ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿಯ ತಕರಾರುಗಳು! | ತರಕಾರಿಗಳ ವಿಭಜನೆ ಮತ್ತು ಬಳಕೆ ಹೇಗಿರಬೇಕು?

Last Updated 10 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ತರಕಾರಿಗಳು ಆರೋಗ್ಯಕ್ಕೆ ಅನಿವಾರ್ಯ ಎಂದು ಹಲವರು ತಿಳಿದಿದ್ದಾರೆ. ಆದರೆ, ವಾಸ್ತವ ಇದಲ್ಲ...

ಸಂತುಲಿತ ಆಹಾರದ ವಿವರಣೆಯನ್ನು ಬೇರೆ ಬೇರೆ ರೀತಿಯಲ್ಲಿ ನೀಡಬಹುದು. ಆರು ರುಚಿಗಳನ್ನು ವಿಭಾಗಿಸಿ, ಆಹಾರದ ಗುಣಕರ್ಮಗಳನ್ನು ಅನುಸರಿಸಿ, ದ್ರವ-ಘನವೆಂಬ ಸ್ವರೂಪವನ್ನು ಅರ್ಥೈಸಿ, ಪ್ರಮಾಣವನ್ನು ಆಧರಿಸಿ, ಹಾಗೆಯೇ ಆಹಾರದ ವಿಭಾಗವನ್ನು ಗುರುತಿಸಿ, ಸಂಪೂರ್ಣಾಹಾರವನ್ನು ವಿವರಿಸಬಹುದು. ಪ್ರಪಂಚದ ಯಾವುದೇ ಪ್ರದೇಶದ ಆಹಾರವು ಏಕದಳವರ್ಗ, ದ್ವಿದಳವರ್ಗ, ಮಾಂಸವರ್ಗ, ಶಾಕವರ್ಗ, ಫಲವರ್ಗ, ಗೋರಸವರ್ಗ (ಹಾಲು ಮತ್ತು ಹಾಲಿನ ಉತ್ಪನ್ನಗಳು), ಇಕ್ಷುವರ್ಗ(ಸಕ್ಕರೆಯಂತಹ ಸಿಹಿಗಳು), ಪಾನೀಯವರ್ಗ, ಮದ್ಯವರ್ಗ - ಇವುಗಳನ್ನು ಹೊಂದಿರುತ್ತದೆ. ಈ ವಿಭಾಗದಲ್ಲಿ, ಸಾಮಾನ್ಯವಾಗಿ ರುಚಿಸದೆ, ಇಷ್ಟವಾಗದೆ ತ್ಯಜಿಸಲ್ಪಡುವುದು ಶಾಕವರ್ಗವೇ. ತರಕಾರಿಗಳ ವಿಭಾಗವು ಯಾವುದೇ ಇದ್ದರೂ ಮಕ್ಕಳಿಗೂ ವಯಸ್ಕರಿಗೂ ಅಂತಹ ಒಪ್ಪಿತವಾಗುವ ಆಹಾರವಲ್ಲ.

ಆರು ಬಗೆಯಲ್ಲಿ ತರಕಾರಿಗಳನ್ನು ವಿಭಜಿಸಿರುವುದು ಕಂಡುಬರುತ್ತದೆ.

1. ಪತ್ರ: ಸೊಪ್ಪುಗಳು; ಉದಾಹರಣೆಗೆ - ಹರಿವೆ, ಮೆಂತೆ, ಕೊತ್ತಂಬರಿ, ಸಬ್ಬಸಿಗೆ, ಅಮೃತಬಳ್ಳಿಚಿಗುರು, ಒಂದೆಲಗ, ಪಾಲಕ್, ಇತ್ಯಾದಿ ಎಲೆಗಳು.

2. ಪುಷ್ಪ: ಹೂವುಗಳು, ಉದಾಹರಣೆಗೆ - ಬಾಳೆಹೂವು (ಕುಂಡಿಗೆ), ನುಗ್ಗೆಹೂ, ಕಮಲದ ಹೂ, ಅಗಸೆಹೂ, ಇತ್ಯಾದಿ.

3. ಫಲ: ಹಣ್ಣುಗಳು, ಉದಾಹರಣೆಗೆ - ಕುಂಬಳ, ಸೌತೆ, ಹೀರೆ, ಬದನೆ, ಹಾಲುಗುಂಬಳ, ತೊಂಡೆ, ಹಾಗಲ, ಬಾಳೆಕಾಯಿ, ಇತ್ಯಾದಿ.

4. ನಾಲ: ದಂಟುಗಳು, ಉದಾಹರಣೆಗೆ - ಕಮಲದ ದಂಟು, ಹರಿವೆದಂಟು, ಬಸಳೆದಂಟು, ಕೆಸುವಿನ ದಂಟು, ಬಾಳೆದಿಂಡು, ಇತ್ಯಾದಿ.

5. ಕಂದ: ಗಡ್ಡೆಗಳು, ಉದಾಹರಣೆಗೆ - ಸುವರ್ಣಗಡ್ಡೆ, ಕೆಸದಗಡ್ಡೆ, ಗೆಣಸು, ಆಲೂಗಡ್ಡೆ, ಬಾಳೆಗಡ್ಡೆ, ಈರುಳ್ಳಿ, ಬೆಳ್ಳುಳ್ಳಿ, ಇತ್ಯಾದಿ.

6. ಸಂಸ್ವೇದಜ: ಭೂಮಿಯನ್ನು ಸೀಳಿಕೊಂಡು ಬೆಳೆಯುವ, ಅಜೈವಿಕ ವಸ್ತುಗಳಿಂದ ಪೋಷಣೆಯಾಗುವ ಸಸ್ಯಗಳು, ಶಿಲೀಂಧ್ರಗಳು, ಪರಾವಲಂಬಿಸಸ್ಯಗಳು, ಕೊಳೆತ, ಗಬ್ಬುತುಂಬಿದ, ಆರ್ದ್ರ, ಕಟ್ಟಿಗೆ, ಒದ್ದೆಯಾದ ಒಣಹುಲ್ಲುಗಳ ಮೇಲೆ ಬೆಳೆಯುವ, ಸಮುದ್ರದಾಳದಲ್ಲಿ ಬೆಳೆಯುವ ಪಾಚಿ, ಸಸ್ಯಗಳು. ಉದಾಹರಣೆಗೆ - ನಿರ್ವಿಷ, ಸೇವನೆಗೆ ಯೋಗ್ಯವಾದ ಅಣಬೆಗಳು (ನಾಯಿಕೊಡೆ). ಈ ಆರು ಬಗೆಯ ತರಕಾರಿಗಳನ್ನು ಕ್ರಮವಾಗಿ, ಸೇವಿಸಿದಾಗ ಜೀರ್ಣಕ್ಕೆ ಕಷ್ಟವಾಗುತ್ತವೆ. ಇವುಗಳನ್ನು ತುಲನೆ ಮಾಡಿದಾಗ ಸೊಪ್ಪು/ ಎಲೆಗಳು ಅತ್ಯಂತ ಹಗುರವಾಗಿ, ಬೇಗ ಜೀರ್ಣವಾಗುತ್ತದೆ; ಅಣಬೆಯು ಜೀರ್ಣವಾಗಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಪೋಷಣೆಯ ದೃಷ್ಟಿಯಿಂದ ಎಲೆ/ಸೊಪ್ಪುಗಳಿಂದ ನೀರು, ನಾರಿನಂಶ, ಕೆಲವು ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯಬಹುದು. ಅಣಬೆಗಳಲ್ಲಿ ಪೋಷಕಾಂಶಗಳು ಜಾಸ್ತಿಯಿರುವುದರಿಂದ ಜೀರ್ಣಕ್ಕೆ ಹೆಚ್ಚು ಸಮಯವೇ ಬೇಕು. ಎಲ್ಲ ಬಗೆಯ ತರಕಾರಿಯಿಲ್ಲಿ ನೀರಿನಾಂಶ ಇರುತ್ತದೆ; ಉಳಿದ ಘನಭಾಗದಲ್ಲಿ ನಾರು ಮತ್ತು ಕೆಲವು ಸೂಕ್ಷ್ಮಪೋಷಕಗಳು ಇರುತ್ತವೆ.

ತರಕಾರಿಗಳು ಅತ್ಯುತ್ತಮ ಆಹಾರ, ಬದುಕಿಗೆ ಇರಲೇಬೇಕು, ಆರೋಗ್ಯಕ್ಕೆ ಅನಿವಾರ್ಯ ಎಂದು ಹಲವರು ತಿಳಿದಿದ್ದಾರೆ. ಆದರೆ, ವಾಸ್ತವ ಇದಲ್ಲ. ತರಕಾರಿಗಳನ್ನು ಸೇವಿಸದೆಯೂ ಅಥವಾ ಕಡಿಮೆ ತಿಂದರೂ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ನಮ್ಮ ಆಹಾರದಲ್ಲಿ ಇರಲೇಬೇಕಾದ ಆಹಾರವರ್ಗವೆಂದರೆ ಏಕದಳ, ದ್ವಿದಳ, ಮಾಂಸವರ್ಗ (ಮಾಂಸಾಹಾರಿಗಳಿಗೆ), ಗೋರಸವರ್ಗ, ಪಾನೀಯವರ್ಗಗಳು ಮಾತ್ರ. ತರಕಾರಿಗಳಿಗೆ ಅವಗುಣಗಳೇ ಜಾಸ್ತಿ. ಸಂಸ್ಕರಿಸದೇ ಹಾಗೆಯೇ ತಿಂದರೆ ಇನ್ನೂ ತೊಂದರೆ.

ಇಷ್ಟೆಲ್ಲಾ ಅವಗುಣಗಳಿದ್ದರೂ ತರಕಾರಿಗಳು ಆಹಾರದಲ್ಲಿ ಬಗೆಬಗೆಯ ಅಡುಗೆಯನ್ನು ತಯಾರಿಸಲು ಬೇಕು. ಬಹುಬಗೆಯ ಅಡುಗೆಗಳಿಂದ ಏಕದಳ-ದ್ವಿದಳ-ಮಾಂಸಗಳ ಸೇವನೆಯನ್ನು ತೃಪ್ತಿಯಾಗಿ ಸೇವಿಸಲು ಸಾಧ್ಯ. ಅನ್ನ/ ರೊಟ್ಟಿ/ ಮುದ್ದೆಯನ್ನು ಮಾತ್ರ ಎಷ್ಟು ತಿನ್ನಲು ಸಾಧ್ಯ? ಇವುಗಳ ಜೊತೆಗೆ ಸಾರು-ಬಸ್ಸಾರು-ಮಸ್ಸಾರು-ಸಾಂಬಾರು-ರಸಂ-ಗೊಜ್ಜು-ಪಲ್ಯಗಳೆಲ್ಲಾ ಇದ್ದರೆ ಆಹಾರವು ಸೇವಿಸಲು ಹೇಗಿರುತ್ತದೆ? ಆದ್ದರಿಂದ ತರಕಾರಿಗಳ ಸೇವನೆಯನ್ನು ವಿವೇಚನೆಯಿಂದ ಮಾಡುವುದರಿಂದ ಕೆಲವು ಲಾಭಗಳೂ ಇವೆ.

ತರಕಾರಿಗಳ ಬಳಕೆ ಹೇಗಿರಬಹುದು?

• ಭಾರತೀಯರ ಪರಂಪರಾಗತವಾದ ಅಡುಗೆಗಳು ಆಯಾ ಪ್ರಾಂತ್ಯಗಳ ಜನರ ಆರೋಗ್ಯಕ್ಕೆ ಪೂರಕವಾದ ವಿಧಾನಗಳು. ಅದನ್ನೇ ಅನುಸರಿಸುವುದು. ಬಗೆಬಗೆಯು ತರಕಾರಿಗಳ ವಿವಿಧ ಅಡುಗೆಗಳನ್ನು ಆಯಾ ಪ್ರದೇಶದಲ್ಲಿ ತಲೆಮಾರುಗಳಿಂದ ಬಳಸುವುದನ್ನು ಕಾಣುತ್ತೇವೆ. ಅವುಗಳನ್ನು ಹಾಗೆಯೇ ಬಳಸುವುದು ಉತ್ತಮ.

• ದೇಶಾಂತರ, ಖಂಡಾಂತರ ತರಕಾರಿಗಳ ನಿತ್ಯೋಪಯೋಗ ಬೇಡ. ಉದಾಹರಣೆಗೆ: ಭಾರತದಲ್ಲಿ ಬ್ರೊಕೊಲಿ, ಹೂಕೋಸು, ಎಲೆಕೋಸು, ಟೊಮ್ಯಾಟೊ ಇತ್ಯಾದಿ ಬಳಕೆ ನಿತ್ಯವೂ ಮಾಡಿದರೆ ಖಂಡಿತ ಹಾನಿದಾಯಕ.

• ಅಡುಗೆಯಲ್ಲಿ ಆಯಾ ಪ್ರಾಂತ್ಯಗಳ ಪಾರಂಪರಿಕ ಎಣ್ಣೆಕಾಳುಗಳಿಂದ ಸೋಸಿದ (ಫಿಲ್ಟರ್ಡ್) ಎಣ್ಣೆಗಳ ಬಳಕೆಯೇ ಇರಲಿ. ಸಂಸ್ಕರಿತ (ರಿಫೈನ್ಡ್) ಎಣ್ಣೆಗಳ ಬಳಕೆ, ಹೊರಪ್ರಾಂತ್ಯಗಳ ಹೊಸಬಗೆಯ ಎಣ್ಣೆಗಳ ಬಳಕೆ ಬೇಡ.

ಉದಾಹರಣೆಗೆ, ಭಾರತದಲ್ಲಿ ಆಲಿವ್, ಪಾಮ್ ಎಣ್ಣೆಗಳ ಬಳಕೆ ಬೇಡ. ಆಯಾ ಪ್ರಾದೇಶಿಕ ಎಣ್ಣೆಗಳನ್ನು ಬಳಸಿಯೇ ತರಕಾರಿಗಳಿಂದ ಅಡುಗೆಯನ್ನು ತಯಾರಿಸುವುದು ಕ್ಷೇಮಕರ.

• ತರಕಾರಿಗಳನ್ನು ಬೇಯಿಸಿ, ನೀರು ಬಸಿದು - ಎಣ್ಣೆ, ಉಪ್ಪುಗಳೊಂದಿಗೆ ಸಂಸ್ಕರಿಸಿ, ಒಗ್ಗರಣೆಯೊಂದಿಗೆ ಬಳಸಬೇಬೇಕು. ಉದಾಹರಣೆಗೆ: ಪಲ್ಯ, ಸಾರು, ಕೂಟು, ಅವಿಯಲ್, ಸಬ್ಜಿ, ಪಚಡಿ, ರಾಯತ ಇತ್ಯಾದಿ.

• ಹಸಿ ತರಕಾರಿಯನ್ನು ಹಾಗೆಯೇ ತಿನ್ನುವುದು, ರಸಹಿಂಡಿಕೊಂಡು ಕುಡಿಯುವುದು ಒಳಿತಲ್ಲ. ರಾಮನವಮಿಗೊಮ್ಮೆ ತಿಂದ ಕೋಸಂಬರಿ ಅನಾರೋಗ್ಯವನ್ನು ತಾರದು. ಆದರೆ, ನಿತ್ಯವೂ ತರಕಾರಿಗಳ ಸಲಾಡ್ ಸೇವನೆ ತೊಂದರೆದಾಯಕ.

• ಅನ್ನ/ ಮುದ್ದೆ/ ರೊಟ್ಟಿ ಮೊದಲಾದ ಏಕದಳಗಳೇ ಜಾಸ್ತಿ ಇರಬೇಕು. ನಂತರ ದ್ವಿದಳ-ಮಾಂಸಗಳ ಪ್ರಮಾಣ. ನೆಂಚಿಕೊಳ್ಳಲು ಕಾಯಿ-ಪಲ್ಲೆಗಳೂ ಇರಲಿ. ಮೇಲಿಂದ ತುಪ್ಪ, ಬೆಣ್ಣೆಗಳು ಸೇರಿರಲಿ. ಸಾಮಾನ್ಯವಾಗಿ ಆರೋಗ್ಯವಂತರ ಸ್ವಾಸ್ಥ್ಯ ಕಾಪಾಡಲು ಇವು ಸಾಕು.

• ಕೆಲವು ತರಕಾರಿಗಳು ಒಣಗಿಸಿ, ಶೀತಲಿಕರಣದಿಂದಲೂ ಅನಾರೋಗ್ಯಕಾರಕವಾಗುತ್ತವೆ.

• ಋತುಗಳನ್ನು ಹೊರತು ಪಡಿಸಿ, ಇಡೀವರ್ಷ ಎಲ್ಲ ತರಕಾರಿ-ಸೊಪ್ಪುಗಳ ಬಳಕೆಯೂ ಉತ್ತಮವಲ್ಲ. ಕಾಲಕ್ಕೆ ತಕ್ಕ ಆಹಾರವೇ ಇರಲಿ. ಅವರೆಕಾಯಿ ಬಳಕೆ, ಬಟಾಣಿ ಬಳಕೆಯನ್ನು ಇಡೀ ವರ್ಷವೂ ಮಾಡಿದರೆ ಗಂಭೀರ ವಾತರೋಗಕ್ಕೆ ನಾಂದಿ. ಇದು ಉದಾಹರಣೆಗೆ ಮಾತ್ರ ಹೇಳಿದ್ದು.

• ಕೆಲವು ತರಕಾರಿಗಳ ಬಳಕೆಯನ್ನು ಎಲ್ಲರೂ, ಯಾವಾಗಲೂ ಮಾಡಬಹುದು. ಹೀರೆಕಾಯಿ, ಸೋರೆಕಾಯಿ, ಪಡವಲಕಾಯಿ, ಅಮೃತಬಳ್ಳಿಯ ಎಳೆಯ ಚಿಗುರು, ಹರಿವೆ/ ದಂಟಿನ ಸೊಪ್ಪು, ಪಾಲಕ್, ನೆಲ್ಲಿಕಾಯಿ ಮುಖ್ಯವಾಗಿ ಒಳಿತೇ ಮಾಡುವ ತರಕಾರಿಗಳು.

ತರಕಾರಿಗಳ ಸಾಮಾನ್ಯ ಅವಗುಣಗಳು

• ನಾರಿನಂಶದಿಂದಾಗಿ ಕರುಳಿನ ಕ್ರಿಯೆಗಳನ್ನು ತಡೆಯುತ್ತವೆ.

• ಪಚನದ ವೇಗವು ಕಡಿಮೆಯಾಗುತ್ತದೆ.

• ಕರುಳಿನ ಒಳಮೈ, ಮೂಳೆ, ಸಂಧಿಗಳ ಜಿಡ್ಡಿನ ರಕ್ಷಾಪದರಗಳನ್ನು ಒಣಗಿಸುವುವು.

• ಮಲವನ್ನೇ ಹೆಚ್ಚು ಉತ್ಪತ್ತಿಮಾಡುವುದರಿಂದ ಹೂಸು, ಮಲ-ಮೂತ್ರಗಳ ವೇಗಭರಿತ ವಿಸರ್ಜನೆಗೆ ಕಾರಣ. ಮಲದಂಶದ ಹೆಚ್ಚಾಗುವಿಕೆಯು, ರಸ-ರಕ್ತ-ಮಾಂಸ-ಮೇದಸ್ಸು-ಅಸ್ಥಿ-ಮಜ್ಜೆ-ಶುಕ್ರಧಾತುಗಳ ಪ್ರಮಾಣವನ್ನು ಕುಗ್ಗಿಸುತ್ತದೆ. ಆದ್ದರಿಂದ, ತರಕಾರಿಗಳನ್ನೇ ಸೇವಿಸಿ ದೀರ್ಘಕಾಲ ಜೀವಿಸಲು ಕಷ್ಟವಾಗುತ್ತದೆ.

• ಮೂಳೆಗಳ ಪೊಳ್ಳುತನಕ್ಕೆ ಕಾರಣ.

• ದೃಷ್ಟಿ, ಚರ್ಮ, ಕೂದಲುಗಳ ನೈಜಕಾಂತಿ-ವರ್ಣ-ಪಸೆ-ಹೊಳಪು-ನುಣುಪು-ಜಿಡ್ಡನ್ನು ಕ್ರಮೇಣವಾಗಿ ಕುಂದಿಸುತ್ತದೆ.

• ರಕ್ತ, ಶುಕ್ರಧಾತುಗಳ ಗುಣವತ್ತರವಾದ ಬದಲಾವಣೆಗೆ ಕಾರಣ.

• ಸ್ಮರಣಶಕ್ತಿಯನ್ನು ಕ್ರಮೇಣವಾಗಿ ಕುಂದುವಂತೆ ಮಾಡುತ್ತವೆ.

• ಅಕಾಲವೃದ್ಧಾಪ್ಯ, ಅಂದರೆ ಕೂದಲುದುರುವುದು, ನೆರೆಯುವುದು, ಕಾಂತಿಹೀನವಾಗಿಸುವುದು, ಸೀಳುವುದು, ಚರ್ಮವನ್ನು ಸುಕ್ಕುಗಟ್ಟಿಸುವುದು.

• ಒಟ್ಟಾರೆ, ದೇಹಧಾತುಗಳ ಧಾರಣೆಯನ್ನು ಮಾಡದು, ಧಾತುಪೋಷಕ-ವರ್ಧಕಗಳಲ್ಲ ತರಕಾರಿಗಳು. ಶರೀರದಲ್ಲಿ ಮಲದ ಪ್ರಮಾಣವನ್ನು ಮಾತ್ರ ಹೆಚ್ಚಿಸುತ್ತದೆ; ದೇಹವನ್ನು ಕ್ರಮೇಣ ರೋಗಗಳ ಗೂಡಾಗಿಸುತ್ತವೆ.

• ಇಡಿಯ ದೇಹವನ್ನು ಪೊಳ್ಳಾಗಿಸುತ್ತದೆ. ಹೀಗೆ ಬಲಹಾನಿಯಾದರೆ ರೋಗಕ್ಕೆ ಆಹ್ವಾನವಿತ್ತಂತೆಯೇ!

(ಆಧಾರ: ‘ಭಾವಪ್ರಕಾಶ’ ನಿಘಂಟುವಿನ ಶಾಕವರ್ಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT