ಟಿ

ನಿಯಮಿತ ತಪಾಸಣೆ

ಕಣ್ಣಿನ ಆರೋಗ್ಯ ಉತ್ತಮವಾಗಿರಬೇಕೆಂದರೆ ನಿಯಮಿತ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಅದು ಚಿಕ್ಕಂದಿನಿಂದಲೇ ಆರಂಭವಾದರೆ ಭವಿಷ್ಯದಲ್ಲಾಗುವ ದೃಷ್ಟಿ ದೋಷವನ್ನು ತಡೆಯಬಹುದಾಗಿದೆ. ಅದಕ್ಕಾಗಿ ವರ್ಷಕ್ಕೆ ಒಂದು ಬಾರಿಯಾದರೂ ಪರೀಕ್ಷೆ ಮಾಡಿಸಬೇಕು. ಮಕ್ಕಳ ವಿಚಾರಕ್ಕೆ ಬಂದರೆ, ಮಗು ಅವಧಿ ಪೂರ್ವದಲ್ಲಿ ಜನಿಸಿದ್ದರೆ ಆಗ ಹೆಚ್ಚು ಕಾಳಜಿವಹಿಸುವುದು ಅಗತ್ಯ. ಅಂತಹ ಸಂದರ್ಭದಲ್ಲಿ ‘ಆರ್‌ಒಪಿ ಸ್ಕ್ರೀನಿಂಗ್‌’ ಎನ್ನುವ ಪರೀಕ್ಷೆ ಮಾಡಲಾಗುತ್ತದೆ. ಇದರಿಂದ ಬೆಳವಣಿಗೆಯ ಹಂತದಲ್ಲಾಗುವ ಸಮಸ್ಯೆಯನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಬಹುದು.

ಹೆಚ್ಚು ಹೊತ್ತು ಮೊಬೈಲ್‌, ಕಂಪ್ಯೂಟರ್‌ ನೋಡುವುದರಿಂದ ಕಣ್ಣಿಗೆ ದಣಿವಾಗುತ್ತದೆ. ಹೀಗಾಗಿ 20:20 ನಿಯಮ ಪಾಲಿಸುವುದು ಒಳ್ಳೆಯದು. ಅಂದರೆ ಪ್ರತಿ 20 ನಿಮಿಷಕ್ಕೊಮ್ಮೆ ಕನಿಷ್ಠ 5 ನಿಮಿಷವಾದರೂ ವಿಶ್ರಾಂತಿ ನೀಡಿ. ಆಗಾಗ ಕಣ್ಣು ಮಿಟುಕಿಸುತ್ತಿರಿ. ಇನ್ನು ಬಹಳ ಮುಖ್ಯವಾಗಿ ಕಣ್ಣಿಗೆ ಸಂಬಂಧಿಸಿದ ಸಣ್ಣ ಪುಟ್ಟ ವ್ಯಾಯಾಮಗಳನ್ನು ಮಾಡುತ್ತಿದ್ದರೆ ನರಗಳನ್ನು ಉತ್ತಮವಾಗಿರಿಸಿಕೊಳ್ಳಲು ನೆರವಾಗುತ್ತದೆ. ಇದರಿಂದ ದೃಷ್ಟಿ ಸಮಸ್ಯೆ ಬರದಂತೆ ತಡೆಯಬಹುದಾಗಿದೆ.

ಮಧುಮೇಹಿಗಳ ಕಣ್ಣಿನ ಆರೋಗ್ಯ

ಮಧುಮೇಹಿಗಳಲ್ಲಿ ಕಣ್ಣಿನ ಸಮಸ್ಯೆ ಬಹಳ ಬೇಗನೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಔಷಧ- ಮಾತ್ರೆಗಳ ಜೊತೆಗೆ ನಾವು ಸೇವಿಸುವ ಆಹಾರವೂ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ವೈದ್ಯರ ಸಲಹೆ ಪಡೆದು ಅದಕ್ಕೆ ತಕ್ಕ ಹಾಗೆ ಆಹಾರಶೈಲಿ ರೂಢಿಸಿಕೊಳ್ಳುವುದು ಒಳಿತು. ಅಲ್ಲದೆ ವರ್ಷಕ್ಕೆ ಒಮ್ಮೆಯಾದರೂ ತಪ್ಪದೆ ತಜ್ಞರ ಬಳಿ ಕಣ್ಣಿನ ಪೊರೆ ತಪಾಸಣೆ ಮಾಡಿಸಲೇಬೇಕು.

ಚಾಳೀಸ್‌ ಸಮಸ್ಯೆ

ಸಾಮಾನ್ಯವಾಗಿ ಆರೋಗ್ಯಯುತ ಕಣ್ಣುಗಳಲ್ಲಿ ದೂರದ ವಸ್ತುಗಳು ನೋಡುವಾಗ ಕಣ್ಣಿನ ಸ್ನಾಯುಗಳು ಸಡಿಲಗೊಳ್ಳುತ್ತವೆ, ಹತ್ತಿರದ ವಸ್ತು ನೋಡುವಾಗ ಸಂಕುಚಿತಗೊಳ್ಳುತ್ತದೆ. ಆದರೆ ಚಾಳೀಸ್‌ ಬಂದಾಗ ಕೇಂದ್ರೀಕರಿಸುವ ಶಕ್ತಿಯನ್ನು ಕಣ್ಣಿನ ನರಗಳು ಕಳೆದುಕೊಳ್ಳುತ್ತವೆ. ಹೀಗಾಗಿ ದೃಷ್ಟಿ ಮಂದವಾಗುತ್ತದೆ. ಇತ್ತೀಚಿನ ದಿನಗಳಲ್ಲಿ 40ನೇ ವಯಸ್ಸಿನಲ್ಲಿಯೇ ಚಾಳೀಸ್‌ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೆಲವು ಅಧ್ಯಯನಗಳ ಪ್ರಕಾರ ಕಣ್ಣಿನ ವ್ಯಾಯಾಮಗಳು ಚಾಳೀಸ್ ಸಮಸ್ಯೆಯನ್ನು ಮುಂದೂಡಲು ಸಹಾಯ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT