ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ನಿದ್ರೆಯಲ್ಲಿದೆ ಆರೋಗ್ಯದ ಗುಟ್ಟು

Last Updated 20 ಫೆಬ್ರವರಿ 2023, 19:30 IST
ಅಕ್ಷರ ಗಾತ್ರ

‘ನಿದ್ರಿಸುವಾಗ ಕಾಣುವುದು ಕನಸಲ್ಲ; ಸಾಧನೆಯ ಬೆಂಬತ್ತುವಂತೆ ಮಾಡಿ ನಿದ್ರಿಸಲು ಬಿಡದಿರುವುದು ನಿಜವಾದ ಕನಸು’ – ಎನ್ನುವ ಸ್ಫೂರ್ತಿದಾಯಕ ಮಾತುಗಳನ್ನು ಕೇಳಿರುತ್ತೇವೆ. ಈ ಮಾತುಗಳ ಹಿಂದಿನ ಭಾವಾರ್ಥದ ಬದಲಿಗೆ ಪದಶಃ ಅರ್ಥದಲ್ಲಿ ಗ್ರಹಿಸಿ ಸತತವಾಗಿ ನಿದ್ರೆಗೆಡುವುದರಿಂದ ಸಾಧನೆಗಿಂತಲೂ ಅನಾರೋಗ್ಯವಾಗುವುದು ಹೆಚ್ಚು ಖಚಿತ.

ನಮ್ಮ ದೇಹಕ್ಕೆ ಪ್ರತಿದಿನ ಸುಮಾರು ಏಳರಿಂದ ಎಂಟು ಗಂಟೆಗಳ ನಿದ್ರೆಯ ಅಗತ್ಯವಿದೆ. ಹೀಗಾಗಿ ನಮ್ಮ ಜೀವನದ ಬೇರೆ ಯಾವುದೇ ಪ್ರಕ್ರಿಯೆಗಿಂತಲೂ ಅಧಿಕ ಕಾಲವನ್ನು ನಾವು ನಿದ್ರೆಯಲ್ಲಿ ಕಳೆಯುತ್ತೇವೆ. ನಿದ್ರೆ ಕಡಿಮೆಯಾದಾಗ ಇಡೀ ದಿನ ಕಿರಿಕಿರಿಯ ಮನಃಸ್ಥಿತಿ ಇರುತ್ತದೆ. ನಾವು ಎಷ್ಟು ಸುಖವಾಗಿ ನಿದ್ರಿಸುತ್ತೇವೆ ಎಂಬುದರ ಮೇಲೆ ದೇಹದ ಮತ್ತು ಮನಸ್ಸಿನ ಆರೋಗ್ಯ ನಿರ್ಧಾರವಾಗುತ್ತದೆ.

ಆಳವಾದ ನಿದ್ರೆ ಮತ್ತು ಕನಸುಗಳ ನಿದ್ರೆ ಎಂದು ವಿಜ್ಞಾನಿಗಳು ನಿದ್ರೆಯ ಅವಧಿಯನ್ನು ವಿಭಾಗಿಸುತ್ತಾರೆ. ಇದರ ಹೆಚ್ಚಿನ ಭಾಗ ಆಳವಾದ ನಿದ್ರೆಯದ್ದು. ಈ ವೇಳೆಯಲ್ಲಿ ದೇಹದ ಸ್ನಾಯುಗಳು ಸಡಿಲವಾಗುತ್ತವೆ; ಉಸಿರಾಟ ಆಳವಾಗಿ, ನಿಧಾನವಾಗಿ ಆಗುತ್ತದೆ; ದಿನವಿಡೀ ಕ್ರಿಯಾಶೀಲವಾಗಿದ್ದು ದಣಿದಿರುವ ದೇಹ ಮತ್ತು ಮೆದುಳಿಗೆ ಆಳನಿದ್ರೆಯ ವೇಳೆ ಮರುಚೈತನ್ಯ ದೊರೆಯುತ್ತದೆ. ಇದಕ್ಕಿಂತ ಭಿನ್ನವಾದದ್ದು ಕನಸುಗಳ ನಿದ್ರೆ. ಈ ವೇಳೆಯಲ್ಲಿ ಮೆದುಳಿನ ಚಟುವಟಿಕೆ ಹೆಚ್ಚುತ್ತದೆ; ಸ್ನಾಯುಗಳು ನಿಶ್ಚೇಷ್ಟವಾಗುತ್ತವೆ; ಉಸಿರಾಟ ಮತ್ತು ಎದೆಬಡಿತದಲ್ಲಿ ಏರುಪೇರಾಗುತ್ತದೆ.

ಒಂದು ರಾತ್ರಿಯಲ್ಲಿ ಆಳನಿದ್ರೆ ಮತ್ತು ಕನಸುಗಳ ನಿದ್ರೆಗಳ ನಾಲ್ಕೈದು ಆವರ್ತನಗಳು ಜರುಗುತ್ತವೆ. ಹಲವಾರು ಮಾಹಿತಿಗಳನ್ನು ಸಂಸ್ಕರಿಸುವಾಗ ಉಳಿದುಹೋದ ಅನೇಕಾನೇಕ ಸಂಗತಿಗಳು ಮೆದುಳಿನ ಕೋಶಗಳಲ್ಲಿ ‘ಜೇಡರಬಲೆ’ಗಳನ್ನು ನಿರ್ಮಿಸಿರುತ್ತವೆ. ಇದನ್ನು ಮೆದುಳು ಚೊಕ್ಕ ಮಾಡಲು ನಿದ್ರೆಯ ಅವಧಿ ಬಳಕೆಯಾಗುತ್ತದೆ. ಹೀಗೆ ಅನಗತ್ಯ ವಿಷಯಗಳು ತೊಡೆದುಹೋದರೆ, ನಿರ್ಧಾರಗಳನು ಕೈಗೊಳ್ಳುವ ಮೆದುಳಿನ ಸಾಮರ್ಥ್ಯ ವೃದ್ಧಿಸುತ್ತದೆ. ನಮ್ಮನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ಒಂದು ಒಳ್ಳೆಯ ನಿದ್ರೆಯ ನಂತರ ಅಕಸ್ಮಾತ್ತಾಗಿ ಉತ್ತರ ದೊರೆಯುವುದರ ಚಮತ್ಕಾರದ ಹಿನ್ನೆಲೆ ಇದೇ. ಒಂದು ವೇಳೆ ಯಾವುದೇ ಕಾರಣಕ್ಕೆ ನಿದ್ರೆಯ ಪ್ರಮಾಣ ಕಡಿಮೆಯಾದರೆ ಅನಗತ್ಯ ಮಾಹಿತಿಯನ್ನು ತೊಡೆದುಹಾಕಲು ಮೆದುಳಿಗೆ ಸಮಯ ಸಿಗುವುದಿಲ್ಲ; ಅದರ ಚೇತರಿಕೆ ಪೂರ್ಣವಾಗುವುದಿಲ್ಲ. ಇದರಿಂದ ಮೆದುಳಿನ ಕಾರ್ಯಕ್ಷಮತೆ ಕುಂಠಿತವಾಗುತ್ತದೆ; ನೆನಪಿನಲ್ಲಿ ಇಟ್ಟಿರುವ ಮಾಹಿತಿ ಬೇಕಾದ ಸಮಯಕ್ಕೆ ಹೊರಬರುವುದಿಲ್ಲ. ಪರಿಸ್ಥಿತಿ ಮಹಾಭಾರತದ ಕರ್ಣನ ಕಥೆಯಾಗುತ್ತದೆ. ಈ ಕಾರಣಕ್ಕೇ ಪರೀಕ್ಷೆಯಂತಹ ಮುಖ್ಯವಾದ ಕೆಲಸಗಳ ಹಿಂದಿನ ರಾತ್ರಿ ನಿದ್ರೆಗೆಡೆವುದು ಸರಿಯಲ್ಲ.

ಹಲವಾರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳ ಕಾರಣದಿಂದ ನಿದ್ರೆಯ ವ್ಯವಸ್ಥೆಯಲ್ಲಿ ಏರಿಳಿತವಾಗಬಹುದು. ಶ್ವಾಸದ ಸಮಸ್ಯೆಗಳು ಇರುವವರು ಅಂಗಾತ ಮಲಗಿದಾಗ ಉಸಿರಾಟದ ಮೇಲಿನ ಒತ್ತಡ ಹೆಚ್ಚುತ್ತದೆ. ದೀರ್ಘಕಾಲಿಕ ರಾತ್ರಿಪಾಳಿಯ ಕೆಲಸ ಇರುವವರ ನಿದ್ರೆಯ ಆವರ್ತನಚಕ್ರ ವಿಲೋಮವಾಗುತ್ತದೆ. ರಾತ್ರಿಯಿಡೀ ಮೋಜು ಮಾಡಿ, ಹಗಲಿನಲ್ಲಿ ಕೆಲವು ಗಂಟೆಗಳ ಕಾಲ ಮಾತ್ರ ಮಲಗುವ ‘ಪಾರ್ಟಿ-ಪ್ರಾಣಿಗಳು’ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಯಾವುದೋ ಕೆಲಸ ಇಲ್ಲವೇ ಹವ್ಯಾಸಕ್ಕೆ ಸಿಲುಕಿ, ನಿದ್ರೆಯ ಸಮಯವನ್ನು ಕಡಿಮೆ ಮಾಡಿಕೊಳ್ಳುವುದು ನಿದ್ರಾಹೀನತೆಗೆ ಸಮಾನವಾದದ್ದು. ಇಂತಹ ಬಾಹ್ಯಕಾರಣಗಳ ಹೊರತಾಗಿಯೂ ನಿದ್ರಾಹೀನತೆಯಿಂದ ಬಳಲುವವರು, ಎಷ್ಟೋ ಪ್ರಯತ್ನ ಮಾಡಿದರೂ ನಿದ್ರೆ ಬಾರದವರು ಇದ್ದಾರೆ. ನಿದ್ರಾಹೀನತೆಗೆ ಔಷಧಗಳನ್ನು ಬಳಸುವ ಬದಲಿಗೆ ಇಂತಹವರು ತಮ್ಮ ಜೀವನಶೈಲಿಯಲ್ಲಿ, ಆಹಾರವಿಧಾನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ಒಂದು ನಿಶ್ಚಿತ ಸಮಯಕ್ಕೆ ಮಲಗುವ ಮತ್ತು ಏಳುವ ಪದ್ಧತಿ ಒಳಿತು. ಈ ಪದ್ದತಿಯನ್ನು ಯಾವ ಕಾರಣಕ್ಕೂ ಬದಲಾಯಿಸದಂತೆ ಕಟ್ಟುನಿಟ್ಟಾಗಿ ಪಾಲಿಸಬೇಕು. ವಾರಾಂತ್ಯಕ್ಕಾಗಲೀ, ‘ಚೀಟ್-ಡೆ’ ಎನ್ನುವ ನೆಪಗಳಿಗಾಗಲೀ ಮಲಗೇಳುವ ಸಮಯಗಳನ್ನು ಮಾರ್ಪಾಡು ಮಾಡಬಾರದು. ಅಧಿಕ ಬೆಳಕಿನಲ್ಲಿ ಕಾಲ ಕಳೆಯುವುದು ನಿದ್ರೆಯ ಶತ್ರು. ಹೀಗಾಗಿ, ಮಲಗುವ ಸಮಯಕ್ಕೆ ಒಂದು ತಾಸು ಮುನ್ನವೇ ಬೆಳಕಿನ ಪ್ರಮಾಣವನ್ನು ತಗ್ಗಿಸಿ, ಮಂದ ಬೆಳಕಿಗೆ ದೃಷ್ಟಿಯನ್ನು ಹೊಂದಿಸಿಕೊಳ್ಳಬೇಕು. ಮಲಗುವ ಸಮಯಕ್ಕೆ ಮೊದಲು ದೂರದರ್ಶನ, ಕಂಪ್ಯೂಟರ್, ಮೊಬೈಲ್ ಪರದೆಗಳಂತಹ ಬೆಳಕನ್ನು ಸೂಸುವ ಆಕರಗಳಿಂದ ದೂರವಿರಬೇಕು. ಇದರ ಬದಲಿಗೆ ನಿದ್ರೆಯ ವೇಳೆಗೆ ಮುನ್ನ ಮನಸ್ಸಿಗೆ ಆಪ್ತವಾದ ಪುಸ್ತಕವನ್ನು ಓದುವುದು ಒಳಿತು. ನಿದ್ರೆಯ ಸಮಯದಲ್ಲಿ ಸಾಮಾನ್ಯ ಆಹಾರಸೇವನೆ ಸೂಕ್ತ. ರಾತ್ರಿಯ ವೇಳೆ ಭೂರಿಭೋಜನ, ಮದ್ಯಪಾನ, ಧೂಮಪಾನ, ಕಾಫಿ-ಟೀಗಳನ್ನು ದೂರವಿರಬೇಕು. ಪ್ರತಿದಿನವೂ ಶರೀರಕ್ಕೆ ಸಹ್ಯವಾಗುವಷ್ಟು ವ್ಯಾಯಾಮ, ವೇಗದ ನಡಿಗೆ, ತೋಟದ ಕೆಲಸದಂತಹ ಚಟುವಟಿಕೆಗಳಿಗೆ ಸಮಯವನ್ನು ಹೊಂದಿಸಿಕೊಳ್ಳಬೇಕು. ನಿದ್ರೆಯ ಕೋಣೆ ತಂಪಾಗಿ, ಸಾಧ್ಯವಾದಷ್ಟೂ ನಿಶ್ಶಬ್ದವಾಗಿ, ಮಂದಬೆಳಕಿನಿಂದಿರುವುದು ಅಗತ್ಯ. ಈ ರೀತಿಯ ಪ್ರಯತ್ನಗಳು ಫಲಕಾರಿಯಾಗದಿದ್ದರೆ ನಿದ್ರೆಗೆ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಿ, ಧ್ಯಾನ ಮಾಡುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ. ಹಗಲುವೇಳೆಯಲ್ಲಿ ಮಲಗುವ ಅಭ್ಯಾಸ ಕೂಡ ರಾತ್ರಿ ನಿದ್ರೆ ಬಾರದಿರುವುದಕ್ಕೆ ಪ್ರಮುಖ ಕಾರಣ. ನಿದ್ರಾಹೀನತೆಯಿಂದ ಬಳಲುವವರು ಹಗಲಿನ ವೇಳೆ ಸಾಧ್ಯವಾದಷ್ಟೂ ಯಾವುದಾದರೂ ಒಂದು ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆಗ ರಾತ್ರಿಯ ವೇಳೆ ನಿದ್ರೆ ಹತ್ತುವ ಸಾಧ್ಯತೆಗಳು ಹೆಚ್ಚುತ್ತವೆ.

ನಿದ್ರಾಹೀನತೆಯ ಚಿಕಿತ್ಸೆಯ ಭಾಗವಾಗಿ ಜೀವನಶೈಲಿಯ ಬದಲಾವಣೆಗಳನ್ನು ವಿಜ್ಞಾನಿಗಳು ಕ್ಲುಪ್ತವಾಗಿ ಹೀಗೆ ಹೇಳುತ್ತಾರೆ: ‘ನಿಮ್ಮ ಹಗಲನ್ನು ಮತ್ತಷ್ಟು ಬೆಳಗಾಗಿಸಿ; ನಿಮ್ಮ ರಾತ್ರಿಯನ್ನು ಇನ್ನಷ್ಟು ಕತ್ತಲಾಗಿಸಿ; ಸೂರ್ಯರಶ್ಮಿಗೆ ಮೈ ಒಡ್ಡುವಂತೆ ನಿಮ್ಮ ಕೆಲಸಕ್ಕೆ ನಡೆದೋ ಅಥವಾ ಬೈಸಿಕಲ್ ಸವಾರಿ ಮಾಡುತ್ತಲೋ ಹೋಗಿ; ಸಂಜೆ ಆಗುತ್ತಿದ್ದಂತೆ ನಿಮ್ಮ ಎಲೆಕ್ಟ್ರಾನಿಕ್ ಸಲಕರಣೆಗಳ ಬೆಳಕನ್ನು ಮಂದವಾಗಿಸಿ’.

ಸಾವಿರಾರು ವರ್ಷಗಳಿಂದ ನಮ್ಮ ಅನೂಚಾನ ಸಂಸ್ಕೃತಿ ಇದನ್ನು ಮತ್ತಷ್ಟು ಸಾಂದ್ರವಾಗಿ ‘ಬ್ರಾಹ್ಮಿ ಮುಹೂರ್ತಕ್ಕೆ ಎದ್ದು, ಪೂರ್ವದಲ್ಲಿ ಮೇಲೇಳುತ್ತಿರುವ ಸೂರ್ಯನಿಗೆ ನಮನ ಸಲ್ಲಿಸಿ, ದಿನವಿಡೀ ನಿಷ್ಠೆಯಿಂದ ಕೆಲಸ ಮಾಡಿ, ಸಂಜೆಯ ನಂತರ ಮಲಗಿ ಸಾಕಷ್ಟು ಕಾಲ ನಿದ್ರಿಸಿರಿ’ ಎಂದು ಹೇಳಿದೆ.

ಒಳಿತು ಕಾಲಾಂತರದಲ್ಲಿ ಬದಲಾಗುವುದಿಲ್ಲ – ಎನ್ನುವುದಕ್ಕೆ ನಿದ್ರಾಹೀನತೆಯ ಚಿಕಿತ್ಸೆಯಲ್ಲಿ ಜೀವನಶೈಲಿಯ ಪದ್ದತಿಗಳು ಸಾಕ್ಷಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT