ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯ ಆರೋಗ್ಯ ಸಮಸ್ಯೆಗಳು ಯಾವುವು? ಪರಿಹಾರಗಳೇನು?

Last Updated 3 ಮೇ 2022, 2:03 IST
ಅಕ್ಷರ ಗಾತ್ರ

ನಮ್ಮ ದೇಹವು ಸುಗಮವಾಗಿ ಕಾರ್ಯ ನಿರ್ವಹಿಸಲು ದೇಹದ ಉಷ್ಣತೆಯು ನಿರ್ದಿಷ್ಟ ಮಿತಿಯೊಳಗೆ ಇರಬೇಕು. ಯಾವುದೇ ಕಾರಣಕ್ಕೆ ಈ ಮಿತಿಯನ್ನು ಮೀರಿದರೆ ಮಿದುಳಿನಲ್ಲಿ ಇರುವ ತಾಪಮಾನ ನಿರೀಕ್ಷಣಾ ಕೇಂದ್ರವು ಬೆವರುಗ್ರಂಥಿಗಳಿಗೆ ಸಂದೇಶವನ್ನು ಕಳುಹಿಸಿ ಕಾರ್ಯಪ್ರವೃತ್ತವಾಗುವಂತೆ ಮಾಡುತ್ತದೆ. ಬೆವರು–ನೀರಿನ ಮೂಲಕ ಅಧಿಕ ಉಷ್ಣತೆ ಹೊರ ಹೋಗುವುದಲ್ಲದೆ, ಆವಿಯಾಗುವಾಗ ಚರ್ಮ ತಂಪಾಗುವುದು. ಇದಲ್ಲದೆ ಚರ್ಮದ ಮೂಲಕ ಆಗುವ ಉಷ್ಣ ವಿಕಿರಣ ಮತ್ತು ಸಂವಹನ ಕೂಡ ತಾಪ ವಿಸರ್ಜನೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುವವು.

ಹೀಗೆ ನೀರು ಹೊರ ಹೋಗುತ್ತಲೇ ಇದ್ದರೆ ರಕ್ತದಲ್ಲಿಯ ನೀರಿನ ಪ್ರಮಾಣ ಕಡಿಮೆ ಆಗಿ ಸಾಂದ್ರತೆ ಅಧಿಕ ಆಗುವುದು. ನೆತ್ತರಿನ ಮಿತಿ ಮೀರಿದ ಸಾಂದ್ರತೆ ಅಪಾಯಕ್ಕೆ ಆಹ್ವಾನ. ಮಿದುಳಿನಲ್ಲಿಯೇ ರಕ್ತದ ಸಾಂದ್ರತಾ ಮಾಪಕ ಕೇಂದ್ರ ಇದ್ದು, ಅದು ಪಕ್ಕದಲ್ಲಿ ಇರುವ ದಾಹ ಪ್ರಚೋದಕ ಕೇಂದ್ರವನ್ನು ಎಚ್ಚರಿಸುವುದು. ಇದರಿಂದ ನೀರಡಿಕೆ ಉಂಟಾಗಿ, ಶರೀರ ದ್ರವಪದರ್ಥವನನು ಬಯಸುತ್ತದೆ, ನಾವು ದ್ರವಪದಾರ್ಥವನ್ನು ಸೇವಿಸುವೆವು.

ಬೆವರಿನ ಮೂಲಕ ವಿಸರ್ಜಿಸಲ್ಪಡುವ ನೀರು ತನ್ನೊಡನೆ ಉಪ್ಪಿನ ಅಂಶವನ್ನೂ ಒಯ್ಯುವುದು ತಾನೇ? ಆದುದರಿಂದ ನಾವು ಬಾಯಾರಿಕೆ ಆದಾಗ ಮಿತಿ ಮೀರಿ ನೀರು ಸೇವಿಸಿದರೆ ರಕ್ತದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಆಗುವುದು. ಅದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಮಾನ್ಯವಾಗಿ ನಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉಪ್ಪಿನ ಅಂಶ ಇದ್ದು, ನಡುವೆ ಆಹಾರ ಸೇವಿಸದೆ ಬಿಸಿಲಿನಲ್ಲಿ ಬರೀ ನೀರು ಕುಡಿಯುತ್ತಾ ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಬರುವುದು.

ಉಪ್ಪು ನಮ್ಮ ಮಾಂಸಖಂಡಗಳ ಸಂಕುಚನ–ವಿಕಸನಕ್ಕೆ ಅತಿ ಅವಶ್ಯವಿದ್ದು; ಅದರ ಕೊರತೆಯಿಂದ ಅಸಹನೀಯ ಸೆಳೆತ (cramps) ಉಂಟಾಗುವುದು. ಬಿಸಿಲಿನಲ್ಲಿ ಆಟವಾಡುತ್ತಿರುವ ಕ್ರೀಡಾಳುಗಳು ಇದರಿಂದ ಬಳಲುವುದನ್ನು ಕಂಡಿದ್ದೀರಿ. ಇದನ್ನು ತಡೆಗಟ್ಟಲು ಲವಣಯುಕ್ತ ಪಾನೀಯ ಸೇವನೆಯನ್ನು ಮಾಡಬೇಕು.

ದಾಹಶಮನಕ್ಕೆ ಶುದ್ಧ ನೀರು ಅತಿ ಯೋಗ್ಯ. ಏಕೆಂದರೆ ಇದು ಅತ್ಯಂತ ಕಡಿಮೆ ಸಾಂದ್ರತೆ ಇರುವ ದ್ರವ ಮತ್ತು ಸುಲಭ ಲಭ್ಯ. ಕಬ್ಬಿನ ಹಾಲು, ಸಕ್ಕರೆ ಸೇರಿಸಿದ ಹಣ್ಣಿನ ರಸಗಳು ರಕ್ತದ ಸಾಂದ್ರತೆಯನ್ನು ಇನ್ನೂ ಹೆಚ್ಚು ಮಾಡುವವುದಲ್ಲದೆ ಅನಾವಶ್ಯಕ ಸಕ್ಕರೆಯ ಸೇವನೆ ಆರೋಗ್ಯಕ್ಕೆ ಹಾನಿಕರ. ಮೇಲೆ ತಿಳಿಸಿದಂತೆ ಉಪ್ಪಿನ ಅಂಶ ಕಡಿಮೆ ಆಗುವ ಸನ್ನಿವೇಶ ಇದ್ದರೆ ಕೊಂಚ ಉಪ್ಪು ಸೇರಿಸಿದ ದ್ರಾವಣ ಉತ್ತಮ. ಎಳನೀರಿನಲ್ಲಿ ಉಪ್ಪಿನ ಅಂಶ ಸಾಕಷ್ಟು ಇಲ್ಲದಿರುವುದರಿಂದ ಲವಣಪೂರಣಕ್ಕೆ ಅಷ್ಟು ಪ್ರಯೋಜನಕಾರಿ ಅಲ್ಲ.

ಶುದ್ಧ ನೀರಿನ ಬಳಕೆ ಈಗ ವ್ಯಾಪಕವಾಗಿರುವುದರಿಂದ ನೀರಿನ ಮೂಲಕ ಹರಡುವ ಕಾಲರಾ, ಟೈಫಾಯ್ಡ್ ಕಾಯಿಲೆಗಳು ಈಗ ತುಂಬಾ ಕಡಿಮೆ ಆಗಿವೆ. ಬೇಸಿಗೆಯಲ್ಲಿ ಶೇಖರಿಸಿ ಇಟ್ಟ ಆಹಾರ ಪದಾರ್ಥಗಳಲ್ಲಿ ಬಾಕ್ಟೀರಿಯಾ ಶಿಲೀಂಧ್ರಗಳು ಸುಲಭ ವೇಗದಲ್ಲಿ ಬೆಳೆದು ವಾಂತಿ–ಭೇದಿಗಳನ್ನು ಉಂಟುಮಾಡಬಹುದಾಗಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕು.

ಅಧಿಕ ಬೆವರು ಉತ್ಪಾದನೆ ಮಾಡುವ ಭರಾಟೆಯಲ್ಲಿ ಬೆವರು ಚರ್ಮದ ಹೊರ ಭಾಗಕ್ಕೆ ಒಯ್ಯುವ ನಾಳಗಳು ಬ್ಲಾಕ್ ಆಗಿ ಲವಣಯುಕ್ತ ದ್ರವ ಚರ್ಮ ಸೇರಿ ತುರಿಕೆ ಉಂಟು ಮಾಡುವವು. ಇದನ್ನೇ ‘ಬೆವರು ಸಾಲೆ’ ಎಂದು ಕರೆಯುವರು. ಸಾಮಾನ್ಯ ಬೆವರು ಸಾಲೆಯಲ್ಲಿ ಕೆಲವೊಮ್ಮೆ ಬಾಕ್ಟೀರಿಯಾ, ಶಿಲೀಂಧ್ರಗಳು ಸೇರಿ ಪರಿಸ್ಥಿತಿ ಉಲ್ಬಣವಾಗಬಹುದು. ತೆಳುವಾದ ಹತ್ತಿ ಉಡುಪು ಧಾರಣೆ, ತಣ್ಣೀರು ಸ್ನಾನ, ಅನಾವಶ್ಯವಾಗಿ ಬಿಸಿಲಲ್ಲಿ ತಿರುಗಾಡದೇ ಇರುವುದು – ಇದಕ್ಕೆ ಭಾಗಶಃ ಪರಿಹಾರ.

ಸೋಂಕು ರೋಗಗಳಾದ ಧಡಾರ, ಕೋಟ್ಲೆ ಇತ್ಯಾದಿ ಬೇಸಿಗೆಯಲ್ಲಿ ಹರಡುವ್ದುದು ಹೆಚ್ಚು. ಮುಂಗಾರು ಪೂರ್ವಮಳೆಯಿಂದ ಸೊಳ್ಳೆಗಳ ಕಾಟ ಮತ್ತು ಅದರಿಂದ ಡೆಂಗಿ ಇತ್ಯಾದಿ. ಈ ಸಮಯದಲ್ಲಿಯೇ ಮದುವೆ ಮುಂಜಿ ಇತ್ಯಾದಿ ಸಮಾರಂಭಗಳೂ, ಜಾತ್ರೆ–ಸಮ್ಮೇಳನಗಳೂ ಅಧಿಕ ಇರುವುದರಿಂದ ಜನಜಂಗುಳಿಯಲ್ಲಿ ಹರಡುವ ಫ್ಲೂವಿನಂತಹ ಶ್ವಾಸಸಂಬಂಧಿ ಕಾಯಿಲೆಗಳ ಬಗ್ಗೆ ಎಚ್ಚರದಿಂದ ಇರಬೇಕು. ಬಹಳ ಮಂದಿ ತಮಗೆ ಐಸ್ ಕ್ರೀಮ್ ತಿಂದೋ, ತಂಪು ಪಾನೀಯ ಸೇವನೆಯಿಂದಲೋ ಶೀತ–ಕೆಮ್ಮು ಬರುತ್ತದೆ ಎಂದು ತಿಳಿಯುತ್ತಾರೆ. ಆದರೆ ಶ್ವಾಸಸಂಬಂಧಿ ಸೋಂಕುಗಳು ಉಸಿರಿನ ಮೂಲಕ ಹರಡುವವು. ಸೋಂಕು ರೋಗಗಳಲ್ಲದೆ ಧೂಳು, ಹೂವಿನ ಪರಾಗ ಇತ್ಯಾದಿ ಅಲರ್ಜಿ ಕಾರಕಗಳು ಈ ಸಮಯ ಗಾಳಿಯಲ್ಲಿ ಯಥೇಚ್ಛ ಇರುವುದರಿಂದ ಆಸ್ತಮಾದಂತಹ ಕಾಯಿಲೆಗಳೂ ಉಲ್ಬಣಗೊಳ್ಳುವವು.

ದೇಹದ ಉಷ್ಣತೆ ಅಧಿಕವಾಗಿ ತೀವ್ರ ಬಳಲುವಿಕೆ, ರಕ್ತದ ಒತ್ತಡ ತಾತ್ಕಾಲಿಕ ಕಡಿಮೆಯಾಗಿ ತಲೆ ತಿರುಗಿ ಬೀಳುವುದು ಮತ್ತು ‘ಹೀಟ್ ಸ್ಟ್ರೋಕ್’ ಎಂಬ ಪ್ರಾಣಾಂತಿಕ ಕಾಯಿಲೆ ಬರಬಹುದು. ಶರೀರದ ಉಷ್ಣತೆಯನ್ನು ಆರೋಗ್ಯಕರ ವ್ಯಾಪ್ತಿಯಲ್ಲಿ ಇಡಲು ಶರೀರದಲ್ಲಿ ಇರುವ ವ್ಯವಸ್ಥೆ ಪ್ರಯತ್ನಿಸಿ ವಿಫಲವಾಗುವುದು ಇವಕ್ಕೆ ಕಾರಣ.

ಸೆಕೆಗಾಲದಲ್ಲಿ ಆಹಾರದ ಸೇವನೆ ಹಿತ ಮಿತವಾಗಿ ಇರಬೇಕು; ದ್ರವಪದಾರ್ಥಗಳ ಸೇವನೆ ಸಾಕಷ್ಟು ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT