ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ಹೋಯ್ತು ಸುಸ್ತು ಬಂತು

Last Updated 5 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕಾಯಿಲೆ ಮರೆಯಾದ ಮೇಲೆಯೂ ನಾವು ಚೇತರಿಸಿಕೊಳ್ಳಲು, ಮತ್ತೆ ಸಹಜ ಸ್ಥಿತಿಗೆ ಮರುಳಲು ಒಂದಿಷ್ಟು ಸಮಯ ಬೇಕಾಗುತ್ತದೆ. ಈ ಅವಧಿಯಲ್ಲಿ ಕಾಳಜಿ ವಹಿಸುವುದು ಅತ್ಯಗತ್ಯ.

***

ಕೋವಿಡ್ ಸೋಂಕಿನಿಂದ ಬಳಲಿದ ಅನೇಕರು ಗುಣಮುಖರಾದ ನಂತರ ಸಾಕಷ್ಟು ದಿನಗಳವರೆಗೆ ದಿನನಿತ್ಯದ ಕೆಲಸ ಮಾಡುವಾಗಲೂ ಆಯಾಸ ಎಂದು ದೂರುತ್ತಿದ್ದುದನ್ನು ನಾವು ಗಮನಿಸಿದ್ದೇವೆ. ಅಷ್ಟೇ ಅಲ್ಲ, ರುಚಿ ಮತ್ತು ವಾಸನೆಯನ್ನು ಗ್ರಹಿಸಲು ಕಷ್ಟ ಪಡುತ್ತಿದ್ದುದನ್ನು, ಹಸಿವು ಕಡಿಮೆಯಾಗಿದೆ ಎಂದು ಆಹಾರ ಸೇವನೆಯನ್ನೇ ಮಿತಿಗೊಳಿಸಿದ್ದನ್ನು ಸಹ ನಾವು ಕಂಡಿದ್ದೇವೆ. ಚಿಕುನ್‍ಗುನ್ಯಾ ಕಾಯಿಲೆಯಿಂದ ಗುಣಮುಖರಾದ ಪರಿಚಿತರು ಬಹಳಷ್ಟು ಕಾಲ ನಡೆಯಲು, ಮೆಟ್ಟಿಲುಗಳನ್ನು ಏರಲು ಕಷ್ಟ ಪಟ್ಟಿದ್ದನ್ನು ನಾವು ನೋಡಿದ್ದೇವೆ. ಅಷ್ಟೇ ಏಕೆ, ಸಾಮಾನ್ಯ ನೆಗಡಿಯಾದಾಗಲೂ ಸುಧಾರಿಸಿಕೊಳ್ಳಲು ಕೆಲವರು ಅನೇಕ ದಿನಗಳವರೆಗೆ ಪ್ರಯಾಸ ಪಡುತ್ತಾರೆ. ಹೌದು, ಅನಾರೋಗ್ಯದಿಂದ ಬಳಲುವ ವ್ಯಕ್ತಿಯನ್ನು ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಿಸಿ ಅಥವಾ ಮನೆಯಲ್ಲಿಯೇ ಆರೈಕೆಯನ್ನೇನೋ ಮಾಡುತ್ತೇವೆ. ಆದರೆ, ಚಿಕಿತ್ಸೆಯ ಬಳಿಕ ಅಂದರೆ, ಕಾಯಿಲೆಯ ಮುಖ್ಯ ಲಕ್ಷಣಗಳು ಮರೆಯಾದ ಮೇಲೆಯೂ ಆತ ಚೇತರಿಸಿಕೊಳ್ಳಲು, ಮತ್ತೆ ಮೊದಲಿನ ಸಹಜ ಸ್ಥಿತಿಗೆ ಮರುಳಲು ಒಂದಿಷ್ಟು ಸಮಯ ಬೇಕಾಗುತ್ತದೆ. ಆ ಅವಧಿಯಲ್ಲಿಯೂ ತುಸು ಕಾಳಜಿ ವಹಿಸುವುದು ಅತ್ಯಗತ್ಯ.

ಕಾಯಿಲೆಗಳನ್ನು ಮುಖ್ಯವಾಗಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ಎಂದು ವಿಂಗಡಿಸಬಹುದು. ಸಾಂಕ್ರಾಮಿಕ ಕಾಯಿಲೆಗಳಿಗೆ ಮುಖ್ಯವಾಗಿ ಅಣುಜೀವಿ, ವೈರಾಣು, ಪರಾವಲಂಬಿ ಜೀವಿಗಳು ಮತ್ತು ಶಿಲೀಂಧ್ರಗಳ ಸೋಂಕು ಕಾರಣ. ಅಸಾಂಕ್ರಾಮಿಕ ಕಾಯಿಲೆಗಳಲ್ಲಿ ಮುಖ್ಯವಾಗಿ ಏರುರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಮುಖ್ಯವಾದುವು. ಒಮ್ಮೊಮ್ಮೆ ಎರಡೂ ಬಗೆಯ ಕಾಯಿಲೆಗಳು ಒಟ್ಟೊಟ್ಟಿಗೇ ತೊಂದರೆ ಕೊಡುವುದೂ ಇದೆ. ಇದಷ್ಟೇ ಅಲ್ಲದೆ, ಅಪಘಾತಗಳಿಂದಾಗುವ ಪೆಟ್ಟು, ಮೂಳೆಮುರಿತ, ಶಸ್ತ್ರಚಿಕಿತ್ಸೆಯ ನಂತರವೂ ಪರಿಸ್ಥಿತಿ ಭಿನ್ನವಾಗಿರುವುದಿಲ್ಲ. ಹೀಗೆ ಅನಾರೋಗ್ಯದಿಂದ ಚೇತರಿಕೆಯಾಗುವ ಅವಧಿಯಲ್ಲಿ ಕಾಡುವ ಅತಿಯಾದ ಆಯಾಸ, ನಿಃಶಕ್ತಿ, ಕೆಲಸಗಳಲ್ಲಿ ನಿರಾಸಕ್ತಿ ಮೊದಲಾದುವು ವ್ಯಕ್ತಿಯನ್ನು ಮತ್ತಷ್ಟು ಆತಂಕದತ್ತ ದೂಡುತ್ತವೆ. ನಾನು ಮೊದಲಿನಂತೆ ಆಗುತ್ತೇನೆಯೇ ಎಂಬ ಸಂಶಯ ಆತನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.

ಈ ಅಂಶಗಳನ್ನು ನೆನಪಿಡಿ:ವ್ಯಕ್ತಿಯಲ್ಲಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಆತನ ಶರೀರದಲ್ಲಿ ರೋಗಾಣು ಮತ್ತು ಆತನ ರೋಗನಿರೋಧಕ ವ್ಯವಸ್ಥೆಯ ನಡುವೆ ಹೋರಾಟ ನಡೆದಿರುತ್ತದೆ. ಹಲವು ಜೀವಕೋಶಗಳು ಮರಣ ಹೊಂದಿರುತ್ತವೆ. ರೋಗಾಣುವಿನ ವಿರುದ್ಧ ಪ್ರತಿಕಾಯಗಳು ತಯಾರಾಗಿ ಕಾರ್ಯಪ್ರವೃತ್ತರಾಗಿರುತ್ತವೆ. ವ್ಯಕ್ತಿಯ ಕೆಲವು ಅಂಗಾಂಶಗಳಿಗೂ ಹಾನಿಯಾಗಿರುತ್ತದೆ. ಆದ್ದರಿಂದಲೇ ಆ ವೇಳೆಯಲ್ಲಿ ಆತನಿಗೆ ಮೊದಲಿನ ಕ್ಷಮತೆ ಇರುವುದಿಲ್ಲ. ಇವೆಲ್ಲವೂ ಸಹಜ ಸ್ಥಿತಿಗೆ ಬರಲು ಕೊಂಚ ಸಮಯ ಬೇಕು. ಆಗಿನ ಆತನ ಆಹಾರಕ್ರಮ ಮತ್ತು ಜೀವನಶೈಲಿಯೂ ಅದಕ್ಕೆ ಪೂರಕವಾಗಿರಬೇಕು.

ಉತ್ತಮ ಆಹಾರ: ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗುವಾಗ ಪೌಷ್ಟಿಕ ಆಹಾರಸೇವನೆ ಅತ್ಯಗತ್ಯ. ನಮ್ಮ ರೋಗನಿರೋಧಕ ವ್ಯವಸ್ಥೆಯ ಕಾರ್ಯಕ್ಷಮತೆಗೆ ಹಾಗೂ ಪ್ರತಿಕಾಯಗಳ ಉತ್ಪಾದನೆಗೆ ಪ್ರೋಟಿನ್ ಬಹಳವೇ ಮುಖ್ಯ. ಕಾಯಿಲೆಯ ಪ್ರಕ್ರಿಯೆಯಲ್ಲಿ ನಶಿಸಿಹೋದ ಜೀವಕೋಶಗಳ ಮರುತಯಾರಿಗೆ, ಹಾನಿಗೊಂಡ ಅಂಗಾಂಶಗಳ ದುರಸ್ತಿಗೆ ಪ್ರೋಟಿನ್ ಮತ್ತು ಸಿ ಜೀವಸತ್ವ ಸಹ ಅತ್ಯಗತ್ಯ. ಆದ್ದರಿಂದಲೇ ಪೌಷ್ಟಿಕಾಂಶಗಳು ಯಥೇಚ್ಛವಾಗಿರುವ ಮೊಳಕೆ ಬರಿಸಿದ ಕಾಳುಗಳು, ಸೊಪ್ಪು, ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆಗೆ ಮಹತ್ವ ಕೊಡಬೇಕು. ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ, ಮಾಂಸಾಹಾರವೂ ಪ್ರೋಟಿನ್‌ನ ಆಗರ. ಅವುಗಳ ಸೇವನೆಯೂ ಈ ಸಮಯದಲ್ಲಿ ಒಳ್ಳೆಯದೇ. ಆದರೆ ಅತಿಯಾದ ಮಸಾಲೆ, ಜಿಡ್ಡು ಪದಾರ್ಥಗಳಿಂದ ಕೆಲಕಾಲ ದೂರವಿರುವುದು ಸೂಕ್ತ.

ಹೆಚ್ಚು ದ್ರವಾಂಶದ ಆಹಾರ: ಶರೀರವು ನಿತ್ರಾಣಗೊಳ್ಳಲು ನಿರ್ಜಲೀಕರಣವೂ ಕಾರಣ. ಈ ಹಂತದಲ್ಲಿ ಶರೀರದ ದ್ರವಾಂಶವನ್ನು ಕಾಪಿಟ್ಟುಕೊಳ್ಳುವುದು ಅತ್ಯಗತ್ಯ. ಆದ್ದರಿಂದ ದಿನವೂ ಕನಿಷ್ಠ ಮೂರು ಲೀಟರ್ ನೀರು ಕುಡಿಯಿರಿ. ಜೊತೆಯಲ್ಲಿ ನಿಂಬೆ ಹಣ್ಣಿನ ಪಾನಕ ಮತ್ತು ಇತರ ಹಣ್ಣು-ತರಕಾರಿಗಳ ರಸವೂ ಸಹಕಾರಿ.

ತಾಜಾ ಆಹಾರ: ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ತಾಜಾ ಆಹಾರವನ್ನು ಸೇವಿಸಿ. ಫ್ರಿಜ್‍ನಲ್ಲಿರಿಸಿದ ಅತಿ ತಣ್ಣನೆಯ ಪದಾರ್ಥಗಳ ಸೇವನೆ ಬೇಡ. ಆಹಾರವನ್ನು ಬಿಸಿ ಅಥವಾ ಬೆಚ್ಚಗಿರುವಾಗಲೇ ಸೇವಿಸುವುದು ಉತ್ತಮ. ಜಂಕ್ ಮತ್ತು ಸಂಸ್ಕರಿಸಿದ ಆಹಾರ ಬೇಡವೇ ಬೇಡ.

ವ್ಯಾಯಾಮ: ದೇಹವನ್ನು ದಂಡಿಸುವ, ಅತಿಯಾಗಿ ಬೆವರಿಳಿಸುವ ವ್ಯಾಯಾಮ, ದೂರದ ನಡಿಗೆ ಈ ವೇಳೆಯಲ್ಲಿ ಸೂಕ್ತವಲ್ಲ. ಮನೆಯಲ್ಲಿಯೇ ಹತ್ತರಿಂದ ಹದಿನೈದು ನಿಮಿಷಗಳ ನಿಧಾನ ನಡಿಗೆ ಅಥವಾ ಸರಳ, ಕನಿಷ್ಠ ವ್ಯಾಯಾಮವನ್ನಷ್ಟೇ ಮಾಡಿ. ಪ್ರಾಣಾಯಾಮದ ರೂಢಿಯಿದ್ದರೆ ಮಾಡಿ.

ಮಾನಸಿಕ ಸಿದ್ಧತೆ: ಬಹಳಷ್ಟು ಜನ ಕಾಯಿಲೆಗಳಿಂದ ಬಳಲಿದಾಗ ಸೋತು ಸುಣ್ಣವಾಗಿ ಬಿಡುತ್ತಾರೆ. ಮಾನಸಿಕವಾಗಿ ಕುಗ್ಗಿ ‘ತಮಗೇ ಏಕೆ ಕಾಯಿಲೆ ಬಂತು, ತಾವು ಮೊದಲಿನಂತಾಗುವುದು ಸಾಧ್ಯವೇ’ ಎಂದು ಚಿಂತಿತರಾಗುತ್ತಾರೆ. ಈ ರೀತಿಯ ನಕಾರಾತ್ಮಕ ಆಲೋಚನೆಗಳು ಕಾಯಿಲೆಯಿಂದ ಗುಣಮುಖಗೊಳ್ಳುವ ಪ್ರಕ್ರಿಯೆಯನ್ನು ಕುಂಠಿತಗೊಳ್ಳಿಸುತ್ತದೆ. ಆದಷ್ಟು ಬೇಗ ಸಹಜ ಸ್ಥಿತಿಗೆ ಹಿಂದಿರುಗುವೆ ಎಂಬ ಇಚ್ಛಾಶಕ್ತಿ ಬಹಳ ಮುಖ್ಯ.

ವಿಶ್ರಾಂತಿ: ಕಾಯಿಲೆಯಿಂದ ಗುಣಮುಖರಾಗುವಾಗ ವಿಶ್ರಾಂತಿ ಮುಖ್ಯ. ತಕ್ಷಣವೇ ದೈಹಿಕ ಶ್ರಮ ಬೇಡುವ ಕೆಲಸಗಳಿಗೆ ಕೈ ಹಾಕದಿರಿ. ಪ್ರಯಾಣ, ಓಡಾಟ, ಹೆಚ್ಚು ಹೊತ್ತು ಕುಳಿತು, ಗಮನ ವಹಿಸಿ ಮಾಡಬೇಕಾದ ಕೆಲಸಗಳನ್ನೂ ದೂರವಿಡಿ. ಹವಾನಿಯಂತ್ರಿತ ವಾತಾವರಣ ಮತ್ತು ತಂಪಾದ ಹವೆಯಿರುವ ಸ್ಥಳಗಳಲ್ಲಿ ಸಂಚರಿಸದಿರಿ. ಟಿ. ವಿ., ಮೊಬೈಲ್ ಬಳಕೆಯೂ ಮಿತಿಯಲ್ಲಿರಲಿ. ಎಂಟರಿಂದ ಹತ್ತು ತಾಸುಗಳ ಕಾಲ ನಿದ್ದೆ ಮಾಡಿ.

ಒತ್ತಡ ಬೇಡ: ಆ ಸಮಯದಲ್ಲಿ ಮಾನಸಿಕವಾಗಿ ನಿಮ್ಮನ್ನು ಒತ್ತಡಕ್ಕೆ ಗುರಿಪಡಿಸುವ ಆಲೋಚನೆಗಳಿಂದ ದೂರವಿರಿ. ಮನಸ್ಸನ್ನು ಹಗುರಗೊಳಿಸುವ, ಮುದ ನೀಡುವ ಲಘು, ಹಾಸ್ಯಬರಹಗಳನ್ನು ಓದಿ. ಇದು ನಿಮ್ಮ ಮನಸ್ಸನ್ನು ಆಹ್ಲಾದಗೊಳಿಸುತ್ತದೆ.

ಶಸ್ತ್ರಚಿಕಿತ್ಸೆಯ ಬಳಿಕ: ಶಸ್ತ್ರಚಿಕಿತ್ಸೆ ಯಾವುದು ಎನ್ನುವುದರ ಆಧಾರದ ಮೇಲೆ ವೈದ್ಯರು ಕೆಲವು ಸೂಚನೆಗಳನ್ನು ಕೊಟ್ಟಿರುತ್ತಾರೆ. ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಉದಾಹರಣೆಗೆ ಹೊಟ್ಟೆಯ ಭಾಗದಲ್ಲಾಗಿದ್ದರೆ ತೂಕ ಎತ್ತದಂತೆ, ಬಗ್ಗಿ ಏಳದಂತೆ ತಿಳಿಸಿರುತ್ತಾರೆ. ಆ ಬಗ್ಗೆ ಎಚ್ಚರವಹಿಸಿ. ಕೆಲವು ಮೂಳೆ ಮುರಿತದ ಶಸ್ತ್ರಚಿಕಿತ್ಸೆಗಳಾದಾಗ ಮನೆಯಲ್ಲಿಯೇ ಸರಳ ವ್ಯಾಯಾಮಗಳನ್ನು ಮಾಡುವಂತೆ ಸೂಚಿಸಿರುತ್ತಾರೆ. ಉದಾಹರಣೆಗೆ, ಕೈ ಅಥವಾ ಕಾಲುಗಳ ಬೆರಳುಗಳನ್ನು ಅಲುಗಾಡಿಸುವುದು, ಮೊದಲಾದುವು. ಅವುಗಳನ್ನು ಮರೆಯದೆ ಮಾಡಿ. ಇನ್ನು ಕೆಲವು ಸಂದರ್ಭಗಳಲ್ಲಿ ಕಡ್ಡಾಯವಾಗಿ ಹಾಸಿಗೆಯಿಂದ ಎದ್ದು ನಡೆದಾಡುವಂತೆ ತಿಳಿಸಿರುತ್ತಾರೆ. ಆಗಲೂ ತಪ್ಪದೇ ಮನೆಯವರ ಸಹಾಯ ಪಡೆದು ನಡೆದಾಡಬೇಕು. ಇದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಆಗಬಹುದಾದ ಸಂಭವನೀಯ ಅಪಾಯಗಳನ್ನು ತಡೆಯಲು ನೆರವಾಗುತ್ತದೆ. ಯಾವುದೇ ಅಸಾಮಾನ್ಯ ಗುಣಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯರಿಗೆ ಕರೆ ಮಾಡಿ. ಅವಶ್ಯವಿದ್ದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ. ಮರುಭೇಟಿಗೆ ಸೂಚಿಸಿದ ದಿನದಂದು ತಪ್ಪದೇ ಸಮಾಲೋಚನೆಗೆ ತೆರಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT