ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹಾರುತ್ತಿವೆ ಕುಲಾಂತರಿ ಸೊಳ್ಳೆ

ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಪ್ರತಿಷ್ಠಾನದ ನೆರವು
ಅಕ್ಷರ ಗಾತ್ರ

ಮೈಕ್ರೋಸಾಫ್ಟ್‌ ಕಂಪನಿಯ ಬಿಲ್‌ಗೇಟ್ಸ್ ಮತ್ತು ಮಿಲಿಂಡಾ ಗೇಟ್ಸ್‌ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದು ಕಳೆದ ವಾರದ ದೊಡ್ಡ ಸುದ್ದಿ.ಕೋವಿಡ್ ಸೋಂಕಿನ 2ನೇ ಅಲೆಯ ಅಬ್ಬರದ ನಡುವೆಯೂ ಗೇಟ್ಸ್ ದಂಪತಿಯ 27 ವರ್ಷಗಳ ದಾಂಪತ್ಯ ಜೀವನ ಕೊನೆಗೊಂಡ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಗಳಾದವು. ಅಂತರ್ಜಾಲದಲ್ಲಿ ಈ ಇಬ್ಬರು ಪ್ರತ್ಯೇಕಗೊಂಡಿದ್ದಕ್ಕೆ ನೆಟ್ಟಿಗರು ಅವರದ್ದೇ ಆದ ವಿಮರ್ಶೆಗಳನ್ನು ಬರೆದು ಹಾಕಿದರು. ಈ ವಯಸ್ಸಿನಲ್ಲಿ ಇವರೇಕೆ ಪ್ರತ್ಯೇಕಗೊಂಡರು ಎಂದು ಮಸೂರ ಹಿಡಿದು ಒಂದಷ್ಟು ಜನ ನೋಡಿದರು. ಇನ್ನಷ್ಟು ಜನ ಅವರದ್ದೇ ಆದ ದೃಷ್ಟಿಕೋನದಲ್ಲಿ ಮೀಮ್‌ಗಳನ್ನು ಹರಿಯಬಿಟ್ಟರು.

ಆದರೆ ಇದೇ ಅವಧಿಯಲ್ಲಿ ಈ ಪ್ರತ್ಯೇಕಗೊಂಡ ದಂಪತಿಯ ಹೂಡಿಕೆಯ ಕಂಪೆನಿಯೊಂದು ಸಾಂಕ್ರಾಮಿಕ ರೋಗ ತಡೆಗಟ್ಟಲು ಕುಲಾಂತರಿ ಸೊಳ್ಳೆಯೊಂದನ್ನು ಉತ್ಪಾದಿಸಿದ್ದು ಅಷ್ಟು ಸದ್ದು ಮಾಡಲಿಲ್ಲ.

ಐರೋಪ್ಯ ರಾಷ್ಟ್ರ ಮೂಲದ ಜೈವಿಕ ತಂತ್ರಜ್ಞಾನ ಕಂಪೆನಿ ‘ಆಕ್ಸಿಕೆಟ್’ ಹೊಸ ಮಾದರಿಯ ಸೊಳ್ಳೆಯೊಂದನ್ನು ಉತ್ಪಾದಿಸಿರುವುದಾಗಿ ಹೇಳಿಕೊಂಡಿತು. ಕೀಟಾಧಾರಿತ ಕಾಯಿಲೆಗಳಾದ ಡೆಂಗಿ, ಹಳದಿ ಜ್ವರ, ಝೀಕಾ ವೈರಾಣು ಸೋಂಕುಗಳನ್ನು ನಿವಾರಿಸುವ ತಂತ್ರಜ್ಞಾನ ಇದಾಗಿದೆ ಎಂಬುದು ಸೊಳ್ಳೆಯಿಂದ ಬಾಧಿತರಾದವರ ಹುಬ್ಬೇರಿಸಿತು. ಆದರೆ ಈ ಯೋಜನೆಗೆ ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಪ್ರತಿಷ್ಠಾನ ನೆರವು ನೀಡುತ್ತಿರುವ ಸಂಗತಿಯಿಂದಾಗಿ ಯೋಜನೆ ಮತ್ತಷ್ಟು ಗಮನಾರ್ಹ.

ಹಲವು ದಶಕಗಳಿಂದ ವಿವಿಧ ರೀತಿಯ ರೋಗಗಳನ್ನು ಹರಡುವಲ್ಲಿ ಪ್ರಮುಖ ವಾಹಕವಾಗಿರುವ ಸೊಳ್ಳೆಗಳನ್ನು ನಿಯಂತ್ರಿಸುವಲ್ಲಿ ಕುಲಾಂತರಿ ಸೊಳ್ಳೆಯೊಂದರ ಅಬಿವೃದ್ಧಿಯ ವಿಷಯವು ಕೋವಿಡ್ ಸೋಂಕಿನ ಸುನಾಮಿಯನ್ನು ಲಸಿಕೆ ಮೂಲಕ ತಡೆಯೊಡ್ಡುವ ಪ್ರಯತ್ನದಲ್ಲಿ ಸಣ್ಣ ಅಲೆಯಂತಾಗಿದೆ.

ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಸಂಶೋಧನೆ ನಡೆಸುತ್ತಿರುವ ಆಕ್ಸಿಟೆಕ್ ಕಂಪೆನಿಯು ಇಂಥದ್ದೊಂದು ಕುಲಾಂತರಿ ತಳಿ ಸೊಳ್ಳೆಯನ್ನು ಅಭಿವೃದ್ಧಿಪಡಿಸಿ ಅದನ್ನು ಅಮೆರಿಕದ ಕೆಲ ಸ್ಥಳಗಳಲ್ಲಿ ಬಿಡುಗಡೆ ಮಾಡುವ ಮೂಲಕ ಜೈವಿಕ ತಂತ್ರಜ್ಞಾನದ ಹೊಸ ಸಾಧ್ಯತೆಯೆಡೆಗೆ ಹೆಜ್ಜೆ ಇಟ್ಟಿದೆ.

ಇವುಗಳ ಗುರಿ ರೋಗಗಳನ್ನು ಹರಡುವ ‘ಏಡೀಸ್ ಈಜಿಪ್ಟೈ’ ಎಂಬ ತಳಿಯ ಸೊಳ್ಳೆಯ ನಿಯಂತ್ರಣ. ಒಟ್ಟು ಸೊಳ್ಳೆಗಳ ಸಂಖ್ಯೆಯಲ್ಲಿ ಕೇವಲ ಶೇ 4ರಷ್ಟಿರುವ ಏಡೀಸ್ ಈಜಿಪ್ಟೈ ಸೊಳ್ಳೆಗಳು ಅಪಾಯಕಾರಿ ಝೀಕಾ, ಹಳದಿ ಜ್ವರ ಸೇರಿದಂತೆ ಮನುಷ್ಯರಿಗೆ ಬಹಳಷ್ಟು ಕಾಯಿಲೆಗಳನ್ನು ತರಬಲ್ಲವಂತವುಗಳು. ಮನುಷ್ಯರಿಗೇ ಮಾತ್ರವಲ್ಲ, ಪ್ರಾಣಿಗಳಲ್ಲೂ ಹಾರ್ಟ್‌ವರ್ಮ್ ಹಾಗೂ ಇನ್ನಿತರ ಭಯಾನಕ ಕಾಯಿಲೆಗಳಿಗೆ ಈ ಸೊಳ್ಳೆಗಳು ಕಾರಣ ಎಂದು ವರದಿಗಳು ಹೇಳುತ್ತಿವೆ.

ಇಷ್ಟು ಮಾತ್ರವಲ್ಲ, ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯು ಮಲೇರಿಯಾದಂತ ಕಾಯಿಲೆಯನ್ನು ತಂದೊಡ್ಡುವುದು ತಿಳಿದೇ ಇದೆ. ಅದರಲ್ಲೂ ಇದರ ಹಾವಳಿಯಿಂದ ಐದು ವರ್ಷದೊಳಗಿನ ಮಕ್ಕಳ ಪ್ರಾಣಕ್ಕೇ ಕುತ್ತು ಎಂಬುದು ವರದಿಗಳು ಹೇಳುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯು 2012ರಲ್ಲಿ ಪ್ರಕಟಿಸಿದ ಮಾಹಿತಿ ಅನ್ವಯ ಜಗತ್ತಿನಲ್ಲಿ 207 ದಶಲಕ್ಷ ಪ್ರಕರಣಗಳು 5ಲಕ್ಷ ಮಕ್ಕಳು ಸೊಳ್ಳೆಯಿಂದ ಬಂದ ರೋಗಗಳಿಂದ ಮೃತಪಟ್ಟಿದ್ದಾರೆ ಎಂಬುದು ಆತಂಕದ ವಿಷಯ.

ಇನ್ನು ಈ ಏಡೀಸ್ ಈಜಿಪ್ಟೈ ವಿಷಯಕ್ಕೆ ಬಂದರೆ, ಆಕ್ಸಿಟೆಕ್ ಅಭಿವೃದ್ಧಿಪಡಿಸಿರುವ ಈ ಕುಲಾಂತರಿಸೊಳ್ಳೆಗಳು ಮುಂದಿನ 12 ವಾರಗಳಲ್ಲಿ ಸುಮಾರು 12ಸಾವಿರ ಸೊಳ್ಳೆಗಳನ್ನು ಉತ್ಪತ್ತಿ ಮಾಡುವ ನಿರೀಕ್ಷೆ ಇದೆ. ಒಂದೊಮ್ಮೆ ನಿರೀಕ್ಷೆಯಂತೆ ಈ ಯೋಜನೆ ಯಶಸ್ಸು ಕಂಡಿದ್ದೇ ಆದಲ್ಲಿ, 2 ಕೋಟಿ ಕುಲಾಂತರಿ ಸೊಳ್ಳೆಯನ್ನು ಇದೇ ವರ್ಷದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿ ಹೇಳಿದೆ.

ಅಷ್ಟಕ್ಕೂ ಈ ಸೊಳ್ಳೆ ವಾತಾವರಣದಲ್ಲಿ ಮಾಡುವ ಕೆಲಸವೇನು ಎಂಬ ಪ್ರಶ್ನೆ ಮೂಡುವುದು ಸಹಜ. ಹೀಗೆ ಬಿಡುಗಡೆಗೊಂಡ ಕುಲಾಂತರಿ ತಳಿ ಸೊಳ್ಳೆಗಳು ಕೇವಲ ಗಂಡು. ಸಾಮಾನ್ಯವಾಗಿ ಗಂಡು ಸೊಳ್ಳೆಗಳು ಕಚ್ಚುವುದಿಲ್ಲ. ಈ ಕುಲಾಂತರಿ ಗಂಡು ಸೊಳ್ಳೆಗಳು ಸ್ಥಳೀಯ ಹೆಣ್ಣು ಸೊಳ್ಳೆಗಳ ಸಂಗ ಮಾಡುತ್ತವೆ. ಸಂತಾನೋತ್ಪತ್ತಿ ಸಂದರ್ಭದಲ್ಲಿ ಪ್ರಯೋಗಾಲಯದಲ್ಲಿ ನಿರ್ಧಾರಗೊಂಡಂತೆ ಭವಿಷ್ಯದ ಹೆಣ್ಣು ಸೊಳ್ಳೆಗಳನ್ನು ನಿಯಂತ್ರಿಸುವುದೇ ಆಗಿದೆ. ಸೊಳ್ಳೆ ಇಡುವ ಮೊಟ್ಟೆಗಳಲ್ಲಿ ಗಂಡು ಹಾಗೂ ಹೆಣ್ಣು ಸೊಳ್ಳೆಗಳು ಉತ್ಪತ್ತಿ ಆಗುವುದೇನೋ ಸಹಜ. ಆದರೆ ಪ್ರೌಢಾವಸ್ತೆಗೆ ತಲುಪುವ ಹೊತ್ತಿಗೆ ಹೆಣ್ಣು ಸೊಳ್ಳೆಗಳು ಸಾಯುವಂತ ತಂತ್ರವನ್ನು ವಿಜ್ಞಾನಿಗಳು ಈ ಕುಲಾಂತರಿ ತಳಿಯಲ್ಲಿ ಅಳವಡಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಈ ಕುಲಾಂತರಿ ಸೊಳ್ಳೆಯ ಅಭಿವೃದ್ಧಿಯನ್ನು ಆಕ್ಸಿಟೆಕ್ ನಡೆಸಿದೆ.ಅಮೆರಿಕದಲ್ಲಿ ಇಂಥದ್ದೊಂದು ಪ್ರಯೋಗವನ್ನು ನಡೆಸುವ ಮೊದಲು ಆಕ್ಸಿಟೆಕ್ ಕಂಪೆನಿಯು ಮಲೇಷಿಯಾ, ಬ್ರೆಜಿಲ್, ಪನಾಮದ ಕೆಲವು ಭಾಗಗಳಲ್ಲಿ ಈ ಏಡೀಸ್ ಈಜಿಪ್ಟೈ ಕುಲಾಂತರಿ ಸೊಳ್ಳೆಯನ್ನು ಹಾರಿಬಿಟ್ಟಿತ್ತು. ಅಲ್ಲಿ ಶೇ 90ರಷ್ಟು ಇದು ಪರಿಣಾಮಕಾರಿ ಮತ್ತು ನಿಸರ್ಗದ ಇತರ ಜೀವಿಗಳಿಗೆ ತೊಂದರೆ ಅಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಕಂಪೆನಿ ಈಗ ಅಮೆರಿಕದಲ್ಲಿ ಪ್ರಾಯೋಗಿಕ ಪರೀಕ್ಷೆ ಆರಂಭಿಸಿದೆ.

ಫ್ಲೋರಿಡಾದ ಎಫ್‌ಕೆಎಂಸಿಡಿ ಜತೆಗೂಡಿ ಕಂಪೆನಿ ನಡೆಸಿದ ಸಂಶೋಧನೆಯ ಭಾಗವಾಗಿ ಅಭಿವೃದ್ಧಿಗೊಂಡ ಈ ಸೊಳ್ಳೆಯನ್ನು ವಾತಾವರಣಕ್ಕೆ ಬಿಡಲು ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ ಒಪ್ಪಿಗೆ ನೀಡಿದೆ. ಇಷ್ಟು ಮಾತ್ರವಲ್ಲ, ಫ್ಲೋರಿಡಾದ ಕೃಷಿ ಮತ್ತು ಗ್ರಾಹಕ ಸೇವಾ ಇಲಾಖೆಯ ಅನುಮತಿ ಮತ್ತು ಅಮೆರಿಕದ ರೋಗ ನಿಯಂತ್ರಣ ಕೇಂದ್ರದ ಅನುಮತಿಯೂ ಅಗತ್ಯವಿತ್ತು. ಅವುಗಳನ್ನೂ ಪಡೆಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಆದರೆ ಗೇಟ್ಸ್ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಸಂಶೋಧನೆ ಕೈಗೊಂಡಿರುವ ಕಂಪೆನಿಯ ಈ ಪ್ರಯತ್ನಕ್ಕೆ ಫ್ಲೋರಿಡಾದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಪ್ರಯೋಗಕ್ಕೆ ನಾವು ಅನುಮತಿಯನ್ನೇ ನೀಡಿಲ್ಲ. ಹಾಗಿದ್ದರೂ ಕುಲಾಂತರಿ ಸೊಳ್ಳೆಯನ್ನು ತಂದು ಇಲ್ಲಿ ಬಿಟ್ಟಿರುವುದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ. ಫ್ಲೋರಿಡಾ ವಿಜ್ಞಾನಿಗಳ ಪ್ರಯೋಗಾಲಯವಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಜತೆಗೆ ಪರಿಸರಕ್ಕೆ ಮಾರಕವಾಗಬಲ್ಲ ಕುಲಾಂತರಿ ಸೊಳ್ಳೆಯನ್ನು ಕೀಟನಾಶಕ ಸಿಂಪಡಿಸಿ ನಾಶಪಡಿಸುವ ಬೆದರಿಕೆಯೆನ್ನೂ ಹಾಕಿದ್ದಾರೆ.

ಆದರೆ ಇಂಥ ಕುಲಾಂತರಿ ಕೀಟಗಳ ಅಭಿವೃದ್ಧಿ ಆಕ್ಸಿಟೆಕ್ ಕಂಪೆನಿಗೆ ಹೊಸತಲ್ಲ.ಈ ಹಿಂದೆ ಇದೇ ತಂತ್ರಜ್ಞಾನದಲ್ಲಿ ಡೈಮಂಡ್‌ಬ್ಯಾಕ್ ಎಂಬ ಚಿಟ್ಟೆಯನ್ನು ಇದೇ ಆಕ್ಸಿಟೆಕ್ ಕಂಪೆನಿಯು ನ್ಯೂಯಾರ್ಕ್‌ನಲ್ಲಿ ಹಾರಿಬಿಟ್ಟಿತ್ತು. ಅಷ್ಟು ಮಾತ್ರವಲ್ಲ ಗುಲಾಬಿ ಬಾಲ್‌ವರ್ಮ್‌ ಅನ್ನೂ ಅಭಿವೃದ್ಧಿಪಡಿಸಿ ಅರಿಝೋನಾದಲ್ಲಿ ಬಿಡುಗಡೆ ಮಾಡಿತ್ತು.ಇದೀಗ ಈ ಕುಲಾಂತರಿ ಸಂತತಿಗೆ ಏಡೀಸ್ ಈಜಿಪ್ಟೈ ಮತ್ತೊಂದು ಸೇರ್ಪಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT