ಗುರುವಾರ , ನವೆಂಬರ್ 26, 2020
20 °C

ಪುನಃ ಶುರು ಮಾಡಿ ಲಘು ವ್ಯಾಯಾಮ

ಎಸ್ಸೆಚ್‌ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಮಧ್ಯೆ ಹಲವಾರು ತಿಂಗಳುಗಳ ಕಾಲ ಮನೆಯೊಳಗೇ ಕುಳಿತಿದ್ದರಿಂದ ಹಿಂದೆ ನೀವು ಪಾಲಿಸಿದ್ದ ಆರೋಗ್ಯಕರ ಜೀವನಶೈಲಿಯಲ್ಲಿ ಏರುಪೇರಾಗಿರುವುದು ಸಹಜವೇ! ಮನೆಯಿಂದಲೇ ಕಚೇರಿ ಕೆಲಸ, ಮನೆಗೆಲಸದ ಮಧ್ಯೆ ವ್ಯಾಯಾಮಕ್ಕೆ ಸಮಯವಿಲ್ಲ ಎನ್ನುವುದು ಸಬೂಬು. ಇದಕ್ಕೆ ಕಾರಣ 30 ನಿಮಿಷ ಸಮಯ ಸಿಕ್ಕರೂ ಸಾಕು, ಮನೆಯೊಳಗೇ ವ್ಯಾಯಾಮ ಮಾಡಬಹುದಲ್ಲ ಎಂದು ಪ್ರಶ್ನಿಸುತ್ತಾರೆ ತಜ್ಞರು. ಜೊತೆಗೆ ನಿಮ್ಮ ಮನೆಯವರನ್ನೂ ಸೇರಿಸಿಕೊಂಡು ಮಾಡಿದರೆ ವ್ಯಾಯಾಮ ಮುಂದುವರಿಸಲು ಉತ್ಸಾಹವೂ ಮೂಡುತ್ತದೆ.

ಓಟ

ಮೂವತ್ತು ನಿಮಿಷಗಳಲ್ಲಿ ಕಾರ್ಡಿಯೊ ವ್ಯಾಯಾಮ ಮಾಡಬಹುದು. ಇವುಗಳಲ್ಲಿ ಓಡುವುದಕ್ಕೆ ನೀವು ಹೆಚ್ಚು ಒತ್ತು ಕೊಡಬಹುದು ಎನ್ನುತ್ತಾರೆ ಫಿಟ್‌ನೆಸ್‌ ಪ್ರಿಯರಾದ ಲೇಖಾ ಭರ್ವೆ. 30 ನಿಮಿಷಗಳಲ್ಲಿ 350 ಕ್ಯಾಲರಿ ಕರಗಿಸಬಹುದು.

ವೇಗದ ನಡಿಗೆ

ಓಡುವುದು ಇಷ್ಟವಿಲ್ಲದಿದ್ದರೆ ವೇಗದ ನಡಿಗೆ ಆಯ್ಕೆ ಮಾಡಿಕೊಳ್ಳಿ. ಪಾಡ್‌ಕಾಸ್ಟ್‌ಗೆ ಕಿವಿಗೊಟ್ಟು ಸಾಧಾರಣ ವೇಗದಲ್ಲಿ ನಡೆದರೂ ಅರ್ಧ ತಾಸಿಗೆ 170 ಕ್ಯಾಲರಿ ಕರಗಿಸಬಹುದು. ನಿತ್ಯ ನಡೆದರೆ ಹೃದ್ರೋಗ ಹಾಗೂ ಪಾರ್ಶ್ವವಾಯು ಸಮಸ್ಯೆಯಿಂದ ಪಾರಾಗಬಹುದು. ಇದನ್ನು ಟೆರೇಸ್‌ ಮೇಲೆ ಕೂಡ ಮಾಡಬಹುದು. ಹೊರಗಡೆ ಬಿಸಿಲಲ್ಲಿ ನಡೆದರೆ ವಿಟಮಿನ್‌ ಡಿ ಕೂಡ ನಿಮಗೆ ಸಿಗುತ್ತದೆ. ಹಾಗೆಯೇ ಮನೆಯ ಮುಂದೆ ಗಾರ್ಡನ್‌ ಮಾಡುವ ಅವಕಾಶವಿದ್ದರೆ ಅಲ್ಲಿಯೂ ಒಂದಿಷ್ಟು ಕಸರತ್ತು ನಡೆಸಬಹುದು.

ಟೆನಿಸ್‌

300 ಕ್ಯಾಲರಿ ಕರಗಿಸುವ ಮನಸ್ಸಿದ್ದರೆ ಅರ್ಧ ತಾಸಿನ ಕಾಲ ಟೆನಿಸ್‌ ಆಟ ಯತ್ನಿಸಬಹುದು. ಈ ಆಟದಿಂದ ನಿಮ್ಮ ದೇಹದ ಅಂಗಾಂಗಗಳೂ ನೀವು ಹೇಳಿದ ಹಾಗೆ ಬಳುಕುತ್ತವೆ. ಜೊತೆಗೂ ಸ್ನಾಯುಗಳೂ ಬಲಗೊಳ್ಳುತ್ತವೆ.

ಸೈಕ್ಲಿಂಗ್‌

ಬೈಸಿಕಲ್‌ ಹೊಡೆಯುವ ಅಭ್ಯಾಸವಿದ್ದರೆ 30 ನಿಮಿಷಗಳ ಕಾಲ ಚಲಾಯಿಸಿ 400 ಕ್ಯಾಲರಿ ಕರಗಿಸಬಹುದು. ನಿಧಾನವಾಗಿ ಹೋದರೂ 200 ಕ್ಯಾಲರಿ ಕಡಿಮೆ ಮಾಡಿಕೊಳ್ಳಬಹುದು. ಸೈಕ್ಲಿಂಗ್‌ನಿಂದ ಕಾಲಿನ ಸಂದಿ ಬಲಗೊಳ್ಳುತ್ತದೆ. ದೇಹದ ಭಂಗಿಯನ್ನು ಸರಿಪಡಿಸಿಕೊಳ್ಳಲು ನೆರವಾಗುತ್ತದೆ.

ಈಜು

ಇಡೀ ಶರೀರಕ್ಕೆ ವ್ಯಾಯಾಮವಾಗಬೇಕೆ? ಯಾವುದೇ ಅಂಗಾಂಗದ ಮೇಲೆ ಹೆಚ್ಚು ಒತ್ತಡ ಬೀಳಬಾರದು ಎಂದಿದ್ದರೆ ಈಜಬಹುದು. ಇದರಿಂದ 30 ನಿಮಿಷಗಳಲ್ಲಿ 250 ಕ್ಯಾಲರಿ ಕರಗಿಸಬಹುದು. ಸ್ನಾಯುಗಳೂ ಬಲಗೊಳ್ಳುತ್ತವೆ. ಹೃದಯಕ್ಕೆ ಸಂಬಂಧಿಸಿದಂತೆ ಪರಿಪೂರ್ಣ ಫಿಟ್‌ನೆಸ್‌ ಸಿಗುತ್ತದೆ.

ಹೆಚ್ಚಿನ ಪ್ರಮಾಣದ ಕ್ಯಾಲರಿ ಕರಗಿಸಬೇಕಾದರೆ ಹೈ ಇಂಟೆನ್ಸಿಟಿ ಇಂಟರ್‌ವಲ್‌ ವ್ಯಾಯಾಮ ಮಾಡಬಹುದು. ಇದು ಚಯಾಪಚಯ ಕ್ರಿಯೆ ಹೆಚ್ಚಿಸಿ ವ್ಯಾಯಾಮ ನಡೆಸಿದ ಕೆಲವು ಗಂಟೆಗಳವರೆಗೂ ಕ್ಯಾಲರಿ ಕರಗಿಸುತ್ತದೆ ಎನ್ನುತ್ತಾರೆ ಬೆಂಗಳೂರಿನ ಇನ್‌ಸ್ಪಿರಿಟ್‌ ಫಿಟ್‌ನೆಸ್‌ ಕೇಂದ್ರದ ನರೇಂದ್ರನ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು