ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಸ್ಮಾರ, ಬೇಡ ತಾತ್ಸಾರ

ಡಾ. ಮುರಲೀ ಮೋಹನ್ ಚೂಂತಾರು
Published : 19 ಫೆಬ್ರುವರಿ 2024, 23:32 IST
Last Updated : 19 ಫೆಬ್ರುವರಿ 2024, 23:32 IST
ಫಾಲೋ ಮಾಡಿ
Comments

ಅಪಸ್ಮಾರ ಎಂದರೆ ಪದೇ ಪದೇ ಮೆದುಳಿನ ನರಕೋಶಗಳು ಅತ್ಯಧಿಕ ಪ್ರಮಾಣದಲ್ಲಿ ಹೊರಹಾಕುವ ವಿದ್ಯುತ್ ಪ್ರಚೋದನೆಯ ಫಲವಾಗಿ ಮಿದುಳಿನ ಕಾರ್ಯದಲ್ಲಿ ಉಂಟಾಗುವ ತಾತ್ಕಲಿಕ ನಿಲುಗಡೆ ಅಥವಾ ವ್ಯತ್ಯಯದ ಪರಿಣಾಮವಾಗಿ ಆ ವ್ಯಕ್ತಿ ಅನುಭವಿಸುವ ಸೆಳತ ಮತ್ತು ಸೆಳೆವು. ಇದನ್ನೇ ಮೂರ್ಛೆರೋಗ, ಪಿಟ್ಸ್, ಅಪಸ್ಮಾರ, ಮಲರೋಗ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ‘ಎಪಿಲೆಪ್ಸಿ’ ಎಂದು ಕರೆಯುತ್ತಾರೆ; ಆಡುಭಾಷೆಯಲ್ಲಿ ‘ಪಿಟ್ಸ್’ ಎನ್ನುತ್ತಾರೆ. 

ನಮ್ಮ ಮಿದುಳು ಒಂದು ಸಂಕೀರ್ಣವಾದ ನರಮಂಡಲ. ಅದರಲ್ಲಿ ನರಕೋಶಗಳ ಮಧ್ಯೆ ವಿದ್ಯುತ್ ಪ್ರಸರಣ ನಿಯಮಿತವಾಗಿ ನಡೆಯುತ್ತಿರುತ್ತದೆ. ವಿದ್ಯುತ್ ಆವೇಗಗಳ ಹರಡುವಿಕೆ ಅತಿ ಚಿಕ್ಕ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಆದರೆ ದೊಡ್ಡ ಸೆಳವು ಬಂದಾಗ ನರಕೋಶಗಳ ದೊಡ್ಡ ಗುಂಪು ಪದೇ ಪದೇ ಸೆಳತಕೊಳ್ಳಗಾಗಿ ಅವೇಶಗೊಂಡು, ಚುರುಕುಗೊಂಡು ತುಂಬಾ ವ್ಯಾಪಕ ಪ್ರಮಾಣದಲ್ಲಿ ವಿದ್ಯುತ್ ಚೇತನವನ್ನು ಹೊರಹಾಕುತ್ತದೆ. ಅದನ್ನು ತಡೆಯುವ ಶಕ್ತಿ ನರಕೋಶಗಳ ಮಧ್ಯೆ ಕುಗ್ಗಿಹೋಗಿರುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಸೆಳವಿನ ಕಾರ್ಯವ್ಯಾಪ್ತಿಗೊಂದು ಮಿತಿಯಿರುತ್ತದೆ. ಅಪಸ್ಮಾರ ರೋಗಿಗಳಲ್ಲಿ ಈ ಮಿತಿ ತುಂಬ ತಳಹಂತದಲ್ಲಿದ್ದು, ಅವರು ಬೇರೆ ಬೇರೆ ಕಾರಣದಿಂದಾಗಿ ದೊರೆಯುವ ಅನೇಕ ಬಗೆಯ ಪ್ರಚೋದನೆಗಳಿಗೆ ಸೆಳವನ್ನು ತೋರ್ಪಡಿಸುತ್ತಾರೆ. ಅಸಹಜವಾಗಿರುವ ಅವರ ನರಮಂಡಲದ ನರಕೋಶಗಳು, ಬಹಳ ಬೇಗನೆ ಪ್ರಚೋದನೆಗೊಳಗಾಗುತ್ತದೆ.

ಕಾರಣಗಳೇನು?:

  • ಆನುವಂಶಿಕ ಕಾರಣಗಳು.

  • ಹೆರಿಗೆಯ ಸಮಯದಲ್ಲಿ ಮಗುವಿಗೆ ಉಂಟಾಗುವ ಮಿದುಳಿಗೆ ಆಗುವ ಹಾನಿ. ಮಗು ಗರ್ಭಾಶಯದಲ್ಲಿರುವಾಗಲೇ ಉಂಟಾಗುವ ಅಮ್ಲಜನಕದ ಕೊರತೆಯಿಂದಾಗಿಯೂ, ಬಾಲ್ಯದಲ್ಲಿ ಅಪಸ್ಮಾರ ಬರುವ ಸಾಧ್ಯತೆ ಇದೆ. 

  • ಬಾಲ್ಯದಲ್ಲಿ ತಲೆಗೆ ಬಿದ್ದ ಪೆಟ್ಟು ನಂತರದ ದಿನಗಳಲ್ಲಿ ಅಥವಾ ಅನೇಕ ತಿಂಗಳು ಅಥವಾ ವರ್ಷಗಳ ಬಳಿಕ ಸೆಳವಿನ ರೂಪದಲ್ಲಿ ಕಾಣಿಸಿಕೊಳ್ಳಬಹುದು.

  • ವಿಪರೀತವಾದ ಜ್ವರದಿಂದಲೂ ಕೆಲವೊಮ್ಮೆ ಅಪಸ್ಮಾರ ಬರುವ ಸಾಧ್ಯತೆ ಇದೆ. 

  • ಮಿದುಳಿನ ಕೆಲವೊಂದು ಶಸ್ತ್ರಚಿಕ್ಸಿತೆಗಳ ಬಳಿಕ, ಮಿದುಳಿಗೆ ಉಂಟಾಗುವ ಗಾಯ.

  • ಮಿದುಳಿಗೆ ರಕ್ತಸಂಚಾರ ಅಥವಾ ಆಮ್ಲಜನಕದ ಕೊರತೆ ಉಂಟಾದಾಗ. 

  • ಅತಿಯಾದ ಮದ್ಯಪಾನ, ಅತಿಯಾದ ಔಷಧಿ ಸೇವನೆ, ಖಿನ್ನತೆ ಹೊಗಲಾಡಿಸುವ ಔಷಧಿಗಳ ದುರ್ಬಳಕೆ.

  • ಮಿದುಳಿನ ಉರಿಯೂತ, ಮಿದುಳಿನ ಪೊರೆ ಉರಿಯೂತ, ಮಿದುಳಿನ ಕೀವುಗಳು, ಮಿದುಳಿನ ಹೊರಮೈಯಲ್ಲಿನ ಪೊರೆಯಲ್ಲಿ ರಕ್ತಶೇಖರಣೆ, ಮಿದುಳಿಗೆ ಗಾಯವಾಗಿ ಊದಿಕೊಂಡಾಗ, (ಅಪಘಾತಗಳಲ್ಲಿ) ಮಿದುಳಿನ ಒಳಗಿನ ಒತ್ತಡ ಜಾಸ್ತಿಯಾದಾಗ.

  • ರಕ್ತದಲ್ಲಿ ಗ್ಲೋಕೋಸ್, ಕ್ಯಾಲ್ಸಿಯಂ, ಸೋಡಿಯಂ ಪ್ರಮಾಣ ಕಡಿಮೆಯಾದಾಗ; ರಕ್ತದಲ್ಲಿ ಕಲ್ಮಶಗಳು ಜಾಸ್ತಿಯಾದಾಗ. . 

  • ವಿಪರೀತ ಮದ್ಯಸೇವನೆಯಿಂದಾಗಿ ಯಕೃತ್ತು (ಲಿವರ್‌) ನಾಶಗೊಂಡು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡಾಗ.

 ಏನು ಮಾಡಬೇಕು?:

ಅಪಸ್ಮಾರ ಬಂದಾಗ ತಕ್ಷಣ ಮಾಡಬೇಕಾದ ತುರ್ತು ಕೆಲಸವೆಂದರೆ, ರೋಗಿಯ ದೇಹದ ಭಾಗಕ್ಕೆ ಯಾವುದೇ ರೀತಿಯ ಅಪಾಯ ಆಗದಂತೆ ಅವನನ್ನು/ಅವಳನ್ನು ನೋಡಿಕೊಳ್ಳಬೇಕು. ಚೂಪಾದ ವಸ್ತುಗಳು, ಕಲ್ಲು, ನೀರು, ಬೆಂಕಿ, ಇತ್ಯಾದಿಗಳಿಂದ ದೂರವಿರಿಸಬೇಕು. ಬಿಗಿಯಾದ ಉಡುಪನ್ನು ಸಡಿಲಿಸಬೇಕು. ಉಸಿರಾಡಲು ಅನುಕೂಲವಾಗುವಂತೆ, ಉಸಿರು ಸರಾಗವಾಗಿ ಚಲನೆ ಉಂಟಾಗಲು ಪೂರಕವಾಗುವಂತೆ ತಲೆಯನ್ನು ಒಂದು ಕಡೆ ವಾಲಿಸಿ ಹಿಡಿಯಬೇಕು. ನಾಲಗೆ ಕಚ್ಚಿಕೊಳ್ಳದಂತೆ ತಡೆಯಲು, ಹಲ್ಲುಗಳ ನಡುವೆ ಕರವಸ್ತ್ರ ಅಥವಾ ಬಟ್ಟೆಯನ್ನು ಇಡಬಹುದು. ನಾಲಗೆ ಕಡಿಯದಂತೆ ತಡೆಯಲು ಮರದ ತುಂಡು, ನಾಲಗೆ ಇಕ್ಕುಳ ಮತ್ತು ದೇಹದ ಚಲನೆಯನನ್ನು ನಿರ್ಬಂಧಿಸುವ ಸಾಧನಗಳಿಂದ, ಉಪಕಾರಕ್ಕಿಂತ ಹೆಚ್ಚು ಅಪಾಯವಾಗುವ ಸಾಧ್ಯತೆ ಇರುತ್ತದೆ. ಸೆಳವು ಕಾಲದಲ್ಲಿ ಸುರಿಯುವ ವಿಪರೀತ ಜೊಲ್ಲುರಸ, ಗಂಟಲಿಗೆ ಹೋಗಿ ಉಸಿರಾಟಕ್ಕೆ ತೊಂದರೆಯಾಗಬಹುದು. ನಿಯಮಿತವಾಗಿ ಒರೆಸಿ, ಗಾಳಿಯ ಸರಾಗ ಚಲನೆಗೆ ಅನುವು ಮಾಡಿಕೊಡಬೇಕು. ಎತ್ತರದ ಜಾಗದಲ್ಲಿ ವ್ಯಕ್ತಿ ಬಿದ್ದಿದ್ದರೆ, ವ್ಯಕ್ತಿಯನ್ನು ಸಮತಟ್ಟಾದ ನೆಲದಲ್ಲಿ ಮಲಗಿಸಿ ದೇಹಕ್ಕೆ ಯಾವುದೇ ಏಟಾಗದಂತೆ ತಡೆಯಬೇಕು. ಅಪಸ್ಮಾರದಿಂದ ಹೊರಳಾಡುತ್ತಿರುವ ವ್ಯಕ್ತಿಯ ಕೈಗೆ ಚೂಪಾದ ಕಬ್ಬಿಣದ ಸರಳನ್ನು ನೀಡಿ ಸೆಳತ ನಿಲ್ಲಿಸಲು ಪ್ರಯತ್ನಿಸುವುದು ಮೂರ್ಖತನದ ಪರಾಮಾವಧಿ. ಅದೇ ರೀತಿ ಮುಖದ ಮೇಲೆ ನೀರು ಸುರಿಯುವುದರಿಂದ ಉಸಿರಾಟಕ್ಕೆ ಮತ್ತಷ್ಟು ತೊಂದರೆಯಾಗಬಹುದು. ಅಪಸ್ಮಾರದ ಬಂದು ವ್ಯಕ್ತಿ ಕಂಪಿಸುತ್ತಿರುವಾಗ ವ್ಯಕ್ತಿಯನ್ನು ಕುಳಿತುಕೊಳ್ಳಿಸುವುದಕ್ಕೆ ಪ್ರಯತ್ನಿಸಬಾರದು. ನೆಲದ ಮೇಲೆ ಮಲಗಿಸಿ ಅಪಸ್ಮಾರ ನಿಲ್ಲುವ ವರೆಗೆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಅಪಸ್ಮಾರದ ತೀವ್ರತೆ ಕಡಿಮೆಯಾದ ಬಳಿಕ ವೈದ್ಯರಲ್ಲಿಗೆ ಒಯ್ದು, ಅಗತ್ಯ ಚಿಕ್ಸಿತೆಯನ್ನು ಕೊಡಿಸಬೇಕು.  


ಏನು ಮಾಡಬಾರದು?:

ನಿರಂತರವಾಗಿ ಅಪಸ್ಮಾರ ರೋಗಕ್ಕೆ ತುತ್ತಾಗುವವರು, ವೈದ್ಯರ ಸೂಚನೆಯಂತೆ ನಿಯಮಿತವಾಗಿ ಔಷಧಿ ಸೇವಿಸಬೇಕು.  ಮಾತ್ರೆಗಳನ್ನು ಅನೇಕ ವರ್ಷಗಳ ಕಾಲ ದಿನ ಬಿಡದೇ ಸೇವಿಸಬೇಕಾದ ಅನಿವಾರ್ಯತೆ ಇರುತ್ತದೆ. ಔಷಧಿ ಸೇವನೆ ನಿಲ್ಲಿಸಿದ ಕೂಡಲೇ ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಪಸ್ಮಾರದ ರೋಗದ ಚಿಕ್ಸಿತೆ ದೀರ್ಘಕಾಲಿಕವಾಗಿದ್ದು ವೈದ್ಯ, ರೋಗಿ ಮತ್ತು ರೋಗಿಯ ಕುಟುಂಬದ ಸದಸ್ಯರ ನಡುವೆ  ಹೊಂದಾಣಿಕೆ ಅತಿ ಅಗತ್ಯ. ಅಪಸ್ಮಾರ ರೋಗಿ ಒಬ್ಬರೇ ಈಜಾಡುವುದು, ಬೆಟ್ಟ ಹತ್ತುವುದು, ವಾಹನವನ್ನು ಚಾಲನೆ ಮಾಡುವುದು, ಚಲಿಸುವ ಯಂತ್ರಗಳೊಡನೆ ಒಡಾಡುವುದು, ಎತ್ತರ ಪ್ರದೇಶದಲ್ಲಿ ಕೆಲಸ ಮಾಡುವುದು – ಇವೆಲ್ಲ ನಿಷಿದ್ಧ. ಅಪಸ್ಮಾರ ರೋಗಿಗಳನ್ನ ಮನೆಯಲ್ಲಿ ಒಬ್ಬಂಟಿಯಾಗಿ ಬಿಡಬಾರದು. ಸ್ನಾನಗೃಹದಲ್ಲಿಯೂ ಬಾಗಿಲು ಚಿಲಕ ಹಾಕದೇ ಸ್ನಾನ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಒಟ್ಟಿನಲ್ಲಿ ಅಪಸ್ಮಾರ ರೋಗಿಗಳು ಕುಟುಂಬದವರ ಕಣ್ಗಾವಲಿನಲ್ಲಿಯೇ ಇರಬೇಕಾಗುತ್ತದೆ.

ಕೊನೆ ಮಾತು:

ಅಪಸ್ಮಾರರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ, ಅವರಿಗೆ ಧೈರ್ಯವನ್ನು ತುಂಬಬೇಕು. ಅವರಲ್ಲಿ ಸಕಾರಾತ್ಮಕ ವಿಚಾರಗಳ ಬಗ್ಗೆ ತಿಳಿಹೇಳಿ, ಆತ್ಮವಿಶ್ವಾಸವನ್ನು ತುಂಬಬೇಕು. ಅಂತಹ ರೋಗಿಗಳನ್ನು ಅತ್ಯಂತ ಪ್ರೀತಿ, ವಿಶ್ವಾಸ, ಆದರ ಮಮತೆ ಮತ್ತು ಕರುಣೆಗಳಿಂದ ನೋಡಿಕೊಳ್ಳಬೇಕು. ಅವರ ಬಗ್ಗೆ ತಿರಸ್ಕಾರ ಮತ್ತು ಜುಗುಪ್ಸೆ ಯಾವತ್ತೂ ಸಲ್ಲದು.                                                     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT